804 ಮಂದಿ ವೈದ್ಯರು ಸೇರಿದಂತೆ 2733 ಸಿಬ್ಬಂದಿ ವಜಾ: ಆರೋಗ್ಯ ಸಚಿವ ರಮೇಶ್ ಕುಮಾರ್

Update: 2016-10-27 17:40 GMT

ಬೆಂಗಳೂರು, ಅ. 27: ರಾಜ್ಯದ ಸರಕಾರಿ ಆಸ್ಪತ್ರೆಗಳಲ್ಲಿನ 804 ಮಂದಿ ವೈದ್ಯರು, ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ ಸೇರಿದಂತೆ ಒಟ್ಟು 2733 ಮಂದಿ 120 ದಿನಗಳಿಗೂ ಮೇಲ್ಪಟ್ಟು ಅನಧಿಕೃತವಾಗಿ ಗೈರು ಹಾಜರಾಗಿದ್ದು, ಅವರೆಲ್ಲರನ್ನೂ ಸೇವೆಯಿಂದ ವಜಾಗೊಳಿಸಲಾಗುವುದು ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದ್ದಾರೆ.
ಗುರುವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಆರೋಗ್ಯ ಇಲಾಖೆಯಲ್ಲಿ ವೈದ್ಯರು ಸೇರಿದಂತೆ ಒಟ್ಟು 60 ಸಾವಿರ ಮಂದಿ ಸಿಬ್ಬಂದಿ ಇದ್ದಾರೆ. ಆ ಪೈಕಿ 2733ಮಂದಿ ವಿವಿಧ ಕಾರಣಗಳಿಗಾಗಿ 120ದಿನಗಳಿಗೂ ಮೇಲ್ಪಟ್ಟು ಅನಧಿಕೃತವಾಗಿ ಗೈರುಹಾಜರಾಗಿದ್ದಾರೆ.
804 ಮಂದಿ ವೈದ್ಯರು, 1304 ಮಂದಿ ಶುಶ್ರೂಷಕರು, ಅರೆ ವೈದ್ಯಕೀಯ ಸಿಬ್ಬಂದಿ, 35 ಮಂದಿ ‘ಡಿ’ ದರ್ಜೆ ನೌಕರರಿದ್ದು, ಅವರೆಲ್ಲರನ್ನೂ ತಕ್ಷಣದಿಂದಲೇ ಸೇವೆಯಿಂದ ವಜಾಗೊಳಿಸಲಾಗುವುದು. ಆ ಎಲ್ಲ ಖಾಲಿ ಹುದ್ದೆಗಳಿಗೆ ಹೊಸ ನೇಮಕಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದರು.
ವೈದ್ಯರ ನೇಮ: ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಆರೋಗ್ಯ ಕೇಂದ್ರ, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿನ ವೈದ್ಯರು, ಅರೆ ವೈದ್ಯಕೀಯ ಸೇರಿದಂತೆ ಖಾಲಿ ಇರುವ ಎಲ್ಲ ಹುದ್ದೆಗಳನ್ನು ಕಾಲಮಿತಿಯೊಳಗೆ ಭರ್ತಿ ಮಾಡಲಾಗುವುದು ಎಂದು ಅವರು ತಿಳಿಸಿದರು.
 ತಜ್ಞರು, ಸಾಮಾನ್ಯ, ದಂತ ವೈದ್ಯಾಧಿಕಾರಿಗಳು ಸೇರಿದಂತೆ ಒಟ್ಟು 1528 ಹುದ್ದೆಗಳು ಖಾಲಿ ಇದ್ದು, 333 ಮಂದಿಯನ್ನು ಗುತ್ತಿಗೆ ಆಧಾರದ ಮೇಲೆ ನಿಯೋಜನೆ ಮಾಡಿದ್ದು, ಕೆಪಿಎಸ್ಸಿ ಮೂಲಕ 1122 ಮಂದಿ ನೇಮಕಾತಿಗೆ ಆದೇಶ ಹೊರಡಿಸಲಾಗಿದೆ ಎಂದು ಅವರು ಹೇಳಿದರು.
ಕೆಪಿಎಸ್ಸಿ ಮೂಲಕ ಈ ಹಿಂದೆ 1401ಮಂದಿ ವೈದ್ಯಾಧಿಕಾರಿ ಹುದ್ದೆಗೆ 1122 ಹುದ್ದೆಗಳಿಗೆ ನೇಮಕಾತಿ ಆದೇಶ ಹೊರಡಿಸಿದ್ದರೂ, ಕೇವಲ 590ಮಂದಿ ಕರ್ತವ್ಯಕ್ಕೆ ವರದಿ ಮಾಡಿಕೊಂಡಿದ್ದಾರೆ. ಪಿಎಚ್‌ಸಿಗಳಲ್ಲಿ ಸೇವೆ ಸಲ್ಲಿಸುವ ವೈದ್ಯರಿಗೆ 1ಲಕ್ಷ ರೂ., ತಜ್ಞ ವೈದ್ಯರಿಗೆ 1.25ಲಕ್ಷ ರೂ.ಮಾಸಿಕ ವೇತನ ನೀಡಲಾಗುತ್ತಿದೆ. ಗ್ರಾಮೀಣ ಸೇವೆಗೆ ವೈದ್ಯರು ನಿರಾಸಕ್ತಿ ವಹಿಸುತ್ತಿದ್ದು, ವೈದ್ಯರು ತಮ್ಮ ಜವಾಬ್ದಾರಿ ಅರಿತು ಕಾರ್ಯ ನಿರ್ವಹಿಸಬೇಕು. ವೈದ್ಯರನ್ನು ರಾತ್ರೋರಾತ್ರಿ ಸೃಷ್ಟಿ ಮಾಡಲು ಆಗದು ಎಂದರು.
ಹೊಸ ಕೋರ್ಸ್: ಸರಕಾರಿ ಮತ್ತು ಖಾಸಗಿ ಸೇರಿದಂತೆ ಒಟ್ಟು 53 ವೈದ್ಯಕೀಯ ಕಾಲೇಜುಗಳಿಂದ ವಾರ್ಷಿಕ 5 ಸಾವಿರ ಪದವೀಧರರು, 400ಸ್ನಾತಕೋತ್ತರ ಪದವೀಧರರು ಹೊರಬರುತ್ತಾರೆ. 11 ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಬರುವ ಶೈಕ್ಷಣಿಕ ವರ್ಷದಿಂದ ಪ್ರಸೂತಿ, ಕ್ಷ-ಕಿರಣ, ಮಕ್ಕಳ, ಅರವಳಿಕೆ ತಜ್ಞರ ಸ್ನಾತಕೋತ್ತರ ಡಿಪ್ಲೊಮಾ ಕೋರ್ಸ್‌ಗಳನ್ನು ಆರಂಭಿಸಲಿದ್ದು, ಸರಕಾರಿ ಸೇವೆಯಲ್ಲಿರುವವರಿಗೆ ಪ್ರವೇಶ ಮೀಸಲಿಡಲಾಗುವುದು ಎಂದರು.
‘ಡಿ’ ದರ್ಜೆ ಹೊರ ಗುತ್ತಿಗೆ: ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ 10 ಸಾವಿರ ‘ಸಿ’ ದರ್ಜೆ ಹುದ್ದೆಗಳನ್ನು ನೇರ ನೇಮಕಾತಿ ಮಾಡಿಕೊಳ್ಳಲಾಗುವುದು ಎಂದ ಅವರು, ಖಾಲಿ ಇರುವ 5734 ‘ಡಿ’ ದರ್ಜೆ ಹುದ್ದೆಗಳನ್ನು ಹೊರ ಗುತ್ತಿಗೆ ಆಧಾರದ ಮೇಲೆ ನೇಮಕ ಮಾಡಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News