ಜಾತ್ಯತೀತ ಪಕ್ಷಗಳು ‘ಸಾಚಾರ್ ವರದಿ’ ಅನುಷ್ಠಾನಗೊಳಿಸಲಿ: ರಾಜಿಂದರ್ ಸಿಂಗ್ ಸಾಚಾರ್

Update: 2016-11-27 15:12 GMT

ಬೆಂಗಳೂರು, ನ.27: ಸಮಾನ ಅವಕಾಶ ಆಯೋಗಗಳ ರಚನೆಗೆ ಎಲ್ಲ ರಾಜ್ಯ ಸರಕಾರಗಳೂ ಕ್ರಮ ಕೈಗೊಳ್ಳಬೇಕು. ಈ ಆಯೋಗದ ವ್ಯಾಪ್ತಿಗೆ ಖಾಸಗಿ ಕ್ಷೇತ್ರವನ್ನೂ ಒಳಪಡಿಸಬೇಕು. ಹಾಗಾದರೆ ಮಾತ್ರ ಮುಸ್ಲಿಮರ ಸಹಿತ ಎಲ್ಲ ವರ್ಗಗಳಿಗೂ ಸಮಾನ ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಸಮಾನ ಅವಕಾಶಗಳು ಲಭ್ಯವಾಗುತ್ತವೆ ಎಂದು ಜಸ್ಟಿಸ್ ರಾಜಿಂದರ್ ಸಾಚಾರ್ ಇಂದು ಇಲ್ಲಿ ಹೇಳಿದರು.

ಕರ್ನಾಟಕ ಮುಸ್ಲಿಂ ಕೋಆರ್ಡಿನೇಶನ್ ಕಮಿಟಿಯ ಆಶ್ರಯದಲ್ಲಿ ಬೆಂಗಳೂರು ಪುರಭವನದಲ್ಲಿ ನಡೆದ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದ ದಿಲ್ಲಿ ಹೈಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಸಾಚಾರ್ ಅವರು, ಹಿಂದುಳಿದವರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಕರ್ನಾಟಕ ಸರಕಾರ ಶೀಘ್ರವೇ ಸಮಾನ ಅವಕಾಶಗಳ ಆಯೋಗವನ್ನು ರಚಿಸಲಿ ಎಂದು ಆಗ್ರಹಿಸಿದರು.

ಸಾಚಾರ್ ಸಮಿತಿಯ ವರದಿ ಕೇವಲ ಮುಸ್ಲಿಮರಿಗೆ ಮಾತ್ರ ಸಂಬಂಧಿಸಿದ್ದಲ್ಲ. ದೇಶದ ಎಲ್ಲ ಸಮುದಾಯಗಳಿಗೂ ಸಮಾನ ಅವಕಾಶಗಳನ್ನು ಒದಗಿಸಲು ಸಂಬಂಧಿಸಿದ್ದು. ಪ್ರಜಾಪ್ರಭುತ್ವವೆಂದರೆ ಎಲ್ಲ ಸಮುದಾಯಗಳನ್ನೂ ಒಳಗೊಳ್ಳುವ ಪ್ರಗತಿಯ ಪ್ರಕ್ರಿಯೆ. ಮುಸ್ಲಿಮರಿಗೆ ಸರಕಾರಿ ಉದ್ಯೋಗ ಮತ್ತು ಇತರ ಸರಕಾರಿ ಮಂಡಳಿಗಳಲ್ಲಿ ನ್ಯಾಯಬದ್ಧ ಅವಕಾಶಗಳು ಸಿಕ್ಕಿಲ್ಲ. ಮುಸ್ಲಿಂ ಸಮುದಾಯವು ದೇಶದ ಅವಿಭಾಜ್ಯ ಅಂಗವಾಗಿದ್ದು ಅದರ ವಿರುದ್ಧ ಯಾವುದೇ ಮಲತಾಯಿ ಧೋರಣೆ ತಳೆಯುವುದು ಸಂವಿಧಾನದ ಆಶಯಗಳಿಗೆ ವಿರುದ್ಧವಾದದ್ದು ಎಂದು ನ್ಯಾ.ಸಾಚಾರ್ ಹೇಳಿದರು.

ಯಾವುದೇ ಸರಕಾರ ಅಲ್ಪಸಂಖ್ಯಾತರಿಗೆ ಸೂಕ್ತ ರಕ್ಷಣೆ ಮತ್ತು ಪ್ರಾತಿನಿಧ್ಯ ನೀಡಲಿಲ್ಲ ಎಂದಾದರೆ ಅದು ನ್ಯಾಯಬದ್ಧ ಸರಕಾರ ಎಂದೆನಿಸಿಕೊಳ್ಳುವುದಿಲ್ಲ ಎಂದು ಅವರು ಸ್ಪಷ್ಟ ಅಭಿಪ್ರಾಯ ವ್ಯಕ್ತಪಡಿಸಿದರು.

ವಿಚಾರ ಸಂಕಿರಣವನ್ನು ಉದ್ಘಾಟಿಸಿದ ಕರ್ನಾಟಕದ ಅಮೀರೆ ಷರೀಯತ್ ಮೌಲಾನಾ ಮುಫ್ತಿ ಮುಹಮ್ಮದ್ ಅಶ್ರಫ್ ಅಲಿ ಅವರು, ಸಮುದಾಯದ ಹಿತಾಸಕ್ತಿಯನ್ನು ರಕ್ಷಿಸುತ್ತಾ ಇತರ ಸಮುದಾಯಗಳೊಂದಿಗೆ ಸುಮಧುರ ಬಾಂಧವ್ಯವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಸ್ಥಾಪಿಸಲಾದ ಕೆ.ಎಂ.ಸಿ.ಸಿ. ಕರ್ನಾಟಕ ಸಂಸ್ಥೆಯು ಸಮುದಾಯಕ್ಕೊಂದು ಆಶಾಕಿರಣವಾಗಿ ಬೆಳೆದು ಬರಲಿ ಎಂದು ಆಶೀರ್ವದಿಸಿದರು.

ಸಮಾರಂಭದಲ್ಲಿ ಪ್ರಾಸ್ತಾವಿಕ ಮಾತನಾಡಿದ ಕೆಎಂಸಿಸಿಯ ಖಜಾಂಚಿ ಬಿ.ಎಂ.ಫಾರೂಕ್ ಅವರು, ಸಂಘಟನೆಯ ಆಶಯಗಳನ್ನು ಮತ್ತು ಧ್ಯೇಯೋದ್ದೇಶಗಳನ್ನು ವಿವರಿಸಿದರು. ಸಾಚಾರ್ ಸಮಿತಿಯ ವರದಿಯನ್ನು ಜಾರಿಗೆ ತರಲು ರಾಜ್ಯ ಸರಕಾರದ ಮೇಲೆ ಒತ್ತಡ ತರಬೇಕಾಗಿದೆ. ಮುಸ್ಲಿಮರು ಶೈಕ್ಷಣಿಕ, ಸಾಮಾಜಿಕ ರಂಗದಲ್ಲಿ ತೀವ್ರವಾಗಿ ಹಿಂದುಳಿದಿದ್ದು ಸಮುದಾಯದಲ್ಲಿ ಸರಕಾರದ ವಿವಿಧ ಸೌಲಭ್ಯಗಳ ಬಗ್ಗೆ ತಿಳುವಳಿಕೆ ಮೂಡಿಸಬೇಕಾದ ಅಗತ್ಯವೂ ಇದೆ. ಈ ನಿಟ್ಟಿನಲ್ಲಿ ಸರಕಾರ ಮತ್ತು ಸಮುದಾಯದ ನಡುವೆ ಸೇತುವೆಯಾಗಿ ಕೆಎಂಸಿಸಿ ಕೆಲಸ ಮಾಡಲಿದೆ ಎಂದರು. ಇತರ ಸಮುದಾಯಗಳ ಜತೆಗೂ ಸೌಹಾರ್ದ ಸಂಬಂಧವನ್ನು ಉಳಿಸಿಕೊಂಡು ಪ್ರಗತಿಯತ್ತ ದಾಪುಗಾಲು ಇಡಬೇಕಾದ ಅನಿವಾರ್ಯತೆ ಮುಸ್ಲಿಮರದ್ದು. ಎಲ್ಲರೂ ಸಂಘಟಿತರಾಗಿ ಈ ಕೆಲಸದಲ್ಲಿ ತೊಡಗಿಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಸ್ಟೀಸ್ ಎಚ್.ಎನ್. ನಾಗಮೋಹನ್ ದಾಸ್ ಅವರು ಸರ್ವರಿಗೂ ಸಮಬಾಳು, ಸಮಪಾಲು ಎನ್ನುವ ತತ್ವದಡಿ ದೇಶದ ಪ್ರಗತಿಯ ಪಾಲು ಎಲ್ಲ ಸಮುದಾಯಗಳಿಗೂ ದೊರಕಿಸಿಕೊಡಬೇಕಾಗಿದೆ ಎಂದು ತಿಳಿಸಿದರು.

ಪ್ರಜಾಪ್ರಭುತ್ವ ಎಂದರೆ ಚುನಾವಣೆಗೆ ಸೀಮಿತವಾದದ್ದಲ್ಲ ಅದರಾಚೆಗೂ ನೋಡಬೇಕಾಗಿದೆ. ಸಾಮಾಜಿಕ ಪ್ರಜಾಪ್ರಭುತ್ವ, ಶೈಕ್ಷಣಿಕ ಪ್ರಜಾಪ್ರಭುತ್ವ ಇತ್ಯಾದಿಗಳೆಲ್ಲ ಇದರಲ್ಲಿ ಜೋಡನೆಗೊಳ್ಳಬೇಕು. ಅಭಿವ್ಯಕ್ತಿ ಸ್ವಾತಂತ್ರದ ದಮನದಂತಹ ವಿನಾಶಕಾರಿ ಪ್ರಜಾಪ್ರಭುತ್ವದ ವಿನಾಶಕ್ಕೆ ಕಾರಣವಾಗುತ್ತಿದ್ದು ಎಲ್ಲರೂ ಜೊತೆಗೂಡಿ ಪ್ರಜಾಪ್ರಭುತ್ವದ ರಕ್ಷಣೆಗೆ ಮುಂದಾಗಬೇಕೆಂದು ಕರೆ ನೀಡಿದರು.

ಮತ್ತೋರ್ವ ಅತಿಥಿ ಸಾಚಾರ್ ಸಮಿತಿ ಶಿಫಾರಸಿನ ಮೌಲ್ಯಮಾಪನ ಸಮಿತಿಯ ಅಧ್ಯಕ್ಷ ಪ್ರೊ. ಅಮಿತಾಬ್ ಕುಂಡು ರಾಷ್ಟ್ರದ ಅಂಕಿ ಅಂಶಗಳನ್ನು ವಿವರಿಸುತ್ತಾ ಜೀವನದ ಬೇರೆ ಬೇರೆ ಸ್ಥರಗಳಲ್ಲಿ ಮುಸ್ಲಿಮರ ಸ್ಥಿತಿಗತಿಗಳ ಇತರ ಸಮುದಾಯಗಳಿಗೆ ಹೋಲಿಸಿದಲ್ಲಿ ಎಷ್ಟರ ಮಟ್ಟಿಗೆ ನಿಕೃಷ್ಟವಾಗಿದೆ ಎನ್ನುವುದನ್ನು ವಿವರವಾಗಿ ತಿಳಿಸಿದರು.

ಕುಂಡು ಸಮಿತಿಯ ವರದಿ ಸಲ್ಲಿಕೆಯಾಗಿ ಈಗಾಗಲೇ ವರ್ಷಗಳು ಕಳೆದರೂ ಅದಿನ್ನೂ ಸರಕಾರದ ಪರಿಶೀಲನೆಯಲ್ಲಿಯೇ ಇದೆ. ಈ ಬಗ್ಗೆ ಒತ್ತಡ ತರುವ ಸಲುವಾಗಿ ನಡೆಯುವ ಪ್ರಯತ್ನಗಳಲ್ಲಿ ಕೆ.ಎಂ.ಸಿ.ಸಿ. ಕರ್ನಾಟಕ ಕೈ ಜೋಡಿಸಬೇಕೆಂದು ಕರೆ ನೀಡಿದರು.

ಅಧ್ಯಕ್ಷೀಯ ಭಾಷಣ ಮಾಡಿದ ಸೈಯದ್ ಝಮೀರ್ ಪಾಷಾ ಅವರು, ಸಮುದಾಯದ ಹಿಂದುಳಿದವರ ಬಗ್ಗೆ ವಿವರವಾದ ವಿಶ್ಲೇಷಣೆಯನ್ನು ಮಾಡಿ ಒಂದು ಉತ್ತಮ ಸಮಾಜವನ್ನು ರೂಪಿಸುವ ಕೆ.ಎಂ.ಸಿ.ಸಿ.ಕರ್ನಾಟಕದ ಆಶಯಗಳಿಗೆ ಎಲ್ಲರ ಸಹಕಾರ ಕೋರಿದರು. ಈ ಬಗ್ಗೆ ಸರಕಾರದ ಜೊತೆ ಸಮಾನಾವಕಾಶ ಹಾಗೂ ಪಕ್ಷಪಾತದ ವಿರುದ್ಧ ಕಾನೂನುಗಳನ್ನು ಅನುಷ್ಠಾನಕ್ಕೆ ತರುವ ಬಗ್ಗೆ ನಿಯೋಗವೊಂದನ್ನು ಅಮಿತಾಬ್ ಕುಂಡು ಅವರ ನೇತೃತ್ವ ವಹಿಸಬೇಕೆಂದು ವಿನಂತಿಸಿದರು.

ಕೊನೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಿರ್ಝಾ ಮುಹಮ್ಮದ್ ಮಹದಿ ವಂದಿಸಿದರು. ಸಂಘಟನೆಯ ಪದಾಧಿಕಾರಿಗಳಾದ ಮಿರ್ಝಾ ಎಂ. ಮೆಹದಿ, ಅಮೀರುದ್ದೀನ್ ಬಜಪೆ ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News