ಸಾರಿಗೆ ನಿಗಮಗಳಿಗೆ 5 ಸಾವಿರ ಹೊಸ ಬಸ್‌ಗಳ ಖರೀದಿ: ರಾಮಲಿಂಗಾರೆಡ್ಡಿ

Update: 2016-11-24 04:42 GMT
ಸಾರಿಗೆ ನಿಗಮಗಳಿಗೆ 5 ಸಾವಿರ ಹೊಸ ಬಸ್‌ಗಳ ಖರೀದಿ: ರಾಮಲಿಂಗಾರೆಡ್ಡಿ
  • whatsapp icon

ಬೆಳಗಾವಿ (ಸುವರ್ಣ ವಿಧಾನಸೌಧ), ನ.23: ರಾಜ್ಯದಲ್ಲಿ ಹೊಸದಾಗಿ ಒಟ್ಟು 5 ಸಾವಿರಕ್ಕೂ ಹೆಚ್ಚು ಬಸ್‌ಗಳನ್ನು ಖರೀದಿ ಮಾಡುತ್ತಿದ್ದು, ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿದಂತೆ ಎಲ್ಲ ನಿಗಮಗಳಿಗೂ ಆದ್ಯತೆ ಮೇಲೆ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ತಿಳಿಸಿದ್ದಾರೆ.

ಬುಧವಾರ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯ ಬಸವರಾಜ ಬೊಮ್ಮಾಯಿ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಗ್ರಾಮೀಣ ಪ್ರದೇಶಗಳಿಗೆ ಸಮರ್ಪಕ ಸಾರಿಗೆ ಸೌಲಭ್ಯ ಕಲ್ಪಿಸಲು ಸರಕಾರ ಎಲ್ಲಾ ಪ್ರಯತ್ನಗಳನ್ನು ಮಾಡುತ್ತಿದ್ದು, ಪ್ರಸ್ತುತ 17,335 ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗಿದೆ ಎಂದು ಹೇಳಿದರು.

ಸೂಕ್ತ ರಸ್ತೆ ಸಂಪರ್ಕವಿಲ್ಲದ ಹಿನ್ನೆಲೆಯಲ್ಲಿ ಇನ್ನೂ 257 ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಬೇಕಾಗಿದ್ದು, ಯೋಗ್ಯವಾದ ರಸ್ತೆ ನಿರ್ಮಾಣಗೊಂಡ ಬಳಿಕ ಎಲ್ಲ ಗ್ರಾಮಗಳಿಗೆ ಬಸ್ ಸಂಪರ್ಕ ಕಲ್ಪಿಸಲಾಗುವುದು ಎಂದ ಅವರು, ಬಿಎಂಟಿಸಿ ಮತ್ತು ಕೆಎಸ್ಸಾರ್ಟಿಸಿ ಹೊರತುಪಡಿಸಿ ಉಳಿದ ನಿಗಮಗಳು ನಷ್ಟದಲ್ಲಿವೆ ಎಂದರು.

ಬಸ್ ಖರೀದಿ: ಕೆಎಸ್ಸಾರ್ಟಿಸಿಯಿಂದ ಪ್ರಸ್ತುತ ವರ್ಷ ಇದುವರೆಗೆ 562 ಬಸ್‌ಗಳನ್ನು ಖರೀದಿಸಲಾಗಿದೆ. ಮಾರ್ಚ್ 2017ರ ಒಳಗಾಗಿ ಇನ್ನೂ 959 ಬಸ್ ಖರೀದಿಸಲು ಉದ್ದೇಶಿಸಲಾಗಿದೆ. ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ವರ್ಷ 72 ಬಸ್ ಖರೀದಿಸಲಾಗಿದ್ದು, 2017ರ ಮಾರ್ಚ್ ಒಳಗಾಗಿ 1350 ಬಸ್ ಖರೀದಿಸಲು ಉದ್ದೇಶಿಸಲಾಗಿದೆ.

ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಪ್ರಸ್ತುತ ವರ್ಷ 242 ಬಸ್ ಖರೀದಿಸಲಾಗಿದ್ದು, ಮುಂದಿನ ಮಾರ್ಚ್ ಒಳಗಾಗಿ 478 ಬಸ್ ಖರೀದಿಸಲು ಉದ್ದೇಶಿಸಲಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಪ್ರಸ್ತುತ ಸಾಲಿನಲ್ಲಿ 1658 ಬಸ್ ಖರೀದಿಸಲು ಯೋಜನೆ ರೂಪಿಸಲಾಗಿದೆ ಎಂದು ಸಚಿವರು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News