ಜನನಿಬಿಡ ಪ್ರದೇಶದಲ್ಲಿ ರಾಸಾಯನಿಕ ಉತ್ಪನ್ನಗಳ ತಯಾರಿಗೆ ವಿರೋಧ
ಕಾರ್ಕಳ, ಅ.23: ಆರೋಗ್ಯಕ್ಕೆ ಹಾನಿಕರವಾದ ರಾಸಾಯನಿಕ ಉತ್ಪನ್ನ ತಯಾರಿಕೆ ಕಾರ್ಖಾನೆಯೊಂದು ಸ್ಥಳೀಯರ ಕೆಂಗಣ್ಣಿಗೆ ಕಾರಣವಾಗಿದೆ. ಸಾಣೂರು ಮುರತ್ತಂಗಡಿಯಲ್ಲಿ ಈಗಾಗಲೇ ಕಾರ್ಯಾಚರಿಸುತ್ತಿರುವ ಗೇರು ಬೀಜ ಸಿಪ್ಪೆಸಂಸ್ಕರಣಾ ಘಟಕವು ನಿರ್ಮಾಣ ಹಂತದಲ್ಲಿರುವ ತನ್ನ ವಿಸ್ತತ ಕಟ್ಟಡದಲ್ಲಿ ಜನತೆಯ ಆರೋಗ್ಯಕ್ಕೆ ಮಾರಕವಾಗುವ ಹಲವು ಉತ್ಪನ್ನಗಳನ್ನು ಸಿದ್ಧಪಡಿಸುವ ಕಾರ್ಖಾನೆಯನ್ನು ತೆರೆಯಲು ಮುಂದಾಗಿದೆ ಎನ್ನುವ ಆರೋಪ ಸ್ಥಳೀಯರಿಂದ ಕೇಳಿಬಂದಿದೆ.
ಈಗಾಗಲೇ ಕಟ್ಟಡವನ್ನು ರಚಿಸಿದ್ದು, ವಿಸ್ತತ ಕಟ್ಟಡದಲ್ಲಿ ಈ ಉತ್ಪನ್ನಗಳ ತಯಾರಿಗೆ ತೆರೆಮರೆಯಲ್ಲಿ ಪ್ರಯತ್ನ ನಡೆಯುತ್ತಿರುವುದು ಕಂಡು ಬಂದಿದೆ. ಮೇಲ್ನೋಟಕ್ಕೆ ವಿಸ್ತೃತ ಕಟ್ಟಡ ಕಚ್ಚಾವಸ್ತುಗಳ ದಾಸ್ತಾನಿಗೆ ಎಂದು ಹೇಳಿಕೊಂಡಿದ್ದರೂ, ವಾಸ್ತವವಾಗಿ ಇಲ್ಲಿ ಪ್ರತ್ಯೇಕ ರಾಸಾಯನಿಕ ಉತ್ಪನ್ನಗಳ ತಯಾರಿಗಾಗಿ ಸಿದ್ಧಗೊಳ್ಳುತ್ತಿದೆ ಎನ್ನುವುದು ಸ್ಥಳೀಯರ ಆರೋಪ.
ಗ್ರಾಮಸಭೆಯಲ್ಲಿ ವಿರೋಧ
ಕಳೆದ ಗ್ರಾಮಸಭೆಯಲ್ಲಿ ಈ ಕಾರ್ಖಾನೆಗೆ ಯಾವುದೇ ಪರವಾನಿಗೆ ನೀಡಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದ್ದರು. ಅದೇ ವೇಳೆ ಗ್ರಾ.ಪಂ. ಕೂಡಾ ಗ್ರಾಮಸ್ಥರ ಬೇಡಿಕೆಗೆ ಸ್ಪಂದಿಸುವ ಭರವಸೆ ನೀಡಿದೆ. ಆದರೆ ಈ ಕಟ್ಟಡದ ಗಾತ್ರ ಮಾತ್ರ ದಿನದಿಂದ ದಿನಕ್ಕೆ ಹಿಗ್ಗುತ್ತಿದ್ದು, ಕಾರ್ಖಾನೆ ಮಾಲಕರ ಲಾಬಿಗೆ ಮಣಿದು, ಸ್ಥಳೀಯಾಡಳಿತವು ಉದ್ಯಮ ಪರವಾನಿಗೆಯತ್ತ ಒಲವು ತೋರಿದಲ್ಲಿ, ನಮ್ಮ ಬದುಕೇ ಸಂಕಷ್ಟಗೀಡಾಗುವುದರಲ್ಲಿ ಸಂದೇಹವಿಲ್ಲ ಎನ್ನುವುದು ಸ್ಥಳೀಯರ ಆತಂಕ. ಅದಕ್ಕಾಗಿ ಮುಂದೆ ನಡೆಸಬೇಕಾದ ಹೋರಾಟದ ಬಗ್ಗೆಯೂ ಪೂರ್ವ ಸಿದ್ಧತೆ ನಡೆಸಿದ್ದು, ಉಡುಪಿ ಜಿಲ್ಲಾಧಿಕಾರಿಗೂ ಮನವಿ ಸಲ್ಲಿಸಿದ್ದಾರೆ.
ಕಳೆದ ಎರಡು ವರ್ಷಗಳಿಂದ ಇದೇ ಕಾರ್ಖಾನೆಯ ತ್ಯಾಜ್ಯ ನೀರು ಸಾಣೂರು ಗ್ರಾಮದ ರೈತರ ಜೀವನಾಡಿಯಾಗಿರುವ ಚಿಕ್ಕಬೆಟ್ಟು ಕೆರೆ ಸೇರುತ್ತಿದ್ದ ಪರಿಣಾಮ, ನೀರು ಕುಡಿದ ಅನೇಕ ಜಾನುವಾರುಗಳು ಸಾವನ್ನಪ್ಪಿದ್ದವು. ಆದರೆ ಇದು ಯಾವುದೇ ಸುದ್ದಿಯಾಗಿರಲಿಲ್ಲ ಎನ್ನಲಾಗಿದೆ. ಬಳಿಕದ ಈ ನೀರನ್ನು ಭೂಮಿಯೊಳಗೆ ಇಂಗಿಸಲಾಗುತ್ತಿದ್ದು, ಪರಿಣಾಮ ಅಂತರ್ಜಲ ಕೂಡಾ ಕೆಡುತ್ತಿದೆ. ಸ್ಥಳೀಯ ಬಾವಿಗಳ ನೀರು ಕಲುಷಿತವಾಗುತ್ತಿದ್ದು, ನೀರು ಕುಡಿಯಲು ಕೂಡಾ ಭಯವಾಗುತ್ತಿದೆ ಎನ್ನುವುದು ಸ್ಥಳೀಯರ ಅಳಲು.
ಕಾರ್ಖಾನೆಯ ಸುತ್ತಮುತ್ತ 250ಕ್ಕೂ ಅಧಿಕ ಜನತೆ ವಾಸಿಸುತ್ತಿದ್ದು, ಶಾಲೆ, ಪ.ಪೂ.ಕಾಲೇಜುಗಳು ಕೂಡಾ ಅಲ್ಲಿವೆ. ಸಂಜೆಯಾಗುತ್ತಲೇ ಕಾರ್ಖಾನೆಯ ದುರ್ವಾಸನೆ ಗ್ರಾಮವನ್ನೇ ಆವರಿಸುತ್ತಿದೆ. ಕಾರ್ಖಾನೆಗೆ ಸಂಬಂಧಿಸಿದ ಮಾಹಿತಿ ಕೈಪಿಡಿಯಲ್ಲಿರುವ ಮಾಹಿತಿಯಂತೆ ಕಾರ್ಖಾನೆಯಲ್ಲಿ ಸಿಎನ್‌ಎಸ್‌ಎಲ್, ಕಾರ್ಡನಾಲ್, ರೆಸಿಡಾಲ್, ಪಾಲಿಮರೈಸ್ಡ್ ಸಿಎನ್‌ಎಸ್‌ಎಲ್, ಪಿನಾಲ್ಕಾಮೈನ್ ಮುಂತಾದ ರಾಸಾಯನಿಕ ವಸ್ತುಗಳನ್ನು ಉತ್ಪಾದಿಸಲಾಗುತ್ತಿದೆ. ಈ ಎಲ್ಲಾ ಉತ್ಪನ್ನಗಳು ಮಾನವನ ಆರೋಗ್ಯಕ್ಕೆ ಹಾನಿಕರವೆಂಬುವುದನ್ನು ಗ್ರಾಮಸ್ಥರು ಈಗಾಗಲೇ ರಾಸಾಯನಿಕಕ್ಕೆ ಸಂಬಂಧಿಸಿದ ತಜ್ಞರಿಂದ ಮಾಹಿತಿ ಪಡೆದಿದ್ದಾರೆ.
ಗ್ರಾ.ಪಂ. ಇಲ್ಲಿಗೆ ಉದ್ಯಮ ಪರವಾನಿಗೆ ನೀಡುವುದಿಲ್ಲ ಎಂದು ಭರವಸೆ ನೀಡಿದೆ. ಒಂದು ವೇಳೆ ನೀಡಿದಲ್ಲಿ ಮುಂದೆ ನ್ಯಾಯಾಲಯದ ಮೆಟ್ಟಿಲು ಏರುವ ಸಿದ್ಧತೆ ಮಾಡಿಕೊಂಡಿದ್ದೇವೆ. ಕಾರ್ಖಾನೆಯಲ್ಲಿ ಯಾವ ಉತ್ಪನ್ನಗಳು ತಯಾರಾಗುತ್ತದೆ ಎನ್ನುವುದನ್ನು ಮಾಲಕರು ಜನತೆಯ ಮುಂದೆ ಬಹಿರಂಗಪಡಿಸಬೇಕು.
ಸದಾನಂದ ಸಮಗಾರ (ಸ್ಥಳೀಯ ನಿವಾಸಿ)
ಇದು ನಮ್ಮ ಉಳಿವು-ಅಳಿವಿನ ಪ್ರಶ್ನೆ. ಗ್ರಾ.ಪಂ. ನಮ್ಮ ಬೇಡಿಕೆಗೆ ಸ್ಪಂದಿಸದೆ ಅವಕಾಶ ಕಲ್ಪಿಸಿಕೊಟ್ಟಲ್ಲಿ ಮುಂದಿನ ಹೋರಾಟದ ಬಗ್ಗೆ ಗ್ರಾಮಸ್ಥರು ಜತೆ ಸೇರಿ ನಿರ್ಣಯ ಕೈಗೊಳ್ಳಲಿದ್ದೇವೆ.
-ಲಾರನ್ಸ್‌ವಾಸ್ (ಸ್ಥಳೀಯ ನಿವಾಸಿ)
ಕರಾರು ಮೂಲಕ ಮುಂದಿನ ಕ್ರಮಕ್ಕೆ ನಿರ್ಣಯ
ಪಿಡಿಒ ಕಾರ್ಖಾನೆ ಮಾಲಕರು ಉದ್ಯಮದ ಮಾಹಿತಿ ಹಾಗೂ ಪರಿಸರಕ್ಕೆ ಹಾನಿಯಾಗದಂತೆ ನಡೆದುಕೊಳ್ಳುತ್ತೇನೆ ಎನ್ನುವ ಕರಾರು ನೀಡಿದ್ದಲ್ಲಿ, ಅವರಿಗೆ ಪರವಾನಿಗೆ ವಿತರಿಸಿ ಎಂದು ಕಳೆದ ಮಾಸಿಕ ಸಭೆಯಲ್ಲಿ ಗ್ರಾ.ಪಂ. ನಿರ್ಣಯಿಸಿದೆ. ಅದರಂತೆ ಮಾಲಕರು ಗೇರು ಬೀಜಸಿಪ್ಪೆಸಂಸ್ಕರಣೆಗೆ ಸಂಬಂಧಿಸಿದ ಉತ್ಪನ್ನಗಳು ಎಂದು ನಮೂದಿಸಿ, ಪರಿಸರಕ್ಕೆ ಹಾನಿಯಾಗದಂತೆ ನಡೆದುಕೊಳ್ಳುವುದಾಗಿ ನೋಟರಿ ಮೂಲಕ ಗ್ರಾ.ಪಂ.ಗೆ ಕರಾರು ನೀಡಿದ್ದಾರೆ. ಈಗಾಗಲೇ ಮಾಲಕರಿಗೆ ಕಟ್ಟಡ ಪರವಾನಿಗೆ ನೀಡಲಾಗಿದೆ. ಆದರೆ ಉದ್ಯಮ ಲೈಸೆನ್ಸ್ ಮಾತ್ರ ಇನ್ನೂ ನೀಡಿಲ್ಲ.
- ಸವಿತಾ ಪ್ರಭು (ಪಿಡಿಒ, ಗ್ರಾ.ಪಂ.ಸಾಣೂರು)