ಪ್ರಚಾರಕ್ಕಾಗಿ ಕೀಳು ಮಟ್ಟದ ಆರೋಪ, ಯಾವುದೇ ತನಿಖೆಗೂ ಸಿದ್ದ: ರೋಷನ್‌ಬೇಗ್
ಬೆಂಗಳೂರು, ನ.4: ಆರೆಸ್ಸೆಸ್ ಕಾರ್ಯಕರ್ತ ರುದ್ರೇಶ್ ನನ್ನ ಸ್ನೇಹಿತ. ಆತನ ಹತ್ಯೆ ಪ್ರಕರಣದಲ್ಲಿ ತನ್ನ ಯಾವುದೇ ಕೈವಾಡವಿಲ್ಲ. ಈ ಸಂಬಂಧ ತಾನು ಯಾವುದೇ ತನಿಖೆಗೂ ಸಿದ್ಧ ಎಂದು ಘೋಷಿಸಿರುವ ಸಚಿವ ಆರ್.ರೋಷನ್ ಬೇಗ್, ಕೇವಲ ಪ್ರಚಾರಕ್ಕಾಗಿ ಶೋಭಾ ಕರಂದ್ಲಾಜೆ ನನ್ನ ವಿರುದ್ಧ ಕೀಳು ಮಟ್ಟದ ಆರೋಪ ಮಾಡಿದ್ದಾರೆಂದು ವಾಗ್ದಾಳಿ ನಡೆಸಿದ್ದಾರೆ.
ಶುಕ್ರವಾರ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಶಿವಾಜಿನಗರದ ವಾಸ್ತವ ಸ್ಥಿತಿಯ ಪರಿವೇ ಇಲ್ಲದೆ ಮಂಗಳೂರಿನಿಂದ ಬಂದಿರುವ ಶೋಭಾ ಕರಂದ್ಲಾಜೆ, ಶಾಂತಿ-ಸೌಹಾರ್ದ ದಿಂದಿರುವ ಬೆಂಗಳೂರಿನಲ್ಲಿ ಕೋಮು ಸಂಘರ್ಷ ಸೃಷ್ಟಿಸಲು ಹುನ್ನಾರ ನಡೆಸಿದ್ದಾರೆಂದು ಆಪಾದಿಸಿದರು.
ತಾನೇನು ಎಂದು ಶಿವಾಜಿನಗರದ ಬಿಜೆಪಿ, ಆರೆಸ್ಸೆಸ್ ಕಾರ್ಯಕರ್ತರಿಗೆ ಬಹಳ ಚೆನ್ನಾಗಿ ಗೊತ್ತಿದೆ. ರುದ್ರೇಶ್ ಬೆಳೆಯು ತ್ತಿದ್ದ ಸಣ್ಣ ವ್ಯಕ್ತಿ. ಆತನನ್ನು ಸುಫಾರಿ ಕೊಟ್ಟು ಕೊಲ್ಲುವಂತಹ ಅಗತ್ಯ ತನಗೇನಿತ್ತು. ವೈಯಕ್ತಿಕವಾಗಿ ತನಗೆ ಪರಿಚಯವಿದ್ದ ರುದ್ರೇಶ್ ಜೊತೆ ಯಾವುದೇ ದ್ವೇಷವಿರಲಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವರು, ತನ್ನ ಕೈವಾಡವಿರುವ ಬಗ್ಗೆ ಸಿಬಿಐ, ಎನ್‌ಐಎ ಸೇರಿದಂತೆ ಯಾವುದೇ ತನಿಖೆಯನ್ನು ಮಾಡಿಸಲಿ ಎಂದು ಪ್ರತಿಸವಾಲು ಹಾಕಿದರು.
ಶೋಭಾ ವಿರುದ್ಧಮಾನನಷ್ಟಮೊಕದ್ದಮೆ
‘ನನ್ನ ಮೇಲೆ ವೈಯಕ್ತಿಕ ಉದ್ದೇಶಕ್ಕಾಗಿ ಸುಳ್ಳು ಆರೋಪ ಮಾಡಿರುವ ಸಂಸದೆ ಶೋಭಾ ಕರಂದ್ಲಾಜೆ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡುವ ಸಂಬಂಧ ತನ್ನ ವಕೀಲರೊಂದಿಗೆ ಸಮಾಲೋಚನೆ ನಡೆಸುತ್ತಿದ್ದೇನೆ. ರಾಜಕೀಯ ಕಾರಣಕ್ಕಾಗಿ ಆರೋಪ ಮಾಡುವವರಿಗೆ ಮುಂಬರುವ ಚುನಾವಣೆಯಲ್ಲಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ’
-ಆರ್.ರೋಷನ್ ಬೇಗ್, ಸಚಿವ