ವಾಸ್ತವ ಎಂಬ ಕನ್ನಡಿ ಎದುರು ಒಂದು ಸಿನೆಮಾ ಧ್ಯಾನ
‘‘ಈ ಹಿಂದೆ ನಮ್ಮ ಬದುಕು ಸಹಜವಾಗಿತ್ತು ಹೀಗಾಗಿ ಅಸಹಜ ಅನ್ನಿಸುವ ಸಿನೆಮಾಗಳನ್ನು ನೋಡ್ತಿದ್ವಿ, ಈಗ ಬದುಕು ಅಸಹಜವಾಗಿದೆ ಹೀಗಾಗಿ ನಾವು ನೋಡುವ ಸಿನೆಮಾ ಸಹಜ ವಾಗಿದೆ’’ ಎಂದು ಪತ್ರಕರ್ತ ದಿಲಾವರ್ ರಾಮದುರ್ಗ ‘ತಿಥಿ’ ಚಿತ್ರದ ಯಶಸ್ಸನ್ನು ಹಿನ್ನೆಲೆ ಯಾಗಿಟ್ಟು ಈ ಮಾತುಗಳನ್ನು ಕೆಲದಿನಗಳ ಹಿಂದೆ ತಮ್ಮ ಫೇಸ್‌ಬುಕ್ ಪುಟದಲ್ಲಿ ಬರೆದುಕೊಂಡಿದ್ದರು. ‘‘ಸಾಹಿತ್ಯದಲ್ಲಿ ಕಾದಂಬರಿಗಳ ಕಾಲ ಮುಗಿಯಿತು, ಇನ್ನೇನಿದ್ದರೂ ನಾನ್‌ಫಿಕ್ಷನ್ನಿನದ್ದೇ ದರ್ಬಾರು’’ ಎಂದು ಲೇಖಕ ವಿ.ಎಸ್.ನೈಪಾಲ್ ಹೇಳಿ ದಶಕದ ಮೇಲಾಯಿತು. ಇವತ್ತು ಕರ್ನಾಟಕದಲ್ಲಿ ‘ಮಲೆಗಳಲ್ಲಿ ಮದುಮಗಳು’ ಕಾದಂಬರಿ ಓದಿದವರಿಗಿಂಥ ನಾಟಕ ನೋಡಿದವರು ಹೆಚ್ಚು ಸಿಗುತ್ತಾರೆ. ಇದು ರಿಯಾಲಿಟಿ ಶೋಗಳ ಕಾಲ ಅನ್ನುವುದನ್ನು ಟಿ.ವಿ.ಚಾನೆಲ್‌ಗಳು ಅತಿ ಉತ್ಸಾಹದಿಂದಲೇ ಹೇಳುತ್ತಿವೆ. ಇಂಥ ಹೊತ್ತಲ್ಲೇ ಕನ್ನಡದಲ್ಲಿ ‘ತಿಥಿ’ ಚಿತ್ರ ರೂಪುಗೊಂಡಿತು. ‘ತಿಥಿ’ ಕನ್ನಡಕ್ಕೊಂದಿಷ್ಟು ಜಾಗತಿಕ ಮನ್ನಣೆಯನ್ನು ತಂದು ಕೊಟ್ಟಿದ್ದಂತೂ ನಿಜ. ಯಾವುದೇ ಆಡಂಬರ, ವೈಯ್ಯಿರ, ಕೃತಕತೆ ಗಳಿಲ್ಲದ ‘ತಿಥಿ’ಯನ್ನು ಒಂದು ಸಾಲಿನಲ್ಲಿ ಬಣ್ಣಿಸಬಹುದಾದರೆ ಅದು ಸರಳವೂ, ಸಹಜವೂ ಆದ ಕಣ್ಣೆದುರಿಗಿನ ವಿದ್ಯಮಾನ. ತನ್ನ ಕಥನ ನಿರೂಪಣೆ ಮತ್ತು ಜನಮನ್ನಣೆಯಿಂದಲೇ ‘ತಿಥಿ’ ಕನ್ನಡದ ನಿರ್ದೇಶಕರಲ್ಲಿ ಅಚ್ಚರಿ ಮೂಡಿಸಿತು.
ಈ ಅಚ್ಚರಿಗೆ ಕಾರಣ ಈರೇಗೌಡರ ಕತೆ ಮತ್ತು ರಾಮ್‌ರೆಡ್ಡಿಯವರ ನಿರ್ದೇಶನ. ‘ತಿಥಿ’ಯ ವಿಶೇಷಗಳು ಹಲವಾರಿವೆ. ಅವುಗಳಲ್ಲಿ ಒಂದೆಂದರೆ ಅದರ ಸಹಜತೆ. ಸಾಮಾನ್ಯವಾಗಿ ಮನುಷ್ಯ ಎಷ್ಟೇ ಸಹಜವಾಗಿದ್ದರೂ ಕ್ಯಾಮೆರಾ ಕಣ್ಣೆದುರಿಗೆ ಬಂದ ಕೂಡಲೇ ಕೃತಕವಾಗಿ ಬಿಡುತ್ತಾನೆ. ಅಲ್ಲಿಯತನಕ ಸಹಜವಾಗಿದ್ದ ಮನುಷ್ಯ ನಟಿಸಲು ಶುರುಮಾಡುತ್ತಾನೆ. ಕೃತಕ ನಗು, ಕೃತಕ ಮುನಿಸು, ಕೃತಕ ವಾರೆನೋಟ, ಕೃತಕ ಬಾಡಿ ಲಾಂಗ್ವೇಜ್, ನಿಲ್ಲುವ, ಕೂರುವ ಎಲ್ಲ ಭಂಗಿಯೂ ಕೃತಕವಾಗಿ ಒಂದು ತರಹದ ಹುಸಿತನ ತುಂಬಿಕೊಂಡುಬಿಡುತ್ತದೆ. ಇತ್ತೀಚೆಗೆ ‘‘ತಿಥಿ’’ ಸಿನೆಮಾವನ್ನು ದೊಡ್ಡ ಪರದೆಯಲ್ಲಿ ನೋಡುವ ಸಂದರ್ಭ ಬಂತು. ಗಡ್ಡಪ್ಪ, ತಮ್ಮಣ್ಣ, ಶಾನುಭೋಗ, ಸೇಟೂ, ಕಾವೇರಿ, ಬಡ್ಡಿ ಕಮಲ ಮತ್ತು ನೊದೆಕೊಪ್ಪಲು ಗ್ರಾಮದ ಹತ್ತಾರು ಅನಾಮಧೇಯರು ಕ್ಯಾಮೆರಾ ಎದುರಿಗಿದ್ದೇ ಈ ಪರಿ ನಟಿಸಿದ್ದಾರಲ್ಲ, ಒಂದು ವೇಳೆ ಕ್ಯಾಮೆರಾ ಎದುರಿಗಿಲ್ಲದಿದ್ದರೆ ಹೇಗಿರುತ್ತಿತ್ತು? ಎಂಬ ಪ್ರಶ್ನೆಯೊಂದು ನನ್ನಲ್ಲೇ ಮೂಡಿತು. ‘‘ತಿಥಿ’’ ನೋಡುವಾಗ ನನಗೆ, ನಾನೊಂದು ಸಿನೆಮಾ ನೋಡುತ್ತಿದ್ದೇನೆ ಎಂದು ಅನ್ನಿಸಲೇ ಇಲ್ಲ. ಹನ್ನೊಂದು ದಿನಗಳ ಕಾಲ ಮಂಡ್ಯದ ನೊದೆಕೊಪ್ಪಲು ಗ್ರಾಮದಲ್ಲಿ ಗಡ್ಡಪ್ಪ, ತಮ್ಮಣ್ಣರೊಂದಿಗೆ ಅಡ್ಡಾಡಿ ಬಂದ ಹಸಿಹಸಿ ಅನುಭವವಾಯಿತು.
ನಿಮಗೆ ಸಿನೆಮಾ ಅನ್ನುವುದು ಜಿಟ್ಞ ಆಗಿದ್ದರೆ ಅಕಿರಾ ಕುರಸೋವಾ, ಬೋಮನ್ ಗೊಬಾಡಿ, ಮಜೀದ್ ಮಜೀದಿ, ಕಿಮ್ ಕಿ ಡುಕ್, ಮೊಹ್ಸಿನ್ ಮಖ್ಮಲ್ ಬ್ರ ಸಿನೆಮಾಗಳಲ್ಲಿ ಬರುವ ಪಾತ್ರಗಳು ಮತ್ತು ಸ್ಥಳಗಳು ಇಂತಹ ಹಸಿಹಸಿ ಅನುಭವ ಉಂಟುಮಾಡುತ್ತವೆ. ಕನ್ನಡ ಸಿನೆಮಾಗಳಿಂದ ಸಂಪೂರ್ಣ ವಿಮುಖನಾಗಬೇಕೆಂದು ಗಟ್ಟಿಯಾಗಿ ನಿರ್ಧರಿಸಿದ ಗಳಿಗೆಯಲ್ಲೇ ‘‘ತಿಥಿ’’ ಕನ್ನಡದಲ್ಲಿ ತೆರೆಕಂಡಿತು. ಈ ಚಿತ್ರ ನನ್ನನ್ನು ಆವರಿಸಿಕೊಂಡಷ್ಟು ತೀವ್ರವಾಗಿ ಕನ್ನಡದ ಈಚಿನ ಯಾವ ದೊಡ್ಡ ನಟರ, ಸ್ಟಾರ್‌ಗಳ ಚಿತ್ರಗಳೂ ಆವರಿಸಿಕೊಳ್ಳಲಿಲ್ಲ. ಇದರ ಚಿತ್ರಕತೆ ಎಷ್ಟು ನೈಜವಾಗಿದೆಯೆಂದರೆ ಈ ಚಿತ್ರದಲ್ಲಿ ತೆಳು ಅನ್ನಿಸುವ ನಾಲ್ಕೆದು ಸಣ್ಣಪುಟ್ಟ ತಪ್ಪುಗಳನ್ನು ಅದು ನುಂಗಿಬಿಡುತ್ತದೆ. ಕೋಟಿನ ಶಾನುಬೋಗ ಮತ್ತವನ ಹೆಂಡತಿ, ಬಡ್ಡಿ ಕಮಲ ಮತ್ತವಳ ಗಂಡ, ನಕಲಿ ಡೆತ್ ಸರ್ಟಿಫಿಕೆಟ್ ಮಾಡಿಸಿಕೊಡುವ ನೌಕರ ಮತ್ತವನ ಝೆರಾಕ್ಸ್ ಅಂಗಡಿಯ ಹೆಂಡತಿ... ಈ ಎಲ್ಲರೂ ಚಿತ್ರದಲ್ಲಿ ಸುಮ್ಮನೆ ನೆಪಕ್ಕೆ ಬಂದು ಹೋಗುವುದಿಲ್ಲ. ‘‘ತಿಥಿ’’ಯ ಓಟಕ್ಕೆ ಆಗಾಗ ಹೊಸ ತಿರುವು ನೀಡುವುದೇ ಈ ಪೋಷಕ ಪಾತ್ರಧಾರಿಗಳು.
ಒಂದು ಕಡೆ ಸೆಂಚುರಿ ಗೌಡ ತೀರಿಕೊಂಡಿದ್ದಾನೆ. ಗಡ್ಡಪ್ಪನ ವೈರಾಗ್ಯಕ್ಕೆ ಅರ್ಧ ಶತಮಾನ ದಾಟಿದರೆ, ನಾಲ್ಕನೆ ತಲೆಮಾರಿನ ಕುಡಿ ಅಭಿ ತನ್ನ ಪೋಲಿ ಸಾಹಸಗಳನ್ನೇ ಬದುಕು ಎಂದು ಅದನ್ನೇ ಬದುಕುತ್ತಿದ್ದಾನೆ. ಆದರೆ ಬದುಕಬೇಕೆನ್ನುವ ತರ, ವಾಂಛೆ ಮತ್ತು ಅದಕ್ಕಾಗಿ ಎಂತಹ ಅಡ್ಡದಾರಿಗೆ ಬೇಕಾದರೂ ಇಳಿಯಬಲ್ಲೆ ಎಂಬ ಹುಂಬ ವಿಶ್ವಾಸದಿಂದ ಬದುಕಿನ ಜತೆ ಗುದ್ದಾಟಕ್ಕಿಳಿದಿರುವ ತಮ್ಮಣ್ಣ ನಮಗೆ ಚಿತ್ರದ ಪ್ರತಿ ್ರೇಂನಲ್ಲೂ ಕಾಡಬಲ್ಲ. ನಮ್ಮ ಸುತ್ತಲ ಜಗತ್ತು ಕೂಡ ಹೆಚ್ಚಾಗಿ ಗಡ್ಡಪ್ಪ, ತಮ್ಮಣ್ಣರಂತಹ ಜೀವಿಗಳಿಂದಲೇ ತುಂಬಿಕೊಂಡಿರುವಂತಿದೆ. ‘‘ತಿಥಿ’’ಯಲ್ಲಿ ಬರುವ ಪಾತ್ರಗಳು ನಟಿಸುವುದಿಲ್ಲ; ತಮ್ಮ ತಮ್ಮ ಬದುಕಿನ ಪಾತ್ರಗಳಿಗೆ ಜೀವತುಂಬಿ ಮರಳಿ ತಮ್ಮ ನಿತ್ಯದ ಜಂಜಾಟಕ್ಕಿಳಿದು ಮರೆಯಾಗುತ್ತವೆ. ಈ ಚಿತ್ರದ ಸರಳ ಸಹಜತೆಯ ಎದುರು ಕೃತಕತೆ ಎಂಬುದು ಕಾಲು ಮುರಿದುಕೊಂಡು ಬಿದ್ದಂತೆ ಕಾಣುತ್ತದೆ. ಹೀಗಾಗಿ ಮಂಡ್ಯದ ಕನ್ನಡ, ಉತ್ತರ ಕರ್ನಾಟಕದ ಕನ್ನಡವನ್ನು ಈ ಭೂಮಿಯೇ ನಾಲಿಗೆ ತೆಗೆದು ಮಾತಾಡುತ್ತಿದೆಯೇನೋ ಅನ್ನಿಸಿಬಿಡುತ್ತದೆ. ‘‘ತಿಥಿ’’ ಅಪ್ಪಟ ಕನ್ನಡ ಸಿನೆಮಾ, ಹೌದು. ಹಾಗೇ ‘‘ತಿಥಿ’’ ಜಗತ್ತಿನ ಯಾವುದೇ ದೇಶದ ಯಾವುದೇ ಮಣ್ಣಿನಲ್ಲಿ ಬೇಕಾದರೂ ಘಟಿಸಬಲ್ಲ ವಿದ್ಯಮಾನ.
ನಿರಾಸೆ ಮೂಡಿಸಿದ ಎರಡು ಸಿನೆಮಾ
‘ಕಿರಗೂರಿನ ಗಯ್ಯಳಿಗಳು’ ಮತ್ತು ‘ಮಾರಿಕೊಂಡವರು’ ಚಿತ್ರಗಳು ‘ತಿಥಿ’ಯಷ್ಟೇ ಅಪಾರ ನಿರೀಕ್ಷೆ ಹುಟ್ಟಿಸಿದ್ದು ನಿಜ. ಕನ್ನಡದ ಇಬ್ಬರು ಶ್ರೇಷ್ಠ ಲೇಖಕರ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ತೆಗೆದ ಈ ಸಿನೆಮಾಗಳು ಸಹಜವಾಗಿಯೇ ಈ ವರ್ಷದಲ್ಲಿ ಕುತೂಹಲ ಹುಟ್ಟಿಸಿದ್ದವು. ಸಾಮಾನ್ಯವಾಗಿ ಕನ್ನಡದ ಸಾಹಿತ್ಯ ಕೃತಿಗಳನ್ನು ಪೂರ್ಣ ಅಥವಾ ಭಾಗಶಃ ಆಧಾರವಾಗಿಟ್ಟುಕೊಂಡು ಸಿನೆಮಾ ನಿರ್ಮಿಸಲು ಹೊರಡುವ ನಿರ್ದೇಶಕರು ಈ ಸಿನೆಮಾದ ಮೂಲಕ ಕೃತಿಗೆ ನ್ಯಾಯ ಸಲ್ಲಿಸಿದ್ದೇವೆ... ಎಂಬರ್ಥದ ಕ್ಲೀಷೆಯ ಮಾತುಗಳನ್ನು ಹೇಳುತ್ತಾ ಬಂದಿರುವುದನ್ನು ಕಳೆದೆರಡು ದಶಕಗಳಿಂದಲೂ ನಾವೆಲ್ಲ ಗಮನಿಸುತ್ತಲೇ ಬಂದಿದ್ದೇವೆ. ಸಾಹಿತ್ಯ ಕೃತಿಗೆ ಸಿನೆಮಾದ ಮೂಲಕ ನ್ಯಾಯ ದೊರಕಿಸಿ ಕೊಡಲು ಹೊರಟಿದ್ದೇನೆ ಎಂದು ನಿರ್ದೇಶಕರು ಹೇಳುವುದೇ ಬಾಲಿಶ ಅನ್ನಿಸುತ್ತದೆ. ಇದು ಅವರೊಳಗಿನ ಖಾಲಿತನವನ್ನು ಬಿಟ್ಟು ಮತ್ತೇನನ್ನು ತೋರಿಸುವುದಿಲ್ಲ. ‘ತಿಥಿ’ ಚಿತ್ರ ಮಾಧ್ಯಮಗಳಲ್ಲಿ ದೊಡ್ಡ ಸದ್ದು ಮಾಡುತ್ತಿರುವ ಸಂದರ್ಭದಲ್ಲಿಯೇ ಸಿನೆಮಾ ರೂಪ ತೊಡುತ್ತಿದ್ದ ತೇಜಸ್ವಿಯವರ ‘ಕಿರಗೂರಿನ ಗಯ್ಯಿಳಿಗಳು’ ಮತ್ತು ದೇವನೂರ ಮಹಾದೇವ ಅವರ ಕತೆಗಳನ್ನಿಟ್ಟುಕೊಂಡು ತೆರೆಕಂಡ ‘ಮಾರಿಕೊಂಡವರು’ ಕೂಡ ಅಲ್ಲಲ್ಲಿ ಸುದ್ದಿಮಾಡಿತು. ದೇವನೂರ ಮಹಾದೇವ ಅವರ ಕತೆಗಳನ್ನು ಕನ್ನಡವಲ್ಲದ ಇನ್ನೊಂದು ಭಾಷೆಗೆ ಅನುವಾದ ಮಾಡಲು ಹೊರಟು ಸೋತು ದಣಿದವರ ದೊಡ್ಡ ಪಟ್ಟಿಯನ್ನೇ ಕೊಡಬಹುದು. ಕನ್ನಡದ ನಂಜನಗೂಡಿನ ಕುಸುಮಬಾಲೆ ಎದೆಗಿಳಿಯುವಷ್ಟು ಸಲೀಸಾಗಿ ಇಂಗ್ಲಿಷಿನ Kusumabale ಇಳಿಯಲೊಲ್ಲಳು. I want to be in my house’ ಎನ್ನುವ ಆ ಓದಿಲ್ಲದ ಕನ್ನಡದ ಕುಸುಮಾ ಫ್ರೇಂಚ್ ‘Je veux etre dans ma maison’ ಎಂದು ಉಲಿಯುತ್ತಾಳೆ. ಕುಸುಮಬಾಲೆಯನ್ನು ಕನ್ನಡದ ಓದಿಗೆ ತೆರೆದುಕೊಂಡ ಮನಸ್ಸೊಂದು ಮೊದಲ ಓದಿಗೆ ಇಂಗ್ಲಿಷ್ ‘Kusumabale’ಯನ್ನು ಒಪ್ಪಿಕೊಳ್ಳುವುದು ಕಷ್ಟ. ದೇವನೂರರ ಬರಹಗಳನ್ನು ಅನುವಾದಕ್ಕೋ, ಭಾವಾನುವಾದಕ್ಕೋ, ಸಿನೆಮಾಗೋ ಒಗ್ಗಿಸಿಕೊ ಳ್ಳುತ್ತೇವೆ ಎಂದು ಹೊರಟುನಿಂತವರು ಕಡೆಗೆ ಎಲ್ಲ ಕೈಚೆಲ್ಲಿ ನಿರಾಸೆಯ ನಗೆ ಬೀರಿದ್ದು ನಮ್ಮ ಕಣ್ಣಮುಂದೆಯೇ ಇದೆ. ಒಂದು ಓದಿಗೆ, ಒಂದು ಗುಕ್ಕಿಗೆ, ಒಂದು ಮುಷ್ಟಿಗೆ ಸಿಗದ, ಸಿಕ್ಕರೂ ಹಾರಿಹೋಗುವ ಮಾಯಾವಿ ಗುಣಗಳು ದೇವನೂರರ ಬರಹದಲ್ಲಿವೆ. ಇದೊಂದು ರೀತಿ ಒಲಿಸಿಕೊಳ್ಳುವ ಹಟ ಒಲಿಯದ ಜಿದ್ದಿನೊಂದಿಗೆ ಸಂಘರ್ಷಕ್ಕೆ ಬಿದ್ದಂತೆ ತೋರುತ್ತದೆ.
ದೇವನೂರರ ‘‘ಗ್ರಸ್ತರು’’, ‘‘ಮಾರಿಕೊಂಡವರು’’, ‘‘ಡಾಂಬರು ಬಂದುದು’’, ‘‘ಮೂಡಲ ಸೀಮೇಲಿ ಕೊಲೆಗಿಲೆ’’ ಮುಂತಾಗಿ- ಈ ಕತೆಗಳನ್ನಿಟ್ಟುಕೊಂಡು ರೂಪಿಸಿರುವ ‘ಮಾರಿಕೊಂಡವರು’ ಸಿನೆಮಾ ತನ್ನ ಪೇಲವ ನಿರೂಪಣೆ ಮತ್ತು ದುರ್ಬಲ ಚಿತ್ರಕತೆಯ ಮೂಲಕ ಕನ್ನಡಿಗರಿಗೆ ನಿರಾಸೆ ಮೂಡಿಸಿದ್ದು ನಿಜ. ಮಾರಿಕೊಂಡವರು ಚಿತ್ರದ ನಿರ್ದೇಶಕರಿಗೆ ದೇವನೂರರ ಕತೆಗಳನ್ನು ಚಲನಚಿತ್ರವೊಂದಕ್ಕೆ ಒಗ್ಗಿಸಿಕೊಳ್ಳುವಲ್ಲಿ ಇರುವ ಉತ್ಸಾಹ ಬಿಗಿ ಚಿತ್ರಕತೆ ಕಟ್ಟುವಲ್ಲಿ ಕ್ಷೀಣವಾದಂತೆ ತೋರುತ್ತದೆ. ಚಿತ್ರಕ್ಕೂ ಮುನ್ನ ಮಾಡಿಕೊಳ್ಳಬೇಕಾದ ಸಿದ್ಧತೆ, ಪಾತ್ರಗಳ ಆಯ್ಕೆ, ಮೂಲ ಕತೆಯಿಂದ ಉಳಿಸಿಕೊಳ್ಳಬೇಕಾದ ಮತ್ತು ಕೈಬಿಡಬೇಕಾದ ಅಂಶಗಳತ್ತ ನಿರ್ದೇಶಕರು ಅಷ್ಟೇನೂ ತಲೆಕೆಡಿಸಿಕೊಂಡಂತೆ ಕಾಣುವುದಿಲ್ಲ. ಹೀಗಾಗಿಯೇ ‘ಮಾರಿಕೊಂಡವರು’ ಕನ್ನಡದ ಶ್ರೇಷ್ಠ ಕತೆಗಳನ್ನಿಟ್ಟುಕೊಂಡು ತಯಾರಾದ ‘ಮಿಡಿಯೋಕರ್’ ಚಿತ್ರ ಅನ್ನಿಸಿ ಬಿಡುತ್ತದೆ. ಸಿನೆಮಾವನ್ನೇ ಧ್ಯಾನಿಸುವ ಯಾರಿಗೇ ಆಗಲಿ, ಸಾಹಿತ್ಯ ಕೃತಿಯೊಂದನ್ನು ಅಷ್ಟು ಸುಲಭಕ್ಕೆ ಸಿನೆಮಾದ ವ್ಯಾಕರಣಕ್ಕೆ ಒಗ್ಗಿಸಲಾಗದು ಎಂಬ ಸತ್ಯ ಗೊತ್ತಿರಬೇಕಾದದ್ದೇ. ‘ಕಿರಗೂರಿನ ಗಯ್ಯಿಳಿಗಳು’ ಚಿತ್ರದ ಕತೆಯೂ ಹೆಚ್ಚೂಕಮ್ಮಿ ‘ಮಾರಿಕೊಂಡವರು’ ಬಗೆಯದೆ. ತೇಜಸ್ವಿಯವರ ‘ಕಿರಗೂರಿನ ಗಯ್ಯಿಳಿಗಳು’ ಕತೆಯನ್ನಿಟ್ಟುಕೊಂಡು ನಾಟಕವಾಗಿಸಿ ರಂಗದ ಮೇಲೆ ತಂದ ಹತ್ತಾರು ತಂಡಗಳು ಕರ್ನಾಟಕದಲ್ಲಿವೆ. ಕಿರಗೂರಿನ ಗಯ್ಯಾಳಿಗಳನ್ನೇ ಮೈದುಂಬಿಕೊಂಡವರಂತೆ ನಟಿಸಿದ ಹತ್ತಾರು ನಟಿಯರು ಆ ತಂಡಗಳಲ್ಲಿದ್ದಾರೆ. ಈ ರಂಗಭೂಮಿಯ ಹಿನ್ನೆಲೆಯುಳ್ಳ ನಟಿಯರನ್ನೇ ‘ಕಿರಗೂರಿನ ಗಯ್ಯೆಳಿಗಳು’ ಚಲನಚಿತ್ರಕ್ಕೂ ಅದರ ನಿರ್ದೇಶಕರು ಆಯ್ಕೆ ಮಾಡಿಕೊಂಡಿದ್ದಿದ್ದರೆ ಇಡೀ ಚಿತ್ರ ಇನ್ನಷ್ಟು ನೈಜವಾಗಿ, ಜೀವಂತವಾಗಿ ಮೂಡುತ್ತಿತ್ತೇನೋ. ಗಯ್ಯಿಳಿಗಳ ಪಾತ್ರಕ್ಕೆ ರಂಗಭೂಮಿ ಹಿನ್ನೆಲೆಯ ಕಲಾವಿದರನ್ನು ಬದಿಗೊತ್ತಿ ಸಿನೆಮಾದ ವೃತ್ತಿಪರ ನಟಿಯರನ್ನೇ ನಿರ್ದೇಶಕರು ಆಯ್ಕೆ ಮಾಡಿಕೊಂಡ ಉದ್ದೇಶ ಮಾತ್ರ ಅರ್ಥವಾಗುವುದಿಲ್ಲ. ಇಷ್ಟಾಗಿಯೂ, ಈ ಚಿತ್ರದಲ್ಲಿನ ಗ್ಲಾಮರ್ ಗೊಂಬೆಗಳಿಗೆ ನಟನೆಯಲ್ಲಿ ಪಳಗಲು ಇನ್ನಷ್ಟು ವರ್ಷಗಳೇ ಬೇಕಾಗಬಹುದು. ತೆರೆಗೆ ಬರುವ ಮುನ್ನ ತೀವ್ರ ಕುತೂಹಲ ಮೂಡಿಸಿದ್ದ ‘ಮಾರಿಕೊಂಡವರು’ ಮತ್ತು ‘ಕಿರಗೂರಿನ ಗಯ್ಯಾಳಿಗಳು’ ತೆರೆಗೆ ಬಂದಮೇಲೆ ನಿರಾಸೆ ಮೂಡಿಸಿದ್ದು ನಿಜ.
ಶೋಕಿಲಾಲರ ಸಿನೆಮಾ ಸಂಕಟಗಳು
ನಾನೇಕೇ ಬರೆಯುತ್ತೇನೆ? ಎಂದು ಜಗತ್ತಿನ ಪ್ರತಿಯೊಬ್ಬ ಲೇಖಕನು ತನ್ನನ್ನು ತಾನೇ ಪ್ರಶ್ನಿಸಿಕೊಂಡಂತೆ ನಾನೇಕೇ ಸಿನೆಮಾ ನಿರ್ದೇಶಿಸುತ್ತೇನೆ? ಎಂದು ಜಗತ್ತಿನ ಬಹುಪಾಲು ನಿರ್ದೇಶಕರು ತಮಗೆ ತಾವೇ ಪ್ರಶ್ನಿಸಿಕೊಂಡಂತೆ ಕಾಣುತ್ತಿಲ್ಲ. ಸಿನೆಮಾವನ್ನು ಧ್ಯಾನದ ವಸ್ತುವಿನಂತೆ ತೀವ್ರವಾಗಿ ಅನುಭವಿಸಿ ನೋಡುವ ನಿರ್ದೇಶಕರು ನಮ್ಮಲ್ಲಿ ತೀರಾ ಕಮ್ಮಿಯೆಂದೇ ಹೇಳಬೇಕು. ಸಿನೆಮಾ ಮತ್ತು ಬದುಕಿನ ಅಂತರವನ್ನು ಅಳೆಯುವ ಪ್ರಯತ್ನಗಳನ್ನು ಗಾಂನಗರದವರು ಇನ್ನೂ ಮಾಡಿಯೇ ಇಲ್ಲ. ಹೀಗಾಗಿಯೇ ನಮ್ಮಲ್ಲಿ ವರ್ಷಕ್ಕೆ ತಯಾರಾಗುವ ನೂರಮೂವತ್ತು ಸಿನೆಮಾಗಳಲ್ಲಿ ನೂರಕ್ಕೂ ಹೆಚ್ಚಿನ ಸಿನೆಮಾಗಳನ್ನು ‘ಸಿನಿತ್ಯಾಜ್ಯ’ ಎಂದು ಕರೆದು ಕಸದಬುಟ್ಟಿಗೆ ಎಸೆಯಬಹುದು. ಈ ಹಿಂದೆ ‘‘ರೈತರ ಸಮಸ್ಯೆ ಇಟ್ಟುಕೊಂಡು ಸಿನೆಮಾ ತೆಗೆದೆ ಬೆಂಗಳೂರಿನ ಜನ ನೋಡಲಿಲ್ಲ, ಸೈನಿಕರ ಸಮಸ್ಯೆ ಇಟ್ಟುಕೊಂಡು ಸಿನೆಮಾ ತೆಗೆದೆ, ಆಗಲೂ ಬೆಂಗಳೂರು ಮಂದಿ ಸಿನೆಮಾ ನೋಡಲಿಲ್ಲ. ಕಡೆಗೆ ನನಗರ್ಥವಾಯಿತು, ಬೆಂಗಳೂರಲ್ಲಿ ರೈತರೂ ಇಲ್ಲ ಸೈನಿಕರೂ ಇಲ್ಲ, ಇಲ್ಲಿರೋದು ಬರೀ ರೌಡಿಗಳು ಹೀಗಾಗಿ ನನ್ನ ಮುಂದಿನ ಸಿನೆಮಾ ರೌಡಿಗಳನ್ನು ಕೇಂದ್ರವಾಗಿಟ್ಟು ಕೊಂಡು ತಯಾರಾಗುತ್ತದೆ ಎಂದು ಕೆಲವರ್ಷಗಳ ಹಿಂದೆ ‘‘ನಟಭಯಂಕರ’’ ಕಮ್ ಸಿನೆಮಾ ನಿರ್ಮಾಪಕ, ರಾಜಕಾರಣಿ ಸಿ.ಪಿ.ಯೋಗೇಶ್ವರ್ ವೇದಿಕೆಯೊಂದರಲ್ಲಿ ನಿಂತು ಅಳಲು ತೋಡಿಕೊಂಡಿದ್ದರು. ಇದು ಶೋಕಿಗಾಗಿ ಸಿನೆಮಾ ತೆಗೆಯಲು ಹೊರಟವರ ಸಂಕಟ. ಶೋಕಿಗಾಗಿ ನಟರಾಗಲು, ಶೋಕಿಗಾಗಿ ನಿರ್ಮಾಪಕರಾಗಲು, ಶೋಕಿಗಾಗಿ ನಿರ್ದೇಶಕರಾಗಲು ಬಂದವರು ತಮ್ಮ ಬದುಕಿನಲ್ಲಿ ಒಂದೊಳ್ಳೆ ಸಿನೆಮಾ ನೋಡಿರುವ ಕುರುಹುಗಳೇ ಸಿಗುವುದಿಲ್ಲ. ಈಚೆಗೆ ಇಂಥವರ ಸಂಖ್ಯೆ ಗಾಂನಗರದಲ್ಲಿ ಹೆಚ್ಚಾಗುತ್ತಲೇ ಇದೆ.
ಕೊರಿಯಾದಲ್ಲಿ ಕಿಮ್ ಕಿ ಡುಕ್‌ನದೋ, ಜರ್ಮನಿಯಲ್ಲಿ ಪತೇ ಅಕಿನ್‌ನದೋ ಹೊಸ ಸಿನೆಮಾ ಬಂದರೆ ಆ ಕುರಿತು ಕೇರಳದಲ್ಲಿ ಸಿನೆಮಾ ತೆಗೆಯಲು ಹೊರಟ ಎಳೆಯ ಹುಡುಗರ ನಡುವೆ ಚರ್ಚೆಗಳು ನಡೆಯುತ್ತವೆ. ಕಾಫಿಕಟ್ಟೆಗಳಲ್ಲಿ ಆ ವರ್ಷದ ಜಗತ್ತಿನ ಶ್ರೇಷ್ಠ ಸಿನೆಮಾಗಳ ಕುರಿತ ಗಂಭೀರ ಸಂವಾದಗಳು ನಡೆಯುತ್ತವೆ. ಕಿಮ್ ಕಿ ಡುಕ್‌ನನ್ನು ಕೇರಳಕ್ಕೆ ಕರೆಸಿ ಆತನ ಚಿತ್ರಗಳ ಪ್ರದರ್ಶನ ಮತ್ತು ಚರ್ಚೆಗಳನ್ನು ನಡೆಸುವ ಪ್ರಯತ್ನಕ್ಕೆ ಈ ಕಾಲದ ಹೊಸ ತಲೆಮಾರಿನ ಹುಡುಗ-ಹುಡುಗಿಯರು ಕೈಹಾಕುತ್ತಾರೆ. ಬಿಡಿ, ನಮ್ಮಲ್ಲಿದು ಎಂದೆಂದಿಗೂ ಘಟಿಸಲಾರದ ಸಂಗತಿ.
ಕಲಾತ್ಮಕ ಮತ್ತು ಕಮರ್ಷಿಯಲ್ ಎಂಬ ಎರಡೂ ಬಗೆಯ ಚಿತ್ರಗಳಿಂದ ಕನ್ನಡದ ಹೊಸ ತಲೆಮಾರಿನ ಹುಡುಗ- ಹುಡುಗಿಯರೇನಾದರೂ ಕಲಿಯುತ್ತಿದ್ದಾರಾ? ಎಂದು ನೋಡಲು ಹೊರಟರೆ, ತೀವ್ರ ಬೇಸರವಾಗುತ್ತದೆ. ಈಚೆಗೆ ತಯಾರಾಗುತ್ತಿರುವ ಕನ್ನಡದ ಕಲಾತ್ಮಕ ಮತ್ತು ಕಮರ್ಷಿಯಲ್ ಚಿತ್ರಗಳು ಯಾರಿಗೇನಾದರೂ ಪಾಠ ಹೇಳಿಕೊಡಬಲ್ಲವು ಎಂದು ಅನ್ನಿಸಲು ಸಾಧ್ಯವೇ ಇಲ್ಲ. ಕನ್ನಡದ ಕಲಾತ್ಮಕ ಚಿತ್ರಗಳ ಶೂರರು ಮಡಿವಂತಿಕೆಯ ಜಗತ್ತಿನಿಂದ ಎದ್ದು ಬಂದರೆ, ಕಮರ್ಷಿಯಲ್ ಚಿತ್ರಗಳ ವೀರರ ಪಾದಗಳು ಮಾತ್ರ ಸದಾ ತಮಿಳು, ತೆಲುಗಿನ ಚಿತ್ರಸಂತೆಗಳಲ್ಲಿರುತ್ತವೆ. ಕದಿಯುವುದರಲ್ಲಿ, ಕದ್ದು ರಿಮೇಕ್ ಮಾಡುವುದರಲ್ಲಿ ನಿದ್ರೆಗೆಟ್ಟಿರುವ ಕನ್ನಡದ ಕಮರ್ಷಿಯಲ್ ಸಿನೆಮಾ ನಿರ್ದೇಶಕರಿಗೆ ಹೊಸ ಕನಸುಗಳಾದರೂ ಹೇಗೆ ತಾನೇ ಬಿದ್ದಾವು?
‘ಇರೈವಿ’ ಕಟ್ಟಿಕೊಡುವ ಅನುಭೂತಿ
ಹತ್ತು, ಹನ್ನೆರಡು ವರ್ಷಗಳ ಹಿಂದೆ ‘ಅಳಗಿ’, ‘ತವಮೈ ತವಮಿರುಂದು’ ಎಂಬೆರಡು ತಮಿಳು ಚಿತ್ರಗಳನ್ನು ನೋಡಿದ್ದೆ. ನೋಡಿದ್ದೆ ಅನ್ನುವುದಕ್ಕಿಂಥ ನೂರಾರು ಪುಟಗಳ ಕಾದಂಬರಿಯೊಂದನ್ನು ಓದಿದ ಅನುಭೂತಿಯನ್ನು ಇವೆರಡು ಚಿತ್ರಗಳು ನನಗೆ ಕೊಟ್ಟಿದ್ದವು. ‘ಅಳಗಿ’ಯನ್ನು ತಂಗರ್ ಬಚ್ಚನ್ ನಿರ್ದೇಶಿಸಿದರೆ, ಸಿನೆಮಾವನ್ನೇ ಉಸಿರಾಡುವ ಚೇರನ್ ‘ತವಮೈ ತವಮಿರುಂದು’ವನ್ನು ನಿರ್ದೇಶಿಸಿದ್ದ. ಈ ವರ್ಷ ಮತ್ತೆ ಅಂಥದೊಂದು ಅನುಭೂತಿಗೆ ನನ್ನನ್ನು ಕಟ್ಟಿಹಾಕಿದ್ದು ಕಾರ್ತಿಕ್ ಸುಬ್ಬರಾಜ್ ನಿರ್ದೇಶನದ ‘ಇರೈವಿ’. ಪಿಝ್ಝಿ, ಜಿಗರ್‌ಥಂಡಾ ನೋಡಿದವರಿಗೆ ಕಾರ್ತಿಕ್ ಸುಬ್ಬರಾಜ್ ಬಗ್ಗೆ ಹೆಚ್ಚು ಹೇಳುವ ಅಗತ್ಯ ಕಾಣದು. ಮೂವತ್ತೊಂದರ ಹರೆಯದಲ್ಲಿ ‘ಜಿಗರ್‌ಥಂಡಾ’, ಮೂವತ್ತ ಮೂರರ ಹರೆಯದಲ್ಲಿ ‘ಇರೈವಿ’ ತರಹದ ಅಪರೂಪದ ಚಿತ್ರಗಳನ್ನು ಕಾರ್ತಿಕ್ ತಮಿಳು ನೆಲದಲ್ಲಿ ರೂಪಿಸುತ್ತಾನೆಂದರೆ ಇದು ಕಡಿಮೆ ಸಾಧನೆಯಲ್ಲ. ನಿರ್ದೇಶಕ ಎಸ್.ಜೆ.ಸೂರ್ಯ ‘ಇರೈವಿ’ಯಲ್ಲೂ ಚಲನಚಿತ್ರ ನಿರ್ದೇಶಕನೇ. ನಿರ್ಮಾಪಕ ನೊಂದಿಗಿನ ಸಣ್ಣ ವೈಷಮ್ಯದಿಂದಾಗಿ ಇನ್ನೂ ತೆರೆಕಾಣದ ತನ್ನ ಚಿತ್ರ ಡಬ್ಬಾದಲ್ಲೇ ಉಳಿದಿರುವ ಸ್ಥಿತಿಗೆ ನಿರ್ದೇಶಕ ಸೂರ್ಯ ನಿತ್ಯವೂ ಕೊರಗಿ ಕುಡಿತಕ್ಕೆ ದಾಸನಾಗುತ್ತಾನೆ. ಇವನ ಕುಡಿತಕ್ಕೆ ಬೇಸತ್ತಿರುವ ಹೆಂಡತಿ ಇವನಿಂದ ದೂರವಾಗಿ ಇನ್ನೊಂದು ಮದುವೆಗೆ ಸಿದ್ಧಗೊಳ್ಳುತ್ತಿರುವಾಗ ಸೂರ್ಯ ಕುಡಿತದಿಂದ ಹೊರಬಂದು ಅವಳೆದುರು ನಿಲ್ಲುತ್ತಾನೆ. ಸೂರ್ಯನನ್ನು ಕೊಲ್ಲಲೆಂದು ಬರುವ ನಿರ್ಮಾಪಕನೇ ಕೊಲೆಗೀಡಾಗುತ್ತಾನೆ. ಕೊಂದವನು ಸೂರ್ಯನ ತಮ್ಮನ ಮಿತ್ರ ವಿಜಯ್ ಸೇತುಪತಿ. ಸೇತುಪತಿ ಜೈಲುಪಾಲಾದರೆ ಆತನ ಹೆಂಡತಿಯ ಮೇಲೆ ಸೂರ್ಯನ ತಮ್ಮ ಬಾಬ್ಬಿ ಸಿಂಹನ ಕಣ್ಣುಬೀಳುತ್ತದೆ. ಡಬ್ಬಾದಲ್ಲಿದ್ದ ಸೂರ್ಯನ ಸಿನೆಮಾ ಆತನ ಕೈಸೇರಿ ಬಿಡುಗಡೆಗೆ ಸಿದ್ಧವಾಗುತ್ತಿದ್ದಂತೆ ಸೂರ್ಯ ಗೆಲುವಾಗುತ್ತಾನೆ. ವಿಜಯ್ ಸೇತುಪತಿ ಜೈಲಿನಿಂದ ಜಾಮೀನಿನ ಮೇಲೆ ಹೊರಗೆ ಬರುತ್ತಾನೆ. ಎಲ್ಲವೂ ಸರಿಯಾಯಿತು ಅಂದುಕೊಳ್ಳುವಾಗಲೇ ನಿರ್ದೇಶಕ ಕಾರ್ತಿಕ್ ಸುಬ್ಬರಾಜ್ ಚಿತ್ರಕ್ಕೆ ಯಾರೂ ಊಹಿಸಲಿಕ್ಕಾಗದ ತಿರುವು ಕೊಡುತ್ತಾನೆ. ನಂತರದೆಲ್ಲ ಬರೀ ಕೊಲ್ಲುವ, ಕೊಂದುಕೊಳ್ಳುವ ಕಥನ. ಗಂಡಿನ ‘ಅಹಂ’ ಕೊಲ್ಲುವ ಇರೈವಿ ಅಪ್ಪಟ ಸೀವಾದಿ ಸಿನೆಮಾ. ಗಂಡಸುತನವೆಂಬ ‘ಇಗೋ’ಗೆ ಸಿಕ್ಕಿ ಮನೋರೋಗಿಗಳಾಗಿರುವ ಗಂಡಸರು ಕಡ್ಡಾಯವಾಗಿ ನೋಡಲೇಬೇಕಾದ ಚಿತ್ರವಿದು. ಅಂದಹಾಗೆ ‘ಇರೈವಿ’ ಎಂದರೆ ದೇವತೆ. ಈ ಚಿತ್ರದಲ್ಲಿ ಮೂವರು ದೇವತೆಯರಿದ್ದಾರೆ. ಎರಡು ಮುಕ್ಕಾಲು ಗಂಟೆಗಳ ಕಾಲ ಮನುಷ್ಯ ಜಗತ್ತಿನ ವ್ಯಾಪಾರ, ಈರ್ಷ್ಯೆ, ಮತ್ಸರ, ಒಲವನ್ನು ಕಟ್ಟಿಕೊಡುವ ಈ ಚಿತ್ರದ ವಿಶಿಷ್ಟ ಅನುಭೂತಿಯನ್ನು ನೋಡಿಯೇ ಮೈದುಂಬಿಕೊಳ್ಳಬೇಕು. ಇರೈವಿ ಈ ವರ್ಷ ತಮಿಳಿನಲ್ಲಿ ಬಂದ ಶ್ರೇಷ್ಠ ಸಿನೆಮಾ. ***
ನಾಗರಾಜ್ ಮಂಜುಳೆ ಸೃಜಿಸಿದ ದಲಿತ ಭಾರತ ಕಥನಗಳು
ಜಾತಿ ತಲ್ಲಣಗಳನ್ನು ಸಿನೆಮಾದ ಕೇಂದ್ರ ವಸ್ತು ವಾಗಿಟ್ಟುಕೊಂಡು ನಾಗರಾಜ್ ಮಂಜುಳೆ ತೆರೆಗೆ ತಂದ ‘ಪಾಂಡ್ರಿ’ ಮತ್ತು ‘ಸೈರಾಟ್’ ಚಿತ್ರಗಳು ಭಾರತೀಯ ಚಿತ್ರರಂಗಕ್ಕೆ ಕೊಟ್ಟ ಶಾಕ್ ಅಷ್ಟಿಷ್ಟಲ್ಲ. ಇಲ್ಲಿ ಜಾತಿ ತಲ್ಲಣಗಳೇ ಚಿತ್ರದ ಮುಖ್ಯ ಭೂಮಿಕೆ. ದಲಿತ ಹುಡುಗ ಮೇಲ್ಜಾತಿ ಹುಡುಗಿ, ಮೇಲ್ಜಾತಿ ಅಹಂ ಮತ್ತು ಮೇಲಂತಸ್ತಿನ ತಂದೆ, ಭಾರತದ ಯಾವ ಹಳ್ಳಿ ಬೇಕಾದರೂ ಈ ಚಿತ್ರದ ಕ್ಯಾನ್ವಾಸ್ ಆಗಬಲ್ಲದು. ‘ಪಾಂಡ್ರಿ’ ಚಿತ್ರದ ನಾಯಕ ಜಾಂಬವಂತ ಅಲಿಯಾಸ್ ಜಬ್ಯಾ ಎಂಬ ಹೈಸ್ಕೂಲ್ ಹುಡುಗ. ಹಂದಿ ಹಿಡಿಯುವುದು ಜಬ್ಯಾನ ಕುಟುಂಬದವರ ಕಾಯಕ. ತನ್ನ ಮೇಲ್ಜಾತಿ ಸಹಪಾಠಿಯನ್ನು ಒಲಿಸಿಕೊಳ್ಳುವ ಸಲುವಾಗಿ ಕನಸೊಂದರ ಬೆನ್ನುಹತ್ತಿ ಜಾತಿವ್ಯವಸ್ಥೆಯ ವಿರುದ್ಧ ಜಬ್ಯಾ ರೊಚ್ಚಿ ಗೆದ್ದು ನಿಲ್ಲುತ್ತಾನೆ. ಇಲ್ಲಿ ಜಬ್ಯಾನ ಆರ್ದ್ರತೆ, ಪ್ರತಿಭಟನೆಗಳು ಆತನ ತಂದೆಗೆ ಕೊಂಚವೂ ತಾಗುವುದಿಲ್ಲ. ಜಬ್ಯಾನ ಸಣ್ಣದೊಂದು ಗೊಣಗಾಟವನ್ನು ಕೇಳಿಸಿಕೊಳ್ಳುವ ಸ್ಥಿತಿಯಲ್ಲಿ ಆತನ ತಂದೆ ಇರುವುದಿಲ್ಲ. ಬದುಕಿನ ವಿಷಮ ಕ್ಷಣ ಎಂಬುದು ಪರಿಸ್ಥಿತಿಯ ರೂಪತೊಟ್ಟು ಜಬ್ಯಾನ ಇಡೀ ಕುಟುಂಬವನ್ನು ಹಂದಿ ಹಿಡಿಯಲಿಕ್ಕೆಂದು ನಡುರಸ್ತೆಗೆ ತಂದು ನಿಲ್ಲಿಸಿ ನಗಾಡಲು ಶುರುಮಾಡುತ್ತದೆ.
ಕೀಳರಿಮೆಯೆಂಬ ಉರಿಕೆಂಡಕ್ಕೆ ಸಿಕ್ಕಿ ಬೇಯುವ ಜಬ್ಯಾ ನೋಯುವ, ಸ್ಪೋಟಿಸುವ ಜೀವ. ಜಬ್ಯಾನ ಇಡೀ ಕುಟುಂಬ ಹಂದಿಯನ್ನು ಹಿಡಿದು ಹೊತ್ತೊಯ್ಯುತ್ತಿರುವಾಗ ಅವನ ಬೆನ್ನಹಿಂದೆ ಅವನು ಓದುತ್ತಿರುವ ಸರಕಾರಿ ಶಾಲೆಯ ಗೋಡೆ ಕಾಣುತ್ತದೆ. ಹಾಗೆಯೇ ಆ ಗೋಡೆಯ ಮೇಲೆ ಬರೆದಿರುವ ಅಂಬೇಡ್ಕರ್, ಜ್ಯೋತಿಬಾ ಪುಲೆ, ಸಾವಿತ್ರಿಬಾಯಿ ಪುಲೆ, ಶಾಹು ಮಹಾರಾಜರ ಚಿತ್ರಗಳು. ತನ್ನ ಅಕ್ಕಂದಿರ ಶೀಲದ ಬಗ್ಗೆ ಕೊಂಕು ತೆಗೆದು ಮಾತನಾಡುವ ಊರಿನ ಮೇಲ್ಜಾತಿ ಪುಂಡರ ಮಾತಿಗೆ ಸಿಡಿದೆದ್ದು ಅವರತ್ತ ಕಲ್ಲು ಬೀಸುವ ಜಬ್ಯಾನ ಕ್ರಿಯೆ ಸಾಂಕೇತಿಕವಾಗಿದೆ. ಯಾಕೆಂದರೆ ಆ ಕಲ್ಲು ನೋಡುಗರತ್ತ ತೂರಿಬಂದು ಚಿತ್ರಿಕೆ ಬ್ಲಾಕ