ಸಿಎಂ ಭಾಷಣದ ವೇಳೆ ನ್ಯಾಯಕ್ಕಾಗಿ ವ್ಯಕ್ತಿಯ ಆಗ್ರಹ
Update: 2016-11-01 06:29 GMT
ಬೆಂಗಳೂರು,ನ.1: ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಮುಖ್ಯಮಂತ್ರಿ ಸಿದ್ಧರಾಮಯ್ಯ ಭಾಷಣ ಮಾಡುತ್ತಿದ್ದ ವೇಳೆ ವ್ಯಕ್ತಿಯೊಬ್ಬ ತನಗೆ ನ್ಯಾಯ ಒದಗಿಸಬೇಕು ಎಂದು ಕೂಗಾಡಿದ ಘಟನೆ ಮಂಗಳವಾರ ಇಲ್ಲಿ ನಡೆದಿದೆ.
ಇಲ್ಲಿನ ಕಂಠೀರವ ಸ್ಟೇಡಿಯಂನಲ್ಲಿ ರಾಜ್ಯೋತ್ಸವ ಕಾರ್ಯಕ್ರಮವನ್ನು ಧ್ವಜಾರೋಹಣದ ಮೂಲಕ ಉದ್ಘಾಟಿಸಿದ ಸಿಎಂ ಭಾಷಣ ಮಾಡುತ್ತಿದ್ದ ವೇಳೆಯೇ ಮೈಸೂರಿನ ಪರಶುರಾಮ ಎಂಬಾತ ಕೆಪಿಎಸ್‌ಸಿ ಪರೀಕ್ಷೆಯಲ್ಲಿ ತನಗೆ ಅನ್ಯಾಯವಾಗಿದೆ. ನ್ಯಾಯ ಒದಗಿಸಿಕೊಡಬೇಕೆಂದು ಆಗ್ರಹಿಸಿದ. ವ್ಯಕ್ತಿಯ ಕೂಗನ್ನು ಕೇಳಿ ಭಾಷಣ ನಿಲ್ಲಿಸಿದ ಸಿಎಂ, ಆತನಿಗೆ ಏನು ನ್ಯಾಯ ಬೇಕು, ಅದನ್ನು ಕೊಡಿಸೋಣ ಎಂದು ಭರವಸೆ ನೀಡಿ ಭಾಷಣ ಮುಂದುವರಿಸಿದರು.
ಸಿಎಂ ಭಾಷಣಕ್ಕೆ ಅಡ್ಡಿಪಡಿಸಿದ ವ್ಯಕ್ತಿಯನ್ನು ತಕ್ಷಣವೇ ವಶಕ್ಕೆ ಪಡೆದ ಕಬ್ಬನ್‌ಪಾರ್ಕ್ ಠಾಣೆ ಪೊಲೀಸರು ಆತನನ್ನು ಠಾಣೆಗೆ ಕರೆದೊಯ್ದರು.