ದಲಿತರು-ಮುಸ್ಲಿಮರು ಒಂದಾಗಲಿ ರಹಮತ್ ತರೀಕೆರೆ

Update: 2016-10-04 18:41 GMT

ಬೆಂಗಳೂರು, ಅ.4: ದಲಿತ ಹಾಗೂ ಅಲ್ಪಸಂಖ್ಯಾತರಿಗೆ ಸಮಾನ ಶತ್ರುವಾಗಿರುವ ಸಂಘಪರಿವಾರದ ವಿರುದ್ಧ ಒಟ್ಟಾಗಿ ಹೋರಾಟ ಮಾಡಲು ಒಳ್ಳೆಯ ಸಂದರ್ಭ ಕೂಡಿ ಬಂದಿದೆ ಎಂದು ಹಿರಿಯ ಸಂಶೋಧಕ ರಹಮತ್ ತರೀಕೆರೆ ಅಭಿಪ್ರಾಯಿಸಿದರು.
ನಗರದ ಫ್ರೀಡಂ ಪಾರ್ಕ್‌ನಲ್ಲಿ ಆಯೋಜಿಸಿದ್ದ ಉಡುಪಿ ಚಲೋ ಜಾಥಾ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಂಘಪರಿವಾರದವರ ಉಪಟಳ ಹೆಚ್ಚಾಗಿದ್ದು, ಅದಕ್ಕೆ ಸೂಕ್ತವಾದ ಪ್ರತ್ಯುತ್ತರ ಕೊಡಲು ಸಂಘಟಿತರಾಗಬೇಕಾಗಿದೆ ಎಂದು ತಿಳಿಸಿದರು.
ದನಗಳನ್ನು ಸಾಗಿಸುತ್ತಿದ್ದ ಕಾರಣಕ್ಕೆ ಹಾಜಬ್ಬ ಹಾಗೂ ಹಸನಬ್ಬರನ್ನು ಬೆತ್ತಲೆಗೊಳಿಸಿ ಹಲ್ಲೆ ಮಾಡಲಾಯಿತು. ಆ ಸಂದರ್ಭದಲ್ಲಿ ಕೇವಲ ಮುಸ್ಲಿಮರು ಮಾತ್ರ ಪ್ರತಿಭಟನೆ ಮಾಡಿದರು. ಅದೇ ರೀತಿಯಲ್ಲಿ ದಲಿತರ ಮೇಲೆ ಹಲ್ಲೆಗಳು ನಡೆದಾಗಲೂ ಮುಸ್ಲಿಮರು ಖಂಡಿಸಲಿಲ್ಲ. ಅದರ ಪರಿಣಾಮ ಸಂಘಪರಿವಾರದ ಹಿತಾಸಕ್ತಿಗಳು ಭದ್ರವಾಗಿ ನೆಲೆ ಯೂರಲು ಸಾಧ್ಯವಾಗಿದೆ. ಮುಂದಿನ ದಿನಗಳಲ್ಲಾದರು ದಲಿತರು ಹಾಗೂ ಮುಸ್ಲಿಮರು ಒಟ್ಟಾಗಿ ಸಂಘಪರಿವಾರದವರನ್ನು ಎದುರಿಸಬೇಕಾಗಿದೆ ಎಂದು ಅವರು ಆಶಿಸಿದರು.

ಸಂಘಪರಿವಾರದಲ್ಲಿರುವ ಹಿಂದುಳಿದ, ದಲಿತ ಕಾರ್ಯಕರ್ತರಿಗೆ ಬಹುತ್ವದ, ಸಮಾನತೆಯ ವಿಚಾರಗಳನ್ನು ಮುಟ್ಟಿಸುವಂತಹ ಜವಾಬ್ದಾರಿ ನಮ್ಮ ಮೇಲಿದೆ. ಈ ನಿಟ್ಟಿನಲ್ಲಿ ‘ಆಹಾರ ನಮ್ಮ ಆಯ್ಕೆ, ಭೂಮಿ ನಮ್ಮ ಹಕ್ಕು’ ಹೆಸರಿನಲ್ಲಿ ನಡೆಯುತ್ತಿರುವ ಉಡುಪಿ ಜಾಥಾ ಐತಿಹಾಸಿಕ ಮಹತ್ವದ್ದಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News