ಟಿಪ್ಪು ಕೊಡಗಿನಲ್ಲಿ ಹಿಂದೂಗಳ ಮತಾಂತರ ಮಾಡಿಲ್ಲ: ಎಂ.ಎಸ್.ಸತ್ಯು

Update: 2016-11-06 13:15 GMT

ಬೆಂಗಳೂರು, ನ.6: ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಹಿಂದೂಗಳನ್ನು ಮತಾಂತರ ಮಾಡಿದನು ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ, ಇಂದಿಗೂ ಅಲ್ಲಿ ಕೊಡವ ಮುಸ್ಲಿಮರು ಎಲ್ಲಿಯೂ ಕಾಣಸಿಗುವುದಿಲ್ಲ. ಅಲ್ಲಿ ಇರುವುದು ಕೇರಳ ಮುಸ್ಲಿಮರಾಗಿದ್ದಾರೆ. ಟಿಪ್ಪು ಸುಲ್ತಾನ್ ಮುಸ್ಲಿಮ್ ಎನ್ನುವ ಕಾರಣಕ್ಕೆ ಆತನನ್ನು ವಿರೋಧಿಸುವುದು ಸರಿಯಲ್ಲ ಎಂದು ಚಲನಚಿತ್ರ ನಿರ್ದೇಶಕ ಎಂ.ಎಸ್.ಸತ್ಯು ಆಕ್ಷೇಪಿಸಿದ್ದಾರೆ.

ರವಿವಾರ ನಗರದ ಸಚಿವಾಲಯ ಕ್ಲಬ್‌ನಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೊಡವರು ಮೂಲತಃ ಭಾರತಿಯರಲ್ಲ ಹಾಗೂ ಹಿಂದೂಗಳಲ್ಲ ಎಂಬುದಕ್ಕೆ ಗೆಜೆಟ್‌ನಲ್ಲಿ ಹಲವು ಸಾಕ್ಷಗಳಿವೆ ಎಂದು ಅವರು ಪ್ರತಿಪಾದಿಸಿದ್ದಾರೆ.

ಯುರೇಷ್ಯಾದಿಂದ ಬಂದ ಒಂದು ಸಮುದಾಯ ಕೊಡಗಿನಲ್ಲಿ ನೆಲೆಸಿದ್ದಾರೆ. ಅಲ್ಲೇ ಅಭಿವೃದ್ಧಿಗೊಂಡು ಕಾಲಾನಂತರದಲ್ಲಿ ಹಿಂದೂ ಧರ್ಮಕ್ಕೆ ಮತಾಂತರಗೊಂಡು, ಓಂಕಾರೇಶ್ವರ ದೇವಸ್ಥಾನವನ್ನು ಕಟ್ಟಿ ಪೂಜಿಸತೊಡಗಿದರು. ಇವರು ಆಡಳಿತ ನಿರ್ವಹಣೆಗಾಗಿ ಬನವಾಸಿಯಿಂದ ಒಂದು ಪಂಗಡವನ್ನು ಕರೆತಂದು ನಿಯೋಜಿಸಿಕೊಂಡರು ಎಂದು ತಿಳಿಸಿದರು.

ಕೊಡಗನ್ನು ಚಿಕ್ಕವೀರ ರಾಜೇಂದ್ರ ಹದಿನಾಲ್ಕು ವರ್ಷಗಳು ಆಡಳಿತ ಮಾಡುತ್ತಾನೆ. ಬ್ರಿಟಿಷರು ಆತನನ್ನು ಸೋಲಿಸುತ್ತಾರೆ. ನಂತರ ಆತ ಇಂಗ್ಲೆಂಡ್‌ಗೆ ಹೋಗಿ ಅಲ್ಲಿಯೆ ಸಾವನ್ನಪ್ಪುತ್ತಾನೆ. ಚಿಕ್ಕವೀರ ರಾಜೇಂದ್ರನಿಗೆ ಪುಟ್ಟಮ್ಮ ಗೌರಮ್ಮ ಎಂಬ ಮಗಳಿರುತ್ತಾರೆ. ಆಕೆ ಬ್ರಿಟಿಷ್ ಅಧಿಕಾರಿಯನ್ನು ಮದುವೆಯಾಗುತ್ತಾಳೆ. ಇದು ಕೊಡಗಿನ ವಾಸ್ತವ ಇತಿಹಾಸವೆಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News