ಪ್ರಶಾಂತ್ ಕಿಶೋರ್ ಮುಂದಿದೆ ‘ಕಷ್ಟದ ದಿನಗಳು’

Update: 2016-10-15 18:30 GMT

ರಾಹುಲ್ ಗಾಂಧಿಯವರ ಬಾಯಿಯಿಂದ ‘ಖೂನ್ ಕಿ ದಲಾಲಿ’ (ರಕ್ತದ ದಲ್ಲಾಳಿ) ಎಂಬ ಮಾತು ಹೊರಬೀಳುತ್ತಿದ್ದಂತೆ ಬಿಜೆಪಿಯವರ ರಕ್ತ ಕುದಿಯತೊಡಗಿತು. ಆದರೆ ರಾಹುಲ್‌ಗೆ ಈ ಚಾಟೂಕ್ತಿ ಹೇಳಿಕೊಟ್ಟವವರಾರು ಎಂಬ ಬಗ್ಗೆ ಕಾಂಗ್ರೆಸ್ ಪಕ್ಷದೊಳಗೇ ಸಾಕಷ್ಟು ಊಹಾಪೋಹಗಳು ಹರಿದಾಡತೊಡಗಿದವು. ಪಕ್ಷದ ಒಂದು ಗುಂಪು ಕಾಂಗ್ರೆಸ್ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್‌ರತ್ತ ಬೆರಳು ತೋರಿಸಿತು. ಇಲ್ಲ, ಇದು ರಾಹುಲ್ ಅವರ ತಲೆಗೇ ಹೊಳೆದ ಐಡಿಯಾ ಎಂದು ಚುನಾವಣಾ ತಂತ್ರಗಾರಿಕೆಯ ತಂಡ ವಾದಿಸುತ್ತಿತ್ತು . ಕಿಶೋರ್‌ಗೆ ಛೀಮಾರಿ ಹಾಕಬೇಕು ಎಂಬ ವಾದವೂ ಜೋರಾಗಿಯೇ ಕೇಳಿ ಬರುತ್ತಿದ್ದಂತೆಯೇ, ಕಿಶೋರ್ ಮತ್ತವರ ತಂಡ ಕಾಂಗ್ರೆಸ್‌ನೊಂದಿಗೆ ತಮ್ಮ ಸಖ್ಯವನ್ನು ಅಂತ್ಯಗೊಳಿಸುವ ಸಾಧ್ಯತೆಯ ಬಗ್ಗೆಯೂ ಚರ್ಚೆ ಆರಂಭವಾಯಿತು. ಪಕ್ಷದ ಕೆಲ ಹಿರಿತಲೆಗಳು ಕಿಶೋರ್ ವಿರುದ್ಧ ನಿಂತಿದ್ದಾರೆ ಎಂಬುದನ್ನು ಅಲ್ಲಗಳೆಯಲಾಗದು. ಅದೇನೇ ಇರಲಿ, ಮುಂಬರುವ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನ ಸಾಧನೆ ಅಷ್ಟಕಷ್ಟೇ ಎಂಬ ವರದಿಗಳ ಹಿನ್ನೆಲೆಯಲ್ಲಿ ಕಿಶೋರ್‌ಗೆ ಕ್ಲಿಷ್ಟಕರ ದಿನಗಳು ಮುಂದೆ ಇವೆ ಎಂಬುದಂತೂ ಸತ್ಯ.

ಬಿಜೆಪಿ ಮತ್ತು ರಾಮನಾಮ ಮಂತ್ರ...

ಬಿಜೆಪಿಯ ಪ್ರಮುಖ ನಾಯಕರೋರ್ವರು ‘ಜೈ ಶ್ರೀರಾಮ್’ ಎಂಬ ಘೋಷಣೆ ಕೂಗಿದ ಇತ್ತೀಚಿನ ಸಂದರ್ಭ ಯಾವುದು ಎಂದು ಬಿಜೆಪಿಗರನ್ನು ಕೇಳಿದರೆ, ಅವರು 2002ರ ಆಗಸ್ಟ್ 8 ಎಂದು ತಕ್ಷಣ ಉತ್ತರಿಸುತ್ತಾರೆ. ಅಂದು ಪಕ್ಷದ ಹಿರಿಯ ನಾಯಕ ಎಲ್.ಕೆ.ಅಡ್ವಾಣಿ ಅವರು ಈ ಘೋಷಣೆ ಮಾಡಿದ್ದರು. ಆಗ ಉಪಪ್ರಧಾನಿಯಾಗಿದ್ದವರು ಅಡ್ವಾಣಿ. ದಿಲ್ಲಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ವೆಬ್‌ಸೈಟ್ ಒಂದಕ್ಕೆ ಚಾಲನೆ ನೀಡಿ, ‘ಭಕ್ತ ರಾಮದಾಸ ಕೀರ್ತನಾಸ್’ ಎಂಬ ಸಿಡಿಯನ್ನು ಬಿಡುಗಡೆಗೊಳಿಸಿದ ಸಂದರ್ಭ ಸಭಿಕರ ಒಂದು ವರ್ಗದಿಂದ ‘ಜೈಶ್ರೀರಾಮ್’ ಎಂಬ ಘೋಷಣೆ ತೇಲಿ ಬಂದಿತು. ಇದರಿಂದ ಏಕಾಏಕಿ ಉತ್ಸಾಹಿತರಾದ ಅಡ್ವಾಣಿ, ‘ಜೈ ಶ್ರೀರಾಮ್’ ಎಂದು ಘೋಷಿಸಿಯೇ ಬಿಟ್ಟರು. ಎನ್‌ಡಿಎ ಕೂಟದ ಪ್ರಥಮ ಆಡಳಿತಾವಧಿಯಲ್ಲಿ ಪ್ರಧಾನಿಯಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಎಂದಿಗೂ ‘ಜೈ ಶ್ರೀರಾಮ್’ ಎಂದು ಹೇಳಿದವರಲ್ಲ. ಅಯೋಧ್ಯೆಯ ಬಾಬರಿ ಮಸೀದಿ ಜಾಗದಲ್ಲಿ ‘ಭವ್ಯವಾದ’ ಶ್ರೀರಾಮ ಮಂದಿರ ಕಟ್ಟುವ ಉದ್ದೇಶದಿಂದ ಹಮ್ಮಿಕೊಂಡಿದ್ದ ಅಭಿಯಾನದ ನೇತೃತ್ವ ವಹಿಸಿದ್ದವರು ಅಡ್ವಾಣಿಯವರು. ಈ ಅಭಿಯಾನದ ವೇಳೆ ‘ಜೈ ಶ್ರೀರಾಮ್’ ಎಂಬ ಘೋಷಣೆ ಯುದ್ದದ ಕೇಕೆಯಂತೆ ಧ್ವನಿತವಾಗಿದ್ದನ್ನು ಮರೆಯುವಂತಿಲ್ಲ. ಆದರೆ ಲಕ್ನೋದಲ್ಲಿ ನಡೆದ ರಾಮಲೀಲಾ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಒಂದಲ್ಲ, ಎರಡು ಬಾರಿ ‘ಜೈ ಶ್ರೀರಾಮ್’ ಎಂದು ಘೋಷಿಸಿದ್ದರು. ಅದರಲ್ಲೂ ಎರಡನೇ ಬಾರಿ - ಜೈ ಜೈ ಶ್ರೀರಾಮ್ ಎಂದು ಸ್ವಲ್ಪ ‘ಒತ್ತಿ’ ಹೇಳಿದ್ದರು...!
ಚುನಾವಣೆ ಬಂತೆಂದರೆ ಬಿಜೆಪಿಯವರಿಗೆ ಶ್ರೀರಾಮ ನೆನಪಾಗುತ್ತಾನೆ ಎಂಬುದು ಸುಳ್ಳಲ್ಲ ಎಂದು ಕೆಲವರು ಆಡಿಕೊಂಡರೆ, ಉತ್ತರಪ್ರದೇಶ ಚುನಾವಣೆಯಲ್ಲಿ ಬಿಜೆಪಿಯ ಅಜೆಂಡಾ ಹಾಗೂ ಬಿಜೆಪಿ ಮತ್ತೆ ತನ್ನ ‘ಮೂಲ’ಕ್ಕೆ ಮರಳುವ ಸೂಚನೆ ಇದು ಎಂಬ ಮಾತೂ ಕೇಳಿಬಂದವು. ಅದೇನೇ ಇರಲಿ.. ಇದಂತೂ ಶುಭ ಸೂಚನೆಯಲ್ಲ ಎನ್ನಬಹುದು.

ಮೇನಕಾ ಗಾಂಧಿಯ ‘ಹೋರಾಟ’..!
ಪಾಂಡಿಚೇರಿಯಲ್ಲಿ ಬೀದಿ ನಾಯಿಗಳ ಉಪಟಳ ಮಿತಿಮೀರಿದಾಗ ಜನರ ಕೋರಿಕೆಯಂತೆ ನಗರಪಾಲಿಕೆೆಯವರು ಬೀದಿ ನಾಯಿಗಳನ್ನು ಹಿಡಿದುಹಾಕಿದ್ದರು. ಆದರೆ ಈ ಕಾರ್ಯ ಕೇಂದ್ರದ ಮಹಿಳಾ ಮತ್ತು ಮಕ್ಕಳ ಕಲ್ಯಾಣಾಭಿವೃದ್ಧಿ ಸಚಿವೆ, ‘ಪ್ರಾಣಿಪ್ರಿಯೆ’ ಮೇನಕಾ ಗಾಂಧಿಯವರ ಕಣ್ಣು ಕೆಂಪಾಗಿಸಿತು. ತಕ್ಷಣ ನಾಯಿ ಮತ್ತು ಅದರ ಮರಿಗಳನ್ನು ಬಿಟ್ಟುಬಿಡುವಂತೆ ಪಾಂಡಿಚೇರಿ ನಗರಪಾಲಿಕೆ ಆಯುಕ್ತರ ಮೇಲೆ ಒತ್ತಡ ಹಾಕತೊಡಗಿದರು.
ಯಾವಾಗ ಮೇನಕಾ ಪಾಂಡಿಚೇರಿಯ ಬೀದಿ ನಾಯಿಗಳ ವಿಷಯದಲ್ಲಿ ಮೂಗು ತೂರಿಸಿದರೋ, ಆಗ ಪಾಂಡಿಚೇರಿಯ ರಾಜ್ಯಪಾಲೆ ಕಿರಣ್ ಬೇಡಿ ಗರಂ ಆದರು. ಒಂದಲ್ಲ ಒಂದು ದಿನ ಮೇನಕಾ ಗಾಂಧಿ ಬೀದಿ ನಾಯಿಗಳಿಂದ ಕಚ್ಚಿಸಿಕೊಂಡ ಜನರ ಬಗ್ಗೆಯೂ ಸ್ಪಂದಿಸುವರೆಂದು ಆಶಿಸುತ್ತೇನೆ ಎಂದವರು ಟ್ವಿಟರ್‌ನಲ್ಲಿ ಟ್ವೀಟ್ ಮಾಡಿಬಿಟ್ಟರು.
 ಈ ಬಗ್ಗೆ ಬೇಡಿ ಬೆಂಬಲಿಗರು ಟ್ವಿಟರ್‌ನಲ್ಲಿ ಬೇಡಿ ಬೆಂಬಲಕ್ಕೆ ನಿಂತು ಮೇನಕಾರನ್ನು ಹಿಗ್ಗಾಮುಗ್ಗಾ ಟೀಕಿಸಿದರು. ಆಗ ಮೇನಕಾ ಈ ವಿಷಯವನ್ನು ಪ್ರಧಾನಿ ಕಾರ್ಯಾಲಯದ ಮಾಧ್ಯಮ ವಿಭಾಗದ ಗಮನಕ್ಕೆ ತಂದರು. ಇದೀಗ ಚೆಂಡು ಪ್ರಧಾನಿ ಕಾರ್ಯಾಲಯದ ಅಂಗಣದಲ್ಲಿದೆ...!

ರೂಪಾ ಗಂಗೂಲಿಗೆ

ಒಲಿದ ಅದೃಷ್ಟ ರಾಜ್ಯಸಭೆ ಸದಸ್ಯರಾಗಿ ರೂಪಾ ಗಂಗೂಲಿ ಅವರನ್ನು ನಾಮನಿರ್ದೇಶನ ಮಾಡಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕೆಲ ರಾಜ್ಯಗಳ ಬಿಜೆಪಿ ನಾಯಕರು ಇದರಿಂದ ತೀವ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಕೈಲಾಶ್ ವಿಜಯ್‌ವರ್ಗಿಯ, ಅಮಿತ್ ಶಾ ಮತ್ತು ನಿತಿನ್ ಗಡ್ಕರಿಯಂತಹ ನಾಯಕರ ಬೆಂಬಲ ಪಡೆದಿರುವ ರೂಪಾ ಈ ಪ್ರತಿಷ್ಠಿತ ಸ್ಥಾನಕ್ಕೆ ಆಯ್ಕೆಯಾಗದಂತೆ ತಡೆಯುವುದು ಇವರಿಂದಾಗುವ ಕಾರ್ಯವಲ್ಲ. ಆರೆಸ್ಸೆಸ್- ಬಿಜೆಪಿ ಉನ್ನತ ನಾಯಕರು ರೂಪಾ ಗಂಗೂಲಿಯನ್ನು ಈ ಸ್ಥಾನಕ್ಕೆ ಆಯ್ಕೆ ಮಾಡಿರುವುದು- ಪಕ್ಷದೊಳಗೆ ಸೋದರಿ ರೀತಿಯ ನಾಯಕಿಯಾಗಿರುವ, ಸದಾ ಉನ್ನತಿಯೆಡೆಗೆ ತುಡಿತವಿರುವ, ನಯವಾದ ಮತ್ತು ದೃಢವಾದ ಹೆಜ್ಜೆಯಿಡಬಲ್ಲ ಮಹಿಳೆಯರಿಗೆ ಹೆಚ್ಚಿನ ಅವಕಾಶವಿದೆ ಎಂಬುದರ ದ್ಯೋತಕವಾಗಿದೆ.

ರಾಮನ ಆಶೀರ್ವಾದ ...!

 ನವಾಝುದ್ದೀನ್ ಸಿದ್ದಿಕಿಗೆ ಹೋಲಿಸಿದರೆ ರಝಾ ಮುರಾದ್ ಅದೃಷ್ಟವಂತ ಎನ್ನಲಡ್ಡಿಯಿಲ್ಲ. ದಿಲ್ಲಿಯಲ್ಲಿ ನಡೆದ ರಾಮ್‌ಲೀಲಾದಲ್ಲಿ ಮುರಾದ್ ಸೀತೆಯ ತಂದೆ ಜನಕರಾಜನ ಪಾತ್ರ ಮಾಡಿದ್ದಾರೆ. ಅಚ್ಚರಿಯೆಂದರೆ ಇಲ್ಲಿ ಯಾವುದೇ ಹಿಂದೂ ಸಂಘಟನೆಗಳು ಪ್ರತಿಭಟನೆಯ ಸೊಲ್ಲೆತ್ತಿಲ್ಲ. ಇದಕ್ಕೆ ಮುರಾದ್ ನೀಡುವ ಕಾರಣವೆಂದರೆ - ತನಗೆ ರಾಮನ ಆಶೀರ್ವಾದ ಇದೆ ಎಂಬುದು. ಅದು ಹೇಗೆಂದರೆ ಅವರ ಪೂರ್ತಿ ಹೆಸರು ರಝಾ ಅಲಿ ಮುರಾದ್. ಇಂಗ್ಲಿಷ್‌ನಲ್ಲಿ ಈ ಮೂರು ಪದಗಳ ಪ್ರಥಮ ಅಕ್ಷರ ಸೇರಿಸಿದರೆ ‘ರಾಮ್’ ಎಂದಾಗುತ್ತದೆ. ಅಲ್ಲದೆ ಮುರಾದ್ ನಟಿಸಿದ ಮೂರು ಯಶಸ್ವೀ ಚಿತ್ರಗಳು- ‘ರಾಮ್ ತೇರಿ ಗಂಗಾಮೈಲಿ’, ‘ರಾಮ್ ಲಖನ್’ ಮತ್ತು ‘ರಾಮಲೀಲಾ’. ಇದನ್ನು ಕಾಕತಾಳೀಯ ಎನ್ನಲಡ್ಡಿಯಿಲ್ಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!
ಓ ಮೆಣಸೇ...!