ಸರಕಾರದಿಂದ ಬೇಳೆಕಾಳುಗಳ ನೇರ ಖರೀದಿ: ಕೃಷ್ಣಭೈರೇಗೌಡ

Update: 2016-09-27 18:12 GMT

ಬೆಂಗಳೂರು, ಸೆ.27: ರೈತರಿಂದ ಬೇಳೆಕಾಳನ್ನು ನೇರವಾಗಿ ಖರೀದಿಸುವ ಮೂಲಕ ರೈತರ ಸಾಲದ ಹೊರೆ ಕಡಿಮೆ ಮಾಡಿ, ಆತ್ಮವಿಶ್ವಾಸ ಮೂಡಿಸಲಾಗುವುದು ಎಂದು ಕೃಷಿ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.
ಬೆಳಕಾಳುಗಳ ನಿರ್ವಹಣೆ ಕುರಿತು ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದ ಅವರು, ಬೇಳೆಕಾಳುಗಳನ್ನು ಖರೀದಿಸಲು ಖರೀದಿದಾರರಿಗೆ ಏಕೀಕೃತ ಲೈಸೆನ್ಸ್ ನೀಡಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ವರ್ಷದಲ್ಲಿ ರೈತರು ಹೆಚ್ಚಿನ ಪ್ರಮಾಣದಲ್ಲಿ ಬೇಳೆಕಾಳುಗಳನ್ನು ಬೆಳೆದಿದ್ದಾರೆ. ರಾಜ್ಯದಲ್ಲೂ ಶೇ.40ರಷ್ಟು ದ್ವಿದಳ ಧಾನ್ಯ ಪ್ರದೇಶ ವಿಸ್ತರಣೆಯಾಗಿದೆ. ಶೇ.50ರಷ್ಟು ಹೆಚ್ಚು ಬೇಳೆಕಾಳುಗಳ ಉತ್ಪಾದನೆಯಾಗುವ ನಿರೀಕ್ಷೆಯಿದ್ದು, ಈ ಹಿನ್ನೆಲೆಯಲ್ಲಿ ಬೆಲೆ ಕುಸಿತ ಉಂಟಾಗದಂತೆ ಎಚ್ಚರಿಕೆ ವಹಿಸಬೇಕು ಎಂದು ಅವರು ತಿಳಿಸಿದರು.
ಬೇಳೆಕಾಳುಗಳ ಬೆಲೆ ಸ್ಥಿರೀಕರಣವನ್ನು ಕಾಯ್ದುಕೊಳ್ಳಲು ರೈತರು, ವ್ಯಾಪಾರಿಗಳು ಹಾಗೂ ಖರೀದಿದಾರರ ಕಾರ್ಯಾಗಾರವನ್ನು ಆಯೋಜಿಸಲಾಗಿದೆ. ಎಲ್ಲರೂ ಒಂದಾಗಿ ರೈತರು, ವ್ಯಾಪಾರಿಗಳು ಹಾಗೂ ಗ್ರಾಹಕರ ಹಿತವನ್ನು ಗಮನದಲ್ಲಿಟ್ಟುಕೊಂಡು ಕಾರ್ಯನಿರ್ವಹಿಸಬೇಕಿದೆ ಎಂದು ಅವರು ತಿಳಿ ಹೇಳಿದರು.
ಮುಂದಿನ ನವೆಂಬರ್ ಹಾಗೂ ಡಿಸೆಂಬರ್‌ನಲ್ಲಿ ದೊಡ್ಡ ಪ್ರಮಾಣದಲ್ಲಿ ತೊಗರಿ ಹಾಗೂ ಉದ್ದು ಮಾರುಕಟ್ಟೆಗೆ ಬರುವುದರಿಂದ ಬೆಲೆ ಕುಸಿತವಾಗದಂತೆ ಎಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಈಗಾಗಲೇ ಸರಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ರೈತರ ಹಿತ ಕಾಪಾಡಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.ಸಂದರ್ಭದಲ್ಲಿ ರಾಜ್ಯ ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ್ತೆ ಲತಾ ಕೃಷ್ಣರಾವ್, ಕೃಷಿ ಆಯುಕ್ತ ಡಾ.ಮಹೇಶ್ವರ್‌ರಾವ್, ಕೃಷಿ ಕಾರ್ಯದರ್ಶಿ ಪಿ.ಎಸ್.ವಸ್ತ್ರದ್, ವಿಶೇಷ ಕಾರ್ಯದರ್ಶಿ ಮನೋಜ್, ಎಪಿಎಂಸಿ ನಿರ್ದೇಶಕ ಡಾ.ಶಿವಮೂರ್ತಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News