ಕಾರ್ಪೊರೇಷನ್ ಬ್ಯಾಂಕ್ ನಿಂದ ಮನೆ ಬಾಗಿಲಿಗೆ ಎಟಿಎಂ!
ಬೆಂಗಳೂರು, ನ.19: ದೇಶಾದ್ಯಂತ 500 ಮತ್ತು ಸಾವಿರ ರೂಪಾಯಿಗಳ ನೋಟು ರದ್ದಾದ ನಂತರ ಸಾರ್ವಜನಿಕರು ಹಳೆ ನೋಟುಗಳ ಬದಲಾವಣೆ ಮತ್ತು ಹೊಸ ನೋಟುಗಳನ್ನು ಪಡೆಯಲು ಸರತಿ ಸಾಲಿನಲ್ಲಿ ನಿಲ್ಲುತ್ತಿರುವ ಒತ್ತಡವನ್ನು ಕಡಿತಗೊಳಿಸಲು ಕಾರ್ಪೊರೇಷನ್ ಬ್ಯಾಂಕ್ ಹೊಸ ಯೋಜನೆಯೋಂದನ್ನು ರೂಪಿಸಿ ಜಾರಿಗೆ ತಂದಿದೆ.
ಹಣ ಪಡೆಯಲು ಸಾರ್ವಜನಿಕರು ಸಾಕಷ್ಟು ತೊಂದರೆ ಅನುಭವಿಸುತ್ತಿದ್ದು, ಈ ಸಮಸ್ಯೆಗಳನ್ನು ನಿವಾರಿಸಲು ಮುಂದಾಗಿರುವ ಪ್ರಮುಖ ರಾಷ್ಟ್ರೀಕೃತ ಬ್ಯಾಂಕ್ ಆಗಿರುವ ಕಾರ್ಪೊರೇಷನ್ ಬ್ಯಾಂಕ್ ತನ್ನ ಎಟಿಎಂ, ಶಾಖೆಗಳಲ್ಲಿನ ಸೇವೆಗಳ ಜತೆ ಜತೆಗೆ 'ಮೈಕ್ರೋ ಎಟಿಎಂ' ವ್ಯವಸ್ಥೆಯನ್ನು ಅಸ್ತಿತ್ವಕ್ಕೆ ತಂದಿದೆ.
ಆಧಾರ್ ಕಾರ್ಡ್ ನ ಸಹಕಾರದೊಂದಿಗೆ ಶಾಖೆಗಳಲ್ಲಿ ನೇರವಾಗಿ ತೆರಳಿ ಸಾರ್ವಜನಿಕರು 2000 ರೂ. ಪಡೆಯಲು 'ಮೈಕ್ರೋ ಎಟಿಎಂ'ಗಳ ಮೂಲಕ ವ್ಯವಸ್ಥೆ ಮಾಡಿದೆ.
ನಗರ ಪ್ರದೇಶಗಳಲ್ಲಿ ಅತಿ ಹೆಚ್ಚಿನ ಶಾಖೆಗಳಿದ್ದು, ಗ್ರಾಮಾಂತರ ಪ್ರದೇಶಗಳ ಸಾರ್ವಜನಿಕರು ಹಣ ಪಡೆಯಲು ಎದುರಿಸುತ್ತಿರುವ ಸಂಕಷ್ಟಗಳನ್ನೂ ದೂರಾಗಿಸಲು ಮುಂದಡಿ ಇರಿಸಿರುವ ಕಾರ್ಪೊರೇಷನ್ ಬ್ಯಾಂಕ್ 'ಬ್ಯಾಂಕ್ ಮಿತ್ರ' ಯೋಜನೆಯಡಿ ಗ್ರಾಮೀಣ ಪ್ರದೇಶಗಳಲ್ಲಿ ಈಗಾಗಲೇ ಮನೆ ಬಾಗಿಲಿಗೇ ನಗದನ್ನು ತಲುಪಿಸುವ ಮಹತ್ವದ ಕಾರ್ಯ ಆರಂಭಿಸಿದ್ದು, ನಗರ ಪ್ರದೇಶದಲ್ಲೂ ಇದು ಮುಂದುವರೆಯಲಿದೆ.
ಕಾರ್ಪೊರೇಷನ್ ಬ್ಯಾಂಕ್ ನ ಈ ತ್ವರಿತ ಯೋಜನೆ ಜಾರಿ ಮತ್ತು ವಿಶೀಷ್ಟ ಸೇವೆಯನ್ನು ಶ್ಲಾಘಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜನರಲ್ ಮ್ಯಾನೇಜರ್ ಎನ್.ಗೋಪಾಲ್, ಈ ಯೋಜನೆ ಜಾರಿಯಿಂದ ಹಣ ಪಡೆಯುವುದು ಸುಲಭವಾಗಲಿದೆ ಮತ್ತು ಎಟಿಎಂ, ಬ್ಯಾಂಕ್ ಗಳ ಮೇಲಿನ ಒತ್ತಡ ಕಡಿಮೆ ಆಗಲಿದೆ ಎಂದಿದ್ದಾರೆ.