ಮಾರ್ಚ್ ವೇಳೆಗೆ 1,594 ಹೊಸ ಬಸ್‌ಗಳು

Update: 2016-09-26 18:28 GMT

ಬೆಂಗಳೂರು, ಸೆ. 26: ಮುಂದಿನ ವರ್ಷ ಮಾರ್ಚ್ ಅಂತ್ಯದ ವೇಳೆಗೆ ನಾಲ್ಕು ರಾಜ್ಯ ಸಾರಿಗೆ ನಿಗಮಗಳಿಗೆ ಒಟ್ಟು 1,594 ಹೊಸ ಬಸ್ಸುಗಳನ್ನು ಸೇರ್ಪಡೆಗೊಳಿಸಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.
ಸೋಮವಾರ ನಗರದ ಸಾರಿಗೆ ಸಂಸ್ಥೆಯ ಕೇಂದ್ರೀಯ ವಿಭಾಗದ ನಾಲ್ಕನೆ ಘಟಕದಲ್ಲಿ ಕರ್ನಾಟಕ ಸಾರಿಗೆಯ 70 ನೂತನ ಬಸ್ಸುಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, 380 ಬಸ್‌ಗಳಲ್ಲಿ 70 ಬಸ್‌ಗಳಿಗೆ ಇಂದು ಸಾಂಕೇತಿಕವಾಗಿ ಚಾಲನೆ ನೀಡಲಾಗಿದೆ. ಬಸ್‌ಗಳ ಕವಚ ನಿರ್ಮಾಣ ಕಾರ್ಯ ನಡೆಯುತ್ತಿದ್ದು, ಇನ್ನುಳಿದ 310 ಬಸ್‌ಗಳು ನವೆಂಬರ್ ವೇಳೆಗೆ ಸೇರ್ಪಡೆಯಾಗಲಿವೆ ಎಂದರು.
 ರಾಜ್ಯ ಸಾರಿಗೆಯನ್ನು ವಿಸ್ತರಿಸಲು ಮುಂದಿನ ಮಾರ್ಚ್ ತಿಂಗಳ ಅಂತ್ಯದೊಳಗೆ 1,594 ನೂತನ ಬಸ್‌ಗಳನ್ನು ಸೇರ್ಪಡೆಗೊಳಿಸಲಾಗುವುದು. ಮೊದಲ ಬಾರಿಗೆ ಐಷರ್ ಬಸ್‌ಗಳನ್ನು ಸಾರಿಗೆ ಸಂಸ್ಥೆ ಖರೀದಿಸಿದ್ದು, ಬೇರೆ ಕಂಪೆನಿಗಳ ಬಸ್‌ಗಳಿಗಿಂತ ಈ ಬಸ್‌ಗಳು ಹೆಚ್ಚಿನ ಮೈಲೇಜ್ ನೀಡುತ್ತವೆ ಎಂದರು.
ಫ್ಲೈ ಬಸ್ ಸೇವೆ ವಿಸ್ತರಣೆ: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಾರ್ಯಾಚರಣೆ ಮಾಡುತ್ತಿರುವ ಫ್ಲೈಬಸ್ ಸೇವೆ ಜನಪ್ರಿಯವಾಗಿದ್ದು, ಇನ್ನೂ 7 ಬಸ್‌ಗಳನ್ನು ಸೇರ್ಪಡೆ ಮಾಡಲಾಗುತ್ತದೆ. ಬೆಂಗಳೂರು- ತಿರುಪತಿ, ಬೆಂಗಳೂರು- ಮಡಿಕೇರಿ, ಬೆಂಗಳೂರು- ಸೇಲಂ ನಡುವೆ ಈ ಬಸ್‌ಗಳು ಓಡಾಡಲಿದ್ದು, ಈಗಾಗಲೇ ಬೆಂಗಳೂರು- ಮೈಸೂರು ನಡುವೆ 5 ಬಸ್‌ಗಳು, ಬೆಂಗಳೂರು- ಮಣಿಪಾಲ್ ನಡುವೆ 2 ಫ್ಲೈಬಸ್‌ಗಳು ಕಾರ್ಯಾಚರಣೆ ನಡೆಸಲಿವೆ ಎಂದರು.
 800 ಮಂದಿ ಚಾಲಕರ ನೇಮಕಕ್ಕೆ ಚಿಂತನೆ: ರಾಜ್ಯ ಸಾರಿಗೆ ಸಂಸ್ಥೆಗಳಲ್ಲಿ ಸಿಬ್ಬಂದಿಯ ಕೊರತೆಯಿಲ್ಲ. ಆದರೂ ಹೊಸ ಬಸ್‌ಗಳ ಸೇರ್ಪಡೆಗೆ ಅನುಗುಣವಾಗಿ 800 ಮಂದಿ ಸಿಬ್ಬಂದಿಯ ನೇಮಕಕ್ಕೆ ಚಿಂತಿಸಲಾಗಿದೆ ಎಂದು ಸಚಿವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News