ರಾಜ್ಯದಲ್ಲಿ ಬ್ರಿಟನ್ ಬಂಡವಾಳ ಹೂಡಿಕೆ ನಿರೀಕ್ಷೆ : ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ

Update: 2016-11-08 17:45 GMT

ಬೆಂಗಳೂರು, ನ. 8: ರಾಜ್ಯದಲ್ಲಿನ ಸ್ಮಾರ್ಟ್‌ಸಿಟಿ ಹಾಗೂ ನವೀಕೃತ ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಬ್ರಿಟನ್ ಬಂಡವಾಳ ಹೂಡಿಕೆ ನಿರೀಕ್ಷೆಯಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಭರವಸೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸಮೀಪದಲ್ಲಿನ ಖಾಸಗಿ ಹೊಟೇಲ್‌ನಲ್ಲಿ ಏರ್ಪಡಿಸಿದ್ದ ಯು.ಕೆ.ಪ್ರಧಾನಿ ಥೆರೆಸಾ ಮೆ ಅವರೊಂದಿಗಿನ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ ಮಾತನಾಡಿದ ಅವರು, ಬ್ರಿಟನ್‌ನೊಂದಿಗೆ ಐತಿಹಾಸಿಕ ಸಂಬಂಧವಿದ್ದು, ಉಭಯ ರಾಷ್ಟ್ರಗಳ ಮಧ್ಯೆ ಉತ್ತಮ ಬಾಂಧವ್ಯವಿದೆ ಎಂದು ಬಣ್ಣಿಸಿದರು.

ಹೊಸದಿಲ್ಲಿಗೆ ಭೇಟಿ ನೀಡಿದ ಬಳಿಕ ಬ್ರಿಟನ್ ಪ್ರಧಾನಿ ಕರ್ನಾಟಕ ರಾಜ್ಯಕ್ಕೆ ಭೇಟಿ ನೀಡುತ್ತಿರುವುದು ಅತ್ಯಂತ ಸಂತಸ ತಂದಿದೆ ಎಂದ ಅವರು, ಬೆಂಗಳೂರು ಸಂಶೋಧನೆ, ಮಾಹಿತಿ ತಂತ್ರಜ್ಞಾನ, ವೈಮಾನಿಕ ಕ್ಷೇತ್ರ, ಬಯೋಟೆಕ್ನಾಲಜಿ, ಜೀವ ವಿಜ್ಞಾನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮುಂಚೂಣಿಯಲ್ಲಿದೆ ಎಂದರು.

ಅಲ್ಲದೆ, ಐಟಿ-ಬಿಟಿ ಕ್ಷೇತ್ರದಲ್ಲಿಯೂ ಮುಂಚೂಣಿಯಲ್ಲಿರುವ ರಾಜ್ಯದ ವಿಪ್ರೊ, ಇನ್ಫೋಸಿಸ್, ಬಯೋಕಾನ್ ಸೇರಿದಂತೆ ಪ್ರತಿಷ್ಠಿತ ಕಂಪೆನಿಗಳು ಬ್ರಿಟನ್ ದೇಶದಲ್ಲಿ ಹೂಡಿಕೆ ಮಾಡಿದ್ದು, ಹೂಡಿಕೆ ಕೇತ್ರದಲ್ಲಿ ಇದೊಂದು ದ್ವಿಪಕ್ಷೀಯ ಒಪ್ಪಂದ ಎಂದು ಅವರು ತಿಳಿಸಿದರು.

ದಕ್ಷಿಣ ಹಾಗೂ ಪಶ್ಚಿಮ ಭಾರತದಲ್ಲಿ ಮೂಲಸೌಕರ್ಯಗಳ ಕ್ಷೇತ್ರದಲ್ಲಿ ಮುಂದಿನ ದಿನಗಳಲ್ಲಿ ಬ್ರಿಟನ್ ಹೂಡಿಕೆಗೆ ನಿರೀಕ್ಷೆ ಹೊಂದಲಾಗಿದೆ. ಸಾಂಸ್ಕೃತಿಕವಾಗಿಯೂ ಹಿಂದಿನಿಂದ ಬ್ರಿಟನ್‌ನೊಂದಿಗೆ ಉತ್ತಮ ಸಂಪರ್ಕವಿದೆ ಎಂದ ಅವರು, ವಿಜಯ ನಗರದ ಹಂಪಿಯನ್ನು ಯುನೆಸ್ಕೋ ಪಟ್ಟಿಗೆ ಸೇರ್ಪಡೆಗೊಳಿಸಿದೆ.

ಅಲ್ಲದೆ, ಮೈಸೂರು, ವಿಜಯಪುರದ ಗೋಲ್ ಗುಂಬಸ್ ವಿಶ್ವಮಾನ್ಯತೆ ಪಡೆದಿದೆ. ಪ್ರವಾಸೋದ್ಯಮ ಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ ಹೊಂದಲಾಗಿದೆ ಎಂದ ಅವರು, ಇಂಗ್ಲೆಂಡ್ ವ್ಯಾಪಾರಾಭಿವೃದ್ಧಿಯಲ್ಲಿ ಮುಂಚೂಣಿ ದೇಶವಾಗಿದೆ. ಇತ್ತೀಚೆಗೆ ಬೆಂಗಳೂರಿನಲ್ಲಿರುವ ಬ್ರಿಟಿಷ್ ಹೈಕಮಿಷನ್ ಸಿದ್ಧಪಡಿಸಿರುವ ವರದಿ ಕರ್ನಾಟಕ ರಾಜ್ಯ ಬಂಡವಾಳ ಹೂಡಿಕೆಗೆ ಪೂರಕ ವಾತಾವರಣವಿದೆ ಎಂಬುದನ್ನು ಸ್ಪಷ್ಟ ಎಂದು ಉಲ್ಲೇಖಿಸಿದರು.

2017ರ ಫೆಬ್ರವರಿಯಲ್ಲಿ ಬೆಂಗಳೂರಿನಲ್ಲಿ ಏರ್ ಶೋ ನಡೆಯಲಿದ್ದು, ಈ ಮೊದಲು ಈ ಪ್ರದರ್ಶನದಲ್ಲಿ ಇಂಗ್ಲೆಂಡ್‌ನ ಹಲವು ಕಂಪೆನಿಗಳು ಪಾಲ್ಗೊಂಡಿವೆ. ಮಾತ್ರವಲ್ಲ, ಆ ಕ್ಷೇತ್ರದಲ್ಲಿ ಹೂಡಿಕೆಯನ್ನು ಮಾಡಿದೆ. ಈ ಬಾರಿಯೂ ಮತ್ತಷ್ಟು ಕಂಪೆನಿಗಳ ರಾಜ್ಯದಲ್ಲಿ ವೈಮಾನಿಕ ಪ್ರದರ್ಶನದಲ್ಲಿ ಪಾಲ್ಗೊಳ್ಳಬೇಕು ಎಂದು ಆಹ್ವಾನ ನೀಡಿದರು.

ವೀಸಾ ನೀತಿ ಸರಳೀಕರಣಕ್ಕೆ ಆಗ್ರಹ: ಬ್ರಿಟನ್ ವೀಸಾ ನೀತಿಯನ್ನು ಬದಲಾವಣೆ ಮಾಡಿದ್ದು, ನ.24ರ ನಂತರ 30 ಸಾವಿರ ಪೌಂಡ್‌ಗಿಂತ ಹೆಚ್ಚು ವೇತನ ಪಡೆಯುವವರು ಐಸಿಟಿ ವೀಸಾಗೆ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೊದಲು 20,800 ಪೌಂಡ್ ವೇತನದಾರರಿಗೂ ವೀಸಾ ನೀಡಲಾಗುತ್ತಿತ್ತು. ಇದನ್ನು ಬದಲಾವಣೆ ಮಾಡಿ ಹಿಂದಿನ ಪದ್ದತಿಯನ್ನೇ ಮುಂದುವರಿಸಬೇಕೆಂದು ಕೋರಿದರು.

 ಧಾರವಾಡದ ಸಮೀಪದಲ್ಲಿ 400ಎಕರೆಯಲ್ಲಿ ಹೆಲ್ತ್‌ಸಿಟಿ ಯೋಜನೆಗೆ ದ್ವಿಪಕ್ಷೀಯ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಅಲ್ಲದೆ, ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯ, ಉನ್ನತ ಶಿಕ್ಷಣ, ಆರೋಗ್ಯ ಕ್ಷೇತ್ರಗಳಲ್ಲೂ ಇಂಗ್ಲೆಂಡ್‌ನ ಬಂಡವಾಳ ಹೂಡಿಕೆಯನ್ನು ನಿರೀಕ್ಷೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ಸಭೆಯಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಆರ್.ವಿ.ದೇಶಪಾಂಡೆ, ಪ್ರವಾಸೋದ್ಯಮ ಮತ್ತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ, ಮೇಲ್ಮನೆ ಸದಸ್ಯ ಕೆ.ಗೋವಿಂದರಾಜು, ಮುಖ್ಯಮಂತ್ರಿಗಳ ಕಾರ್ಯದರ್ಶಿ ಅತೀಕ್ ಅಹ್ಮದ್ ಸೇರಿ ಇನ್ನಿತರ ಗಣ್ಯರು ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News