ಮಾರ್ಚ್ ವೇಳೆಗೆ 6 ಸಾವಿರ ಹೊಸ ಬಸ್ ಗಳ ಸೇರ್ಪಡೆ: ರಾಮಲಿಂಗಾರೆಡ್ಡಿ

Update: 2016-09-26 07:50 GMT

ಬೆಂಗಳೂರು, ಸೆ.26: ಮಾರ್ಚ್ ಅಂತ್ಯದ ವೇಳೆಗೆ ಸಾರಿಗೆ ಸಂಸ್ಥೆಯ ನಾಲ್ಕು ನಿಗಮಗಳಿಗೆ ಒಟ್ಟಾರೆ ಆರು ಸಾವಿರ ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.

ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ 380 ನೂತನ ವೇಗದೂತ ಬಸ್ ಗಳ ಸಂಚಾರಕ್ಕೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಸಿರು ನಿಶಾನೆ ತೋರಿದರು. ಶಾಂತಿನಗರದಲ್ಲಿರುವ ಕೇಂದ್ರೀಯ ಡಿಪೋ ನಾಲ್ಕರಲ್ಲಿ ನೂತನ ಬಸ್ ಗಳ ಸಂಚಾರಕ್ಕೆ ಚಾಲನೆ ನೀಡಿದರು.

ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಇದೇ ಮೊದಲ ಬಾರಿಗೆ ಸಾಮಾನ್ಯ ಸಾರಿಗೆ ವಿಭಾಗದಲ್ಲಿ ಟಾಟಾ ಹಾಗೂ ಅಶೋಕ್ ಲೈಲ್ಯಾಂಡ್ ಬಸ್ ಗಳನ್ನು ಹೊರತುಪಡಿಸಿ ಐಷರ್ ಹಾಗೂ ವೋಲ್ವೋ ಕಂಪೆನಿಯಿಂದ ಜಂಟಿಯಾಗಿ ನಿರ್ಮಿಸಿರುವ ಬಸ್ ಗಳನ್ನು ಖರೀದಿಸಲಾಗಿದೆ ಎಂದರು.

ಟೆಂಡರ್ ನಲ್ಲಿ ಟಾಟಾ, ಅಶೋಕ್ ಲೈಲ್ಯಾಂಡ್ ಕಂಪೆನಿಗಳೊಂದಿಗೆ ಐಷರ್  ವೋಲ್ವೋ ಕಂಪೆನಿ ಕೂಡ ಪಾಲ್ಗೊಂಡಿತ್ತು. ಟೆಂಡರ್ ಪಡೆಯುವಲ್ಲಿ ಐಷರ್ ಹಾಗೂ ವೋಲ್ವೋ ಜಂಟಿ ಕಂಪೆನಿ ಯಶಸ್ವಿಯಾಗಿದ್ದು, ಪ್ರಾಯೋಗಿಕವಾಗಿ ಬಸ್ಸುಗಳ ಸಂಚಾರವನ್ನು ನಡೆಸಲಾಗಿದೆ. ಪ್ರತಿ ಲೀಟರ್ ಡೀಸೆಲ್ ಗೆ 5.8 ಕಿಲೋಮೀಟರ್ ಇಂಧನ ಕ್ಷಮತೆ ಬಂದಿದೆ. ಎಲ್ಲವನ್ನೂ ಪರಿಶೀಲಿಸಿದ ಬಳಿಕವೇ ಬಸ್ ಗಳನ್ನು ಖರೀದಿಸಲಾಗಿದೆ ಎಂದರು.

ಪ್ರತಿ ಬಸ್ ಗೆ 19.20 ಲಕ್ಷ ರೂ. ವೆಚ್ಚವಾಗಿದ್ದು ಮಾರ್ಚ್ ಅಂತ್ಯದ ವೇಳೆಗೆ ಕೆಎಸ್ಸಾರ್ಟಿಸಿಗೆ   1594 ಬಸ್ ಗಳು ಸೇರ್ಪಡೆಯಾಗಲಿದ್ದು, ನಾಲ್ಕೂ ನಿಗಮಗಳಿಂದ ಒಟ್ಟು ಆರು ಸಾವಿರ ಹೊಸ ಬಸ್ ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಅಷ್ಟೇ ಸಂಖ್ಯೆಯ ಬಸ್ ಗಳನ್ನು ಸ್ಕ್ರ್ಯಾಪ್ ಗೆ ಹಾಕಲಾಗುತ್ತದೆ. ಎಲ್ಲವನ್ನೂ ಗ್ರಾಮೀಣ ಸಾರಿಗೆ ಸೇವೆಗೆ ಒದಗಿಸಲಾಗುತ್ತದೆ ಎಂದರು.

ಕೆಎಸ್ಸಾರ್ಟಿಸಿಗೆ ವೋಲ್ವೋ ಬಸ್ ಗಳನ್ನು ಸೇರ್ಪಡೆಗೊಳಿಸಿದಾಗ ಆದ ಸರ್ವೀಸ್ ತೊಂದರೆ ಐಷರ್ ವೋಲ್ವೋ ಜಂಟಿಯಾಗಿ ಅಭಿವೃದ್ಧಿಪಡಿಸಿದ ಬಸ್ ಗಳಲ್ಲಿ ಆಗುವುದಿಲ್ಲ ಎಂದು ಸಚಿವ ರಾಮಲಿಂಗಾರೆಡ್ಡಿ ಸ್ಪಷ್ಟಪಡಿಸಿದರು. ಪ್ರಾಯೋಗಿಕ ಸಂಚಾರದ ವೇಳೆ ಎಲ್ಲವನ್ನೂ ಪರಿಶೀಲಿಸಲಾಗಿದೆ. ಚಾಲಕರಿಗೆ ತರಬೇತಿಯನ್ನೂ ನೀಡಲಾಗಿದೆ. ಡಿಪೋಗಳಲ್ಲಿನ ಮೆಕ್ಯಾನಿಕ್ ಗಳಿಗೂ ತರಬೇತಿ ನೀಡಲಾಗಿದೆ. ಸರ್ವೀಸ್ ಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News