ಹಿರಿಯ ಪತ್ರಕರ್ತ ಎಂ.ಬಿ.ಸಿಂಗ್ ನಿಧನ
ಬೆಂಗಳೂರು, ಅ. 26: ಪ್ರಜಾವಾಣಿ, ಸುಧಾ ಹಾಗೂ ಮಯೂರ ಪತ್ರಿಕೆಗಳ ಸಂಪಾದಕರಾಗಿದ್ದ ಹಿರಿಯ ಪತ್ರಕರ್ತ ಎಂ.ಬಿ.ಸಿಂಗ್ (91) ಅವರು ಮಂಗಳವಾರ ರಾತ್ರಿ ನಿಧನರಾಗಿದ್ದಾರೆ.
1925ರ ಮೇ 14ರಂದು ಮೈಸೂರಿನಲ್ಲಿ ಜನಿಸಿದ ಅವರು, ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮಂಡ್ಯದಲ್ಲಿ ಹಾಗೂ ಕಾಲೇಜು ಶಿಕ್ಷಣವನ್ನು ಮೈಸೂರಿನಲ್ಲಿ ಪೂರ್ಣಗೊಳಿಸಿದ್ದರು. ವಿದ್ಯಾರ್ಥಿದಿಸೆಯಲ್ಲೆ ಮಾತೃಭೂಮಿ ಪತ್ರಿಕೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು.
ಆನಂತರ ‘ವಾರ್ತಾ, ಚಿತ್ರಗುಪ್ತ, ವಿಶ್ವ ಕರ್ನಾಟಕ’ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕಾರ್ಯ ನಿರ್ವಹಿಸಿದ ಸಿಂಗ್ ಅವರು, 1953ರಲ್ಲಿ ಪ್ರಜಾವಾಣಿ ಬಳಗಕ್ಕೆ ಸೇರಿದರು. ಸುದೀರ್ಘ ಕಾಲ ಪ್ರಜಾವಾಣಿ ಬಳಗದಲ್ಲಿ ಕೆಲಸ ನಿರ್ವಹಿಸಿದ ಅವರು, ವೃತ್ತಿ ನಿಷ್ಠೆಗೆ ಹೆಸರಾಗಿದ್ದರು.
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಟೀಯೆಸ್ಸಾರ್ ಸ್ಮಾರಕ ಪತ್ರಿಕೋದ್ಯಮ ಪ್ರಶಸ್ತಿ, ಪತ್ರಿಕಾ ಅಕಾಡೆಮಿ ಪ್ರಶಸ್ತಿ ಹಾಗೂ ಖಾದ್ರಿ ಶಾಮಣ್ಣ ಪ್ರಶಸ್ತಿ ಸೇರಿದಂತೆ ಹಲವು ಪ್ರತಿಷ್ಟಿತ ಪ್ರಶಸ್ತಿಗಳು ಸಿಂಗ್ ಅವರಿಗೆ ಸಂದಿರುವುದು ಅವರ ಕಾರ್ಯತತ್ಪರತೆ ಮತ್ತು ಪ್ರತಿಭೆಗೆ ಸಾಕ್ಷಿಯಾಗಿವೆ.
ಮೃತರ ಪಾರ್ಥಿವ ಶರೀರವನ್ನು ಸಹಕಾರ ನಗರದ ‘ಡಿ’ ಬ್ಲಾಕ್‌ನಲ್ಲಿರುವ ಅವರ ಪುತ್ರಿಯ ನಿವಾಸದಲ್ಲಿ ಸಾರ್ವಜನಿಕರ ದರ್ಶನಕ್ಕೆ ಇರಿಸಲಾಗಿತ್ತು. ಆ ಬಳಿಕ ಮೃತದೇಹವನ್ನು ನಗರದ ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ದಾನ ಮಾಡಲಾಯಿತು ಎಂದು ಕುಟುಂಬದ ಸದಸ್ಯರು ಮಾಹಿತಿ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಮಾಧ್ಯಮ ಅಕಾಡೆಮಿ, ಪ್ರೆಸ್‌ಕ್ಲಬ್ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.