ಹಿಂಗಾರು ಕೈಕೊಡುವ ಸಾಧ್ಯತೆ; ಕೇಂದ್ರ ರಾಜ್ಯದ ನೆರವಿಗೆ ಧಾವಿಸಲಿ: ಸಿದ್ದರಾಮಯ್ಯ

Update: 2016-11-14 08:30 GMT

ಬೆಂಗಳೂರು, ನ.14: ರಾಜ್ಯದಲ್ಲಿ ಈ ಬಾರಿ ಹಿಂಗಾರು ಬೆಳೆಗಳೂ ಕೈ ಕೊಡುವ ಲಕ್ಷಣ ಕಾಣುತ್ತಿರುವುದರಿಂದ ಕೇಂದ್ರ ಸರ್ಕಾರ ಕೂಡಲೇ ನೆರವಿಗೆ ಧಾವಿಸಬೇಕು. ಈ ಬಗ್ಗೆ ಶೀಘ್ರವೇ ಹೊಸದಾಗಿ ಮನವಿ ಪತ್ರವನ್ನೂ ಕೇಂದ್ರಕ್ಕೆ ಸಲ್ಲಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮಾಜಿ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿ ನೆಹರೂ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಅವರು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡುತ್ತಿದ್ದರು. ರಾಜ್ಯದಲ್ಲ್ಲಿ ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿ ಎರಡೂ ಉಂಟಾಗಿದೆ. ಎನ್‌ಡಿಆರ್

 ಎಫ್ ನಿಯಮಾವಳಿಗಳ ಪ್ರಕಾರ ಅನಾವೃಷ್ಟಿಯಿಂದ ಆಗಿರುವ ಹಾನಿಗೆ 4,656 ಕೋಟಿ ರೂ. ಮತ್ತು ಅತಿವೃಷ್ಟಿಯಿಂದ ಸಂಭವಿಸಿರುವ ನಷ್ಟಕ್ಕೆ 380 ಕೋಟಿ ರೂ.ಗಳ ಪರಿಹಾರವನ್ನು ಕೇಂದ್ರದಿಂದ ಕೋರಲಾಗಿದೆ. ಇತ್ತೀಚೆಗೆ ಕೇಂದ್ರ ತಂಡ ರಾಜ್ಯದಲ್ಲಿ ಅಧ್ಯಯನ ನಡೆಸಿದ್ದು, ವಸ್ತುಸ್ಥಿತಿ ಅವರಿಗೆ ಮನವರಿಕೆ ಆಗಿದೆ ಎಂದು ಹೇಳಿದರು.

ಸಿದ್ಧತೆ ಮಾಡಿಕೊಳ್ಳಬೇಕಿತ್ತು:

ಐನೂರು ಮತ್ತು ಒಂದು ಸಾವಿರ ರೂಪಾಯಿಯ ನೋಟುಗಳನ್ನು ರದ್ದು ಮಾಡುವ ಮುನ್ನ ಕೇಂದ್ರ ಸರ್ಕಾರ ಪೂರ್ವ ಸಿದ್ಧತೆ ಮಾಡಿಕೊಳ್ಳಬೇಕಿತ್ತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ. ಪೂರ್ವಸಿದ್ಧತೆ ಇಲ್ಲದೆ ರದ್ದು ಮಾಡಿದ್ದರಿಂದ ಜನ ಸಾಮಾನ್ಯರಿಗೆ ತೊಂದರೆಯಾಗಿದೆ. ಅವರಿಗೆ ಸರ್ಕಾರ ಮತ್ತು ಪಕ್ಷದ ವತಿಯಿಂದ ಯಾವ ರೀತಿ ಸಹಾಯ ಮಾಡಬಹುದು ಎಂಬ ಬಗ್ಗೆ ಅಧಿಕಾರಿಗಳ ಜೊತೆ ಸಭೆ ನಡೆಸುತ್ತೇನೆ ಎಂದರು. ಕೇಂದ್ರದ ನಿರ್ಧಾರವನ್ನು ವಿರೋಧ ಮಾಡುವುದಿಲ್ಲ. ನಾನು ಈಗಾಗಲೇ ಸ್ವಾಗತ ಮಾಡಿದ್ದೇನೆ. ಆದರೆ ಪೂರ್ವ ಸಿದ್ಧತೆ ಮಾಡಿಕೊಳ್ಳದಿದ್ದರೆ ಜನರಿಗೆ ಈ ರೀತಿ ತೊಂದರೆಯಾಗುತ್ತದೆ ಎಂದು ಹೇಳಿದರು. ಬದಲಾವಣೆ ತಂದ ನೆಹರೂ :

ದೇಶದ ಮೊದಲ ಪ್ರಧಾನಿಯಾಗಿ 17 ವರ್ಷ ಆಡಳಿತ ನಡೆಸಿದ ನೆಹರೂ ಅವರು ಆಧುನಿಕ ಭಾರತ ನಿರ್ಮಾಣದ ರುವಾರಿ ಎಂದು ಮುಖ್ಯಮಂತ್ರಿಯವರು ಬಣ್ಣಿಸಿದರು. ವಿಜ್ಞಾನ ತಂತ್ರಜ್ಞಾನದ ಬೆಳವಣಿಗೆಗೆ ಅವರು ಅಡಿಪಾಯ ಹಾಕಿದರು. ಜೊತೆಗೆ ಪಂಚವಾರ್ಷಿಕ ಯೋಜನೆ ಮೂಲಕ ದೇಶದಲ್ಲಿ ಬದಲಾವಣೆ ತಂದರು ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News