ಮೈಸೂರು ಪ್ರವಾಸದಲ್ಲಿ ಕೇಂದ್ರ ಬರ ಅಧ್ಯಯನ ತಂಡ ಅಧಿಕಾರಿಗಳ ಸಭೆ ರೈತರೊಂದಿಗೆ ಸಮಾಲೋಚನೆ

Update: 2016-11-04 18:40 GMT

ಮೈಸೂರು, ನ.4: ಪ್ರಸ್ತುತ ಆವರಿಸಿರುವ ಬರದ ಭೀಕರತೆಯನ್ನು ಪರಿಶೀಲಿಸಲು ರಾಜ್ಯ ಪ್ರವಾಸ ಕೈಗೊಂಡಿರುವ ಕೇಂದ್ರದ ಬರ ಅಧ್ಯಯನ ತಂಡ ಶುಕ್ರವಾರ ಮೈಸೂರು ತಾಲೂಕಿನ ವಿವಿಧ ಗ್ರಾಮಗಳಿಗೆ ತೆರಳಿ ಬರ ಪರಿಸ್ಥಿತಿಯನ್ನು ಅವಲೋಕಿಸಿತು. ಬರ ನಿರ್ವಹಣೆಗೆ 99.61 ಕೋಟಿ ರೂ. ಬಿಡುಗಡೆಗೆ ಜಿಲ್ಲಾಡಳಿತ ಕೇಂದ್ರ ತಂಡದಲ್ಲಿ ಕೋರಿತು.

ನೆರೆಯ ಚಾಮರಾಜನಗರ ಜಿಲ್ಲೆಯಲ್ಲಿ ಬರ ಅಧ್ಯಯನ ನಡೆಸಿ ಗುರುವಾರ ರಾತ್ರಿ ವೇಳೆಗೆ ಮೈಸೂರು ಜಿಲ್ಲೆಗೆ ಆಗಮಿಸಿದ್ದ ಕೇಂದ್ರದ ಜಲ ಸಂಪನ್ಮೂಲ ಇಲಾಖೆಯ ಜಂಟಿ ಆಯುಕ್ತ ಸತೀಶ್ ಕುಮಾರ್ ಕಂಬೋಜ್ ನೇತೃತ್ವದ ತಂಡವು ಶುಕ್ರವಾರ ಬೆಳಗ್ಗೆ ಮೈಸೂರು ತಾಲೂಕಿನ ಉದ್ಬೂರು, ಕೆಲ್ಲಹಳ್ಳಿ, ಹಾರೋಹಳ್ಳಿಯಲ್ಲಿ ಬರದಿಂದ ನಾಶವಾಗಿರುವ ಬೆಳೆಗಳನ್ನು ಪರಿಶೀಲಿಸಿತು.
  ಮೊದಲಿಗೆ ನಗರದ ನಝರ್‌ಬಾದ್‌ನ ಸರಕಾರಿ ಅತಿಥಿ ಗೃಹದಲ್ಲಿ ಜಿಲ್ಲಾಡಳಿತ ಜಿಲ್ಲೆಯಲ್ಲಿ ಆವರಿಸಿರುವ ಬರ ನಿರ್ವಹಣೆಗೆ 99.61 ಕೋಟಿ ರೂ. ಬಿಡುಗಡೆಗೊಳಿಸಬೇಕು ಎಂದು ಕೇಂದ್ರ ಬರ ಅಧ್ಯಯನ ತಂಡಕ್ಕೆ ಮನವಿ ಸಲ್ಲಿಸಿತು.ಲ್ಲೆಯಲ್ಲಿನ ಬೆಳೆಹಾನಿ, ಮಳೆ ಕೊರತೆ, ಕುಡಿಯುವ ನೀರಿನ ಸಮಸ್ಯೆ ಮತ್ತು ಜಾನುವಾರು ಮೇವಿನ ಸಮಸ್ಯೆ ಕುರಿತು ಕೇಂದ್ರ ತಂಡಕ್ಕೆ ಮನದಟ್ಟು ಮಾಡಿದ ಜಿಲ್ಲಾಡಳಿತವು, ಪರಿಕರ ಸಹಾಯಧನವಾಗಿ 79.53 ಕೋಟಿ ರೂ. ಸೇರಿ, ಒಟ್ಟಾರೆ ಬರ ನಿರ್ವಹಣೆಗೆ 99.61 ಕೋಟಿ ರೂ. ಬಿಡುಗಡೆ ಮಾಡುವಂತೆ ಕೋರಿದರು. ಜಿಲ್ಲೆಯ 1,18,776 ಹೆಕ್ಟೇರ್ ಪ್ರದೇಶದಲ್ಲಿ ಶೇ.33ರಷ್ಟು ಬೆಳೆನಷ್ಟವಾಗಿದೆ. ಈ ಮೊತ್ತವೇ 72.69 ಕೋಟಿಯಷ್ಟಿದೆ.
ನಗರದ ಸರಕಾರಿ ಅತಿಥಿಗೃಹದಲ್ಲಿ ಜಿಲ್ಲಾಧಿಕಾರಿ ಡಿ.ರಣ್‌ದೀಪ್, ಬರ ಪೀಡಿತ ಪ್ರದೇಶಗಳಲ್ಲಿನ ವಾಸ್ತವ ಸ್ಥಿತಿ, ಒಣಗಿದ ಬೆಳೆಯ ಛಾಯಾಚಿತ್ರ ಮತ್ತು ಅಂಕಿ ಅಂಶದ ಸಮೇತ ಕೇಂದ್ರ ಬರ ಅಧ್ಯಯನ ತಂಡಕ್ಕೆ ವಿವರಣೆ ನೀಡಿದರು.ಲ್ಲೆಯಲ್ಲಿ 3,85,725 ಮಂದಿ ರೈತರಿದ್ದು, 3,68,528 ಹೆಕ್ಟೇರ್ ಪ್ರದೇಶ ಕೃಷಿ ಅವಲಂಬಿತವಾಗಿದೆ. ಬರ ಪೀಡಿತ ಪ್ರದೇಶದಲ್ಲಿನ 7,985 ಮಂದಿ ರೈತರು ಮಾತ್ರ ಬೆಳೆವಿಮೆ ಮಾಡಿಸಿಕೊಂಡಿದ್ದು, 32,896 ಹೆಕ್ಟೇರ್ ಪ್ರದೇಶವನ್ನು ಹೊಂದಿದೆ. ಈ ವಿಮೆಯ ಮೊತ್ತ 1,25,35,654 ರೂ. ಆಗಿದೆ. ಜಿಲ್ಲೆಯಲ್ಲಿ ಸರಾಸರಿ ಏಳು ತಾಲೂಕಿನಲ್ಲಿಯೂ ಶೇ.43ರಿಂದ 49ರಷ್ಟು ಮಳೆ ಕೊರತೆ ಇದೆ. ಬಾರಿಯ ಮುಂಗಾರಿನಲ್ಲಿ ಜಿಲ್ಲೆಯ 2,86,220 ಹೆಕ್ಟೇರ್ ಮಳೆಯಾಶ್ರಿತ ಪ್ರದೇಶ ಮತ್ತು 1,14,100 ಹೆಕ್ಟೇರ್ ನೀರಾವರಿ ಪ್ರದೇಶದಲ್ಲಿ ಬಿತ್ತನೆ ಮಾಡಲು ಉದ್ದೇಶಿಸಲಾಗಿತ್ತು. ಆದರೆ , ಈ ಪೈಕಿ ಕ್ರಮವಾಗಿ 2,38,785 ಮತ್ತು 77,665 ಹೆಕ್ಟೇರ್ ಪ್ರದೇಶದಲ್ಲಿ ಮಾತ್ರ ಬಿತ್ತನೆ ಮಾಡಲಾಗಿದೆ. 47,425 ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆ ಮಾಡಿಲ್ಲ ಎಂದು ಅವರು ವಿವರಿಸಿದರು.


  ಪ್ರಮುಖವಾಗಿ ಈ ಬಾರಿಯ ಬರದಲ್ಲಿ ಹತ್ತಿ, ರಾಗಿ, ಮೆಕ್ಕೆಜೋಳ, ಮೇವಿನ ಬೆಳೆಗಳು, ತೊಗರಿ, ಅಲಸಂದೆ ಮುಂತಾದ ಬೆಳೆ ನಷ್ಟವಾಗಿದೆ. ಮೈಸೂರು ತಾಲೂಕಿನ ಜಯಪುರ ಹೋಬಳಿ ವ್ಯಾಪ್ತಿಯ 8 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, 40 ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದ್ದು, ಇದಕ್ಕಾಗಿ 32.40 ಲಕ್ಷ ರೂ. ವೆಚ್ಚವಾಗುತ್ತಿದೆ. ಅಲ್ಲದೆ, ಮುಂದಿನ ದಿನಗಳಲ್ಲಿ ಎಚ್.ಡಿ. ಕೋಟೆಗೆ 71, ಹುಣಸೂರಿಗೆ 79, ಮೈಸೂರಿಗೆ 30, ನಂಜನಗೂಡಿಗೆ 86 ಸೇರಿ ಒಟ್ಟು 266 ಟ್ಯಾಂಕರ್‌ಗಳ ಅಗತ್ಯವಿದೆ. ಪ್ರತೀ ಟ್ಯಾಂಕರ್ ದಿನಕ್ಕೆ ನಾಲ್ಕು ಬಾರಿ ನೀರು ಪೂರೈಸುವುದಾಗಿ ಅವರು ಹೇಳಿದರು.ಲ್ಲೆಯಲ್ಲಿ 5,64,942 ವಿವಿಧ ನಮೂನೆಯ ಜಾನುವಾರುಗಳಿದ್ದು, ಇವುಗಳಿಗೆ ಪ್ರಸ್ತುತ 2,69,282 ಮೆಟ್ರಿಕ್ ಟನ್ ಆಹಾರ ಸಂಗ್ರಹಿಸಲಾಗಿದೆ. ಮುಂದಿನ 13 ವಾರಗಳಿಗೆ ಈ ಆಹಾರ ಸಾಕಾಗಬಹುದು ಎಂದು ಅಂದಾಜಿಸಲಾಗಿದೆ. ಜಿಲ್ಲೆಗೆ 16 ಮೇವು ಬ್ಯಾಂಕ್ ತೆರೆಯಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಕ್ಕಾಗಿ 3.34ಕೋಟಿ ರೂ. ಬೇಕಾಗುತ್ತದೆ. ಅಲ್ಲದೆ, ವೈದ್ಯಕೀಯ ವೆಚ್ಚಕ್ಕೆ 84 ಲಕ್ಷ ರೂ., 44 ಸಾವಿರ ಮಿನಿಕಿಟ್ಸ್ ಖರೀದಿಗೆ 1.10 ಕೋಟಿ ರೂ., ಪೌಷ್ಟಿಕ ತಿನಿಸು ವಿತರಣೆಗೆ 60 ಲಕ್ಷ ರೂ. ಸೇರಿ ಜಾನುವಾರು ರಕ್ಷಣೆಗೆ 5.93 ಕೋಟಿ ರೂ. ಅಗತ್ಯವಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಂಸದ ಆರ್.ಧ್ರುವನಾರಾಯಣ್, ಮೇಯರ್ ಬಿ.ಎಲ್.ಬೈರಪ್ಪ, ಶಾಸಕ ಜಿ.ಟಿ.ದೇವೇಗೌಡ, ಜಿಪಂ ಅಧ್ಯಕ್ಷೆ ನಯೀಮಾ ಸುಲ್ತಾನ, ಕೇಂದ್ರ ಬರ ಅಧ್ಯಯನ ತಂಡದ ಹೈದರಾಬಾದ್ ಆಯಿಲ್ ಸೀಡ್ಸ್‌ನ ನಿರ್ದೇಶಕ ಎಸ್.ಎಂ.ಕೊಲ್ಹಾಟ್ಕರ್, ಜಲ ಸಂಪನ್ಮೂಲ ಇಲಾಖೆಯ ಹಿರಿಯ ಜಂಟಿ ಆಯುಕ್ತ ಸತೀಶ್‌ಕುಮಾರ್ ಕಾಂಬೋಜ್, ಜಿಪಂ ಸಿಇಒ ಪಿ.ಶಿವಶಂಕರ್, ನಗರಪಾಲಿಕೆ ಆಯುಕ್ತ ಜಗದೀಶ್ ಮೊದಲಾದವರು ಉಪಸ್ಥಿತರಿದ್ದರು.

ಮಳೆಯ ಕೊರತೆಯಿಂದ ಆವರಿಸಿರುವ ಬರ ಪರಿಸ್ಥಿತಿಯಲ್ಲಿ ರೈತರು ಬೆಳೆದ ಬೆಳೆ ಒಣಗಿ ನಾಶವಾಗಿರುವುದು ನಮ್ಮ ಕಣ್ಣಿಗೆ ಕಾಣುತ್ತಿದೆ. ಯಾವ ಬೆಳೆ ಎಷ್ಟು ನಷ್ಟವಾಗಿದೆ ಎಂಬುದನ್ನು ಸಮರ್ಪಕವಾಗಿ ವರದಿಯಲ್ಲಿ ಉಲ್ಲೇಖಿಸುತ್ತೇವೆ.

 -ಸತೀಶ್‌ಕುಮಾರ್ ಕಾಂಬೋಜ್, ಜಂಟಿ ಆಯುಕ್ತರು, ಕೇಂದ್ರ ಜಲ ಸಂಪನ್ಮೂಲ ಇಲಾಖೆ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News