ಅಭಿಭವ

Update: 2016-10-17 18:12 GMT


ಆ ಕೊಲೆಯ ಕೇಸ್ ಸಿ.ಬಿ.ಐ.ಗೆ ಹಸ್ತಾಂತರಿಸಿ ಕೆಲವು ಸಮಯ ಆಗಿತ್ತು. ಆದರೆ ಯಾವ ಪ್ರಗತಿಯೂ ಕಂಡಿರಲಿಲ್ಲ. ಅಷ್ಟರೊಳಗೆ ದೇಶದಾದ್ಯಂತ ಮತ್ತಷ್ಟು ಕೊಲೆಗಳು ನಡೆದವು. ಅಲ್ಪಸಂಖ್ಯಾತರ, ಶೋಷಿತರ, ಶಿಶುಗಳ ಹತ್ಯೆ ಸಾಲುಸಾಲಾಗಿ ನಡೆಯಿತು. ಒಂದು ಪ್ರಕಾರದ ಆಹಾರ, ಸಂಗೀತ, ಎಲ್ಲವೂ ನಿಷೇಧಕ್ಕೆ ಒಳಗಾಯಿತು. 

ಮೊಬೈಲ್ ರಿಂಗಣಿಸತೊಡಗಿದರೆ ಅದನ್ನು ದಿಟ್ಟಿಸುತ್ತಲೇ ಆತ ಕರೆಯನ್ನು ನಿರ್ಲಕ್ಷಿಸಿದ.
ಕರೆ ಮಾಡಿದ ವ್ಯಕ್ತಿ ಆತನಿಗೆ ತುಂಬಾನೇ ಬೇಕಾದವರಾಗಿದ್ದರು. ಆತ ಬಹಳವಾಗಿ ಗೌರವಿಸುವವರಾಗಿದ್ದರು. ಆದರೂ ಅವರ ಕರೆಯನ್ನು ಆತ ಸ್ವೀಕರಿಸಲಿಲ್ಲ. ನಿನ್ನೆ ದಿನ ಕರೆ ಮಾಡಿದ್ದಾಗ ಅವರೊಂದಿಗೆ ಸುದೀರ್ಘವಾದ ಸಂಭಾಷಣೆ ನಡೆದಿತ್ತು. ಅದು ಇವನಿಗೆ ಬೋರ್ ಹೊಡೆಸಿರಲಿಲ್ಲ. ಕಿರಿಕಿರಿ ಉಂಟು ಮಾಡಿರಲಿಲ್ಲ. ಅವರು ನಿನ್ನೆ ಆಡಿದ ಎಲ್ಲಾ ಮಾತಿನ ಬಗ್ಗೆ ಇವನಿಗೆ ಸಮ್ಮತಿ ಇತ್ತು ಮಾತ್ರವಲ್ಲದೆ ಅದು ಇವನ ನಿಲುವು ಸಹ ಆಗಿತ್ತು. ತನಗೆ ಮಾಡಲು ಇಚ್ಛಿಸಿದಂತೆ ಮಾಡಲಾಗದ ತನ್ನ ಮತ್ತು ತನ್ನವರೊಂದಿಗೆ ಈ ಹೊತ್ತಿನಲ್ಲಿ ನಿಲ್ಲಲಾಗದ ತನ್ನ ಅಸಹಾಯಕತೆ ಅವನನ್ನು ಬಹಳವಾಗಿ ನೋಯಿಸುತ್ತಿರುವಾಗ ಆತನ ಮಗಳು ಇವನ ಜೋಬಿಗೆ ಕೈ ಹಾಕಿ ಹತ್ತು ರೂಪಾಯಿ ಹೊರತೆಗೆದಳು. ಅವಳನ್ನು ನೋಡಿ ಮುಗುಳ್ನಕ್ಕಾಗ, ‘‘ಬಸ್ಸಿಗೆ’’ ಎನ್ನುತ್ತಾ ಬೆನ್ನಿಗೆ ಬ್ಯಾಗ್ ಹಾಕಿಕೊಂಡಳು.
ಇದೆಲ್ಲಾ ಶುರುವಾಗುವ ದಿನ, ಅಥವಾ ಈ ಅತಿರೇಕಕ್ಕೆ ಹೋಗುವ ದಿನ ಇವನು ಆಳವಾದ ನೋವು ಚಿಂತೆ ಆಲೋಚನೆಯಲ್ಲಿ ಮುಳುಗಿದ್ದ. ಪಕ್ಕದಲ್ಲಿ ಮಗಳೇ ಇದ್ದಳು ಇವನ ನೋವು, ಚಿಂತೆ ಎಲ್ಲವನ್ನೂ ದ್ವಿಗುಣಗೊಳಿಸಲು ಎನ್ನುವಂತೆ.
ಮಗಳು ಹೊಸ್ತಿಲು ದಾಟಿ ಶಾಲೆಗೆ ಹೋಗುವಾಗ ಹೆಂಡತಿ ಅಡುಗೆ ಕೋಣೆಯಿಂದಲೇ, ‘‘ಜಾಗ್ರತೆ ಪುಟ್ಟಿ’’ ಎಂದು ಕೂಗಿದಳು. ‘‘ಹಾಂ’’, ಎನ್ನುತ್ತಾ ಪುಟ್ಟಿ ಆಚೆ ನಡೆದಳು. ಇದನ್ನೆಲ್ಲಾ ನೋಡುತ್ತಾ ಕುಂತಿದ್ದ ಈತ ತೀರಾ ಯಾಂತ್ರಿಕವಾಗಿಯೇ ಕೈ ಎತ್ತಿ ಮಗಳಿಗೆ ‘‘ಟಾಟ’’ ಎಂದ.
ಏನು ಮಾಡುವುದು ಎಂದು ಆಲೋಚಿಸುತ್ತಿರಬೇಕಾದರೆ ಮತ್ತೆ ಫೋನ್ ರಿಂಗಣಿಸತೊಡಗಿತು. ಮತ್ತೆ ಕರೆ ಸ್ವೀಕರಿಸದೆ ಹೋದ ಕಾರಣ ಅಡುಗೆಮನೆಯಿಂದ ಹೊರ ಬಂದು ಹೆಂಡತಿ ‘‘ಯಾರ ಫೋನ್ ಅದು ಯಾಕೆ ಸ್ವೀಕರಿಸುತ್ತಿಲ್ಲ’’ ಎಂದು ಕೇಳಿದಳು. ‘‘ಅಧಿಕ ಟಾಕ್ ಟೈಮ್ ಬೇಕಾ ಅಂತ ಕೇಳೋರು’’, ಎಂದು ನಿರ್ಲಿಪ್ತವಾಗಿ ಹೇಳಿದ. ಅವನ ಹಣೆಯ ಅಗಲ ಸ್ವಲ್ಪವೇ ಸ್ವಲ್ಪ ಕಡಿಮೆ ಆಗಿದ್ದು ನೋಡಿದ ಹೆಂಡತಿಗೆ ಆತ ಹೇಳುತ್ತಿರುವುದು ಸತ್ಯವಲ್ಲ ಎಂದು ತಿಳಿಯಿತು. ಹತ್ತಿರ ಬಂದು, ‘‘ಏನಾಯ್ತು? ನಿನ್ನೆ ರಾತ್ರಿಯೂ ಸ್ವಲ್ಪ ತಲೆ ಬಿಸಿಯಲ್ಲಿ ಇದ್ದ ಹಾಗಿತ್ತು’’ ಎಂದಳು.
‘‘ಮೇಷ್ಟ್ರು ಫೋನ್ ಮಾಡಿದ್ದು. ಅವರು ಮತ್ತು ಇನ್ನೊಂದಿಷ್ಟು ಗೆಳೆಯರು ಎಲ್ಲಾ ಪ್ರತಿಭಟನೆಯಾಗಿ ತಮಗೆ ಸಿಕ್ಕಿದ್ದ ಪ್ರಶಸ್ತಿಯನ್ನು ಹಿಂದಿರುಗಿಸುತ್ತಿದ್ದಾರಂತೆ.’’
‘‘ನೀವೂ ಸಹ ಪ್ರಶಸ್ತಿ ವಾಪಸ್ ಕೊಡ್ಬೇಕು ಅಂತ ಹೇಳ್ತಾ ಇದ್ದಾರಾ?’’
‘‘ಇಲ್ಲ ಹಾಗೆ ಏನೂ ಒತ್ತಾಯ ಇಲ್ಲ.’’
‘‘ಮತ್ತೆ ಏನು ಸಮಸ್ಯೆ? ಇಷ್ಟ ಇದ್ದರೆ ವಾಪಸ್ ಕೊಡಿ. ಇಲ್ಲದಿದ್ದರೆ ಬೇಡ.’’
ಮತ್ತೆ ಫೋನ್ ರಿಂಗಣಿಸತೊಡಗಿತು. ಈ ಬಾರಿ ಫೋನ್ ಎತ್ತಿಕೊಂಡು, ‘‘ಸಾರ್... ಸ್ನಾನಕ್ಕೆ ಹೋಗಿದ್ದೆ. ಕ್ಷಮಿಸಿ,’’ ಎಂದ. ಆ ಕಡೆಯಿಂದ ಮೇಷ್ಟ್ರು, ‘‘ನಾನು ನಿನಗೆ ಫೋನ್ ಮಾಡಿದ್ದು ಯಾಕೆ ಅಂದ್ರೆ, ನಾವೆಲ್ಲಾ ಪ್ರಶಸ್ತಿ ವಾಪಸ್ ಕೊಡ್ತಿದ್ದೇವೆ ಅಂತ ನೀನು ಕೊಡಬೇಕು ಅಂತ ಭಾವಿಸಕೂಡದು. ಯಾವುದೇ ಒತ್ತಾಯ ಇಲ್ಲ. ಇದೇನು ಸಮಾನಮನಸ್ಕರ ಫತ್ವಾ ಏನೂ ಅಲ್ಲ. ನೀನು ಒತ್ತಡಕ್ಕೆ ಒಳಗಾಗುವ ಆವಶ್ಯಕತೆ ಇಲ್ಲ’’ ಎಂದರು.
‘‘ನೋಡೋಣ ಸರ್. ಯೋಚನೆ ಮಾಡ್ತೇನೆ. ಪ್ರಶಸ್ತಿ ಹಿಂದಿರುಗಿಸಿದಾಗಲಾದರು ನಾಲ್ಕು ಜನ ನನ್ನ ಕವನ ಸಂಕಲನ ಓದುತ್ತಾರ ನೋಡೋಣ. ಮೊದಲ ಮುದ್ರಣ ಇನ್ನೂ ಹಾಗೆ ಉಳಿದಿದೆ ಅಂತ ಪ್ರಕಾಶಕರು ಹೇಳ್ತಾ ಇದ್ದರು’’ ಎಂದು ತಮಾಷೆ ಮಾಡಿ ಫೋನ್ ಕಾಲ್ ಕಟ್ ಮಾಡಿದ. ಆಕಡೆಯಿಂದ ಮೇಷ್ಟು ನಗುವ ಸದ್ದು ಕೇಳಿಸುತ್ತಲೇ ಇತ್ತು.

ತಾನು ಮಾಡಿದ ತಮಾಷೆಯಲ್ಲಿ ತಾನೇ ತಮಾಷೆ ಆಗಿರುವುದು ಅವನಿಗೆ ತಿಳಿದಿತ್ತು. ಆದರೂ ತಾನೂ ನಕ್ಕಿದ್ದ. ‘‘ನಗು ತಡೆಯಲಾಗದು ಈ ದುಃಖದಲ್ಲಿ, ಸುಡುತಿರಲು ಬೇನೆ ಎದೆಗೂಡಿನಲ್ಲಿ. ಸಹಿಸಲಾಗದು ಬದುಕಲಾಗದು ನಗದೆ ಉಳಿದರೆ ಇಲ್ಲಿ’’ ಎಂಬ ತನ್ನದೇ ಕವಿತೆಯ ಸಾಲುಗಳನ್ನು ನೆನಪಿಸಿಕೊಂಡ.
ಆ ಕವಿತೆ ಬರೆದಾಗ ಆತ ಇನ್ನೂ ವಿದ್ಯಾರ್ಥಿ. ಅದನ್ನು ಕಾಲೇಜ್ ಕವಿ ಗೋಷ್ಠಿಯಲ್ಲಿ ಓದಿ ಹೇಳಿದಾಗ ಮೇಷ್ಟ್ರೊಬ್ಬರು, ‘‘ಸ್ವಲ್ಪ ನೆಗೆಟಿವ್ ಆಗಿದೆ ಮಾರಾಯ’’ ಎಂದಿದ್ದರು. ಅದಕ್ಕೆ ಏನು ಉತ್ತರ ಹೇಳಬೇಕೋ ತಿಳಿದಿರಲಿಲ್ಲ. ಮುಂದೆ, ‘‘ಒಡೆದ ಕಾಲು, ಒರಟು ಹಸ್ತ ಮಾಮೂಲಿ, ಮಾಡುವಾಗ ದಿನಗೂಲಿ. ನಿನ್ನ ಲೋಕದ ಸೌಂದರ್ಯಶಾಸ್ತ್ರಕ್ಕೆ ನಾನು ಎಂದೆಂದಿಗೂ ಕುರೂಪಿ’’ ಎಂಬ ಸಾಲನ್ನು ಬರೆದಿದ್ದ.
ಹೀಗೆ ಕಾಲೇಜು ದಿನಗಳಲ್ಲಿಯೇ ಸಾಕಷ್ಟು ಕವಿತೆ ಬರೆಯುತ್ತಿದ್ದ, ಕೇಳಲು ಸಾಕಷ್ಟು ಮಂದಿ ಇರದೇ ಹೋದಾಗಲು. ‘‘ಕವಿತೆಗೆ ಇದು ಕಾಲವಲ್ಲ’’ ಎಂದು ಇವನೊಂದಿಗೆ ಚಳವಳಿಯಲ್ಲಿ ಇದ್ದ ಸ್ನೇಹಿತನೊಬ್ಬ ಒಮ್ಮೆ ಹೇಳಿದ್ದ ಇವನನ್ನು ಸಮಾಧಾನ ಪಡಿಸಲು. ಆದರೆ ಒಪ್ಪಲು ಇವನಿಗೆ ಸಾಧ್ಯವಿರಲಿಲ್ಲ. ಯಾಕೆಂದರೆ ಹಳೆಗನ್ನಡ ಕಾವ್ಯ ಓದುವ ಒಂದು ಸ್ಟಡಿ ಸರ್ಕಲ್ ಅವರ ಕಾಲೇಜ್‌ನಲ್ಲಿತ್ತು. ಮತ್ತು ಚುಟುಕು ಹಾಸ್ಯ ಕವಿತೆಗೆ ಕವಿಗೋಷ್ಠಿಯಲ್ಲಿ ಸಾಕಷ್ಟು ಚಪ್ಪಾಳೆ ಸಹ ಬೀಳುತ್ತಿದ್ದವು.

 ಜನರು ಇವನ ಕಾವ್ಯದ ಬಗ್ಗೆ ಅನಾದರ ತೋರಿದರೂ ಅದು ಇವನ ಕಾವ್ಯ ರಚನೆಯನ್ನು ನಿಲ್ಲಿಸಲಿಲ್ಲ. ಜನರ ಅನಾದರ ಇವನಿಗೆ ಅಭ್ಯಾಸ ಆಗಿ ಹೋಗಿತ್ತು. ಮುಂದೆ ಇವನ ನೆಚ್ಚಿನ ಮೇಷ್ಟ್ರು ಚಳವಳಿಯ ಭಾಗವಾಗಿ ಇವನಿಗೆ ಪರಿಚಯ ಆದಾಗ ಇವನ ಕವಿತೆಗಳನ್ನೆಲ್ಲಾ ಒಟ್ಟಿಗೆ ಓದಿ ಇವನಿಗೆ ಕವನ ಸಂಕಲನ ಹೊರತರಲು ಹೇಳಿದರು. ಅದೇ ಮೊದಲ ಬಾರಿ ಈತ ಕವನ ಸಂಕಲನ ತರುವುದರ ಕುರಿತು ಆಲೋಚಿಸಿದ್ದು.
ಮೇಷ್ಟ್ರು, ‘‘ಇವನ್ನೆಲ್ಲ ಪ್ರಿಂಟ್ ಮಾಡಿಸಿ ಒಂದು ಪ್ರತಿ ಕೊಟ್ಟಿರು ಯಾವುದಾದರು ಪ್ರಕಾಶಕರಿಗೆ ಕಲಿಸೋಣ’’ ಎಂದು ಹೇಳಿದರೆ ‘‘ಆಯ್ತು’’ ಎಂದು ತಲೆ ಅಲ್ಲಾಡಿಸಿದ್ದ, ಪ್ರಿಂಟ್ ಮಾಡಲು ಟೈಪ್ ಮಾಡುವುದು ಹೇಗೆ ಎಂದು ತಿಳಿಯದೆ ಇದ್ದರೂ ಅವರ ಮನೆತನದಲ್ಲಿ ಮೊದಲ ಅಕ್ಷರಸ್ಥನೆ ಆತನು. ಅಕ್ಷರವನ್ನು ಕಲಿಯುವುದೇ ಒಂದು ಸಾಹಸ ಆಗಿರುವಾಗ ಅವನು ಟೈಪಿಂಗ್ ಸಹ ತಿಳಿದಿರಬೇಕು ಎಂದು ನಿರೀಕ್ಷಿಸುವುದು ಹೇಗೆ? ಆದರೆ ಟೈಪಿಂಗ್ ಬಾರದೆ ಇರುವುದು ಇವನಿಗೆ ಒಂದು ತಡೆ ಆಗಿರಲೇ ಇಲ್ಲ. ಯಾಕೆಂದರೆ ಟೈಪಿಂಗ್ ಇವನ ಲೋಕದ ಭಾಗವೇ ಅಲ್ಲ. ಒಂದು ವಾರ ಸಮಯ ತೆಗೆದುಕೊಂಡು ತನ್ನ ಕವಿತೆಗಳ ಒಂದು ಹಸ್ತಪ್ರತಿ ತಯಾರಿಸಿದ. ಅದನ್ನು ನೋಡಿ ಮೇಷ್ಟ್ರು, ‘‘ಕೈಯಲ್ಲೇ ಮಾಡಿದ್ಯಾ? ಈ ಪ್ರಕಾಶಕರು ಈಗೀಗ ಕೈಬರಹ ಓದೋದೇ ಇಲ್ಲ ಮಾರಾಯ’’ ಎಂದರು. ಇವನು ತನ್ನ ಹಸ್ತಪ್ರತಿಗೆ ಕಾರಣ ತಿಳಿಸಲೋ ಬೇಡವೋ ಎಂದು ಆಲೋಚಿಸುತ್ತಿರಲು, ‘‘ಪ್ರಿಂಟ್ ಮಾಡಿಸಲು ದುಡ್ಡು ಬೇಕಿದ್ದರೆ ನಾನೇ ಕೊಡ್ತಾ ಇದ್ನಲ್ಲ’’ ಎನ್ನುತ್ತ, ‘‘ಪರವಾಗಿಲ್ಲ ಬಿಡು. ನನ್ನ ಕೆಲವು ಸ್ನೇಹಿತರಿದ್ದಾರೆ. ಒಂದು ಮಾತು ಹೇಳುತ್ತೇನೆ. ಸಹಕರಿಸಿಯಾರು’’ ಎಂದರು. ಈತ ಹಿಂಜರಿಯುತ್ತಲೇ ಮುಗುಳ್ನಕ್ಕಿದ್ದ.

ಆ ಸಮಯದಲ್ಲೇ ಚಳವಳಿಯ ಭಾಗವಾಗಿ ಪ್ರಕಟವಾಗಿದ್ದ ಒಂದು ಪುಸ್ತಕ ಬಿಡುಗಡೆಯ ಕಾರ್ಯಕ್ರಮದಲ್ಲಿ ಮೇಷ್ಟ್ರು ಇವನ ಕವಿತೆಗಳನ್ನು ಪ್ರಕಾಶಕರೊಬ್ಬರಿಗೆ ತೋರಿಸಿ ಅವುಗಳನ್ನು ಪ್ರಕಟಿಸಲು ಸಾಧ್ಯವೇ ಎಂದು ಕೇಳಿದರು. ಒಮ್ಮೆ ಕಣ್ಣು ಬಿಟ್ಟು ಓದಿದ ಪ್ರಕಾಶಕರು, ‘‘ಹೊಸ ಬಗೆಯ ಇಮೇಜಸ್ ಇದೆ. ತುಂಬಾನೇ ಚೆನ್ನಾಗಿದೆ. ಆದರೆ ಈ ಕವಿತೆಗಳ ಲೋಕ ಹೆಚ್ಚಿನ ಓದುಗರನ್ನು ಆಕರ್ಷಿಸುವುದಿಲ್ಲ. ಲಾಸ್ ಖಚಿತ. ಆದರೂ ಪ್ರಕಟಿಸ ಬಹುದು. ಯಾಕೆಂದರೆ ಇಂಥಾ ಸಂವೇದನೆಗಳು ಬೇಕು. ಇಂಥಾ ಹೊಸ ವಾಯ್ಸಿ ಇರುವ ಕವಿಗಳನ್ನು ಪ್ರಕಟ ಮಾಡೋದು ನಮಗೂ ಸಂತೋಷದ ಸಂಗತಿಯೇ’’ ಎಂದರು.
ಈ ಮಾತುಗಳನ್ನು ಕೇಳಿದ ಅವನು ತನ್ನಿಂದಾಗಿ ಒಬ್ಬ ಪ್ರಕಾಶಕನಿಗೆ ಲಾಸ್ ಆಗುವುದು ಬೇಡ ಎಂದು ಮೇಷ್ಟ್ರ ಬಳಿ ಆಮೇಲೆ ಹೇಳಿದ್ದ. ‘‘ನಿನ್ನ ಪುಸ್ತಕ ಲಾಸ್ ಆದರು ಅವನಿಗೆ ಅದೊಂದು ಸಂಗತಿ ಅಲ್ಲ. ಅವನು ಹಣ ಸಂಪಾದಿಸೋ ಖ್ಯಾತ ಸಾಹಿತಿಗಳ ಬೇರೆ ಸುಮಾರು ಪುಸ್ತಕ ಪ್ರಕಟಿಸುತ್ತಾ ಇರುತ್ತಾನೆ. ನೀನು ಹೆದರ ಬೇಡ’’ ಎಂದು ಮೇಷ್ಟ್ರು ವಿವರಿಸಿದಾಗಲೂ ಈತನ ಮನಸ್ಸು ಒಪ್ಪಲಿಲ್ಲ. ಆವಾಗ ಮೇಷ್ಟ್ರು ಪುಸ್ತಕ ಪ್ರಾಧಿಕಾರ ಮೊದಲ ಪ್ರಕಟಕ್ಕೆ ನೀಡೋ ಪ್ರೋತ್ಸಾಹ ಧನಕ್ಕೆ ಅರ್ಜಿ ಸಲ್ಲಿಸಲು ಹೇಳಿದ್ದು. ಅಲ್ಲಿ ಇವನ ಹಸ್ತಪ್ರತಿ ಆಯ್ಕೆ ಆಗಿ ಇವನಿಗೆ ಪ್ರಕಾಶಕ ಸಿಗುವ ಹೊತ್ತಿಗೆ ಇವನು ಸಣ್ಣ ಹಳ್ಳಿಯಲ್ಲಿ ಮೇಷ್ಟ್ರ ಹುದ್ದೆ ಹಿಡಿದಾಗಿತ್ತು.

ಇವನು ಮೇಷ್ಟ್ರ ಕೆಲಸ ಹಿಡಿದದ್ದೇ ತಡ ಮನೆಯವರು ಇವನಿಗೆ ಲಗ್ನ ನಿಶ್ಚಯಿಸಿಯೇ ಬಿಟ್ಟರು. ಇವನು ಸಹ ಏನೇನೂ ಪ್ರತಿರೋಧ ವ್ಯಕ್ತ ಪಡಿಸದೆ ಮದುವೆಗೆ ಒಪ್ಪಿಕೊಂಡ. ತನ್ನ ಮನೆಯ ಜವಾಬ್ದಾರಿ ದೂರದಲ್ಲಿ ಇರುವ ತನ್ನ ತಂದೆ ತಾಯಿಯ ಜವಾಬ್ದಾರಿ ಇವನ ಸಂಬಳದ ಮೇಲೆ ಇತ್ತು. ಅಷ್ಟೇ ಆಗಿದ್ದರೆ ಹೇಗೋ ನಿಭಾಯಿಸಿಕೊಂಡು ಹೋಗಬಹುದಿತ್ತು ಆದರೆ ತನ್ನ ಕುಟುಂಬದಲ್ಲಿ ವಿದ್ಯಾಭ್ಯಾಸ ಪಡೆದು ನೌಕರಿ ಪಡೆದ ಈತನ ಬಳಿ ಕುಟುಂಬದ ಕೆಲವರು ಸಹಾಯ ಪಡೆಯಲು ಬಂದಾಗ ಸ್ವಲ್ಪ ಕಷ್ಟ ಆಗುತ್ತಿತ್ತು. ‘‘ನಮ್ಮಿಳಗೊಬ್ಬ ಹಿರಿಯನು’’ ಎಂದು ಭಾವಿಸುತ್ತಿದ್ದ ಸಂಬಂಧಿಕರಿಗೆ ಸಹಾಯಕ್ಕೆ ಆದರೆ ತನಗೆ ಕಾಲು ಚಾಚಲು ಆಗದು, ಸಹಾಯಕ್ಕೆ ಆಗದೆ ಹೋದರೆ ‘‘ಕಲೆತಾದ ಮೇಲೆ ದೂರಾದ’’, ಎಂಬ ಮಾತು. ಕಾಲು ಮಡಚಿ ಮಲಗಬೇಕಾದರು ಸರಿ ಮಾತು ಕೇಳಲಾಗದ ಇವನು ಕೊನೆಗೆ ತನ್ನ ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ದೂರದ ಬೆಂಗಳೂರಿಗೆ ಹೋಗುವಾಗ ಹೆಂಡತಿಯನ್ನು ಬಿಟ್ಟೆ ಹೋಗಿದ್ದ ಖರ್ಚು ಉಳಿಸಲು. ಹೆಂಡತಿಗೆ ಬೆಂಗಳೂರು ನೋಡಬೇಕೆಂಬ ಆಸೆ ಮೂಗಿನ ತುದಿಯ ತನಕ ಇದ್ದರೂ ಪರಿಸ್ಥಿತಿ ಅರ್ಥ ಮಾಡಿಕೊಂಡು ಸುಮ್ಮನಾಗಿದ್ದಳು.
ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಮುಗಿಸಿ ಬರುವಾಗ ತನ್ನ ಪುಸ್ತಕದ ಕೆಲವು ಪ್ರತಿ ತೆಗೆದುಕೊಂಡು ಬಂದಿದ್ದ. ಹೆಂಡತಿಗೆ ಒಂದು ಸೀರೆಯನ್ನು ಸಹ ತಂದಿದ್ದ. ಪುಸ್ತಕವನ್ನು ಹೆಂಡತಿಗೆ ತೋರಿಸಿದಾಗ ಐದನೆ ಕ್ಲಾಸ್ ತನಕ ಓದಿದ್ದ ಆಕೆ ತನಗೆ ಅದೆಲ್ಲ ಅರ್ಥ ಆಗೋಲ್ಲ ಎಂದಿದ್ದಳು.

ಕೆಲವು ಪತ್ರಿಕೆಗಳು ‘‘ಹೊಸ ತಲೆಮಾರಿನಲ್ಲಿ ಅತ್ಯಂತ ಭರವಸೆ ಮೂಡಿಸುವ ಕವಿ’’ ಎಂದು ಇವನನ್ನು ಹೊಗಳಿ ವಿಮರ್ಶೆ ಪ್ರಕಟಿಸಿದವು. ಆ ಪತ್ರಿಕೆಗಳ ಎರಡೆರಡು ಪ್ರತಿ ತೆಗೆದುಕೊಂಡು ಒಂದೊಂದು ಪ್ರತಿಯನ್ನು ಊರಿಗೆ ಕಳುಹಿಸಿದ್ದ. ಇವನ ಫೋಟೋವನ್ನಾದರೂ ಅಪ್ಪ ಅಮ್ಮ ನೋಡಲಿ ಎಂದು. ಹರ್ಷಿಸಬಹುದಾಗಿದ್ದ ಅಪ್ಪ ಅಮ್ಮನಿಗೆ ಓದಲು ಬರುತ್ತಿರಲಿಲ್ಲ. ಓದಬಹುದಾಗಿದ್ದ ಸಹೋದ್ಯೋಗಿಗಳಿಗೆ ಹರ್ಷ ಆಗಲಿಲ್ಲ. ‘‘ನಮ್ಮಜ್ಜ ದೊಡ್ಡ ಸಂಸ್ಕೃತ ಪಂಡಿತರಾಗಿದ್ರು ಗೊತ್ತೇನ್ರಿ? ಅವರು ಬರೆದ ಒಂದು ಕವಿತೆ ವಿಷ್ಣು ಬಗ್ಗೆ ಇತ್ತು. ಅದನ್ನು ಹಿಮ್ಮುಖವಾಗಿ ಓದಿದರೆ ಕೃಷ್ಣನ ಬಗ್ಗೆ ಆಗಿತ್ತು. ಒಂದೇ ಕವಿತೆಯಲ್ಲಿ ಎರಡು ಕವಿತೆ ಇತ್ತು’’ ಎಂದು ಒಬ್ಬರು ಹೇಳಿದರೆ ಮತ್ತೊಬ್ಬರು, ‘‘ನನ್ನ ಚಿಕ್ಕಪ್ಪನ ಹೆಂಡತಿಯ ತಂದೆಯ ತಮ್ಮನ ಅಳಿಯನ ಅಜ್ಜ ದೊಡ್ಡ ಕನ್ನಡ ಕಾದಂಬರಿಕಾರ. ಸುಮಾರು ಇಪ್ಪತ್ತೈದು ಕಾದಂಬರಿ ಬರೆದಿದ್ದಾರೆ. ಸುಮಾರು ಪ್ರಶಸ್ತಿ ಎಲ್ಲಾ ಬಂದಿದೆ’’ ಎಂದು ಹೇಳಿದರೆ ವಿನಃ ಇವನ ಕವನ ಸಂಕಲನದ ಒಂದು ಪ್ರತಿಯನ್ನೂ ಕೊಳ್ಳಲಿಲ್ಲ. ಇವನಿಂದ ಓದಲು ಪಡೆಯಲೂ ಇಲ್ಲ. ವಿಮರ್ಶೆಯಲ್ಲಿ ಉದಾಹರಿಸಿದ ಒಂದು ಕಾವ್ಯದ ಸಾಲು ಓದಿದ ಪ್ರಾಂಶುಪಾಲರು, ‘‘ಆ ಕವಿತೆಯಲ್ಲಿ ಹಸಿವೆಯ ವಿವರಣೆ ಚೆನ್ನಾಗಿದೆ. ಅದು ಬಡತನದ ಕವಿತೆ ಅಂತ ಅನ್ನಿಸಿತು. ಈ ವಿಮರ್ಶಕರು ಅದನ್ನು ತಂದು ಜಾತಿಗೆ ಯಾಕೆ ನಿಲ್ಲಿಸಿದ್ದಾರೋ ಗೊತ್ತಿಲ್ಲಪ್ಪ. ಈ ವಿಮರ್ಶಕರದ್ದೆಲ್ಲಾ ಏನೋ ಹಿಡನ್ ಅಜೆಂಡಾ ಇರೊತ್ತೆ’’ ಎಂದಿದ್ದರು. ಅದನ್ನು ತನ್ನ ನೆಚ್ಚಿನ ಮೇಷ್ಟ್ರಿಗೆ ಹೇಳಿದಾಗ ಅವರು ನಕ್ಕು, ‘‘ಜಾತಿಗೂ ಬಡತನಕ್ಕೂ ಇರೋ ನಿಕಟ ಸಂಬಂಧ ಬೌಧಿಕ ಬಡತನ ಹೃದಯ ಬಡತನ ಇರೋ ಜನರಿಗೆ ಅರ್ಥ ಆಗೋಲ್ಲ ಬಿಡು’’ ಎಂದಿದ್ದರು.
ಇಷ್ಟೆಲ್ಲಾ ಆದರೂ ವಿಮರ್ಶಕರು ಹೊಗಳುತ್ತಿದ್ದಾರೆ ಎಂಬ ಸಂತೋಷ ಇವನ ಪಾಲಿಗಿತ್ತು. ಆ ಪುಸ್ತಕಕ್ಕೆ ಮುಂದೆ ಕೇಂದ್ರ ಸಾಹಿತ್ಯ ಅಕಾಡಮಿ ಯುವ ಪುರಸ್ಕಾರ ಪ್ರಶಸ್ತಿ ಬಂದ ಹೊತ್ತಿಗಾಗಲೇ ಇವನ ಹೆಂಡತಿಗೆ ಎಂಟು ತಿಂಗಳು ತುಂಬಿತ್ತು. ಪ್ರಶಸ್ತಿ ಪಡೆಯಲು ರಾಜ್ಯದ ಗಡಿ ದಾಟಿ ಭಾಷೆ ಬಾರದ ಊರಿಗೆ ಹೋಗಬೇಕು ಎಂಬ ಹೆದರಿಕೆ ಇವನನ್ನು ಹೆಚ್ಚು ಸಂಭ್ರಮಿಸಲು ಸಹ ಬಿಡಲಿಲ್ಲ. ಆ ಕುರಿತೇ ಆಲೋಚನೆ ಮಾಡುತ್ತಿದ್ದಾಗ ಪ್ರಕಾಶಕರು ಫೋನ್ ಮಾಡಿ ಶುಭಾಶಯ ತಿಳಿಸಿದ್ದರು. ಹಾಗೆ ಮಾತನಾಡುತ್ತಿದ್ದಾಗ, ‘‘ಪುಸ್ತಕದ ಪ್ರತಿಗಳು ಇನ್ನೂ ಹಾಗೆ ಇವೆ. ಆದರೂ ಪ್ರಶಸ್ತಿ ಬಂತು ನೋಡಿ’’ ಎಂದು ನಕ್ಕಿದ್ದರು. ‘‘ಇನ್ನಾದರು ಪ್ರತಿಗಳನ್ನು ಕೊಳ್ಳಬಹುದು ನಾಲ್ಕಾರು ಜನ’’ ಎಂದು ಇವನು ಅವರಿಗೆ ಹೇಳಿ ಫೋನ್ ಇಟ್ಟಿದ್ದ.

ಅದೇ ದಿನ ಮೇಷ್ಟ್ರು ಫೋನ್ ಮಾಡಿದಾಗ ರಾಜ್ಯದಾಚೆ ಹೋಗಲು ಅಂಜಿಕೆ ಆಗುತ್ತಿರುವುದರ ಕುರಿತಾಗಿ ಹೇಳಿಕೊಂಡರೆ ಮೇಷ್ಟ್ರು, ‘‘ನಿನ್ನ ಗಡಿ ನೀನು ವಿಸ್ತರಿಸಿಕೊಳ್ಳದೆ ಹೋದರೆ ಹೇಗೆ? ನೀನು ಬೆಳೆಯಲು ಅಂಜಬಾರದು. ಎಷ್ಟೆಲ್ಲಾ ಕಷ್ಟ ನೋಡಿದ್ದಿ ಜೀವನದಲ್ಲಿ. ಈಗ ಸಂಭ್ರಮಿಸಲು ಒಂದು ಅವಕಾಶ. ಬಿಡಬೇಡ. ಅಷ್ಟೆಲ್ಲ ಕಷ್ಟ ನೋಡಿದ ನಿನಗೆ ಇದೂ ಒಂದು ಕಷ್ಟವೇ? ಗೊತ್ತಿರುವ ಚೂರು ಪಾರು ಇಂಗ್ಲಿಷ್ ಸಾಕು ಮಾರಾಯ ನಾಲ್ಕಾರು ದಿನಕ್ಕೆ’’ ಎಂದು ನಗುನಗುತ್ತಾ ಇವನನ್ನು ಪ್ರಶಸ್ತಿ ಪಡೆಯಲು ಹೋಗುವಂತೆ ಹುರಿದುಂಬಿಸಿದ್ದರು.

ಪ್ರಶಸ್ತಿ ಪಡೆಯಲು ಹೋದಾಗ ಅಲ್ಲಿ ಭಾಷಣ ಮಾಡಬೇಕಾಗಿತ್ತು. ಅದಕ್ಕೆ ತಯಾರಿ ನಡೆಸಲು ಬಹಳಷ್ಟು ಪರಿಶ್ರಮ ನಡೆಸಿದ್ದ. ಆದರೂ ಅಲ್ಲಿ ತನ್ನ ಕಲ್ಪನೆಯ ಆಚೆಗೆ ಇರುವಂಥ ಪರಿಸರದ ಒಂದು ಅಪರಿಚಿತ ಕಟ್ಟಡದಲ್ಲಿ ಗರಿಗರಿಯಾದ ಶುಭ್ರ ಬಟ್ಟೆ ತೊಟ್ಟು ಹಾಜರಿದ್ದ ಜನರ ನಡುವೆ ನಿಂತಾಗ ಬರೆದುಕೊಂಡು ಬಂದಿದ್ದ ಭಾಷಣವೂ ಕಳೆದು ಹೋಗಿತ್ತು. ‘‘ಬೇರೆ ಬೇರೆ ಜನ ಸಿಗುತ್ತಾರೆ. ಅವರ ಸಂಪರ್ಕ ಸಾಧಿಸು. ಸ್ನೇಹ ಬೆಳೆಸು’’ ಎಂದು ಹೇಳಿದ್ದ ಮೇಷ್ಟ್ರ ಮಾತು ನೆನಪಿನಲ್ಲಿದ್ದರೂ ಯಾರೊಂದಿಗೂ ಬೆರೆಯಲು ಮಾತನಾಡಲು ಇವನ ಕೈಯಲ್ಲಿ ಸಾಧ್ಯ ಆಗಿರಲಿಲ್ಲ. ಅವರೇನೆಂದುಕೊಂಡಾರೋ ಎಂಬ ಭಯ. ಸಣ್ಣಗಿರುವಾಗಿನಿಂದ ಮನುಷ್ಯರಿಗೆ ಸಿಗಬೇಕಾದ ಕನಿಷ್ಠ ಗೌರವ ಸಿಗದ ಮಂದಿಗೆ ಅಷ್ಟು ಸುಲಭದಲ್ಲಿ ಸ್ನೇಹ ಬೆಳೆಸಲು ಅದೂ ಇತರ ಭಾಷೆಯ ಮಂದಿಯೊಂದಿಗೆ ಸಾಧ್ಯ ಆಗುವುದಿಲ್ಲ.

ಸಮಾರಂಭದಲ್ಲಿ ಪ್ರಶಸ್ತಿ ಪಡೆದು ಹಿಂದಿರುಗುವಾಗ ರೈಲಿನಲ್ಲಿ ಕುಳಿತು, ‘‘ನನ್ನ ಭಾಷೆಗೆ ನನ್ನ ಲೋಕ ತಿಳಿಯದು, ನನ್ನ ಭಾಷೆಯ ಆಚೆಗೂ ನನ್ನ ಭಾಷೆಯ ಒಳಗೂ ನಾನು ಪರಕೀಯ’’ ಎಂದೆಲ್ಲಾ ಕವಿತೆಯನ್ನು ಬರೆದಿದ್ದ.
 
ಆದರೆ ಅವನ ಭಾಷೆಯಲ್ಲಿ ಅವನು ವಾಸವಾಗಿದ್ದ ಪುಟ್ಟ ಹಳ್ಳಿಯ ಸುತ್ತಮುತ್ತಲಿನಲ್ಲಿ ಪ್ರಶಸ್ತಿ ಪಡೆದ ಬಳಿಕ ಅವನಿಗೆ ಒಂದು ಹೊಸ ಖ್ಯಾತಿಯೇ ಬಂದಿತ್ತು. ಅವನನ್ನು ಸಭೆ ಸಮಾರಂಭಗಳಿಗೆ ಆಹ್ವಾನಿಸಲು ಆರಂಭಿಸಿದರು. ಪ್ರಶಸ್ತಿ ಪಡೆಯುವಲ್ಲಿ ಎಡವಿದ್ದ ತನ್ನ ವಿರುದ್ಧವೇ ಜಯ ಸಾಧಿಸಲು ಹೊರಟವನಂತೆ ಭಾಷಣ ಮಾಡ ಹತ್ತಿದ. ಎಲ್ಲೆಲ್ಲೂ-ಜಾತಿ ವಿನಾಶವನ್ನೇ ತನ್ನ ಭಾಷಣದ ಮುಖ್ಯ ವಸ್ತುವಾಗಿ ಇಟ್ಟುಕೊಂಡು. ಇದರಿಂದಾಗಿ ಒಂದು ರೀತಿಯ ಸಭೆ ಸಮಾರಂಭಗಳಿಂದ ಆಹ್ವಾನ ಕಡಿಮೆ ಆದರೂ ಮತ್ತೊಂದು ಬಗೆಯ ಆಯೋಜಕರು ಹೆಚ್ಚು ಹೆಚ್ಚು ಆಹ್ವಾನಿಸತೊಡಗಿದರು. ಇವನ ಭಾಷಣ ಆಗೊಮ್ಮೆ ಈಗೊಮ್ಮೆ ಒಂದಿಷ್ಟು ವಿವಾದ ಎಬ್ಬಿಸುತ್ತಿತ್ತು. ಆದರೆ ಅದು ತಪ್ಪಿಯೂ ಇವನ ಹೆಂಡತಿಗೆ, ದೂರದ ಊರಿನಲ್ಲಿ ಇರುವ ಅಪ್ಪ ಅಮ್ಮನಿಗೆ ತಿಳಿಯಲಿಲ್ಲ. ಏಕೆಂದರೆ ಪತ್ರಿಕೆ ಓದಲು ಅಪ್ಪ ಅಮ್ಮನಿಗೆ ಅಕ್ಷರ ಬರುತ್ತಿರಲಿಲ್ಲ. ಆ ಹೊತ್ತಿಗಾಗಲೇ ಅಪ್ಪ ಅಮ್ಮನ ಆರೋಗ್ಯ ಹದಗೆಟ್ಟಿದ್ದು ನಿರಂತರ ಶುಶ್ರೂಷೆ ಪಡೆಯುತ್ತಿದ್ದರು. ಆ ಸ್ಥಿತಿಯಲ್ಲಿ ಈ ಸಂಗತಿ ಉಂಟು ಮಾಡಬಹುದಾದ ಗಾಬರಿಯಿಂದ ಅವರ ಅನಕ್ಷರತೆ ಕಾಪಾಡಿತ್ತು. ಅಕ್ಷರ ಬರುತ್ತಿದ್ದರೂ ಹೆಂಡತಿ ಓದುತ್ತಿರಲಿಲ್ಲ. ಹೀಗಿರುವಾಗ ಮೇಷ್ಟ್ರು ಒಮ್ಮೆ ಇವರ ಊರಿಗೆ ಬಂದಿದ್ದರು, ಊಟ ಮಾಡಿ ಹರಟೆ ಹೊಡೆಯುತ್ತಿದ್ದಾಗ ಹೇಳಿದ್ದರು, ‘‘ಹೆಚ್ಚು ಆವೇಷದಿಂದ ಮಾತನಾಡಬೇಡ. ನಿನಗೊಬ್ಬಳು ಸಣ್ಣ ಮಗಳಿದ್ದಾಳೆ ಎಂಬುದನ್ನು ನೆನಪಿನಲ್ಲಿಟ್ಟುಕೊ.’’ ಅದನ್ನು ಇವನ ಹೆಂಡತಿ ಕೇಳಿಸಿಕೊಂಡು ಮೇಷ್ಟ್ರು ಹೋದ ಮೇಲೆ ಸಿಟ್ಟು ಮಾಡುತ್ತಾ, ‘‘ನೀವು ಕವಿತೆ ಭಾಷಣ ಎಲ್ಲ ಬಿಟ್ಟು ಬಿಡಿ’’ ಎಂದು ಅತ್ತಿದ್ದಳು. ‘‘ನಿನಗಿದೆಲ್ಲ ಅರ್ಥ ಆಗೋದಿಲ್ಲ’’ ಎಂದು ಇವನು ಹೇಳಿದಾಗ, ‘‘ನೀವು ಹೇಳೋದು ಬರೆಯೋದು ಅರ್ಥ ಆಗೋಲ್ಲ. ಆದರೆ ಅದರಿಂದ ಏನೇನು ಆಗಬಹುದು ಎಂದು ಅರ್ಥ ಆಗೊತ್ತೆ’’ ಎಂದಿದ್ದಳು. ‘‘ಆವೇಷ ಬಿಟ್ಟು ಹೇಗೆ ಮಾತನಾಡಲಿ? ಮೂರು ದಶಕ ಮೀರಿದ ಅಮಾನವೀಯ ಅನುಭವ ಒಳಗಿದೆ’’ ಎಂದು ಹೇಳಿದ ಮಾತು ಮೇಷ್ಟ್ರಿಗೆ ತಕ್ಕ ಮಟ್ಟಿಗೆ ಅರ್ಥ ಆಗಿದ್ದರೂ ಹೆಂಡತಿಗೆ ಅಷ್ಟೊಂದು ಅರ್ಥ ಆಗಿರಲಿಲ್ಲ. ಮೇಷ್ಟ್ರು ಸಹ, ಅದಕ್ಕೆ ಉತ್ತರ ‘‘ನಿನ್ನ ಕವಿತೆ ನೀಡಬೇಕು. ನಿನ್ನ ಭಾಷಣ ಅಲ್ಲ’’ ಎಂದಿದ್ದರು. ‘‘ಕವಿತೆಗೆ ಪ್ರಶಸ್ತಿ ಬರೊತ್ತೆ. ಯಾರೂ ಓದೋದಿಲ್ಲ ಮೇಷ್ಟ್ರೇ. ಭಾಷಣ ಕೇಳ್ತಾರೆ’’ ಎಂದು ವಾದ ಮಾಡಿದ್ದ ಮೇಷ್ಟ್ರ ಮುಂದೆ.

ತನ್ನ ಭಾಷೆಯನ್ನು ಸ್ವಲ್ಪ ಗಾಳಿಸಿ ಬಳಸುವ ತಂತ್ರ ಒಂದಿಷ್ಟು ಮೈಗೂಡಿಸಿಕೊಂಡರೂ ಮಾತಿನೊಳಗಿನ ಹರಿತ ಅಷ್ಟೇ ಇತ್ತು. ಹೀಗೆ ಒಂದು ಕಡೆಯಿಂದ ತನ್ನ ಕವಿತೆ ಭಾಷಣ ಮುಂದುವರಿಸುತ್ತಾ ಇರುವಾಗಲೇ ಒಂದು ಒಳ್ಳೆಯ ಖಾಸಗಿ ಕಾಲೇಜ್ ಒಂದನ್ನು ಸೇರಿದ. ಮಗಳು ಸಹ ಶಾಲೆಗೆ ಹೋಗಲಾರಂಭಿಸಿದಳು. ತನ್ನ ಮಗುವನ್ನು ಕನ್ನಡ ಮಾಧ್ಯಮ ಶಾಲೆಗೆ ಕಳುಹಿಸಬೇಕೆಂದು ವಿವಾಹ ಆಗಿದ್ದ ಸಮಯದಲ್ಲಿ ಅಂದುಕೊಂಡಿದ್ದರೂ ಮಗಳು ಜನಿಸಿದ ಮೇಲೆ ಆಕೆಯನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸುವುದು ಎಂದು ಆತ ನಿರ್ಧರಿಸಿದ್ದ. ಅದರಿಂದಾಗಿ ಅವನ ಸಂಬಳದ ಒಂದು ಮುಖ್ಯ ಅಂಶವನ್ನು ಆಕೆಯ ಶಾಲೆಯ ಫೀಸಿಗೆ, ಯುನಿಫಾರ್ಮಿಗೆ, ಬ್ಯಾಗು, ಪುಸ್ತಕ, ಕಂಪಾಸ್ ಪೆಟ್ಟಿಗೆ, ಶೂ ಇತ್ಯಾದಿ ಇತ್ಯಾದಿಗೆ ತೆಗೆದಿಡಬೇಕಾಯಿತು. ಅದರ ಬಗ್ಗೆ ಒಂದಿಷ್ಟೂ ಆಲೋಚಿಸದೆ ಮಗಳನ್ನು ಆಂಗ್ಲ ಮಾಧ್ಯಮಕ್ಕೆ ಸೇರಿಸಿದ. ಸಂಬಂಧಿಕರಿಗೆ ‘‘ಇಲ್ಲ’’ ಹೇಳುವುದನ್ನು ಕಲಿತ. ಅದರಿಂದಾಗಿ ಒಂದಿಷ್ಟು ಸಂಬಂಧಿಕರು ದೂರ ಸಹ ಆದರು.

ಹೀಗೆ ಇತ್ತೀಚೆಗೆ ಒಂದು ರವಿವಾರ ಶಾಲೆಗೆ ರಜೆ ಆದ ಕಾರಣ ಸ್ವಲ್ಪ ತಡವಾಗಿ ಎದ್ದ ಇವನ ಮಗಳು ಹಲ್ಲುಜ್ಜಿ ಬಂದು ‘‘ಅಪ್ಪ ಟಿ.ವಿ. ಹಾಕು’’ ಎಂದಾಗ ಟಿ.ವಿ. ಆನ್ ಮಾಡಿದ. ಟಿವಿ ಆನ್ ಆಗುವ ಹೊತ್ತಿಗೆ ಮಗಳು ಬಂದು ಇವನ ತೊಡೆಯೇರಿ ಕುಳಿತಾಗಿತ್ತು. ಆನ್ ಆದ ಟಿವಿಯಲ್ಲಿ ನಾಡಿನ ಹಿರಿಯ ಚಿಂತಕರನ್ನು ಅವರ ಸ್ವಗೃಹದಲ್ಲೇ ಗುಂಡಿಟ್ಟು ಕೊಂದ ಸುದ್ದಿ ಕೇಳಿಬಂತು. ಇವನಿಗೆ ಸಣ್ಣಗೆ ಮೈಕಂಪಿಸಿತು. ‘‘ಇದಲ್ಲ ಅಪ್ಪ. ನನಗೆ ಕಾರ್ಟೂನ್ ನೋಡಬೇಕು,’’ ಎಂದು ಮಗಳು ಹೇಳಿದಳು. ‘‘ಸ್ವಲ್ಪ ನಿಲ�

Writer - ಸಂವರ್ಥ ‘ಸಾಹಿಲ್’

contributor

Editor - ಸಂವರ್ಥ ‘ಸಾಹಿಲ್’

contributor

Similar News