110 ತಾಲೂಕು ಬರಪೀಡಿತ
Update: 2016-10-18 18:31 GMT
ಬೆಂಗಳೂರು, ಅ.18: ರಾಜ್ಯದಲ್ಲಿ ಬರಪರಿಹಾರ ಕಾಮಗಾರಿಗಳಿಗೆ ಕೇಂದ್ರ ಸರಕಾರದ ನೆರವು ಕೋರಲು ಚರ್ಚೆ ನಡೆಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಮಳೆಯ ಕೊರತೆಯಿಂದಾಗಿ ಈಗಾಗಲೇ 110 ತಾಲೂಕುಗಳನ್ನು ಬರಪೀಡಿತವೆಂದು ಸರಕಾರ ಘೋಷಿಸಿದೆ ಎಂದರು.
ಬರ ಪರಿಹಾರ ಕಾಮಗಾರಿಗಳಿಗಾಗಿ ಕೇಂದ್ರ ಸರಕಾರದಿಂದ 4-5 ಸಾವಿರ ಕೋಟಿ ರೂ.ಪರಿಹಾರ ಕೋರಲು ಚಿಂತನೆ ನಡೆಸಲಾಗಿದೆ. ಅಲ್ಲದೆ, ಬೀದರ್ ಹಾಗೂ ಕಲಬುರಗಿಯಲ್ಲಿ ಅತಿವೃಷ್ಟಿಯಿಂದಾಗಿ ಸಂಭವಿಸಿರುವ ನಷ್ಟ ಹಾಗೂ ಅದಕ್ಕೆ ಪರಿಹಾರದ ಬಗ್ಗೆಯೂ ಇಂದಿನ ಸಭೆಯಲ್ಲಿ ಚರ್ಚೆ ನಡೆಸಲಾಗಿದೆ ಎಂದು ಕಾಗೋಡು ತಿಮ್ಮಪ್ಪ ಹೇಳಿದರು.