‘ಚಲೋ ಉಡುಪಿ’: ಸ್ವಾಭಿಮಾನದ ನಡಿಗೆ

Update: 2016-10-08 18:44 GMT

ಗುಜರಾತಿನ ಉನಾದಲ್ಲಿ ದಲಿತರು ದನದ ಚರ್ಮ ಸುಲಿದಾಗ ನಡೆದ ರಾಕ್ಷಸೀ ದೌರ್ಜನ್ಯ ಹಾಗೂ ತದನಂತರ ಭಾರತದ ಬೇರೆ ಕಡೆಗಳಲ್ಲಿ ನಡೆದ ಘಟನೆಗಳು, ಮಾತ್ರವಲ್ಲದೆ ಹಿಂದುತ್ವವಾದಿಗಳು ದಲಿತರ ಕುರಿತು ಆಡಿದ ಮಾತುಗಳು ಭಾರತ ತನ್ನ ತಲೆಯನ್ನು ತಗ್ಗಿಸುವಂತೆ ಮಾಡಿದ್ದಲ್ಲದೇ ಮಾನವೀಯತೆ ಮತ್ತು ಸ್ವಾಭಿಮಾನದ ಬದುಕು ಬಯಸುವ ಜನರು ತಮ್ಮ ಬಗೆಗೆ ಮತ್ತೊಮ್ಮೆ ಗಂಭೀರವಾಗಿ ಯೋಚಿಸುವಂತೆ ಮಾಡಿದೆ. ಈ ಘಟನೆಗಳು ಸುಮ್ಮನೆ ನಮ್ಮ ರಾಷ್ಟ್ರ ತಬ್ಬಲಿಗಳನ್ನು, ದುಸ್ಥಿಯಲ್ಲಿರುವವರನ್ನು ಗೌರವದಿಂದ ಬದುಕಲು ಬಿಡಲಾರದು, ಶೋಷಿತರು ತಮ್ಮ ಜಾಗರೂಕತೆಯನ್ನು ತಾವೇ ಮಾಡಿಕೊಳ್ಳಬೇಕಾಗಿದೆ ಎಂಬ ಎಚ್ಚರಿಕೆಯನ್ನೂ ಮತ್ತೊಮ್ಮೆ ನೀಡಿದೆ. ಹುಟ್ಟಿನಲ್ಲೇ ಮೈಲಿಗೆಯನ್ನು ಅಂಟಿಕೊಂಡು ಬರುವ ದಲಿತರು ದಮನಿತರು ಎಷ್ಟೆಲ್ಲ ಎಚ್ಚರವನ್ನು ವಹಿಸಬೇಕು. ಮೈಯೆ ಮೈಲಿಗೆಯಾಗಿ, ಅವರ ಮಾತು ವರ್ಜ್ಯವಾಗಿ, ಅಭಿಲಾಷೆ, ಬಯಕೆ, ಬೇಡಿಕೆಗಳು ಅಹಂಕಾರವಾಗಿ ಕಾಣುವ ಭಾರತದಲ್ಲಿ ಅವರಿಗೆ ಸಮಾಜ ಎಲ್ಲಿದೆ? ರಾಷ್ಟ್ರ ಎಲ್ಲಿದೆ? ದೇಶ ಎಲ್ಲಿದೆ? ಈ ದೇಹವನ್ನು ಪವಿತ್ರ ಮಾಡಿ, ಇತರರೊಂದಿಗೆ ಎಲ್ಲರಂತೆ ಉಸಿರಾಡುವ, ಬದುಕುವ, ಬಾಳುವ, ಈ ಭರತ ಮಾತೆಯ ಬಗ್ಗೆ ವಿಶ್ವಾಸ ತಾಳುವ, ನಾನು ಈ ದೇಶದ ಮಗ, ಮಗಳು ಎಂದು ಸಮಾಧಾನದಿಂದ ಹೇಳುವ ಕಾಲ ಯಾವಾಗ ಬರುತ್ತದೆ. ಮೇಲ್ಜಾತಿಯವನೊಬ್ಬ ನಿರಾಳವಾಗಿ ಸ್ವಾಭಿಮಾನದಿಂದ ಬದುಕುವ ಸುಸಂದರ್ಭ ಯಾವಾಗ ಬರುತ್ತದೆ? ಮನುಷ್ಯನಿಗೆ ಅನ್ನ ಆಹಾರಗಳು ಮುಖ್ಯ. ಆದರೆ ಮನುಷ್ಯ ಅಂದರೆ ಅಷ್ಟೆನೆ? ಮನುಷ್ಯನಿಗೆ ಮುಖ್ಯವಾಗಿ ಬೇಕಾಗುವುದು ಸ್ವಾಭಿಮಾನ ಮತ್ತು ಸ್ವಾಭಿಮಾನದ ಬದುಕು. ಯಾವ ಸಮಾಜದಲ್ಲಿ ಮನುಷ್ಯನಿಗೆ ಗೌರವದಿಂದ ಬದುಕಲು ಸಾಧ್ಯವಾಗುವುದಿಲ್ಲವೋ, ಯಾವ ಸಮಾಜ ಮನುಷ್ಯನನ್ನು ಪ್ರೀತಿ ಮತ್ತು ಘನತೆಯಿಂದ ನಡೆಸಿಕೊಳ್ಳುವುದಿಲ್ಲವೋ ಅಂಥ ಸಮಾಜದಲ್ಲಿ ಬದುಕು ಅಸಹನೀಯವಾಗುತ್ತದೆ. ಭಾರತದಲ್ಲಿ ಮೂಲತಃ ಸ್ವಾಭಿಮಾನ ಕಳೆದುಕೊಳ್ಳುತ್ತಿರುವುದೇ ಜಾತಿಯ ಕಾರಣದಿಂದಾಗಿ. ದಲಿತರಿಗೆ ಜಾತಿ ಮತ್ತು ಅಸ್ಪಶ್ಯತೆಯೇ ಒಂದು ಅಮಾನವೀಯ, ನಿಕೃಷ್ಟವಾದ, ಅವಮಾನಕರವಾದ ಬದುಕನ್ನು ನೀಡುತ್ತಿದೆ. ನವೀನ ಉದ್ಯೋಗಗಳು ಹಾಗೂ ಆರ್ಥಿಕ ಸಬಲತೆಗಳು ಬಾಹ್ಯ ಜಾತೀಯತೆಯನ್ನು ಕೊಂಚ ಹೋಗಲಾಡಿಸಬಹುದು. ಆದರೆ ಮನಸಿನ ಜಾತೀಯತೆಯನ್ನು ಅಲ್ಲ. ಹಾಗಾದರೆ ಮನಸಿನ ಜಾತೀಯತೆಯನ್ನು ಹೊಗಲಾಡಿಸುವುದು ಹೇಗೆ? ಜಾತಿ ಒಂದು ಮನಸಿಕ ಸ್ಥಿತಿ. ಒಬ್ಬರಿಗೊಬ್ಬರು ಅಪರಿಚಿತರಿದ್ದಾಗ ಜಾತಿಯ ಆಚರಣೆ ಅಡ್ಡ ಬರದು. ಅದಕ್ಕಾಗಿಯೇ ಭಾರತದಲ್ಲಿ ಪ್ರತಿಯೊಬ್ಬರು ಪ್ರತಿಯೊಂದು ಸಂದರ್ಭದಲ್ಲಿ ಜಾತಿಯನ್ನು ಕಂಡುಕೊಳ್ಳಲು ಕಾತರಿಸುತ್ತಾರೆ. ಇದಕ್ಕಾಗಿ ದಲಿತರು ತಮ್ಮ ತಮ್ಮ ನಂಬಿಕೆಗಳನ್ನು ಖಚಿತಪಡಿಸಿಕೊಳ್ಳಬೇಕು. ಮತ್ತು ಧಾರ್ಮಿಕ ಕುತಂತ್ರಗಳನ್ನು ಅರಿತುಕೊಳ್ಳಬೇಕು. ಮುಗ್ಧತನದಿಂದ ಬದುಕಿದ ದಮನಿತರನ್ನು ಕೀಳು ಮಾಡುವುದನ್ನು ಕಂಡು ಭಕ್ತಿ ಪಂಥದ ದಾರ್ಶನಿಕರು ಅನುಭಾವ ಮತ್ತು ಅಧ್ಯಾತ್ಮದ ಭಾಷೆಯಲ್ಲಿ ಮರುಗಿದರು. ಮನುಷ್ಯನನ್ನು, ಅಸಹಾಯಕನನ್ನು, ಮುಗ್ಧನನ್ನು ಕೀಳು ಮಾಡುವ ಮನಸೇ ಕೀಳು. ಅದು ಅಹಂಕಾರ. ತನ್ನ ಅರಿವಿನ ಮರೆವು. ಈ ದೇಹ, ಸಂಪತ್ತು, ಅಧಿಕಾರ ಶಾಶ್ವತ ಎಂದು ಭಾವಿಸುವವರ ಅಹಂಕಾರ ಅದು. ವರ್ಣದಿಂದ, ಜಾತಿಯಿಂದ ಬೀಗುವ ಮನುಷ್ಯನ ಈ ಅಹಂಕಾರಕ್ಕೆ ಜೀವಸಂಕುಲದ ಮರ್ಮವೇ ಗೊತ್ತಿಲ್ಲ. ಇಲ್ಲಿ ಯಾರೂ ಕೀಳಲ್ಲ, ಯಾರೂ ಮೇಲಲ್ಲ. ಯಾರೂ ಶಾಶ್ವತವಲ್ಲ ಎಂದ ಭಕ್ತಿ ದಾರ್ಶನಿಕರು ಜಾತಿಯಲ್ಲಿ ಅವಮಾನಿತರಾಗಿ ಬದುಕಿದವರಿಗಾಗಿ ದುಡಿದರು. ಬುದ್ಧನ ಚಿಂತನೆ ಹಾಗೂ ಭಕ್ತಿ ಪಂಥಗಳ ಚಿಂತನೆ ಜಾತಿಯ ವಿಮರ್ಶೆಯಲ್ಲಿ ಬಹು ಮುಖ್ಯ ಆಧಾರಗಳು. ಅವುಗಳು ಕುಲ, ಜಾತಿಯಿಂದ ಕೀಳು ಮಾಡುವ ಮತ, ಧರ್ಮ, ದೇವರು, ಆರಾಧನಾ ಕೇಂದ್ರಗಳು, ಭಾಷೆ, ಅರಿವು, ಜ್ಞಾನಗಳನ್ನು ನಿರಾಕರಣೆ ಮಾಡಿ ವಿವರಿಸಿದ್ದು ದೊಡ್ಡ ಸಾಧನೆಯೆ.

ಆಧುನಿಕ ಕಾಲದಲ್ಲೂ ದಲಿತರ, ದಮನಿತರ ಹೋರಾಟಗಳಲ್ಲಿ ಸ್ವಾಭಿಮಾನದ ಬದುಕಿನ ಪ್ರಶ್ನೆಗಳೇ ಮುಖ್ಯವಾಗಿದ್ದವು. ಸಮಾನತೆಯ ನೆಲೆಗಟ್ಟಿನಲ್ಲಿ ಸಾಮಾಜಿಕ ಆರ್ಥಿಕ ಏಳ್ಗೆಯ ವಿಚಾರಗಳು ಜೊತೆಗೂಡಿ ದಲಿತ ದಮನಿತರ ಸಂಘಟನೆ, ಹೋರಾಟ, ಚಿಂತನೆಗಳು ರೂಪುಗೊಂಡದ್ದು ಎಲ್ಲರಿಗೂ ತಿಳಿದಿದೆ. ಮಹಾತ್ಮ ಜ್ಯೋತಿಬಾ ಫುಲೆಯವರ ಕೆಲಸಗಳು ಮತ್ತು ಚಿಂತನೆಗಳು ದಲಿತ, ದಮನಿತರನ್ನು ಕೀಳು ಮಾಡುವ ಬ್ರಾಹ್ಮಣ್ಯದ ಒಳಗನ್ನು ಬಯಲುಗೊಳಿಸುವ ಪ್ರಯತ್ನವೇ ಆಗಿದೆ. ಅವರು ಬಲಿ ಚಕ್ರವರ್ತಿಯ ರಾಜ್ಯ ಹೇಗೆ ಬಲಿಯಾಯಿತು ಎಂಬುದನ್ನು ವಿವರಿಸುತ್ತಾರೆ. ಪೆರಿಯಾರರು ಸ್ವಭಾಷೆ ಮತ್ತು ಸಂಸ್ಕೃತಿಯ ಕುರಿತು ನಾವು ತಾಳುವ ಸ್ವಾಭಿಮಾನ ಹೀನತೆಯೆ ನಮ್ಮ ದುಸ್ಥಿತಿಗೆ ಕಾರಣ ಎಂದರಲ್ಲದೇ ಈ ದಿಸೆಯಲ್ಲಿ ರಾವಣನನ್ನು ನಾಯಕನಾಗಿ ಸ್ವೀಕರಿಸಿ ರಾಮಾಯಣವನ್ನು ವಿವರಿಸಿದ್ದನ್ನು ಗಮನಿಸಬೇಕು. ಅಂಬೇಡ್ಕರರು ಜಾತಿಯನ್ನು ವಿನಾಶ ಮಾಡಲು ಪುರಾಣ, ಶಾಸ್ತ್ರಗಳ ನಿರಾಕರಣೆಯನ್ನು ಮಾಡಬೇಕೆಂದರು. ಜಾತಿ, ಅಸ್ಪಶ್ಯತೆ, ಅಕ್ಷರ ನಿರಾಕರಣೆಯ ಕಾರಣದಿಂದ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ಅಥವಾ ಅವಲಂಬಿತ ಸ್ಥಿತಿಯಲ್ಲಿ ಬದುಕಿಕೊಂಡು ಇರುವ ದಲಿತರಿಗೆ ಆರ್ಥಿಕವಾಗಿ ಬಲಗೊಳ್ಳುವುದು ಬಹಳ ಮುಖ್ಯ. ಆರ್ಥಿಕವಾಗಿ ಬಲಗೊಳ್ಳದೇ ಹೋದರೆ ಜಾತಿಯ ಹಿಡಿತದಿಂದ ಹೊರಗೆ ಬರುವುದು ಸಾಧ್ಯವಿಲ್ಲ. ಮತ್ತು ಸ್ವಾಭಿಮಾನ ಮಾರ್ಗವನ್ನು ರೂಪಿಸಿಕೊಳ್ಳುವುದು ಸಾಧ್ಯವಿಲ್ಲ. ಬಹುತೇಕ ಬಾಹ್ಯ ಸ್ವಾಭಿಮಾನಕ್ಕೆ ಆರ್ಥಿಕ ಲ ಸಾಕಾದರೆ, ಆಂತರಿಕ ಅಥವಾ ಬೌದ್ಧಿಕ ಸ್ವಾಭಿಮಾನಕ್ಕೆ ನಂಬಿಕೆ, ಆರಾಧನೆ, ಚರಿತ್ರೆ, ಸಾಂಸ್ಕೃತಿಕ ವಿಚಾರಗಳು ಕಾರಣ. ಈ ಎರಡೂ ಪ್ರಶ್ನೆಗಳು ದಲಿತರ ದಬ್ಬಾಳಿಕೆಯ ಸಂದರ್ಭದಲ್ಲಿ ಬಹಳ ಮುಖ್ಯವಾಗಿದೆ. ಮಾತ್ರವಲ್ಲದೆ, ಹಿಂದುತ್ವ ಮತ್ತು ಜಾತಿಯ ಹಿಡಿತದಿಂದ ಬಿಡಿಸಿ ದಲಿತ ದಮನಿತರ ಸ್ವಾಭಿಮಾನಿ ರಾಜಕಾರಣದ ದಾರಿಯನ್ನು ಸ್ಪಷ್ಟಗೊಳಿಸುವುದು ನಂಬಿಕೆ, ಆರಾಧನೆ, ನಮ್ಮ ಭಾಷೆ, ಚರಿತ್ರೆ, ಸಮೃದ್ಧವಾದ ಮೌಖಿಕ ಪಠ್ಯಗಳನ್ನು ಓದುವುದರಿಂದಲೇ ಸಾಧ್ಯವಾಗಲಿದೆ.
 


 
 ದಲಿತ ದಮನಿತರ ಸ್ವಾಭಿಮಾನಿ ಹೋರಾಟ ನಾರಾಯಣಗುರು, ಫುಲೆ, ಪೆರಿಯಾರ್, ಅಂಬೇಡ್ಕರ್ ನಂತರದ ಪೀಳಿಗೆಯಿಂದ ಯಾಕೆ ಬೆಳೆಯಲಿಲ್ಲ? ಅಂಬೇಡ್ಕರ್ ಬೌದ್ಧ ಧರ್ಮ ಸ್ವೀಕರಿಸಿದರು. ಆ ಮೂಲಕ ಬ್ರಾಹ್ಮಣ್ಯದಿಂದ ವಂಚನೆಗೆ, ದಾಸ್ಯಕ್ಕೆ ಒಳಗಾಗುತ್ತಿದ್ದುದನ್ನು ತಪ್ಪಿಸಲು ಬುದ್ಧನ ಚಿಂತನೆಯಲ್ಲಿ ಪರಿಹಾರ ಹುಡುಕಿದರು. ಅವರ ತುಂಬಾ ಕ್ರಿಟಿಕಲ್ ಆದ ಬೌದ್ಧ ಧರ್ಮದ ಕುರಿತ ವಿವರಣೆಗಳು ಮನುಷ್ಯನ ಧಾರ್ಮಿಕ ನಂಬಿಕೆಯ ಬಯಕೆಗೂ ಪರ್ಯಾಯ ಆಗಿತ್ತು ಜೊತೆಗೆ ವೈಚಾರಿಕ ಮನುಷ್ಯನನ್ನು ಸೃಷ್ಟಿ ಮಾಡುವ ಪ್ರಯತ್ನವಾಗಿತ್ತು. ಫುಲೆ, ನಾರಾಯಣ ಗುರುಗಳ ಪರ್ಯಾಯ ಸ್ವಾಭಿಮಾನ ಮಾದರಿಗಳನ್ನು ಕೂಡಾ ಇತ್ತೀಚಿನ ಜನತೆ ಬೆಳೆಸಲಿಲ್ಲ. ಬೇರೆ ಬೇರೆ ಕಾರಣಗಳಿಗಾಗಿ ಹಿಂದುತ್ವ ರಾಜಕಾರಣದಲ್ಲಿ ನಂಬಿಕೆಯಿಟ್ಟುಕೊಂಡಿರುವ ಹಿಂದುಳಿದ ಜಾತಿಗಳ ಜನರು ತಮ್ಮ ದಾರ್ಶನಿಕರನ್ನು ಮರೆತಿರುವುದು ತಮ್ಮ ಸಮುದಾಯದ ದುರಂತವೇ ಸರಿ. ಮುಖ್ಯವಾಗಿ ಹಿಂದುತ್ವ ಅಸ್ಮಿತೆಯ ಜೊತೆಗೆ ಗುರುತಿಸಿಕೊಳ್ಳುತ್ತಿರುವ ದಮನಿತ ಜಾತಿಗಳ ಜನರು ಆ ವಿಸ್ಮತಿಯಿಂದ ಹೊರಬಂದು ತಮ್ಮ ತಮ್ಮ ಸಾಮಾಜಿಕ ಗುರುತುಗಳ ಸ್ಮತಿಗೆ ಬರಬೇಕಾಗಿದೆ. ಬುದ್ಧ, ಭಕ್ತಿ ಪಂಥ ಹಾಗೂ ಆಧುನಿಕ ಕಾಲದ ಹೋರಾಟಗಾರರ ಸ್ವಾಭಿಮಾನಿ ಚಿಂತನೆಗಳನ್ನು ಇಟ್ಟುಕೊಂಡು ದಲಿತ ದಮನಿತರ ಬಿಡುಗಡೆಯ ಸ್ವಾಭಿಮಾನಿ ಪರ್ಯಾಯಗಳ ಬಗ್ಗೆ ಒಂದು ಸಮಗ್ರವಾದ ಗಂಭೀರವಾದ ಕೆಲಸ ಆಗಬೇಕಾಗಿದೆ. ನಾರಾಯಣಗುರು, ಫುಲೆ, ಅಂಬೇಡ್ಕರ್ ಇನ್ನು ಅನೇಕ ಸ್ವಾಭಿಮಾನಿ ಹೋರಾಟಗಾರರು ಒಂದೊಂದು ತಾತ್ವಿಕ ಚೌಕಟ್ಟು ಹಾಕಿಕೊಟ್ಟಿದ್ದಾರೆ. ಹಾಗೆ ಅವರು ಹಾಕಿಕೊಟ್ಟ ಚೌಕಟ್ಟುಗಳನ್ನು ಬೆಸೆಯುವ ಚಿಂತನೆ ಸಾಧ್ಯವೆ ಎನ್ನುವುದನ್ನು ಪರಿಶೀಲಿಸಬೇಕು. ಸ್ವಾಭಿಮಾನಿ ಚಿಂತನೆಗೆ ಗಟ್ಟಿಯಾದ ಪರಂಪರೆಯನ್ನು ಬೆಳೆಸಲು ಸಾಧ್ಯವೇ ನೋಡಬೇಕು. ಇದನ್ನು ಜನರ ಸಾಮಾಜಿಕ ಆರ್ಥಿಕ ಶೋಷಣೆಯ ನೆಲೆಗಟ್ಟಿನಲ್ಲಿ ಮತ್ತು ಸಂವಿಧಾನದ ತಾತ್ವಿಕ ಚೌಕಟ್ಟಿನಲ್ಲಿ ವಿಸ್ತರಿಸಿ ಬೆಳೆಸಬೇಕಾಗಿದೆ. ಈ ಬಗ್ಗೆ ದಲಿತ, ಹಿಂದುಳಿದ ಮತ್ತು ಅಲ್ಪಸಂಖ್ಯಾತರ ವಿದ್ಯಾವಂತರ ವರ್ಗ, ಮಹಿಳೆಯರು ಸೇರಿ ಒಂದು ಚಾರಿತ್ರಿಕ ತೀರ್ಮಾನವನ್ನು ಮಾಡಬೇಕು. ಈ ಎಲ್ಲಾ ಸಮುದಾಯಗಳ ವಿದ್ಯಾವಂತ ವರ್ಗದ ಬಹುತೇಕರು ನಾರಾಯಣಗುರು, ಫುಲೆ, ಅಂಬೇಡ್ಕರ್ ವಹಿಸಿಹೋದ ಕೆಲಸ ಮಾಡಲಿಲ್ಲ. ಬಹುತೇಕರು ಬರೀ ಪದವಿ, ಅಧಿಕಾರ, ಹೊಸ ಅವಕಾಶಗಳನ್ನು ಸುಖಿಸುವವರಾದರು. ಇನ್ನು ಕೆಲವರು ತಮ್ಮ ಉನ್ನತೀಕರಣಗೊಂಡ ಬದುಕಿನಲ್ಲಿ ಜಾತಿಯನ್ನು ಮರೆಮಾಚಲು ಪ್ರತಿಷ್ಠಿತರ ಜೊತೆಗೆ ಸೇರಿದರು ಹಾಗೂ ಮೌನವಾದರು. ಇವತ್ತಿನ ಸಂದರ್ಭ ಭಾರತದ ದಲಿತರಿಗೆ ಎರಡು ಸಂಕಟಗಳನ್ನು ಉಂಟುಮಾಡಿದೆ. ಒಂದು, ಹಿಂದುತ್ವ ಉಂಟುಮಾಡಿದ ದೌರ್ಜನ್ಯ. ಇನ್ನೊಂದು, ಸಂವಿಧಾನವನ್ನು ಕಾಪಾಡುವ ಕೆಲಸ. ಪಾರಂಪರಿಕ ಜಾತಿ ವ್ಯವಸ್ಥೆ ಸತ್ತ ದನಗಳನ್ನು ಎತ್ತುವ, ಹೊಲಸನ್ನು ಬಾಚುವ, ನೈರ್ಮಲ್ಯದ ಕೆಲಸಗಳನ್ನು ಅಸ್ಪಶ್ಯರಿಗೆ ನೀಡಿತು. ಈಗಿನ ಹಿಂದುತ್ವ ಆ ಕೆಲಸಗಳನ್ನು ಮಾಡುವವರಿಗೆ ಬಡಿಯುವ ದೌರ್ಜನ್ಯವನ್ನು ಮಾಡುತ್ತಿದೆ. ಮುಸ್ಲಿಮರಿಗೆ ಮಾತ್ರವೆಂದು ಭಾವಿಸಿದ ದನದ ಸಮಸ್ಯೆ ದಲಿತರಿಗೂ ಬಂದಾಗ ಈ ವರ್ಗಗಳು ಒಂದಾದವು. ಹಿಂದುತ್ವ ಮತ್ತು ಜಾತಿ ಅಸಮಾನತೆಯ ವ್ಯವಸ್ಥೆಯಲ್ಲಿ ದಲಿತರು, ಮುಸ್ಲಿಮರು, ಇತರ ಅಲ್ಪಸಂಖ್ಯಾತರು, ಮಹಿಳೆಯರು, ಆದಿವಾಸಿಗಳು, ಬಡವರು ಶೋಷಿತರೆ. ಅಲ್ಪಸಂಖ್ಯಾತರು ಅವರ ಧರ್ಮ, ಆಹಾರ, ಸಂಸ್ಕೃತಿಗಳಿಗೆ ಹಿಂದುತ್ವದಿಂದ ದಮನಿಸ್ಪಟ್ಟರೆ, ದಲಿತರು ಜಾತಿ, ಪ್ರಗತಿ ಹೊಂದುತ್ತಿರುವ ಅವರ ಚಲನೆ ಯನ್ನು ತಡೆಯುವ ಕಾರಣಕ್ಕೆ ದೌರ್ಜನ್ಯಕ್ಕೆ ಒಳಗಾಗುತ್ತಿರುವರು, ಆದಿವಾಸಿಗಳು, ಹಿಂದುಳಿದ ವರ್ಗದವರ ಧಾರ್ಮಿಕ ಶ್ರದ್ಧೆಯನ್ನು ದುರುಪಯೋಗಕ್ಕೆ ಒಳಪಡಿಸಿ ಅವರು ಕಣ್ಣೀರು ಹಾಕುವಂತೆ ಮಾಡಲಾಗುತ್ತಿದೆ. ಮಹಿಳೆಯರ ಪಿತೃಪ್ರಧಾನತೆಯ ಕಟ್ಟುಪಾಡುಗಳಿಂದ ಹೊರಗೆ ಬರುತ್ತಿರುವುದನ್ನು ತಡೆದು ಮತ್ತೆ ಮತ್ತೆ ಸಾಂಪ್ರದಾಯಿಕ ಬಂಧನಗಳ ಕಡೆಗೆ ಹಿಂದುತ್ವ ಕರೆದುಕೊಂಡು ಹೋಗುತ್ತಿದೆ. ಹಾಗಾಗಿ ಜಾತಿ ಮತ್ತು ಹಿಂದುತ್ವದ ಎದುರಲ್ಲಿ ಎಲ್ಲರೂ ಭಿನ್ನ ಭಿನ್ನ ಕಾರಣಗಳಿಗಾಗಿ ದಮನಿತರೆ, ಶೋಷಿತರೆ ಆಗಿದ್ದಾರೆ. ಮತ್ತು ಇವರ ಶೋಷಣೆಯ ಕಾರಣಗಳು ಭಿನ್ನ ಭಿನ್ನವಾದರೂ ಶತ್ರು ಶೋಷಕ ಒಬ್ಬನೆ. ಹಾಗಾಗಿ ಈ ಎಲ್ಲ ಶೋಷಿತ ವರ್ಗಗಳು ಒಟ್ಟಾಗುವುದು ಅಗತ್ಯ. ಈವರೆಗೆ ಭಿನ್ನ ಭಿನ್ನವಾಗಿರುವುದರಿಂದಲೇ ಸೋಲಾಗಿರುವುದು ಮತ್ತು ಶತ್ರು ಗಟ್ಟಿಯಾಗಿರುವುದು ಎನ್ನುವ ಸಂಗತಿಯನ್ನು ಕಂಡುಕೊಳ್ಳಬೇಕು. ದಲಿತ ದಮನಿತರ ಸ್ವಾಭಿಮಾನ ಚಿಂತನೆಯ ದಾರಿಯನ್ನು ಸ್ಪಷ್ಟ ಪಡಿಸಿಕೊಳ್ಳುವಲ್ಲಿ ತೊಡಕಾಗಿರುವುದು ಹಿಂದುತ್ವದ ರಾಷ್ಟ್ರ, ಗೋವು, ಹೆಣ್ಣು, ಧಾರ್ಮಿಕತೆ, ಪುರಾಣ ಕತೆ ಮುಂತಾದುವುಗಳು. ಈಗಾಗಲೇ ಪ್ರಸ್ತಾಪಿಸಿದಂತೆ, ಈ ವಿಷಯಗಳ ಕುರಿತು ನಮಗೆ ನಿಜವಾದ ಮಾರ್ಗದರ್ಶಕರು ನಮ್ಮ ಹಿತಚಿಂತನೆಯನ್ನು ಮಾಡಿದ ನಾರಾಯಣ ಗುರು, ಫುಲೆ, ಅಂಬೇಡ್ಕರ್ ಈ ಮುಂತಾದವರು. ಸ್ವಾಭಿಮಾನದ ನಡಿಗೆ ಅವರಿಂದ ಸ್ಫೂರ್ತಿ ಪಡೆಯಬೇಕು.

Writer - ಡಾ. ವಾಸುದೇವ ಬೆಳ್ಳೆ

contributor

Editor - ಡಾ. ವಾಸುದೇವ ಬೆಳ್ಳೆ

contributor