ಬೌದ್ಧ ಧರ್ಮಕ್ಕೆ ಮತಾಂತರವೇ ಪರಿಹಾರ: ಪ್ರೊ. ಭಗವಾನ್
ಬೆಂಗಳೂರು, ಅ. 16: ವೌಢ್ಯಾಚರಣೆ, ಅಜ್ಞಾನ, ಕಂದಾಚಾರಗಳಿಂದ ಕೊಳತು ನಾರುತ್ತಿರುವ ಹಿಂದೂ ಧರ್ಮ ಮತ್ತು ಹಿಂದೂ ದೇವಾನುದೇವತೆಗಳನ್ನು ಕಸದ ಬುಟ್ಟಿಗೆ ಎಸೆಯಬೇಕು ಎಂದು ವಿಚಾರವಾದಿ ಪ್ರೊ.ಕೆ.ಎಸ್.ಭಗವಾನ್ ಇಂದಿಲ್ಲಿ ಕರೆ ನೀಡಿದ್ದಾರೆ.
ರವಿವಾರ ಇಲ್ಲಿನ ಮಾಗಡಿ ರಸ್ತೆಯ ಅಂಜನಾನಗರದ ಸ್ಫೂರ್ತಿಧಾಮ ಲೋಕರತ್ನ ಬುದ್ಧ ವಿಹಾರದಲ್ಲಿ ‘ಸಂಘ ದಿನ ಮತ್ತು ಅರವತ್ತನೆ ದಮ್ಮ ದೀಕ್ಷಾ ದಿನಾಚರಣೆ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದ ಅವರು, ಹಿಂದೂ ಧರ್ಮದ ಮೂಲ ಬಂಡವಾಳವೆ ಭಯ ಎಂದು ವಿಶ್ಲೇಷಿಸಿದರು.
ಕೃಷ್ಣ ಬ್ರಾಹ್ಮಣರ ಕಾಲು ತೊಳೆಯುತ್ತಿದ್ದ, ರಾಮ ಬ್ರಾಹ್ಮಣರ ಪೂಜೆ ಮತ್ತು ಸೇವೆ ಮಾಡುತ್ತಿದ್ದ. ಹೀಗಾಗಿ ಬ್ರಾಹ್ಮಣರು ಶ್ರೀಕೃಷ್ಣ ಮತ್ತು ರಾಮನನ್ನು ಪೂಜಿಸುತ್ತಾರೆ. ಪುರೋಹಿತರು ರಾಮ ಮತ್ತು ಕೃಷ್ಣರನ್ನು ಪೂಜಿಸಲು ಮೂಲ ಕಾರಣವೇ ಇದು ಎಂದು ಅವರು ತಿಳಿಸಿದರು.
ಶ್ರೀ ಕೃಷ್ಣ ಬ್ರಾಹ್ಮಣರ ಕಾಲು ತೊಳೆಯುತ್ತಿದ್ದ, ಅದೇ ರೀತಿ ಶ್ರೀರಾಮ ಬ್ರಾಹ್ಮಣರ ಪೂಜೆ ಮತ್ತು ಸೇವೆ ಮಾಡುತ್ತಿದ್ದ ಎಂಬ ಅಂಶ ಮಹರ್ಷಿ ವಾಲ್ಮೀಕಿ ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ. ಅಲ್ಲದೆ, ರಾಮ ಚಾತುರ್ವಣ ಪದ್ಧತಿಯನ್ನು ರಕ್ಷಿಸುತ್ತಿದ್ದ. ಹೀಗಾಗಿ ಬ್ರಾಹ್ಮರಣರು ರಾಮ, ಕೃಷ್ಣರನ್ನು ಪೂಜಿಸುತ್ತಾರೆ. ಇಂತಹವರನ್ನು ದೇವರು ಎಂದು ಹೇಗೆ ಒಪ್ಪಿಕೊಳ್ಳುವುದು ಎಂದು ಅವರು ಖಾರವಾಗಿ ಪ್ರಶ್ನಿಸಿದರು.
ವಿವೇಕಾನಂದರಷ್ಟು ಹಿಂದೂಧರ್ಮವನ್ನು ಟೀಕಿಸಿದವರು ಮತ್ತೊಬ್ಬರಿಲ್ಲ. ವಿವೇಕಾನಂದರು ಬೌದ್ಧ ಧರ್ಮವನ್ನು ಒಪ್ಪಿಕೊಂಡು ನಾನೊಬ್ಬ ಬೌದ್ಧ, ಬುದ್ಧ ನನ್ನಿಷ್ಟದ ದೇವರು ಎಂದು ಅಮೆರಿಕಾ ಸರ್ವಧರ್ಮ ಸಮ್ಮೇಳನದಲ್ಲಿ ಹೇಳಿದ್ದಾರೆ ಎಂದು ಭಗವಾನ್ ಇದೇ ವೇಳೆ ಮಾಹಿತಿ ನೀಡಿದರು.
ಬೌದ್ಧದಮ್ಮವನ್ನು ಹೊರತುಪಡಿಸಿ ಉಳಿದೆಲ್ಲ ಧರ್ಮಗಳೂ ಮನುಷ್ಯನನ್ನು ದೇವರು, ಸ್ವರ್ಗ, ನರಕ ಮತ್ತಿತರ ನಂಬಿಕೆ, ವೌಢ್ಯಗಳ ಭಯದಲ್ಲಿಟ್ಟಿವೆ. ಕೃಷ್ಣ ಭಗವದ್ಗೀತೆಯಲ್ಲಿ ಎಲ್ಲವನ್ನು ಬಿಟ್ಟು ನನಗೆ ಶರಣಾಗು ನಿನ್ನ ಎಲ್ಲ ಪಾಪ ಪರಿಹರಿಸುತ್ತೇನೆ ಎನ್ನುತ್ತಾನೆ. ಏನು ಬೇಕಾದರೂ ಪಾಪ ಮಾಡು ನನಗೆ ಶರಣಾಗು ಎಂದು ದೇವರು ಹೇಳುವುದಾದರೆ ಹೇಗೆ? ಎಂದು ಅವರು ಪ್ರಶ್ನಿಸಿದರು.
ಬೌದ್ಧ ಧರ್ಮದಲ್ಲಿ ಕೆಡುಕನ್ನು ಮಾಡಲು ಅವಕಾಶವಿಲ್ಲ. ಅದು, ಅನುಭವದ ಮೇಲೆ ನಿಂತಿರುವ ಮಾನವೀಯ, ವೈಚಾರಿಕ, ವೈಜ್ಞಾನಿಕ ಧರ್ಮ. ಇಂತಹ ಧರ್ಮವನ್ನು ದೇಶಕ್ಕೆ ಮರಳಿ ತಂದುಕೊಟ್ಟಿದ್ದು ಡಾ.ಅಂಬೇಡ್ಕರ್ ಅವರ ಕೊಡುಗೆ. ಅಂಬೇಡ್ಕರಂತೆ ಎಲ್ಲರೂ ಬೌದ್ಧ ಧರ್ಮ ಸ್ವೀಕರಿಸಿ ಎಂದು ಅವರು ಕರೆ ನೀಡಿದರು.
ಸಮಾರಂಭದಲ್ಲಿ ಭಾಗವಹಿಸಿದ್ದ ಅಂಕಣಕಾರ ಯೋಗೇಶ್ ಮಾಸ್ಟರ್, ಬೌದ್ಧ ದಮ್ಮದೀಕ್ಷೆ ಪಡೆದ ಬಹಳಷ್ಟು ಮಂದಿ ಇಂದಿಗೂ ಶ್ರದ್ಧಾ, ಎಡೆ, ಮಾರಮ್ಮನ ಜಾತ್ರೆಯಂತಹ ದೈವಿಕ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಬೌದ್ಧ ಧೀಕ್ಷೆಯನ್ನೂ ಸ್ವೀಕರಿಸಿ ಹಿಂದೂಗಳಾಗಿಯೂ ಇರುತ್ತೇವೆಂಬುದು ಎಡಬಿಡಂಗಿತನವಾಗುತ್ತದೆ. ಇದು ನಿಲ್ಲಬೇಕು ಎಂದು ಆಶಯ ವ್ಯಕ್ತಪಡಿಸಿದರು.
ಸಮಾರಂಭದ ಸಾನಿಧ್ಯವನ್ನು ಬೌದ್ಧದಮ್ಮದ ವಿನಯರಖ್ಖಿತ ತೇರೊ, ಕುವೆಂಪು ವಿವಿ ಕುಲಸಚಿವ ಡಾ.ಜೆ.ಸೋಮಶೇಖರ್, ಸ್ಪೂರ್ತಿಧಾಮದ ಸಂಸ್ಥಾಪಕ ಅಧ್ಯಕ್ಷ ಎಸ್.ಮರಿಸ್ವಾಮಿ ಸೇರಿದಂತೆ ಬುದ್ಧ ದಮ್ಮ ಅನುಯಾಯಿಗಳು ಸೇರಿದಂತೆ ಹಲವು ಮಂದಿ ಪಾಲ್ಗೊಂಡಿದ್ದರು.