ಕೇಸರಿ ಪಕ್ಷವನ್ನು ಧಿಕ್ಕರಿಸೋಣ: ಪ್ರೊ.ರವಿವರ್ಮ

Update: 2016-10-04 10:38 GMT

ಬೆಂಗಳೂರು, ಅ.4: ದಲಿತ ದಮನಿತರ ಸ್ವಾಭಿಮಾನಿ ಹೋರಾಟ ಸಮಿತಿಯ ನೇತೃತ್ವದಲ್ಲಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಘೋಷಣೆಯ ‘ಚಲೋ ಉಡುಪಿ’ ಜಾಥಾಕ್ಕೆ ಬೆಂಗಳೂರಿನ ಸ್ವಾತಂತ್ರ ಉದ್ಯಾನವನದಲ್ಲಿಂದು ಮಾಜಿ ಅಡ್ವೊಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ಚಾಲನೆ ನೀಡಿದರು.
 ಬಳಿಕ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಕೇವಲ ಶೇ.6ರಷ್ಟಿರುವ ದಲಿತರ ಮೇಲೆ ಶೇ.18ರಷ್ಟು ದೌರ್ಜನ್ಯ ನಡೆಯುತ್ತಿದೆ. ಇದಕ್ಕೆ ಕಾರಣ ಅಲ್ಲಿರುವ ಕೇಸರಿ ಸರಕಾರ. ಸರಕಾರವು ದಲಿತ ದೌರ್ಜನ್ಯ ಪ್ರಕರಣಗಳ ಮೊಕದ್ದೊಮೆಗಳನ್ನು ಹಿಂಪಡೆದು ಮತ್ತೆ ದಾಳಿ ಮಾಡಲು ಕುಮ್ಮಕ್ಕು ನೀಡುತ್ತಿದೆ. ಹಾಗಾಗಿ ಕೇಸರಿ ಪಕ್ಷವನ್ನು ಧಿಕ್ಕರಿಸೋಣ ಎಂದು ಕರೆ ನೀಡಿದರು.

ಈ ಸಂದರ್ಭ ಬೆಳಗಾವಿ ಪೈಲೂರು ಮಠದ ನಿಜಗುಣಾನಂದ ಸ್ವಾಮಿ, ಚಿಂತಕ ಡಾ.ಜಿ.ರಾಮಕೃಷ್ಣ, ಡಾ.ರಹಮತ್ ತರೀಕೆರೆ, ಇಂದಿರಾ ಕೃಷ್ಣಪ್ಪ, ಡಾ.ಸಿ.ಎಸ್.ದ್ವಾರಕನಾಥ್, ಮುಖ್ಯಮಂತ್ರಿಯವರ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಮೊದಲಾದ ಗಣ್ಯರು ಉಪಸ್ಥಿತರಿದ್ದರು.
ಬಳಿಕ ಇಲ್ಲಿಂದ ಜಾಥಾವು ಮೆರವಣಿಗೆ ಮೂಲಕ ಸಾಗಿತು. ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜಾಥಾ ವಾಸ್ತವ್ಯ ಹೂಡಲಿದೆ. ಅ.5ರಂದು ಕುಣಿಗಲ್, ಚನ್ನರಾಯಪಟ್ಟಣ, ಹೊಳೆನರಸೀಪುರ, ಅ.6ಕ್ಕೆ ಹಾಸನ- ಬೇಲೂರು, ಅ.7ಕ್ಕೆ ಚಿಕ್ಕಮಗಳೂರು ಮಾರ್ಗವಾಗಿ ಕೊಪ್ಪ ತಾಲೂಕಿನ ಜಯಪುರದಲ್ಲಿ ಬೃಹತ್ ಮೆರವಣಿಗೆ ಹಾಗೂ ಬಹಿರಂಗ ಸಭೆ ನಡೆಸಲಿದೆ. ಅ.9ರಂದು ಉಡುಪಿಯಲ್ಲಿ ದಲಿತ ದಮನಿತರ ಬೃಹತ್ ಸಮಾವೇಶ ಜರಗಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News