ಟಿಪ್ಪುಸುಲ್ತಾನ್ ಜಯಂತಿ : ಮುನ್ನೆಚ್ಚರಿಕೆ ಕ್ರಮವಾಗಿ ಹಲವರ ವಶ?
ಬೆಂಗಳೂರು, ನ.7: ‘ಮೈಸೂರು ಹುಲಿ’ ಟಿಪ್ಪುಸುಲ್ತಾನ್ ಜಯಂತಿ ಸಂದರ್ಭದಲ್ಲಿ ಯಾವುದೆ ಅಹಿತಕರ ಘಟನೆಗಳು ಸಂಭವಿಸದಂತೆ ಮುನ್ನೆಚ್ಚರಿಕೆ ಕ್ರಮವಾಗಿ ರಾಜ್ಯದ ವಿವಿಧ ಭಾಗಗಳಲ್ಲಿ ಒಂದು ಸಾವಿರಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ವರ್ಷ ಟಿಪ್ಪುಸುಲ್ತಾನ್ ಜಯಂತಿ ಸಂದರ್ಭದಲ್ಲಿ ಮಡಿಕೇರಿ ಸೇರಿದಂತೆ ವಿವಿಧ ಭಾಗಗಳಲ್ಲಿ ನಡೆದಂತಹ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ, ಈ ಬಾರಿ ಪೊಲೀಸರು ಭದ್ರತೆಯನ್ನು ಮತ್ತಷ್ಟು ಬಿಗಿಗೊಳಿಸಿದ್ದಾರೆ.
ಕೇಂದ್ರದ 7 ತುಕಡಿಗಳನ್ನು ಈಗಾಗಲೆ ಭದ್ರತೆಗೆ ನಿಯೋಜಿಸಲಾಗಿದ್ದು, ರಾಜ್ಯಕ್ಕೆ ಪ್ರವೇಶ ಪಡೆಯುವಂತಹ ಎಲ್ಲ ಗಡಿಭಾಗಗಳಲ್ಲಿ ಇರುವಂತಹ ಚೆಕ್‌ಪೋಸ್ಟ್‌ಗಳಲ್ಲಿ ಸಿಸಿಟಿವಿ ಕ್ಯಾಮರಾಗಳನ್ನು ಪೊಲೀಸರು ಅಳವಡಿಸಿದ್ದು, ಹೊರರಾಜ್ಯಗಳಿಂದ ಬರುವಂತಹ ವಾಹನಗಳನ್ನು ತೀವ್ರ ತಪಾಸಣೆಗೊಳಪಡಿಸುತ್ತಿದ್ದಾರೆ.
ಎಲ್ಲ ಜಿಲ್ಲೆಗಳಲ್ಲಿ ಕಾನೂನು, ಸುವ್ಯವಸ್ಥೆ ಕಾಪಾಡುವ ಜವಾಬ್ದಾರಿಯನ್ನು ರಾಜ್ಯ ಸರಕಾರ, ಎಡಿಜಿಪಿ ಹಾಗೂ ಐಜಿಪಿ ದರ್ಜೆಯ ಅಧಿಕಾರಿಗಳಿಗೆ ವಹಿಸಿದೆ. ಕೆಲವು ಜಿಲ್ಲೆಗಳಲ್ಲಿ ನಿಷೇಧಾಜ್ಞೆಯನ್ನು ಜಾರಿಗೊಳಿಸಲಾಗಿದೆ. ಅಲ್ಲದೆ, ಟಿಪ್ಪು ಜಯಂತಿ ಅಂಗವಾಗಿ ಯಾವುದೆ ರೀತಿಯ ಮೆರವಣಿಗೆಗಳನ್ನು ನಡೆಸಲು ಜಿಲ್ಲಾಡಳಿತ ಅನುಮತಿ ನಿರಾಕರಿಸಿದೆ.
ಟಿಪ್ಪು ಜಯಂತಿ ಸಂದರ್ಭದಲ್ಲಿ ರಾಜ್ಯದ ಸೂಕ್ಷ್ಮ ಹಾಗೂ ಅತಿಸೂಕ್ಷ್ಮ ಪ್ರದೇಶಗಳಲ್ಲಿ ಕೋಮುಗಲಭೆಗಳನ್ನು ಸೃಷ್ಟಿಸಲು ಸಮಾಜಘಾತುಕ ಶಕ್ತಿಗಳು ಯತ್ನಿಸುವ ಕುರಿತು ಗುಪ್ತಚರ ವಿಭಾಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ಗೆ ಪ್ರತ್ಯೇಕ ವರದಿಗಳನ್ನು ನೀಡಿದೆ ಎನ್ನಲಾಗಿದೆ.
ಕೊಡಗು, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ, ಚಿತ್ರದುರ್ಗ, ಹುಬ್ಬಳ್ಳಿ-ಧಾರವಾಡ, ಚಿಕ್ಕಮಗಳೂರು ಸೇರಿದಂತೆ ವಿವಿಧೆಡೆ ಗಲಭೆಗಳು ಸಂಭವಿಸುವ ಸಾಧ್ಯತೆಯಿರುವ ಕುರಿತು ಗುಪ್ತಚರ ವಿಭಾಗವು ತನ್ನ ವರದಿಯಲ್ಲಿ ಆತಂಕ ವ್ಯಕ್ತಪಡಿಸಿದೆ.
ಟಿಪ್ಪುಸುಲ್ತಾನ್‌ರ ವ್ಯಕ್ತಿತ್ವದ ಬಗ್ಗೆ ಜನಸಾಮಾನ್ಯರಲ್ಲಿ ನಕಾರಾತ್ಮಕ ಮನೋಭಾವನೆ ಬೆಳೆಸುವಲ್ಲಿ ಕೆಲವು ಸಂಘಟನೆಗಳು ಸಕ್ರಿಯವಾಗಿವೆ. ಇದರಿಂದಾಗಿ, ಕಳೆದ ಬಾರಿಗಿಂತ ಈ ವರ್ಷ ಹೆಚ್ಚು ವಿರೋಧಗಳು ಎದುರಾಗಬಹುದು. ಹಿಂದೂಪರ ಸಂಘಟನೆಗಳು ಮಡಿಕೇರಿಯಲ್ಲಿ ಕುಟ್ಟಪ್ಪ ಸಾವಿನ ಸ್ಮರಣೆಯಲ್ಲಿ ಹುತಾತ್ಮ ದಿನಾಚರಣೆ ಆಚರಿಸಲು ನಿರ್ಧರಿಸಿರುವುದರಿಂದ ಪರಿಸ್ಥಿತಿ ಬಿಗಡಾಯಿಸಬಹುದು ಎಂದು ಅಂದಾಜಿಸಲಾಗಿದೆ.