ರಾಜ್ಯದ ನೆರವಿಗೆ ಕೇಂದ್ರ ಧಾವಿಸಲಿ: ಮುಖ್ಯಮಂತ್ರಿ ಸಿದ್ದರಾಮಯ್ಯ

Update: 2016-11-15 07:10 GMT

ಬೆಂಗಳೂರು, ನ. 14: ರಾಜ್ಯದಲ್ಲಿ ಈ ಬಾರಿ ಹಿಂಗಾರು ಬೆಳೆಗಳೂ ಕೈಕೊಡುವ ಲಕ್ಷಣಗಳಿದ್ದು, ಕೇಂದ್ರ ಸರಕಾರ ಕೂಡಲೇ ಕರ್ನಾಟಕದ ನೆರವಿಗೆ ಧಾವಿಸಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದಿಲ್ಲಿ ಮನವಿ ಮಾಡಿದ್ದಾರೆ.

ಸೋಮವಾರ ಮಾಜಿ ಪ್ರಧಾನಿ ಜವಾಹರ ಲಾಲ್ ನೆಹರೂ ಜನ್ಮದಿನದ ಅಂಗವಾಗಿ ವಿಧಾನಸೌಧದ ಆವರಣದಲ್ಲಿನ ನೆಹರೂ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಳೆದ ವರ್ಷ ಹಿಂಗಾರು ಬೆಳೆ ಆಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 139 ತಾಲೂಕುಗಳಲ್ಲಿ ಮಳೆ ಕೊರತೆ ಎದುರಾಗಿದ್ದು, ಹಿಂಗಾಗು ಬೆಳೆ ಕೈಗೆ ಸಿಗುವು ಸಾಧ್ಯತೆಗಳಿಲ್ಲ ಎಂದರು.

 ಪರಿಹಾರಕ್ಕೆ ಮನವಿ: ರಾಜ್ಯದಲ್ಲಿ ಈ ವರ್ಷ ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದ ಸುಮಾರು 16 ಸಾವಿರ ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಿದ್ದು, ಎನ್‌ಡಿಆರ್‌ಎಫ್ ನಿಯಮಾವಳಿಯನ್ವಯ 5036 ಕೋಟಿ ರೂ.ಪರಿಹಾರ ಕೋರಿ ಕೇಂದ್ರಕ್ಕೆ ಮನವಿ ಸಲ್ಲಿಸಲಾಗಿದೆ. ಇತ್ತೀಚೆಗೆ ಕೇಂದ್ರ ತಂಡ ರಾಜ್ಯದಲ್ಲಿ ಅಧ್ಯಯನ ನಡೆಸಿದ್ದು, ವಸ್ತುಸ್ಥಿತಿ ಅವರಿಗೆ ಮನವರಿಕೆ ಆಗಿದೆ ಎಂದರು.

ರಾಜ್ಯದಲ್ಲಿ ಈ ವರ್ಷ ಬರಗಾಲ ಭೀಕರವಾಗಿದೆ. ಹೀಗಾಗಿ ಕೇಂದ್ರ ಸರಕಾರ ಕೂಡಲೇ ನಮ್ಮ ನೆರವಿಗೆ ಧಾವಿಸಬೇಕು ಎಂದು ಆಗ್ರಹಿಸಿ ಮುಖ್ಯಮಂತ್ರಿ, ಶೀಘ್ರವೇ ಹೊಸದಾಗಿ ಮನವಿ ಪತ್ರವನ್ನೂ ಕೇಂದ್ರಕ್ಕೆ ಸಲ್ಲಿಸುವುದು. ಕೇಂದ್ರ ಸರಕಾರ ಹೆಚ್ಚಿನ ನೆರವು ನೀಡುವ ಮೂಲಕ ಸಂಕಷ್ಟದಲ್ಲಿರುವ ರಾಜ್ಯದ ಜನತೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

ಬದಲಾವಣೆ ತಂದ ನೆಹರೂ: ದೇಶದ ಮೊಟ್ಟ ಮೊದಲ ಪ್ರಧಾನಿಯಾದ ನೆಹರೂ ಹದಿನೇಳು ವರ್ಷ ಆಡಳಿತ ನಡೆಸಿದರು. ಅವರು ಆಧುನಿಕ ಭಾರತ ನಿರ್ಮಾಣದ ರೂವಾರಿ. ವಿಜ್ಞಾನ-ತಂತ್ರಜ್ಞಾನದ ಬೆಳವಣಿಗೆಗೆ ಅವರು ಅಡಿಪಾಯ ಹಾಕಿದರು. ಜೊತೆಗೆ ಪಂಚವಾರ್ಷಿಕ ಯೋಜನೆ ಮೂಲಕ ದೇಶದಲ್ಲಿ ಬದಲಾವಣೆ ತಂದರು ಎಂದು ಸಿದ್ದರಾಮಯ್ಯ ಸ್ಮರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News