ಎಲ್ಲಸಮುದಾಯಗಳಿಗೂ ಮಾಧ್ಯಮಗಳು ಆದ್ಯತೆ ನೀಡಲಿ
ಬೆಂಗಳೂರು, ಅ. 9: ಸುದ್ದಿವಾಹಿನಿಗಳು ರಾಜ್ಯದಲ್ಲಿರುವ ಎಲ್ಲ ಸಮುದಾಯಗಳಿಗೂ ಸಮಾನ ರೀತಿಯ ಆದ್ಯತೆ ಕೊಟ್ಟು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಉತ್ತಮ ಕೊಡುಗೆ ನೀಡಲಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
ರವಿವಾರ ಶಾಂತಿನಗರದ ಬಿಎಂಟಿಸಿ ಬಸ್ ನಿಲ್ದಾಣದ ಕಾಂಪ್ಲೆಕ್ಸ್‌ನಲ್ಲಿರುವ ‘ಸುದ್ದಿ ಟಿವಿ’ಯ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಸರಕಾರಕ್ಕೆ ಹೇಗೆ ಸಾಮಾಜಿಕ ಬದ್ಧತೆ ಇರಬೇಕೋ ಅಷ್ಟೆ ಪ್ರಮಾಣದಲ್ಲಿ ಸುದ್ದಿವಾಹಿನಿಗಳಿಗೂ ಸಾಮಾಜಿಕ ಕಳಕಳಿ ಇರಬೇಕು. ಈ ಜಾಗೃತಿಯಿಂದ ಸುದ್ದಿವಾಹಿನಿಗಳು ಕೆಲಸ ಮಾಡಲಿ ಎಂದರು. ವೈಯಕ್ತಿಕ ವಿಚಾರಗಳನ್ನು ಪ್ರಸಾರ ಮಾಡುವಾಗ ವೈಭವಿಕರಿಸುವುದು ಒಳ್ಳೆಯದಲ್ಲ. ಇದರಿಂದ ಸುದ್ದಿ ವಾಹಿನಿಗಳಿಗೆ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ. ಅದರ ಬದಲು ಧನಾತ್ಮಕ, ಸಮಾಜಕ್ಕೆ ಪೂರಕವಾಗುವಂತಹ ಹಾಗೂ ಎಲ್ಲ ಸಮುದಾಯಗಳಿಗೆ ಸಮ ಪ್ರಮಾಣದಲ್ಲಿ ಆದ್ಯತೆ ಕೊಡುವಂತಹ ಸುದ್ದಿಗಳನ್ನು ಪ್ರಸಾರ ಮಾಡಬೇಕು ಎಂದು ಅವರು ಹೇಳಿದರು.ಂದು ಸಮಾಜ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದೆ. ಇದಕ್ಕೆ ಸರಿಯಾದ ಕಾರಣ ಹಾಗೂ ಪರಿಹಾರಗಳನ್ನು ಹುಡುಕಿ, ಸಮಾಜವನ್ನು ಸರಿದಾರಿಗೆ ಕೊಂಡೊಯ್ಯಬೇಕಾದ ಜವಾಬ್ದಾರಿ ಸರಕಾರ ಹಾಗೂ ಮಾಧ್ಯಮದ ಮೇಲಿದೆ. ಈ ನಿಟ್ಟಿನಲ್ಲಿ ಎಲ್ಲ ಸುದ್ದಿವಾಹಿನಿಗಳು ಅತ್ಯಂತ ಬದ್ಧತೆಯಿಂದ ಕೆಲಸ ಮಾಡಲಿ ಎಂದು ಅವರು ಹೇಳಿದರು.
ಸುದ್ದಿ ಟಿವಿಯ ಸಂಪಾದಕ ಶಶಿಧರ್‌ಭಟ್ ಮಾತನಾಡಿ, ಕಳೆದ ಒಂದು ವರ್ಷದ ಕಠಿಣ ಪರಿಶ್ರಮದಿಂದ ಸುದ್ದಿ ಟಿವಿಯನ್ನು ಕಟ್ಟಿದ್ದೇವೆ. ನಮ್ಮ ತಂಡಕ್ಕೆ ಸಾಮಾಜಿಕ ಬದ್ಧತೆಯ ಅರಿವಿದ್ದು, ಪ್ರತಿ ಸುದ್ಧಿಯನ್ನು ಪ್ರಸಾರ ಮಾಡುವ ಮೊದಲು ಕೂಲಂಕುಷವಾಗಿ ಪರಿಶೀಲಿಸಿ ಪ್ರಸಾರ ಮಾಡುತ್ತೇವೆ ಎಂದು ಅವರು ತಿಳಿಸಿದರು.
ನಮ್ಮ ಮೊದಲ ಆದ್ಯತೆ ಜನಪರ ಸುದ್ದಿಗಳಿಗೆ. ಯಾವುದೇ ಕಾರಣಕ್ಕೂ ಜ್ಯೋತಿಷ್ಯ ಮತ್ತು ಮೂಢನಂಬಿಕೆಯನ್ನು ಬಿತ್ತುವಂತಹ ಸುದ್ದಿಗಳನ್ನು ಪ್ರಸಾರ ಮಾಡುವುದಿಲ್ಲ. ಸಮಾಜಕ್ಕೆ ವೈಚಾರಿಕತೆಯ ಅರಿವನ್ನು ವಿಸ್ತರಿಸುವಂತಹ ಕೆಲಸ ಮಾಡುತ್ತೇವೆ ಎಂದು ಅವರು ತಿಳಿಸಿದರು.
ಬೆಂಗಳೂರು ನಗರಾಭಿವೃದ್ಧಿ ಸಚಿವ ಕೆ.ಜೆ.ಜಾರ್ಜ್, ಡಿಸಿಪಿ ಸಂದೀಪ್ ಪಾಟೀಲ್, ಮೇಲ್ಮನೆ ಸದಸ್ಯೆ ತಾರಾ, ಪತ್ರಕರ್ತ ಲಕ್ಷ್ಮಣ ಹೂಗಾರ್ ಮೊದಲಾದವರು ಉಪಸ್ಥಿತರಿದ್ದರು.