ಮಹದಾಯಿ; ಅ.21ರ ಸಭೆ ಫಲಪ್ರದ: ಸಿಎಂ ಸಿದ್ದರಾಮಯ್ಯ ವಿಶ್ವಾಸ

Update: 2016-10-13 08:25 GMT

ಬೆಂಗಳೂರು, ಅ.13: ಮಹದಾಯಿ ನದಿ ನೀರಿನ ವಿವಾದಕ್ಕೆ ಸಂಬಂಧಿಸಿ ಅ. 21ರಂದು ಮುಂಬಯಿಯಲ್ಲಿ ನಡೆಯಲಿರುವ ಸಭೆ ಫಲಪ್ರದವಾಗಲಿದೆ ಎಂಬ ವಿಶ್ವಾಸವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ವ್ಯಕ್ತಪಡಿಸಿದ್ದಾರೆ. ವಾರ್ತಾಭಾರತಿ ಪತ್ರಿಕೆಯ 14ನೆ ವಾರ್ಷಿಕೋತ್ಸವದ ಅಂಗವಾಗಿ ಹೊರತಂದ ವಿಶೇಷಾಂಕವನ್ನು ಬಿಡುಗಡೆ ಮಾಡಿದ ಬಳಿಕ ಮುಖ್ಯಮಂತ್ರಿಯವರು ಗೃಹ ಕಚೇರಿ ಕೃಷ್ಣಾದಲ್ಲಿ ಸುದ್ದಿಗಾರರೊಂದಿಗೆ ಅವರು ಮಾತನಾಡುತ್ತಿದ್ದರು. ಮಹದಾಯಿ ನದಿ ನೀರಿನ ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳುವುದು ಸೂಕ್ತ ಎಂದು ನ್ಯಾಯ ಮಂಡಳಿ ಸಲಹೆ ನೀಡಿದೆ. ಈ ಹಿನ್ನೆಲೆಯಲ್ಲಿ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳಿಗೆ ಪತ್ರ ಬರೆದು, ದೂರವಾಣಿ ಮೂಲಕವೂ ಮಾತುಕತೆ ನಡೆಸಿ ಸಭೆ ನಡೆಸಲು ಮನವಿ ಮಾಡಿದ್ದೆ. ಜೊತೆಗೆ ಗೋವಾ ಅಥವಾ ಮಹಾರಾಷ್ಟ್ರ ಮುಖ್ಯಮಂತ್ರಿಯವರು ಸಭೆ ಆಯೋಜಿಸಿದರೂ ಪಾಲ್ಗೊಳ್ಳುವುದಾಗಿ ತಿಳಿಸಿದ್ದೆ. ಹೀಗಾಗಿ ಮಹಾರಾಷ್ಟ್ರ ಮುಖ್ಯಮಂತ್ರಿಯವರೇ ಸಭೆ ಆಯೋಜಿಸಿದ್ದಾರೆ. ಈ ಸಭೆಗೆ ಪೂರ್ವಭಾವಿಯಾಗಿ 19ರಂದು ತಾವು ಸರ್ವಪಕ್ಷ ಸಭೆ ಕರೆದಿರುವುದಾಗಿ ಸಿಎಂ ತಿಳಿಸಿದರು. ಮಹದಾಯಿ ನದಿಯಿಂದ ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಗೋವಾದ ಕಾಂಗ್ರೆಸ್ ನಾಯಕರು ಹೇಳಿಕೆ ನೀಡಿರುವ ಕುರಿತು ಸುದ್ದಿಗಾರರು ಪ್ರಶ್ನಿಸಿದಾಗ, ಯಾರೋ ವಿರೋಧ ಮಾಡಿದ್ದಾರೆ ಎಂಬುದು ಪ್ರಶ್ನೆಯಲ್ಲ. ನ್ಯಾಯ ಮಂಡಳಿ ಸಲಹೆ ಮೇರೆಗೆ ಸಭೆ ನಡೆಯುತ್ತಿದೆ. ಸಭೆಗೆ ಮುನ್ನ ಗೋವಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿಗಳೂ ಅಲ್ಲಿ ಸರ್ವಪಕ್ಷ ಮುಖಂಡರ ಸಭೆ ನಡೆಸಿ ಎಲ್ಲರ ಸಹಕಾರ ಪಡೆದುಕೊಂಡೇ ಸಭೆಗೆ ಬರಲಿದ್ದಾರೆ ಎಂದು ಹೇಳಿದರು. ಇದು ಮೊದಲ ಸಭೆ. ಹೀಗಾಗಿ ಯಾರು ಏನೇ ಹೇಳಿದರೂ ಸಭೆಯಲ್ಲಿ ಎಲ್ಲದರ ಬಗ್ಗೆ ಸಮಗ್ರವಾಗಿ ಚರ್ಚೆ ಮಾಡುತ್ತೇವೆ ಎಂದು ಮುಖ್ಯಮಂತ್ರಿ ತಿಳಿಸಿದರು. ರಾಜ್ಯ ಬಿಜೆಪಿ ನಾಯಕರು ಮಹಾರಾಷ್ಟ್ರ ಮುಖ್ಯಮಂತ್ರಿಯವರ ಜೊತೆ ಮಾತುಕತೆ ನಡೆಸಿರುವ ಕುರಿತು ಪತ್ರಕರ್ತರು ಗಮನಸೆಳೆದಾಗ, ವಿವಾದ ಇರುವುದು ಗೋವಾದ ಜೊತೆಗೆ. ಹೀಗಾಗಿ ಆ ರಾಜ್ಯದ ಮುಖ್ಯಮಂತ್ರಿಗಳ ಜೊತೆ ಮಾತುಕತೆ ನಡೆಸುವುದು ಸೂಕ್ತ. ಇಷ್ಟಕ್ಕೂ ಈ ಬಗ್ಗೆ ಆರಂಭದಲ್ಲೇ ವಿವಾದ ಸೃಷ್ಟಿ ಮಾಡಲು ತನಗೆ ಇಷ್ಟವಿಲ್ಲ. ಮಾತುಕತೆ ಫಲಪ್ರದವಾಗಲಿ ಎಂಬುದು ತಮ್ಮ ಬಯಕೆ. ಎಲ್ಲರೂ ಹಾರೈಕೆಯೂ ಆದೇ ಆಗಿರಬೇಕು ಎಂದರು. ಕಾವೇರಿ ಜಲ ವಿವಾದ ವಿಚಾರದಲ್ಲಿ ಕೇಂದ್ರ ಜಲ ಸಂಪನ್ಮೂಲ ಸಚಿವೆ ಉಮಾಭಾರತಿ ಸಭೆ ಕರೆದಾಗ ತಾವು ಸರ್ವಪಕ್ಷ ಮುಖಂಡರ ಜೊತೆ ಚರ್ಚಿಸಿಯೇ ಅಲ್ಲಿಗೆ ಹೋಗಿದ್ದು. ಇಷ್ಟಕ್ಕೂ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಒಂದೇ ಅಲ್ಲ, ಬೇರೆ ಬೇರೆ ಪಕ್ಷಗಳೂ ಇವೆ ಎಂದು ಹೇಳಿದರು. ಕಾವೇರಿ ಜಲ ವಿವಾದದ ವಿಷಯದಲ್ಲಿ ಸುಪ್ರೀಂಕೋರ್ಟ್ ಆದೇಶದ ಮೇರೆಗೆ ಅಧ್ಯಯನ ನಡೆಸಲು ತಮಿಳುನಾಡಿಗೆ ಹೋಗಿದ್ದ ತಂಡಕ್ಕೆ ಅಲ್ಲಿಯ ಅಧಿಕಾರಿಗಳು ತಪ್ಪು ಮಾಹಿತಿ ನೀಡಿದ್ದಾರೆ ಎಂದು ಭಾವಿಸುವುದಿಲ್ಲ. ವಾಸ್ತವ ಸ್ಥಿತಿ ಅರಿಯಲು ಹೋದಾಗ ತಪ್ಪುಮಾಹಿತಿ ನೀಡಲು ಹೇಗೆ ಸಾಧ್ಯ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು. ಕಾವೇರಿ ಜಲ ವಿವಾದ ಸಂಬಂಧ ಮುಖ್ಯ ಅರ್ಜಿ ಸುಪ್ರೀಂಕೋರ್ಟ್‌ನಲ್ಲಿ ಅ.18ರಂದು ವಿಚಾರಣೆಗೆ ಬರಲಿದೆ. ಈ ಸಂಬಂಧ ರಾಜ್ಯದ ಜಲ ಸಂಪನ್ಮೂಲ ಮತ್ತು ಕಾನೂನು ಇಲಾಖೆ ಅಧಿಕಾರಿಗಳು ಪೂರ್ವ ತಯಾರಿ ನಡೆಸಿದ್ದಾರೆ ಎಂದರು. ಬೆಂಗಳೂರಿನಲ್ಲಿ ಉಕ್ಕಿನ ಸೇತುವೆ ನಿರ್ಮಾಣ ಸಂಬಂಧ ಬಂದಿರುವ ಎಲ್ಲ ಆಕ್ಷೇಪಣೆಗಳ ಬಗ್ಗೆ ಪರಿಶೀಲಿಸುತ್ತೇವೆ. ಜೊತೆಗೆ ಸೇತುವೆ ನಿರ್ಮಾಣ ಕುರಿತಾದ ಎಲ್ಲ ವಿವರಗಳನ್ನೂ ವೆಬ್ಸೈಟ್

 
ನಲ್ಲಿ ಅಳವಡಿಸಲಾಗಿದೆ ಎಂದು ಹೇಳಿದ ಮುಖ್ಯಮಂತ್ರಿಯವರು, ಶಾಸಕ ಸ್ಥಾನಕ್ಕೆ ರಾಜೀನಾಮೆ ಕುರಿತು ಶ್ರೀನಿವಾಸ ಪ್ರಸಾದ್ ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಲು ನಿರಾಕರಿಸಿದರು. ಇದಕ್ಕೂ ಮುನ್ನ ವಾರ್ತಾಭಾರತಿಯ ವಿಶೇಷಾಂಕ ಬಿಡುಗಡೆ ಮಾಡಿ ಮಾತನಾಡಿದ ಮುಖ್ಯಮಂತ್ರಿಯವರು, ವಿದ್ಯುನ್ಮಾನ ಮಾಧ್ಯಮಗಳ ಸಂಖ್ಯೆ ಹೆಚ್ಚಾದರೂ ಜನ ಪತ್ರಿಕೆ ಓದುವ ಹವ್ಯಾಸ ಮತ್ತು ಆಭ್ಯಾಸದಿಂದ ದೂರವಾಗಿಲ್ಲ. ಜೊತೆಗೆ ಮುದ್ರಣ ಮಾಧ್ಯಮದ ಮಹತ್ವವೂ ಕಡಿಮೆಯಾಗಿಲ್ಲ ಎಂದು ಹೇಳಿದರು. ಪತ್ರಿಕೆಗಳು ಮೌಲ್ಯಯುತ ಮತ್ತು ಸಮಾಜಮುಖಿಯಾದ ಸುದ್ದಿಗಳನ್ನು ಪ್ರಕಟಿಸಬೇಕು. ಪತ್ರಿಕೋದ್ಯಮ ಎಂದರೆ ಅದು ತನಿಖೆ ಆಧಾರಿತವಾಗಿರಬೇಕು. ಆದರೆ, ಇಂದಿನ ದಿನಗಳಲ್ಲಿ ಊಹಾ ಪತ್ರಿಕೋದ್ಯಮ ಹೊಸದಾಗಿ ಶುರುವಾಗಿದೆ. ಇದರಿಂದ ಸತ್ಯ ಮತ್ತು ಅಸತ್ಯತೆ ತಿಳಿಯುವುದಿಲ್ಲ. ಸತ್ಯಕ್ಕೆ ಹತ್ತಿರವಾದ ಸುದ್ದಿಗಳನ್ನು ಮಾತ್ರ ಪತ್ರಿಕೆಗಳು ಜನರ ಮುಂದಿಡಬೇಕು. ಆ ದಿಕ್ಕಿನಲ್ಲಿ ‘ವಾರ್ತಾಭಾರತಿ’ ಕೆಲಸ ಮಾಡಲಿ ಎಂದು ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News