ಹಿರಿಯ ಚಿತ್ರಕಲಾವಿದ ಯೂಸುಫ್ ಅರಕ್ಕಲ್ ಇನ್ನಿಲ್ಲ

Update: 2016-10-04 18:42 GMT

ಬೆಂಗಳೂರು, ಅ. 4: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಹಿರಿಯ ಚಿತ್ರಕಲಾವಿದ ಯೂಸುಫ್ ಅರಕ್ಕಲ್ ಮಂಗಳವಾರ ಮುಂಜಾನೆ ನಿಧನ ಹೊಂದಿದ್ದಾರೆ.

ನಗರದ ವೈಟ್‌ಫೀಲ್ಡ್ ಬಳಿಯಿರುವ ತಮ್ಮ ನಿವಾಸದಲ್ಲಿಯೇ ಯೂಸುಫ್ ಅರಕ್ಕಲ್(71) ಅಸುನೀಗಿದ್ದು, ಕೆಲ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಕುಟುಂಬಸ್ಥರು ತಿಳಿಸಿದ್ದಾರೆ.ಲಾವಿದರ ಉಳಿವಿಗಾಗಿ ಯೂಸುಫ್ ಅವರೇ ಸ್ವತಃ ‘ಗ್ಯಾಲರಿ ಸಾರಾ ಅರಕ್ಕಲ್’ ಹೆಸರಿನ ಸಂಸ್ಥೆಯೊಂದನ್ನು ಹುಟ್ಟು ಹಾಕಿದ್ದರು. ಇದೀಗ ಯೂಸುಫ್ ಅವರು ಪತ್ನಿ ಸಾರಾ, ಪುತ್ರ ಶಿಬು ಹಾಗೂ ಅಪಾರ ಅಭಿಮಾನಿಗಳನ್ನು ಅಗಲಿದ್ದಾರೆ.
ಯೂಸುಫ್ ಹಿನ್ನೆಲೆ: ಕೇರಳದ ಚವಕ್ಕಾಡ್ ಮೂಲದವರಾದರೂ ಯೂಸುಫ್ ಅವರು ಬೆಂಗಳೂರಿನ ಚಿತ್ರಕಲಾ ಪರಿಷತ್‌ನಲ್ಲಿ ವಿದ್ಯಾಭ್ಯಾಸ ಆರಂಭಿಸಿ ಇಲ್ಲಿಯೇ ತಮ್ಮ ವೃತ್ತಿ ಬದುಕು ಕಂಡುಕೊಂಡು ಅಂತಾರಾಷ್ಟ್ರೀಯ ಮಟ್ಟಕ್ಕೇರಿದ್ದಲ್ಲದೆ, ದೇಶದ ನವ್ಯ ಕಲಾವಿದರ ಸಾಲಿನಲ್ಲಿ ಅಗ್ರಪಂಕ್ತಿಯ ಕಲಾವಿದರಾಗಿದ್ದರು.ರ್ನಾಟಕ ಚಿತ್ರಕಲಾ ಪರಿಷತ್‌ನಲ್ಲ್ಲಿ ಚಿತ್ರಕಲಾ ಡಿಪ್ಲೊಮಾ ಪದವಿ ಪೂರ್ಣಗೊಳಿಸಿ ಮುದ್ರಣ ಕಲೆಯಲ್ಲಿ ವಿಶೇಷವಾದ ತರಬೇತಿ ಪಡೆದರು. ಬಳಿಕ ದಿಲ್ಲಿಯ ರಾಷ್ಟ್ರಿಯ ಅಕಾಡಮಿ ಕಮ್ಯೂನಿಟಿ ಸ್ಟುಡಿಯೊದಲ್ಲಿ ಮುದ್ರಣ ಕಲೆಯ ವಿಶೇಷ ಅಧ್ಯಯನ ಮಾಡಿದರು. ಫ್ಲಾರೆನ್ಸ್ ಬಿಯನ್ನಾಲೆಯ ಪ್ರತಿಷ್ಠಿತ ಲಾರೆನ್ಜೊ ಡೆ ಮೆಡಿಸಿ ಸ್ವರ್ಣ ಪದಕ ಗೌರವಕ್ಕೂ ಪಾತ್ರರಾಗಿದ್ದರು.
ಬಾಲ್ಯದಲ್ಲಿಯೆ ಬೆಂಗಳೂರಿಗೆ ಬಂದು ಚಿತ್ರಕಲೆಯನ್ನು ಆಯ್ಕೆಮಾಡಿಕೊಂಡ ಯೂಸುಫ್ ಅರಕ್ಕಲ್, ರೇಖಾಚಿತ್ರ, ವರ್ಣಚಿತ್ರ, ಶಿಲ್ಪ, ಮ್ಯೂರಲ್, ಮುದ್ರಣ ಕಲೆ ಮತ್ತು ತಮ್ಮದೇ ಶೈಲಿಯ ಛಾಪು ಮೂಡಿಸಿದ್ದರು. ಯೂಸುಫ್ ಅವರಿಗೆ ಎರಡು ಬಾರಿ ಕರ್ನಾಟಕ ಲಲಿತಕಲಾ ಅಕಾಡಮಿ ಪ್ರಶಸ್ತಿ, ಕಲಾಶಿಲ್ಪಿ ಕೆ.ವೆಂಕಟಪ್ಪ ಪ್ರಶಸ್ತಿ, 1983ರಲ್ಲಿ ರಾಷ್ಟ್ರೀಯ ಪ್ರಶಸ್ತಿ, 1986ರಲ್ಲಿ ಢಾಕಾದಲ್ಲಿ ನಡೆದ ಬಿಯೆನ್ನಾಲೆ ಪ್ರದರ್ಶನದಲ್ಲಿ ವಿಶೇಷ ಪ್ರಶಸ್ತಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಸೇರಿ ಹತ್ತು ಹಲವು ಪ್ರಶಸ್ತಿಗಳನ್ನು ಪ್ರದಾನಿಸಿ ಗೌರವಿಸಲಾಗಿತ್ತು.

ಸಂತಾಪ: ಸಮಾಜದಲ್ಲಿನ ಅಸಮಾನತೆ, ಬಡವರ ಬದುಕುಗಳನ್ನು ತಮ್ಮ ವರ್ಣಗಳಿಂದ ಎತ್ತಿ ಹಿಡಿದು ಎಲ್ಲರ ಗಮನ ಸೆಳೆದ ಯೂಸುಫ್ ಅರಕ್ಕಲ್ ಅವರ ಅಕಾಲ ನಿಧನ ಚಿತ್ರ ಕಲಾ ಕ್ಷೇತ್ರಕ್ಕೆ ತುಂಬಲಾಗದ ನಷ್ಟ. ದೇವರು ಅವರ ಆತ್ಮಕ್ಕೆ ಚಿರ ಶಾಂತಿ ನೀಡಲಿ ಎಂದು ಕರ್ನಾಟಕ ಲಲಿತಾ ಅಕಾಡಮಿ ಅಧ್ಯಕ್ಷ ಎಂ.ಎಸ್.ಮೂರ್ತಿ ಮತ್ತು ಭಾರತೀಯ ವಿದ್ಯಾಭವನ ಸಂತಾಪ ಸೂಚಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News