ಬರಿದಾಗುತ್ತಿರುವ ಯಗಚಿ ಜಲಾಶಯ
ಬೆಂಗಳೂರು/ಹಾಸನ, ಸೆ.25: ಕಾವೇರಿ ಕೊಳ್ಳದ ಜಲಾಶಯಗಳಲ್ಲಿ ಒಂದಾದ ಯಗಚಿಯಲ್ಲಿ ಕಳೆದ ಒಂಬತ್ತು ವರ್ಷಗಳಲ್ಲಿ ಈ ಬಾರಿ ಅತಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿದ್ದು, ಸುತ್ತಮುತ್ತಲಿನ ಜನ ಕುಡಿಯುವ ನೀರಿಗೂ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಜಲಾಶಯದಿಂದ ಬೇಲೂರು ಪಟ್ಟಣಕ್ಕೂ ಎರಡು ದಿನಗಳಿಗೊಮ್ಮೆ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಎಂದು ಸ್ಥಳೀಯ ನಿವಾಸಿ ಸಿದ್ದೇಗೌಡರು ಮಾಧ್ಯಮಗಳ ಎದುರು ತಮ್ಮ ಅಳಲು ತೋಡಿಕೊಂಡರು.
ಬೇಲೂರು, ಆಲೂರು, ಹಾಸನ ತಾಲೂಕಿನ 37 ಸಾವಿರ ಎಕರೆ ಅಚ್ಚುಕಟ್ಟು ಪ್ರದೇಶಕ್ಕೆ ನೀರಾವರಿ ಸೌಕರ್ಯ ಕಲ್ಪಿಸುವ ಯಗಚಿ ಜಲಾಶಯದಲ್ಲಿ ಲಭ್ಯವಿರುವ ನೀರನ್ನು ಕೇವಲ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲು ನಿರ್ಧರಿಸಲಾಗಿದೆ.
ಯಗಚಿ ಜಲಾಶಯದ ನೀರಿನ ಗರಿಷ್ಠ ಸಾಮರ್ಥ್ಯವು 3.603 ಟಿಎಂಸಿ. ಆದರೆ ಈಗ ಲಭ್ಯವಿರುವುದು 1.213 ಟಿಎಂಸಿ ಮಾತ್ರ. ಈ ನೀರನ್ನು ಮುಂದಿನ ಮೇ ವರೆಗೆ ಕುಡಿಯುವ ಉದ್ದೇಶಕ್ಕಾಗಿ ಮಾತ್ರ ಬಳಸಿಕೊಳ್ಳಲು ಉಳಿಸಿಕೊಳ್ಳಲಾಗಿದೆ. ಯಗಚಿ ಜಲಾಶಯ ನಿರ್ಮಾಣವಾದ 2003-04 ನೇ ಸಾಲಿನಿಂದ 2015-16ನೆ ಸಾಲಿನವರೆಗೆ ಕೇವಲ 2012-13 ಮತ್ತು 2015-16 ನೆ ಸಾಲಿನಲ್ಲಿ ಮಾತ್ರ ತೀವ್ರ ಮಳೆ ಕೊರತೆಯಿಂದಾಗಿ ಜಲಾಶಯ ಕನಿಷ್ಠ ನೀರಿನ ಸಂಗ್ರಹ ಹೊಂದಿದೆ ಎಂದು ಬೇಲೂರು ಯಗಚಿ ಅಣೆಕಟ್ಟು ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪಿ.ರಂಗಸ್ವಾಮಿ ಮಾಹಿತಿ ನೀಡಿದರು.ಮತ್ತು 2012-13ರಲ್ಲಿ ಭೀಕರ ಬರಗಾಲದಿಂದಾಗಿ ಕನಿಷ್ಠ ಪ್ರಮಾಣದ ನೀರು ಸಂಗ್ರಹವಾಗಿತ್ತು. ಈ ಬಾರಿ ಮಳೆಯ ಕೊರತೆಯಿಂದಾಗಿ ಜಲಾಶಯದಲ್ಲಿ 1.23 ಟಿಎಂಸಿ ನೀರು ಸಂಗ್ರಹವಾಗಿದ್ದು, ಡೆಡ್ ಸ್ಟೋರೆಜ್ ಹೊರತುಪಡಿಸಿದರೆ ಕುಡಿಯುವ ನೀರಿಗೂ ಸಂಕಷ್ಟವಿದೆ. 37 ಸಾವಿರ ಅಚ್ಚುಕಟ್ಟು ಪ್ರದೇಶದ ಕೃಷಿಗೆ ನೀರು ಒದಗಿಸಬೇಕಿದ್ದರೂ, ಈ ಬಾರಿ ಕೃಷಿಗೆ ನೀರು ಬಿಡಲು ಸಾಧ್ಯವಾಗಿಲ್ಲ. ಒಳ ಹರಿವು ಕೇವಲ 20 ಕ್ಯೂಸೆಕ್‌ಗಿಂತ ಕಡಿಮೆ. ಸಾಮಾನ್ಯ ಮಳೆಯಾದರೆ 300 ಕ್ಯೂಸೆಕ್‌ಗಿಂತ ಹೆಚ್ಚಿರುತ್ತದೆ. ಆದರೆ ಈ ಬಾರಿ ಮಳೆ ಸಂಪೂರ್ಣ ಕೈಕೊಟ್ಟಿದ್ದು, ಜಲಾಶಯದಲ್ಲಿ ನೀರು ಸಂಗ್ರಹವಾಗುವ ಸಾಧ್ಯತೆ ಕಡಿಮೆ. ಹೀಗಾಗಿ ಇರುವ ನೀರನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿದ್ದೇವೆ ಎಂದು ಅಧಿಕಾರಿಗಳು ತಿಳಿಸಿದರು.