ಬೆಂಗಳೂರನ್ನು ಮತ್ತೆ ತ್ಯಾಜ್ಯ ಸಮಸ್ಯೆ ಕಾಡುವ ಭೀತಿ!
ಬೆಂಗಳೂರು, ಅ. 10: ದಸರಾ-ಆಯುಧ ಪೂಜೆ ಹಬ್ಬದ ಹಿನ್ನಲೆಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಪ್ರಮುಖ ಮಾರುಕಟ್ಟೆಗಳು, ಬೀದಿಗಳು, ರಸ್ತೆಗಳು ಸೇರಿ ಎಲ್ಲಡೆ ಬಿರುಸಿನ ವ್ಯಾಪಾರ ವಹಿವಾಟು ನಡೆಯುತ್ತಿದೆ. ವ್ಯಾಪಾರಸ್ಥರ ವ್ಯಾಪಾರದ ಭರಾಟೆಯಲ್ಲಿ ನಗರದೆಲ್ಲೆಡೆ ನೋಡಿದರು ಕಸವೇ ಕಾಣಿಸುತ್ತಿದೆ. ನಗರದಲ್ಲಿ ಪುನಃ ತ್ಯಾಜ್ಯದ ಸಮಸ್ಯೆ ಸೃಷ್ಟಿಯಾಗುವ ಆತಂಕ ಬಂದಿದೆ.
ಆಯುಧ ಪೂಜೆ ಹಿನ್ನಲೆಯಲ್ಲಿ ಎರಡು ದಿನಗಳಿಂದ ಸಾರ್ವಜನಿಕರು ನಗರದಲ್ಲಿರುವ ಪ್ರಮುಖ ಮಾರುಕಟ್ಟೆಗಳಿಗೆ ಭೇಟಿ ನೀಡಿ ವಾಹನಗಳ ಪೂಜೆಗಾಗಿ ಬಾಳೆಕುಂದು, ಬೂದುಕುಂಬಳ, ಹೂವು, ಸೇರಿ ವಿವಿಧ ಸಾಮಗ್ರಿಗಳ ಖರೀದಿಯಲ್ಲಿ ತೊಡಗಿದ್ದಾರೆ. ಜೊತೆಗೆ ವಿವಿಧ ಭಾಗಗಳಿಂದ ವ್ಯಾಪಾರಿಗಳು ಹಾಗೂ ರೈತರು ನಗರಕ್ಕೆ ಆಗಮಿಸಿ ಭರದ ಬೀದಿ ವ್ಯಾಪಾರ ನಡೆಸುತ್ತಿದ್ದಾರೆ. ವ್ಯಾಪಾರ ಮುಗಿಸಿ ತ್ಯಾಜ್ಯವನ್ನು ಅಲ್ಲೇ ಬಿಟ್ಟು ಹೋಗುತ್ತಿರುವುದು ಈ ಸಮಸ್ಯೆಗೆ ಕಾರಣ, ಮಾರುಕಟ್ಟೆಗಳಲ್ಲಿ ಮತ್ತು ಕೆಲ ಬೀದಿಬದಿಗಳಲ್ಲೂ ಕಸದ ರಾಶಿಗಳು ಕಂಡುಬರುತ್ತಿವೆ. ಜೊತೆಗೆ ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ರ್ದುವಾಸನೆ ಬರುತ್ತಿದೆ.
ತ್ಯಾಜ್ಯ ವಿಲೇವಾರಿ: ನಗರ ವ್ಯಾಪ್ತಿಯ ಪ್ರಮುಖ ಮಾರುಕಟ್ಟೆಗಳಾದ ಕೆ.ಆರ್.ಮಾರುಕಟ್ಟೆ, ಮಡಿವಾಳ ಸಂತೆ ಮೈದಾನ, ಮಲ್ಲೇಶ್ವರಂ, ಶಿವಾಜಿ ನಗರ ಸೇರಿ ಹಲವೆಡೆ ಹಾಗೂ ರಸ್ತೆ ಬದಿಗಳಲ್ಲಿ ವ್ಯಾಪಾರಿಗಳು ಬಿಟ್ಟು ಹೋಗುವ ತಾಜ್ಯ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಪಾಲಿಕೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೌರಕಾರ್ಮಿಕರಿಗೆ ರಜೆ ಇಲ್ಲ:
ಆಯುಧ ಪೂಜೆ ಹಾಗೂ ದಸರಾ ಹಿನ್ನಲೆಯಲ್ಲಿ ನಗರ ವ್ಯಾಪ್ತಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗುವುದರಿಂದ ಪ್ರಮುಖ ಸ್ಥಳಗಳಲ್ಲಿ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಪೌರಕಾರ್ಮಿಕರನ್ನು ನೇಮಿಸಲಾಗಿದೆ. ಅಲ್ಲದೆ, ಹಬ್ಬದ ದಿನವೂ ಪೌರಕಾರ್ಮಿಕರು ಕೆಲಸ ಮಾಡಬೇಕಿದ್ದು, ಇದರೊಂದಿಗೆ ಅಗತ್ಯವೆನಿಸದರೆ ಹೆಚ್ಚುವರಿ ಸಿಬ್ಬಂದಿ, ಯಂತ್ರಗಳನ್ನು ಬಳಸಿಕೊಳ್ಳಲು ಅವಕಾಶ ನೀಡಿರುವ ಹಿನ್ನಲೆಯಲ್ಲಿ ಪೌರಕಾರ್ಮಿಕರು ಹಬ್ಬದ ದಿನ ರಜೆ ತೆಗೆದುಕೊಳ್ಳದೆ ತ್ಯಾಜ್ಯ ವಿಲೇವಾರಿ ಕಾರ್ಯದಲ್ಲಿ ತೊಡಗಬೇಕಿದೆ.
ದಸರಾ-ಆಯುಧ ಪೂಜೆ ಹಿನ್ನಲೆಯಲ್ಲಿ ಹೆಚ್ಚುವರಿ ತ್ಯಾಜ್ಯ ಸೃಷ್ಟಿಯಾಗಿರುವುದರಿಂದ ಬಿಬಿಎಂಪಿ ಅಧಿಕಾರಿಗಳು ಕಸದ ಸಮಸ್ಯೆ ತಡೆಯಲು ಮುಂದಾಗಬೇಕು. ಇಲ್ಲದಿದ್ದಲ್ಲಿ ಬೆಂಗಳೂರನ್ನು ಮತ್ತೊಮ್ಮೆ ಕಸದ ಸಮಸ್ಯೆ ಕಾಡುವ ಸಾಧ್ಯತೆ ಕಂಡುಬರುತ್ತಿದೆ.