ನಾನು ಚಲೋ ಉಡುಪಿಯ ಜತೆಗಿದ್ದೇನೆ...

Update: 2016-10-03 08:16 GMT

ನಾನು ಚಲೋ ಉಡುಪಿಯ ಜೊತೆಗಿದ್ದೇನೆ...

ದಲಿತ ದಮನಿತರ ಪರವಾದ ಚಲೋ ಉಡುಪಿಯ ಜೊತೆ ನಾನಿದ್ದೇನೆ...
ಎಷ್ಟೋ ಶತಮಾನಗಳಿಂದ ಅನುಭವಿಸಿದ ಅವಮಾನ ಇಂದಿಗೂ ಮುಗಿಯುತ್ತಿಲ್ಲ. ಅಪಮಾನದ ದಳ್ಳುರಿಗೆ ಎದ್ದ ಬೊಬ್ಬೆಯ ಗಾಯ ಇಂದಿಗೂ ಹಪ್ಪಳಿಕೆ ಕಿತ್ತುಕೊಂಡು ನಂಜಾಗಿ ಕೀವು ಸೋರುತ್ತಲೇ ಇದೆ. ಗಾಯಕ್ಕಿಷ್ಟು ಮುಲಾಮು ಲೇಪಿಸುವ ಕೆಲಸವನ್ನು ಚಲೋ ಉಡುಪಿ ಮಾಡುತ್ತಿದೆ. ಒಂದು ಸಮಾನ ಬದುಕನ್ನು ಕಟ್ಟಿಕೊಳ್ಳುವ ನಿಟ್ಟಿನಲ್ಲಿ ಚಲೋ ಉಡುಪಿ ಸಾಗಿದೆ.

ಇರುವುದು ಇದೊಂದೇ ಬದುಕು. ಈ ಬದುಕನ್ನು ಅಸಮಾನತೆಯ ಕೂಪದೊಳಗೆ ಕಳೆಯುವ, ಕೀಳೆಂದು ಜರೆದು ಅಪಮಾನ ಮಾಡಿಸಿಕೊಳ್ಳುವುದನ್ನು ತಡೆದು ಒಂದು ಘನತೆಯಿಂದ ಕೂಡಿದ ಬದುಕನ್ನು ಬಾಳಬೇಕಿದೆ. ಆ ನಿಟ್ಟಿನಲ್ಲಿ ಚಲೋ ಉಡುಪಿಯ ಆಶಯಗಳಿವೆ.
ನಮ್ಮೆಲ್ಲರ ನೋವಿನ ಆಕ್ರಂದನವನ್ನು ಸೇರಿಸಿ ಘರ್ಜನೆಯಾಗಿಸುವ, ನಮ್ಮ ನಿಟ್ಟುಸಿರನ್ನು ಬಿರುಗಾಳಿಯನ್ನಾಗಿಸುವ ಒಂದು ಒಕ್ಕೂಟ ಹೋರಾಟದ ಅಗತ್ಯವನ್ನು ಚಲೋ ಉಡುಪಿ ಈಡೇರಿಸುತ್ತಿದೆ. ಅದಕ್ಕೆಂದೇ ನಾನು ಚಲೋ ಉಡುಪಿಯ ಜೊತೆಗಿದ್ದೇನೆ.
   ಇತ್ತೀಚಿನ ದಿನಗಳಲ್ಲಿ ನಾವು ತಿನ್ನುವ ಆಹಾರಕ್ಕೂ ಬೇರೆಯವರ ಒಪ್ಪಿಗೆ ಪಡೆಯ ಬೇಕಾದ ಅನಿವಾರ್ಯತೆ ಸೃಷ್ಟಿಯಾಗುತ್ತಿದೆ. ಹಳ್ಳಿ ಹಳ್ಳಿಗಳಲ್ಲಿ ವೈದಿಕ ಸಂಸ್ಕೃತಿಯ ಬಲವಂತದ ಹೇರಿಕೆಯಾಗುತ್ತಿದೆ. ನನ್ನೂರಿನ ಬಡ ಮೀನುಗಾರರ ಮನೆಯಲ್ಲಿ ರಾಮ-ಕೃಷ್ಣರು ವೈದಿಕ ದೇವರುಗಳಾಗಿ ಮಾಂಸಾಹಾರದ ವಿರೋಧಿಗಳಾಗಿ ಕಾಲಿಟ್ಟಿದ್ದಾರೆ. ಲಕ್ಷ್ಮಿ, ಪಾರ್ವತಿ, ದುರ್ಗೆಯರು ಕೇವಲ ಶಿಷ್ಟ ದೇವತೆಗಳಾಗಿ ಮಾಂಸಮಡ್ಡಿಯ ಜನರಿಗೆ ಒಲಿಯದ ಎತ್ತರ ಸ್ಥಾನಕ್ಕೇರಿದ್ದಾರೆ. ಈ ಕಾರಣದಿಂದಾಗಿ ನಮ್ಮೂರಿನ ಮೀನುಗಾರ ಕುಟುಂಬಗಳಲ್ಲಿ ಕೂಡ "ಶನಿವಾರ ಸೋಮವಾರ ಕುರಿ ಕೋಳಿ ಕಡಿಯಂಗಿಲ್ಲ" ಎಂಬ ಧ್ಯೇಯವಾಕ್ಯಗಳ ಜೊತೆಯಲ್ಲಿ ಅವರ ದಿನ ನಿತ್ಯದ ಆಹಾರವಾದ ಮೀನೂ ಕೂಡ ವಾರದ ಎರಡೇ ದಿನ ಅಂದರೆ ಬುಧವಾರ ಮತ್ತು ರವಿವಾರದ ಆಹಾರವಾಗುತ್ತಿದೆ. ಅದರಲ್ಲೂ ರವಳನಾಥ ಎಂಬ ಆದಿಮ ಸಂಸ್ಕೃತಿಯ ಜನನಾಯಕ ಕುಲದೇವರಾಗಿರುವ ಕುಟುಂಬಗಳು ರವಿವಾರವೂ ಮಾಂಸಾಹಾರ ಸೇವಿಸುತ್ತಿಲ್ಲ. ಹೀಗೆ ನಮ್ಮ ಮೂಲ ಸಂಸ್ಕೃತಿಗಳನ್ನು ಬಲಿಗೊಟ್ಟು ವೈದಿಕ ಆಚರಣೆಗಳನ್ನು ಹೇರಿಕೊಳ್ಳುತ್ತಿರುವ ಇಲ್ಲಿನ ಯುವಕರು ಶಿಸ್ತನ್ನು ಕಲಿಯುವ ನೆಪದಲ್ಲಿ ವೈದಿಕತೆಯ ಲಾಠಿ ಹಿಡಿಯುತ್ತಿದ್ದಾರೆ. ಉಗ್ರ ಕೋಮುವಾದಿಗಳನ್ನು ತಯಾರಿಸುವ ಮೂಲ ಬೇರು ಕರಾವಳಿಯಲ್ಲಿದೆ. ಅದರಲ್ಲೂ ಅದರ ತಾಯಿಬೇರು  ಉತ್ತರಕನ್ನಡದಲ್ಲಿದೆ ಎಂಬುದನ್ನು ಆಗೀಗ ಪ್ರಾಜ್ಙರು ಹೇಳುತ್ತಿದ್ದಾರೆ. ಕೇಳಿ ನಾವೂ ಮರೆಯುತ್ತಿದ್ದೇವೆ. ಅದೆಲ್ಲದಕ್ಕೂ  ಚಲೋ ಉಡುಪಿ ಉತ್ತರದಾಯಿತ್ವವಾಗಿ ನಿಲ್ಲುತ್ತಿರುವುದರಿಂದ ನಾನು ಚಲೋ ಉಡುಪಿಯ ಜೊತೆಗಿದ್ದೇನೆ. 

*#ಚಲೋ ಉಡುಪಿ*

Writer - ಶ್ರೀದೇವಿ ಕೆರೆಮನೆ

contributor

Editor - ಶ್ರೀದೇವಿ ಕೆರೆಮನೆ

contributor