ನಟ ದರ್ಶನ್, ಶಾಮನೂರಿಗೆ ಜಿಲ್ಲಾಡಳಿತ ನೋಟಿಸ್

Update: 2016-09-30 18:14 GMT

ಬೆಂಗಳೂರು, ಸೆ. 30: ರಾಜಕಾಲುವೆ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಆರೋಪದ ಮೇಲೆ ನಟ ದರ್ಶನ್, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೆಸರಿನ ಎಸ್.ಎಸ್.ಆಸ್ಪತ್ರೆ ಒಳಗೊಂಡಂತೆ ಪ್ರಭಾವಿ ವ್ಯಕ್ತಿಗಳಿಗೆ ಬೆಂಗಳೂರು ನಗರ ಜಿಲ್ಲಾಡಳಿತ ನೋಟಿಸ್ ಜಾರಿಗೊಳಿಸಿದೆ.

  ಇಲ್ಲಿನ ರಾಜರಾಜೇಶ್ವರಿ ನಗರದ ಐಡಿಯಲ್ ಹೋಮ್ಸ್‌ಬಡಾವಣೆಯಲ್ಲಿನ ನಟ ದರ್ಶನ್ ನಿವಾಸ, ಮಾಜಿ ಸಚಿವ ಶಾಮನೂರು ಶಿವಶಂಕರಪ್ಪ ಹೆಸರಿನ ಎಸ್.ಎಸ್. ಆಸ್ಪತ್ರೆ ಸೇರಿದಂತೆ ರಾಜಕಾಲುವೆ ಮೇಲೆ ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿಕೊಂಡಿರುವ ಸುಮಾರು 69 ಮಂದಿಗೆ ನೋಟಿಸ್ ಜಾರಿಗೊಳಿಸಿ ವಾರದೊಳಗೆ ಅಂದರೆ ಅ.5ರಂದು ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸುವಂತೆ ಸೂಚನೆ ನೀಡಿದೆ.
ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ನಟ ದರ್ಶನ್ ಮನೆ ಹಾಗೂ ಎಸ್.ಎಸ್. ಆಸ್ಪತ್ರೆಗಳಿರುವ ಬಗ್ಗೆ ದೂರುಗಳು ಕೇಳಿಬಂದಿದ್ದವು. ಕಾಲುವೆ ಒತ್ತುವರಿಯಾಗಿರುವ ಬಗ್ಗೆ ಸರ್ವೇ ನಡೆಸಿ ವರದಿ ನೀಡುವಂತೆ ಭೂಮಾಪಕ ಅಧಿಕಾರಿಗಳಿಗೆ ಬಿಬಿಎಂಪಿ ಆಯುಕ್ತರು ಪತ್ರ ಬರೆದಿದ್ದರು. ಸರ್ವೇ ನಡೆಸಿ ವರದಿ ನೀಡಿದ ಅಧಿಕಾರಿಗಳು ರಾಜರಾಜೇಶ್ವರಿನಗರ ಹದ್ದಿಗೆ ಹಿಡಿದ ಹಳ್ಳವನ್ನು ಐಡಿಯಲ್ ಹೋಮ್ಸ್ ಸೊಸೈಟಿ ಒತ್ತುವರಿ ಮಾಡಿಕೊಂಡಿದ್ದು, ಒತ್ತುವರಿಯಲ್ಲಿ ದರ್ಶನ್ ನಿವಾಸ ಹಾಗೂ ಎಸ್.ಎಸ್.ಆಸ್ಪತ್ರೆಯಿರುವುದನ್ನು ಖಚಿತ ಪಡಿಸಿದೆ.
ಸರ್ವೇ ವರದಿ ಸ್ವೀಕರಿಸಿದ ನಂತರ ಒಂದು ವಾರದೊಳಗೆ ಕ್ರಮಕೈಗೊಳ್ಳುವುದಾಗಿ ಭರವಸೆ ನೀಡಿದ್ದ ಜಿಲ್ಲಾಡಳಿತ ಮೊದಲ ಹಂತವಾಗಿ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಬೆಂಗಳೂರು ದಕ್ಷಿಣ ತಾಲೂಕಿನ ತಹಶೀಲ್ದಾರ್ ಅವರು ಹದ್ದಿಗೆ ಹಿಡಿದ ಹಳ್ಳವನ್ನು ಒತ್ತುವರಿ ಮಾಡಿಕೊಂಡಿರುವವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

ನಟ ದರ್ಶನ್ ಮತ್ತು ಇತರೆ ಕಟ್ಟಡಗಳ ಮಾಲಕರ ಮನೆಗಳಿಗೆ ಖುದ್ದು ಕಂದಾಯ ಇನ್‌ಸ್ಪೆಕ್ಟರ್ ಹಾಗೂ ಗ್ರಾಮ ಲೆಕ್ಕಿಗರು ಸುಮಾರು 69 ನೋಟಿಸ್ ನೀಡಿದ್ದಾರೆ. ಬೀಗ ಹಾಕಲಾಗಿದ್ದ ಮನೆಗಳ ಬಾಗಿಲಿಗೆ ನೋಟಿಸ್ ಅಂಟಿಸಿರುವ ಅಧಿಕಾರಿಗಳು, ದಾಖಲೆಗಳ ಸಲ್ಲಿಕೆ ಹಾಗೂ ಅಹವಾಲುಗಳನ್ನು ಅ.5ರೊಳಗೆ ಸಲ್ಲಿಕೆ ಮಾಡ ಬೇಕೆಂದು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದಾರೆ.
ಶಾಮನೂರು ಶಿವಶಂಕರಪ್ಪ ಹೆಸರಿನ ಎಸ್.ಎಸ್.ಆಸ್ಪತ್ರೆಯ ಮಧ್ಯ ಭಾಗದಲ್ಲಿ ಹದ್ದಿಗಿಡಿದ ಹಳ್ಳವಿದ್ದು, ಹಳ್ಳದ 22 ಗುಂಟೆ ಜಾಗವನ್ನು ಒತ್ತುವರಿ ಮಾಡಿ ಆಸ್ಪತ್ರೆ ನಿರ್ಮಿಸಲಾಗಿದೆ. ನಟ ದರ್ಶನ್ ಅವರ ತೂಗುದೀಪ ನಿಲಯ ಎರಡು ಗುಂಟೆ ಜಾಗವನ್ನು ಅತಿಕ್ರಮಿಸಿರುವ ಬಗ್ಗೆ ಭೂದಾಖಲೆಗಳ ನಿರ್ದೇಶಕರು ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಉಳಿದಂತೆ ಹಳ್ಳದ 2.20 ಎಕರೆ ಜಮೀನನ್ನು ಒತ್ತುವರಿ ಮಾಡಿಕೊಂಡು ಕೆಲವರು ಮನೆಗಳನ್ನು ಕಟ್ಟಿಕೊಂಡಿದ್ದಾರೆ.


  ರಾಜರಾಜೇಶ್ವರಿ ನಗರದಲ್ಲಿ ಹದ್ದಿಗೆ ಹಿಡಿದ ಹಳ್ಳ ಒತ್ತುವರಿ ಮಾಡಿಕೊಂಡಿರುವವರ ಆಸ್ತಿಗೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಕೆ ಮಾಡುವಂತೆ ಜಿಲ್ಲಾಡಳಿತ ಸೆ.28ರಂದು ನೋಟಿಸ್ ಜಾರಿಗೊಳಿಸಿದ್ದು, ಈವರೆಗೆ ಯಾರೂ ದಾಖಲೆಗಳನ್ನು ಸಲ್ಲಿಕೆ ಮಾಡಿಲ್ಲ. ಶುಕ್ರವಾರ ರಜೆಯಿದ್ದ ಕಾರಣದಿಂದ ಶನಿವಾರ ಹಾಗೂ ಸೋಮವಾರ ದಾಖಲೆಗಳನ್ನು ಸಲ್ಲಿಕೆ ಮಾಡುವ ಸಾಧ್ಯತೆಯಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ. ಪಾಲಿಕೆಗೆ ನೋಟಿಸ್: ಹಲಗೇವಡೇರಹಳ್ಳಿಯ ಹದ್ದಿಗೆ ಹಿಡಿದ ಹಳ್ಳದ ಜಾಗದಲ್ಲಿ ಬಿಬಿಎಂಪಿಯಿಂದ ಉದ್ಯಾನ ಹಾಗೂ ನೀರಿನ ಘಟಕಗಳ ಸ್ಥಾಪನೆ ಮಾಡಲಾಗಿದ್ದು, ಸುಮಾರು 7 ಗುಂಟೆಯಷ್ಟು ಜಾಗವನ್ನು ಬಿಬಿಎಂಪಿ ಒತ್ತುವರಿ ಮಾಡಿಕೊಂಡಿದೆ. ಈ ಕುರಿತು ಮಾಹಿತಿ ನೀಡುವಂತೆ ಜಿಲ್ಲಾಡಳಿತ ಬಿಬಿಎಂಪಿಗೂ ನೋಟಿಸ್ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News