ಕಂಬಳ ಕ್ರೀಡೆಗೆ ತಡೆಯಾಜ್ಞೆ: ತೆರವಿಗೆ ಸಮರ್ಥ ವಾದ ಮಂಡನೆ-ಸರಕಾರದ ಭರವಸೆ

Update: 2016-11-24 07:57 GMT

ಬೆಳಗಾವಿ, ನ.24:  ಕರಾವಳಿ ಭಾಗದ ಜನರ ಭಾವನೆಗಳನ್ನು ಗಮನದಲ್ಲಿರಿಸಿಕ್ಕೊಂಡು ಪಶು ವೈದ್ಯಕೀಯ ಹಾಗೂ ಕಾನೂನು ತಜ್ಞರೊಂದಿಗೆ ಸಮಾಲೋಚಿಸಿ ಕಂಬಳ ಕ್ರೀಡೆಯ ಪ್ರಕರಣದ ಕುರಿತು ನ್ಯಾಯಾಲಯದಲ್ಲಿ  ಸಮರ್ಥವಾಗಿ ವಾದ ಮಂಡಿಸುವುದಾಗಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಹೇಳಿದರು.

ಗುರುವಾರ ವಿಧಾನ ಪರಿಷತ್ತಿನ ಶೂನ್ಯ ವೇಳೆಯಲ್ಲಿ ಶಾಸಕ ಸುನಿಲ್ ಕುಮಾರ್ ರವರು ಕಂಬಳ ಕ್ರೀಡೆ ಕುರಿತು ಪ್ರಸ್ತಾಪಿಸಿದ ವಿಷಯಕ್ಕೆ ಸಂಬಂಧಿಸಿದಂತೆ ಸಚಿವ ಪ್ರಮೋದ್ ಮಧ್ವರಾಜ್ ಪರವಾಗಿ ಕಾನೂನು ಸಚಿವ ಟಿ.ಬಿ ಜಯಚಂದ್ರ ಉತ್ತರಿಸಿದರು. 

ಕೋಣಗಳ ದೈಹಿಕ ರಚನೆ ಕಂಬಳದ ಓಟಕ್ಕೆ ಪೂರಕವಲ್ಲ ಎಂಬ ವಾದದ ಆಧಾರದಲ್ಲಿ ಕೆಲವು ಪ್ರಾಣಿದಯಾ ಸಂಘಟನೆಗಳು ಬೇಡಿಕೆ ಇಟ್ಟಿದ್ದರಿಂದ ನ್ಯಾಯಾಲಯ ಈ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ಮಾಡಿ ವರದಿ ನೀಡಲು ಸರಕಾರಕ್ಕೆ ಆದೇಶಿಸಿತು. ಸರಕಾರವು ಬೀದರ್ ನ ಪಶು ಸಂಗೋಪನೆ  ಮತ್ತು ಪಶು ವೈದ್ಯಕೀಯ  ಹಾಗೂ ಮೀನುಗಾರಿಕೆ ವಿಶ್ವವಿದ್ಯಾನಿಲಯದ ಪರಿಣಿತರ ತ್ರಿಸದಸ್ಯ ಪೀಠ ರಚಿಸಿತು.

ಈ ನಡುವೆ ಪೀಪಲ್ಸ್ ಫಾರ್ ಎಥಿಕಲ್ ಟ್ರೀಟ್ಮೆಂಟ್ ಆಫ್ ಎನಿಮಲ್ಸ್ ಸಂಸ್ಥೆಯು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ಪ್ರಕರಣವನ್ನು ದಾಖಲಿಸಿದ್ದು, ನ್ಯಾಯಾಲಯವು ಅರ್ಜಿ ಇತ್ಯರ್ಥವಾಗುವವರೆಗೂ ಕಂಬಳ ಕ್ರೀಡೆ ಆಯೋಜಿಸಬಾರದು ಎಂದು ನ.22ರಂದು ತಡೆಯಾಜ್ಞೆ ನೀಡಿದೆ. ಪ್ರಕರಣದ ಕುರಿತು ನ್ಯಾಯಾಲಯದಲ್ಲಿ ಸಮರ್ಥವಾಗಿ ವಾದ ಮಂಡಿಸುವುದಾಗಿ ಅವರು ಭರವಸೆ ನೀಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News