ತ್ರಿವಳಿ ತಲಾಕ್ ಬಗ್ಗೆ ಸುಪ್ರೀಂಕೋರ್ಟ್ ಹೆಸರಲ್ಲಿ ಅಪಪ್ರಚಾರ: ಮೌಲಾನ ಮುಸ್ತಫಾ ರಿಫಾಯಿ
ಬೆಂಗಳೂರು, ನ.15: ತ್ರಿವಳಿ ತಲಾಕ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ನೀಡಿದೆ ಎಂದು ಕಿಡಿಗೇಡಿಗಳು ಸಾಮಾಜಿಕ ಜಾಲ ತಾಣಗಳಾದ ಫೇಸ್‌ಬುಕ್ ಹಾಗೂ ವಾಟ್ಸಪ್‌ನಲ್ಲಿ ಅಪಪ್ರಚಾರ ನಡೆಸುತ್ತಿದ್ದಾರೆ ಎಂದು ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯ ಸಂಸ್ಥಾಪಕ ಸದಸ್ಯ ಮೌಲಾನ ಮುಸ್ತಫಾ ರಿಫಾಯಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರವು ತ್ರಿವಳಿ ತಲಾಕ್ ವಿಚಾರದಲ್ಲಿ ಸುಪ್ರೀಂಕೋರ್ಟ್‌ನಲ್ಲಿ ದಾಖಲಿಸಿರುವ ಪ್ರಕರಣದ ವಿರುದ್ಧ ಅಖಿಲ ಭಾರತ ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯು ಅರ್ಜಿ ಸಲ್ಲಿಸಿದೆ. ಆದರೆ, ಸುಪ್ರೀಂಕೋರ್ಟ್‌ನಲ್ಲಿ ಈ ಅರ್ಜಿಯ ವಿಚಾರಣೆ ಯಾವಾಗ ನಡೆಯಲಿದೆ ಎಂಬುದು ಇನ್ನು ನಿಗದಿಯಾಗಿಲ್ಲ ಎಂದರು.
ಮುಸ್ಲಿಮ್ ವೈಯಕ್ತಿಕ ಕಾನೂನು ಮಂಡಳಿಯಲ್ಲಿ ಯಾವುದೆ ಬಗೆಯ ಹಸ್ತಕ್ಷೇಪವನ್ನು ನಾವು ಸಹಿಸುವುದಿಲ್ಲ. ಈ ಸಂಬಂಧ ದೇಶಾದ್ಯಂತ ಸಂಗ್ರಹಿಸಿರುವ ಸಹಿಗಳನ್ನು ಕೇಂದ್ರ ಕಾನೂನು ಆಯೋಗಕ್ಕೆ ಸಲ್ಲಿಸುತ್ತಿದ್ದೇವೆ. ನ.30ರವರೆಗೆ ಈ ಚಳವಳಿ ಮುಂದುವರೆಯಲಿದೆ ಎಂದು ಅವರು ಹೇಳಿದರು.
ಯಾರೋ ಕೆಲ ಕಿಡಿಗೇಡಿಗಳು ಸಾಮಾಜಿಕ ಜಾಲತಾಣಗಳ ಮೂಲಕ ತ್ರಿವಳಿ ತಲಾಕ್ ವಿಚಾರದಲ್ಲಿ ಸುಪ್ರೀಂಕೋರ್ಟ್ ತನ್ನ ಆದೇಶವನ್ನು ನೀಡಿದೆ ಎಂದು ಅಪಪ್ರಚಾರ ಮಾಡುವ ಮೂಲಕ, ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇಂತಹ ವದಂತಿಗಳಿಗೆ ಯಾರೂ ಕಿವಿಗೊಡಬಾರದು ಎಂದು ಮೌಲಾನ ಮುಸ್ತಫಾ ರಿಫಾಯಿ ಮನವಿ ಮಾಡಿದರು.