ಓ ಮೆಣಸೇ...
*ನಾವು ಖಳರಲ್ಲ ಬಲಿಪಶುಗಳು - ಸಿದ್ದರಾಮಯ್ಯ, ಮುಖ್ಯಮಂತ್ರಿ
ಪಶುಗಳು ಎಂದರೆ ಗೋರಕ್ಷಕರಿಗೆ ಬಲಿಯಾಗಬೇಕಾಗುತ್ತದೆ.
---------------------
ಭಾರತ ಅನ್ಯದೇಶದ ಮೇಲೆ ಆಕ್ರಮಣ ಮಾಡಿದ ಇತಿಹಾಸವಿಲ್ಲ
-ನರೇಂದ್ರ ಮೋದಿ, ಪ್ರಧಾನಿ
ಮರಾಠರು ತನ್ನ ದೇಶದೊಳಗೆ ಮಾಡಿದ ಆಕ್ರಮಣಗಳಿಗೆ ಲೆಕ್ಕವಿಲ್ಲ.
---------------------
ಗಾಂಧೀಜಿ ತತ್ವಗಳಲ್ಲಿ ಎಲ್ಲವನ್ನೂ ರೂಢಿಸಿಕೊಳ್ಳುವುದು ಕಷ್ಟದ ಕೆಲಸ. - ಶಕುಂತಳಾ ಶೆಟ್ಟಿ, ಶಾಸಕಿ
ಕೆಲವನ್ನು ಪ್ರಭಾಕರ ಭಟ್ಟರ ತತ್ವಗಳಲ್ಲಿ ರೂಢಿಸಿಕೊಳ್ಳುವುದು ಬಹು ಸುಲಭ ಅಲ್ಲವೇ?
---------------------
ಮನೆ ಕಟ್ಟಿಕೊಡುವುದು ಪುಣ್ಯದ ಕೆಲಸ
-ಕೃಷ್ಣ.ಜೆ ಪಾಲೆಮಾರ್, ಮಾಜಿ ಸಚಿವ
ಜೊತೆಗೆ ತಮ್ಮಂಥವರಿಗೆ ಲಾಭದಾಯಕ ಕೆಲಸವೂ ಹೌದು.
---------------------
ಯಡಿಯೂರಪ್ಪ ಇನ್ನೊಮ್ಮೆ ಮುಖ್ಯಮಂತ್ರಿಯಾಗಬೇಕೆಂದು ಜನ ಕನಸು ಕಾಣುತ್ತಿದ್ದಾರೆ
-ಶೋಭಾ ಕರಂದ್ಲಾಜೆ, ಸಂಸದೆ
ಯಡಿಯೂರಪ್ಪರ ಕನಸಲ್ಲಿ ಮಾತ್ರ ಸದಾ ಈಶ್ವರಪ್ಪರೇ ಬರುತ್ತಿದ್ದಾರಂತೆ.
---------------------
ಆರೆಸ್ಸೆಸ್, ಕಾರ್ಯಕರ್ತರ ಬ್ರೈನ್ ವಾಶ್ ಮಾಡುವುದಿಲ್ಲ
-ಕಲ್ಲಡ್ಕ ಪ್ರಭಾಕರ್ ಭಟ್, ಆರೆಸ್ಸೆಸ್ ನಾಯಕ
ಬಹುಶಃ ಕಾರ್ಯಕರ್ತರ ಬ್ರೈನ್‌ನ್ನು ತೆಗೆದು ಹಾಕುತ್ತದೆ ಎಂದು ಕಾಣುತ್ತದೆ.
---------------------
ಧರ್ಮ, ಸಂಸ್ಕೃತಿಯನ್ನು ಸಂರಕ್ಷಿಸುವ ಜೊತೆಗೆ ಜೈಲಿಗೆ ಹೋಗಬೇಕಾದ ಅನಿವಾರ್ಯತೆ ಇದೆ - ಮುಕುಂದ್, ಆರೆಸ್ಸೆಸ್ ಪ್ರಮುಖ್
ತಮ್ಮಂಥವರು ಶಾಶ್ವತವಾಗಿ ಜೈಲಲ್ಲಿದ್ದರೆ ಧರ್ಮ, ಸಂಸ್ಕೃತಿ ಉಳಿಯುತ್ತದೆ.
---------------------
ಯೋಧರಿಗೆ ಹೋಲಿಸಿಕೊಂಡರೆ ಕಲಾವಿದರು ತಿಗಣೆಯಿದ್ದಂತೆ
-ನಾನಾ ಪಾಟೆೇಕರ್, ನಟ
ಸದ್ಯಕ್ಕೆ ಯೋಧರ ಚಾಪೆಗಳಡಿಗೆ ತೂರಿಕೊಳ್ಳದಿದ್ದರೆ ಸಾಕು.
---------------------
ಮೀನಿನ ತಲೆ ತಿನ್ನಬೇಡಿ
-ಯು.ಟಿ. ಖಾದರ್, ಸಚಿವ
ಹಾಗೆ ನೀವು ಜನರ ತಲೆಯನ್ನು ಕೂಡ ತಿನ್ನಬೇಡಿ ಎನ್ನುವುದು ಜನರ ವಿನಯಪೂರ್ವಕ ಕೋರಿಕೆ.
ಬುರ್ಹಾನ್ ವಾನಿ ಕಾಶ್ಮೀರದ ಸುಪುತ್ರ
-ನವಾಝ್ ಶರೀಫ್, ಪಾಕ್ ಪ್ರಧಾನಿ
ಭಾರತದ ಪಾಲಿನ ಕುಪುತ್ರ.
---------------------
ಸರಕಾರದ ಯೋಜನೆಗಳು ಅನುಷ್ಠಾನಕ್ಕೆ ಬರುವ ಮುನ್ನ ಅದರಲ್ಲಿರುವ ಹಲವಾರು ರಂಧ್ರಗಳನ್ನು ಮುಚ್ಚುವುದರಿಂದಲೇ ಸಾಕಷ್ಟು ಶ್ರಮ ವ್ಯರ್ಥವಾಗುತ್ತದೆ
-ರಮೇಶ್ ಕುಮಾರ್, ಸಚಿವ
ರಂಧ್ರ ಕೊರೆದವರೇ ಮುಚ್ಚುವ ಮಾತನಾಡಿದರೆ ಹೀಗೆ ಆಗುತ್ತದೆ.
---------------------
ಗಡಿಯಲ್ಲಿ ನಡೆದ ದಾಳಿ ಬಗ್ಗೆ ಎದೆ ತಟ್ಟಿಕೊಳ್ಳಬೇಡಿ
- ನರೇಂದ್ರ ಮೋದಿ, ಪ್ರಧಾನಿ
ಎದೆಯ ಗಟ್ಟಿತನದ ಬಗ್ಗೆ ಅನುಮಾನವೇ?
---------------------
ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ನರಕಕ್ಕೆ ಹೋಗಲಿ
-ರೊಡ್ರಿಗೊಡ್ಯುಟೆರ್ಟೆ, ಫಿಲಿಪ್ಪೀನ್ಸ್ ಅಧ್ಯಕ್ಷ
ನಿಮ್ಮ ಶಾಪ ಫಲಿಸಿದೆ. ಶೀಘ್ರದಲ್ಲೇ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರಂತೆ.
---------------------
ಕಾಶ್ಮೀರದ ಜನರ ಗಾಯಗಳಿಗೆ ಮುಲಾಮು ಹಚ್ಚುವ ಕಾಲ ಕೂಡಿ ಬಂದಿದೆ
-ಮೆಹಬೂಬ ಮುಫ್ತಿ, ಜಮ್ಮು-ಕಾಶ್ಮೀರ ಮುಖ್ಯಮಂತ್ರಿ
ಗಾಯ ಕ್ಯಾನ್ಸರ್ ಆಗಿ ಪರಿವರ್ತನೆಯಾದ ಬಳಿಕ ಮುಲಾಮು ಹಚ್ಚುವ ನಿರ್ಧಾರವೇ?
---------------------
56 ಇಂಚಿನ ಎದೆ ರೈತರದ್ದು, ಮೋದಿಯದ್ದಲ್ಲ
-ಜ್ಯೋತಿರಾದಿತ್ಯ ಸಿಂಧಿಯಾ, ಕಾಂಗ್ರೆಸ್ ನಾಯಕ
ಆ ಎದೆಯನ್ನು ಮೋದಿಯೇ ಇಟ್ಟುಕೊಳ್ಳಲಿ, ರೈತರ ಭೂಮಿಯನ್ನು ಅವರಿಗೆ ಮರಳಿಸಲಿ.
---------------------
ಮಗು ತಂದೆಯ ಬೆನ್ನೇರಿ ಎಲ್ಲವನ್ನೂ ನೋಡುವಂತೆ ಜಗತ್ತನ್ನು ವಿಶಾಲ ದೃಷ್ಟಿಯಿಂದ ನೋಡಬೇಕು
-ವಿಶ್ವೇಶ ತೀರ್ಥ ಸ್ವಾಮೀಜಿ, ಪೇಜಾವರ ಮಠ
ದಲಿತರು ಬ್ರಾಹ್ಮಣರ ಬೆನ್ನೇರಿ ನೋಡುವ ವಿಶಾಲ ದೃಷ್ಟಿ ಯಾವಾಗ ಬರಬಹುದು?
ಸಂಗೊಳ್ಳಿ ರಾಯನ್ನ ಬ್ರಿಗೇಡ್‌ಗೂ ಬಿಜೆಪಿಗೂ ಸಂಬಂಧವಿಲ್ಲ
-ಶ್ರೀರಾಮುಲು, ಸಂಸದ
ಈಶ್ವರಪ್ಪನಿಗೂ ಬಿಜೆಪಿಗೂ ಇರುವ ಸಂಬಂಧ ವಿವರಿಸುತ್ತೀರಾ?
---------------------
ಪ್ರಧಾನಿ ಮೋದಿ ಯೋಧರ ರಕ್ತದ ದಲ್ಲಾಳಿ.
-ರಾಹುಲ್ ಗಾಂಧಿ, ಕಾಂಗ್ರೆಸ್ ಉಪಾಧ್ಯಕ್ಷ
ನನ್ನ ಪರ್ಸಂಟೇಜ್ ಎಲ್ಲಿ ಎಂದು ಕೇಳಿದರಂತೆ ಅಂಬಾನಿ.
---------------------
ಒಂದು ವೇಳೆ ಇಂದಿರಾ ಗಾಂಧಿ(ಅಂದು) ಇದ್ದಿದ್ದರೆ ನಾನು ಕಾಂಗ್ರೆಸ್ ಸೇರುತ್ತ್ತಿದ್ದೆ
-ಶತ್ರುಘ್ನ ಸಿನ್ಹಾ, ಸಂಸದ
ಇಂದು ಪಕ್ಷದೊಳಗೊಬ್ಬ ಶತ್ರುವನ್ನು ಎದುರಿಸುವ ಸ್ಥಿತಿ ರಾಹುಲ್‌ಗಾಂಧಿಯದ್ದಾಗುತ್ತಿತ್ತು.
---------------------
ಭಾರತ ಮಾತೆಗೆ ಜೈ ಹೇಳಿದರೆ ಜನತೆಯ ಸಂಕಷ್ಟ ನೀಗದು-ಡಾ.ಎಲ್.ಹನುಮಂತಯ್ಯ, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
ಕೆಲವು ರಾಜಕಾರಣಿಗಳ ಸಂಕಷ್ಟ ನೀಗುವ ಸಾಧ್ಯತೆಯಿದೆಯಂತೆ.
---------------------
ಅಮೆರಿಕ ಈಗ ವಿಶ್ವದ ಪ್ರಮುಖ ಶಕ್ತಿ ಅಲ್ಲ.
-ಮುಶಾಹಿದ್ ಹುಸೈನ್, ಪಾಕ್ ಪ್ರಧಾನಿ ವಿಶೇಷ ಸಲಹೆಗಾರ
ಪ್ರಮುಖ ಶಕ್ತಿಯಾಗಿದ್ದಿದ್ದರೆ ಗಡಿಯಲ್ಲಿ ಸರ್ಜಿಕಲ್ ಸ್ಟ್ರೈಕ್ ನಡೆಯುತ್ತಿರಲಿಲ್ಲ ಅಂತೀರಾ?
---------------------
ಕಾವೇರಿ ಹೋರಾಟ ರಾಜಕೀಯ ಲಾಭಕ್ಕಾಗಿ ಅಲ್ಲ
-ದೇವೇಗೌಡ, ಮಾಜಿ ಪ್ರಧಾನಿ
ಲಾಭ ಎಲ್ಲಿದೆಯೋ ಅಲ್ಲಿದೆ ಹೋರಾಟ ಎಂಬ ನಿಮ್ಮ ಲೈಫ್‌ಬಾಯ್ ಸಾಂಗ್ ರಾಜ್ಯದ ಜನರಿಗೆ ಗೊತ್ತಿದೆ ಬಿಡಿ.
---------------------
ಅಕ್ರಮ ಮದ್ಯ ಮಾರಾಟ ಪತ್ತೆಯಾದರೆ ಕಠಿಣ ಕ್ರಮ
-ಎಚ್.ವೈ. ಮೇಟಿ, ಮಾಜಿ ಸಚಿವ
ಪತ್ತೆ ಮಾಡಿದ ಅಬಕಾರಿ ಅಧಿಕಾರಿಗಳ ವಿರುದ್ಧವೇ?
---------------------
2018ರೊಳಗೆ ಭಾರತ-ಪಾಕ್ ಗಡಿ ಸಂಪೂರ್ಣ ಬಂದ್
-ರಾಜನಾಥ್ ಸಿಂಗ್, ಕೇಂದ್ರ ಸಚಿವ
ಮೊದಲು ತಮ್ಮ ಸರಕಾರದೊಳಗಿರುವ ಸಚಿವರ ಬಾಯಿ ಯಾವಾಗ ಬಂದ್ ಎನ್ನುವುದನ್ನು ಹೇಳಿ.