ವಿಧಾನಪರಿಷತ್‌ಗೆ ನಾಮನಿರ್ದೇಶನ ಮೋಹನ್ ಕೊಂಡಜ್ಜಿ, ನಂಜುಂಡಿಗೆ ಒಲಿದ ಅದೃಷ್ಟ?
ಬೆಂಗಳೂರು, ನ.4: ಕಾಂಗ್ರೆಸ್ ಹಿರಿಯ ನಾಯಕರಾದ ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ ಹಾಗೂ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿಗೆ ವಿಧಾನಪರಿಷತ್ತಿಗೆ ನಾಮನಿರ್ದೇಶನ ಮಾಡುವ ಪ್ರಸ್ತಾವನೆಗೆ ಕಾಂಗ್ರೆಸ್ ಹೈಕಮಾಂಡ್ ಸಮ್ಮತಿ ಸೂಚಿಸಿದೆ ಎಂದು ತಿಳಿದು ಬಂದಿದೆ.
ಹೊಸದಿಲ್ಲಿ ಪ್ರವಾಸದಲ್ಲಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್, ವಿಧಾನಪರಿಷತ್ತಿಗೆ ಸಿ.ಎಂ.ಲಿಂಗಪ್ಪ, ಮೋಹನ್ ಕೊಂಡಜ್ಜಿ ಹಾಗೂ ಕೆ.ಪಿ.ನಂಜುಂಡಿಯನ್ನು ನಾಮನಿರ್ದೇಶನ ಮಾಡುವ ಕುರಿತು ಸಲ್ಲಿಸಿದ ಪ್ರಸ್ತಾವನೆಗೆ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ ಎನ್ನಲಾಗಿದೆ.
ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸೂಕ್ತ ಸ್ಥಾನಮಾನದ ನಿರೀಕ್ಷೆಯಲ್ಲಿದ್ದ ಕೆ.ಪಿ.ನಂಜುಂಡಿಗೆ ಈ ಬಾರಿ ಹೈಕಮಾಂಡ್ ಆರ್ಶೀವಾದ ಮಾಡಿದೆ. ಮೋಹನ್ ಕೊಂಡಜ್ಜಿ ಪರವಾಗಿ ಮುಖ್ಯಮಂತ್ರಿ, ಸಿ.ಎಂ.ಲಿಂಗಪ್ಪ ಪರವಾಗಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ದಿಗ್ವಿಜಯ್‌ಸಿಂಗ್, ಇಂಧನ ಸಚಿವ ಡಿ.ಕೆ.ಶಿವಕುಮಾರ್ ವಕಾಲತ್ತು ನಡೆಸಿದ್ದರು ಎಂದು ತಿಳಿದುಬಂದಿದೆ.