ಪೊಲೀಸರಿಗೆ ಬಂಪರ್ ಕೊಡುಗೆ ಘೋಷಿಸಿದ ರಾಜ್ಯ ಸರಕಾರ!

Update: 2016-11-18 06:54 GMT

ಬೆಂಗಳೂರು, ನ.18: ರಾಜ್ಯದ ಪೊಲೀಸ್ ಸಿಬ್ಬಂದಿಗೆ ಕಾರ್ತಿಕ ಮಾಸದ ಬಂಪರ್ ಕೊಡುಗೆಯನ್ನು ಸರಕಾರ ಘೋಷಣೆ ಮಾಡಿದೆ.
ಪೊಲೀಸ್ ಪೇದೆಯಿಂದ ಸಬ್ ಇನ್‌ಸ್ಪೆಕ್ಟರ್ ವರೆಗಿನ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ನೀಡುತ್ತಿದ್ದ ವಿವಿಧ ಭತ್ತೆಗಳ ಪ್ರಮಾಣ ಹೆಚ್ಚಿಸಿ ಪ್ರತಿಯೊಬ್ಬರಿಗೂ ತಿಂಗಳಿಗೆ 2 ಸಾವಿರ ರೂ. ಹೆಚ್ಚುವರಿ ಭತ್ತೆ ನೀಡಲು ಸರ್ಕಾರ ತೀರ್ಮಾನಿಸಿದೆ. ಈ ಎಲ್ಲ ಹೆಚ್ಚುವರಿ ಭತ್ತೆಗಳು ಡಿಸೆಂಬರ್ 1ರಿಂದ ಜಾರಿಗೆ ಬರಲಿವೆ ಎಂದು ಮುಖ್ಯಮಂತ್ರಿ ಗೃಹ ಕಚೆರಿ ಕೃಷ್ಣಾದಲ್ಲಿಂದು ಕರೆದ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಪ್ರಕಟಿಸಿದರು.
ಮುಂದಿನ ವರ್ಷ ರಾಜ್ಯ ವೇತನ ಆಯೋಗ ರಚನೆ ಮಾಡಲಿರುವುದರಿಂದ ಪೊಲೀಸರ ವೇತನ ಪರಿಷ್ಕರಣೆ ಮಾಡಬೇಕು ಎಂಬ ಪೊಲೀಸರ ಬೇಡಿಕೆಯನ್ನು ಸದ್ಯಕ್ಕೆ ಈಡೇರಿಸಲು ಸಾಧ್ಯವಾಗುತ್ತಿಲ್ಲ. ಅದರ ಬದಲಿಗೆ ಹೆಚ್ಚುವರಿ ಭತ್ತೆಗಳನ್ನು ನೀಡಲು ತೀರ್ಮಾನಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.

ಸಮವಸ್ತ್ರ ಭತ್ತೆಯಲ್ಲೂ ಹೆಚ್ಚಳ

ಪ್ರಸ್ತುತ ಸಮವಸ್ತ್ರದ ಭತ್ತೆ 100 ರೂ. ನೀಡುತ್ತಿದ್ದು, ಅದನ್ನು ಈಗ ತಿಂಗಳಿಗೆ 500 ರೂಗೆ ಹೆಚ್ಚಿಸಲಾಗಿದೆ. ಕನ್ವಯನ್ಸ್ ಅಲೋಯನ್ಸ್ ಸೌಲಭ್ಯ ಇದುವರೆಗೂ ಜಾರಿಯಲ್ಲಿ ಇರಲಿಲ್ಲ. ಹೊಸದಾಗಿ ಈ ಭತ್ತೆಯನ್ನು ನೀಡಲು ತೀರ್ಮಾನಿಸಿದ್ದು, ಇದರಡಿಯಲ್ಲಿ ತಿಂಗಳಿಗೆ ತಲಾ 600 ರೂ. ನೀಡಲಾಗುವುದು. ಹಾರ್ಡ್‌ಶಿಪ್ ಅಲೋಯನ್ಸ್(ರಿಸ್ಕ್ ಭತ್ತೆ) ಇದುವರೆಗೂ ಪೊಲೀಸರಿಗೆ ನೀಡುತ್ತಿರಲಿಲ್ಲ. ಇನ್ನು ಮುಂದೆ ಪ್ರತಿ ತಿಂಗಳಿಗೆ ತಲಾ 1 ಸಾವಿರ ರೂ. ಹಾರ್ಡ್‌ಶಿಪ್ ಅಲೋಯನ್ಸ್ ನೀಡಲಾಗುವುದು. ಈ ಎಲ್ಲ ನಿರ್ಧಾರಗಳಿಂದ ಪ್ರತಿಯೊಬ್ಬ ಪೇದೆಯಿಂದ ಹಿಡಿದು ಸಬ್ ಇನ್‌ಸ್ಪೆಕ್ಟರ್‌ವರೆಗೆ ತಿಂಗಳಿಗೆ 2 ಸಾವಿರ ರೂ. ಹೆಚ್ಚುವರಿ ಭತ್ತೆ ಸಿಗಲಿದೆ ಎಂದು ಅವರು ವಿವರಿಸಿದರು.
ಪೊಲೀಸ್ ಪೇದೆಯಾಗಿ ಇಲಾಖೆಗೆ ಸೇರಿದ ಪ್ರತಿ 10 ವರ್ಷಕ್ಕೊಮ್ಮೆ ಭಡ್ತಿ ನೀಡಲು ತೀರ್ಮಾನಿಸಲಾಗಿದೆ. ಈಗ ತಮ್ಮ ವೃತ್ತಿ ಜೀವನದಲ್ಲಿ ಮೂರು ಬಾರಿ ಭಡ್ತಿ ಸೌಲಭ್ಯ ಪಡೆಯಲಿದ್ದು, ಸಬ್ ಇನ್‌ಸ್ಪೆಕ್ಟರ್ ಹುದ್ದೆವರೆಗೂ ಹೋಗಲು ಅವಕಾಶ ಸಿಗಲಿದೆ ಎಂದರು.

ಆರ್ಡರಲಿ ಪದ್ಧತಿ ರದ್ದು
ಇದುವರೆಗೂ ಜಾರಿಗೆ ಇದ್ದ ಆರ್ಡರಲಿ ಪದ್ದತಿಯನ್ನು ರದ್ದುಪಡಿಸಲಾಗಿದೆ. ಅಂತಹ ಸಿಬ್ಬಂದಿಗೆ ಪರ್ಯಾಯ ಉದ್ಯೋಗ ನೀಡುವ ಕುರಿತು ಸದ್ಯದಲ್ಲೇ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News