ನಾಡಿನಲ್ಲಿ ಸಮಾನತೆ, ಸೌಹಾರ್ದದ ಬೀಜ ಬಿತ್ತಿದ ‘ಚಲೋ ಉಡುಪಿ’
ಬೆಂಗಳೂರು, ಅ.11: ಸಂಘಪರಿವಾರದ ಜನವಿರೋಧಿ ಸಿದ್ಧಾಂತಗಳನ್ನು ದಲಿತ ಹಾಗೂ ಹಿಂದುಳಿದ ಸಮುದಾ ಯದ ಯುವಜನತೆಗೆ ತಿಳಿಸುವಲ್ಲಿ ಉಡುಪಿ ಚಲೋ ಜಾಥಾ ಯಶಸ್ಸು ಕಂಡಿದೆ ಎಂದು ದಲಿತ, ದಮನಿತರ ಸ್ವಾಭಿಮಾನಿ ಸಮಾವೇಶದ ಸಂಚಾಲಕ ಭಾಸ್ಕರ್ ಪ್ರಸಾದ್ ತಿಳಿಸಿದ್ದಾರೆ.
ದಲಿತ ಯುವಕರು ಎತ್ತ ಸಾಗಬೇಕು. ಮನುವಾದಿಗಳ ಜನವಿರೋಧಿ ನೀತಿಯ ಕುರಿತು ಜನರಲ್ಲಿ ಜಾಗೃತಿ ಮೂಡಿಸು ವುದು ಸೇರಿದಂತೆ ಹಲವು ವಿಷಯಗಳ ಕುರಿತು ವಾರ್ತಾಭಾರತಿಯೊಂದಿಗೆ ಅವರು ಮಾತನಾಡಿದರು.
ವಾರ್ತಾಭಾರತಿ: ಉಡುಪಿ ಚಲೋ ಸಮಾವೇಶ ನಿರೀಕ್ಷಿಸಿದಂತೆ ಯಶಸ್ವಿಯಾಗಿದೆಯೆ?
ಉಡುಪಿ ಚಲೋ ಸಮಾವೇಶಕ್ಕೆ ಕನಿಷ್ಠ 20ರಿಂದ 25ಸಾವಿರ ಮಂದಿ ಸೇರಬೇಕೆಂದು ನಿರೀಕ್ಷಿಸಿದ್ದೆವು. ಆದರೆ, ನಮಗೆ ಜನತೆಯ ಸಂಖ್ಯೆ ಮುಖ್ಯವಾಗಿರಲಿಲ್ಲ. ಸಂಘಪರಿವಾರದ ಪ್ರಯೋಗ ಶಾಲೆಯಾಗಿರುವ ಸ್ಥಳದಲ್ಲಿ ಸಮಾನತೆಯ, ಸೌಹಾರ್ದದ ಬಹುಸಂಸ್ಕೃತಿಯ ಬೀಜವನ್ನು ಬಿತ್ತಬೇಕಾಗಿತ್ತು. ಆ ಬಿತ್ತನೆ ಕಾರ್ಯ ಯಶಸ್ವಿಯಾಗಿದೆ. ವಾರ್ತಾಭಾರತಿ: ಉಡುಪಿ ಚಲೋ ಮುಖಾಂತರ ಸಂಪರ್ಕಕ್ಕೆ ಬಂದಿರುವ ಯುವಕರೊಂದಿಗೆ ಹೇಗೆ ತೊಡಗಿಸಿಕೊಳ್ಳುತ್ತೀರಾ?
-ಉಡುಪಿ ಚಲೋ ಎನ್ನುವುದು ಕೇವಲ ಒಂದು ಸಮಾವೇಶಕ್ಕೆ ಸೀಮಿತ ವಾಗಿಲ್ಲ. ಇದರ ನಂತರ ಪ್ರತಿ ಜಿಲ್ಲೆಯಲ್ಲಿ ದಲಿತ, ಹಿಂದುಳಿದ ಹಾಗೂ ಅಲ್ಪಸಂಖ್ಯಾತರನ್ನು ಒಟ್ಟುಗೂಡಿಸುವಂತಹದ್ದು, ಬಹು ಸಂಸ್ಕೃತಿಯ ಅಗತ್ಯತೆಯ ಕುರಿತು ಜನರಲ್ಲಿ ತಿಳುವಳಿಕೆ ಹಾಗೂ ಪ್ರತಿ ಜಿಲ್ಲೆಯಲ್ಲಿ ಸಮಾವೇಶವನ್ನು ಮಾಡುತ್ತಿದ್ದೇವೆ. ಹೀಗಾಗಿ ಉಡುಪಿ ಚಲೋ ಸಮಾವೇಶದಲ್ಲಿ ಸಂಪರ್ಕಕ್ಕೆ ಬಂದಿರುವ ಯುವ ಜನತೆ, ತಮ್ಮ ತಮ್ಮ ಜಿಲ್ಲೆಗಳಲ್ಲಿ ಜನಪರ ಆಶಯಗಳ ಕುರಿತು ಕೆಲಸ ಮಾಡಲಿದ್ದಾರೆ.
ವಾರ್ತಾಭಾರತಿ: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಉಡುಪಿ ಚಲೋ ಹಾಗೂ ಮುಂದಿನ ದಿನಗಳಲ್ಲಿ ಮಾಡಲು ಉದ್ದೇಶಿಸಿರುವ ಜನಜಾಗೃತಿ ಕಾರ್ಯಕ್ರಮಗಳು ಪ್ರಭಾವ ಬೀರುತ್ತದೆಯೆ?
-ಖಂಡಿತವಾಗಿಯೂ ಪ್ರಭಾವ ಬೀರಲಿದೆ. ಸಂಘಪರಿವಾರದಲ್ಲಿ ಒಳ ಹಾಗೂ ಹೊರಗಿನ ರಾಜಕೀಯ ಬಣ್ಣವನ್ನು ಅರಿಯುವಂತಹ, ವಿಶ್ಲೇಷಿಸುವಂತಹ ಬೌದ್ಧಿಕತೆಯನ್ನು ನಮ್ಮ ಯುವ ಜನತೆ ಅರಿಯಲಿದ್ದಾರೆ. ಈ ಅರಿವಿನ ಮೂಲಕ ಹಳ್ಳಿ, ಹಳ್ಳಿಗಳಿಗೆ ತೆರಳಿ ಮನುವಾದಿಗಳ ಕಪಟ ಹಾಗೂ ಜನವಿರೋಧಿ ನೀತಿಗಳ ವಿರುದ್ಧ ಜನತೆಯಲ್ಲಿ ಜಾಗೃತಿ ಮೂಡಿಸಲಿದ್ದಾರೆ. ಆ ಮೂಲಕ ನಮ್ಮ ರಾಜಕೀಯ ಶತ್ರು ಹಾಗೂ ಮಿತ್ರರ್ಯಾರು ಎಂಬುದನ್ನು ತಿಳಿಸಿಕೊಡಲಿದ್ದಾರೆ.
ವಾರ್ತಾಭಾರತಿ: ಯುವ ಜನತೆಗೆ ಏನು ಹೇಳಲು ಬಯಸುತ್ತೀರಾ?
-ಸಂಘಪರಿವಾರದ ಹಿಡಿತದಲ್ಲಿರುವ ದೇಶ ಅವನತಿಯತ್ತ ಸಾಗುತ್ತಿದೆ. ಇಂತಹ ಸಂದಿಗ್ಧ ಸಂದರ್ಭದಲ್ಲಿ ಯುವ ಜನತೆಯ ಜವಾಬ್ದಾರಿ ಹೆಚ್ಚಿದೆ. ಮತಾಂಧ ಧರ್ಮಗಳನ್ನು ಹರಡುವ ಸಂಘಟನೆಗಳಿಗೆ ಕಾಲಹರಣ ಮಾಡುವುದಕ್ಕಿಂತ ಸಮಾನತೆಯ, ಸೌಹಾರ್ದದ, ಸಂವಿಧಾನ ಆಶಯಗಳನ್ನು ರಕ್ಷಿಸುವಂತಹ ಮಹತ್ತರವಾದ ಕಾರ್ಯದಲ್ಲಿ ತೊಡಗಿಸಿಕೊಳ್ಳಲಿ.