‘ಚೋ’ ಎಂಬ ವಿದೂಷಕ ಪತ್ರಕರ್ತ

Update: 2016-12-11 09:06 GMT

ರಾಜ ಮಹಾರಾಜರುಗಳ ಆಳ್ವಿಕೆಯ ಕಾಲದಲ್ಲಿ ಆಸ್ಥಾನ ವಿದೂಷಕರು ಅಂತರಂಗದಲ್ಲಿ ಮಹಾರಾಜರ ನರ್ಮ ಸಚಿವರಾಗಿಯೂ ಸಲಹೆ-ಸಮಾಲೋಚನೆಗಳಲ್ಲಿ ಭಾಗಿಯಾಗುತ್ತಿದ್ದುದನ್ನು ಇತಿಹಾಸದಲ್ಲಿ ನಾವು ಕಾಣುತ್ತೇವೆ. ಆಸ್ಥಾನದಲ್ಲಿ ವಿದೂಷಕರಾಗಿ ಹಾಸ್ಯ-ವಿಡಂಬನೆಗಳಿಂದ ಮಗ್ಗುಲು ಮುಳ್ಳಾಗುತ್ತಿದ್ದ ಈ ಮಂದಿ ತುರ್ತು ಸಂದರ್ಭಗಳಲ್ಲ್ಲಿ ಸಲಹೆ ನೀಡುವ ನರ್ಮ ಸಚಿವರೂ ಆಗುತ್ತಿದ್ದರು. ನಮ್ಮ ಪ್ರಜಾಪ್ರಭುತ್ವದಲ್ಲೂ ಆಳುವ ಮಂದಿಗೂ ಪತ್ರಕರ್ತರಿಗೂ ಇಂಥ ಒಂದು ವಿಶಿಷ್ಟ ನೆಂಟಸ್ತಿಕೆ ಇರುವುದು ಸ್ವಾತಂತ್ರ್ಯೋತ್ತರ ಪತ್ರಿಕೋದ್ಯಮದ ಇತಿಹಾಸವನ್ನು ಬಲ್ಲವರಿಗೆ ವೇದ್ಯವಾಗಿರುವ ಸಂಗತಿಯೇ ಆಗಿದೆ. ಸರಕಾರದ ನೀತಿ-ನಿರ್ಧಾರಗಳನ್ನು ಕಟುವಾಗಿ ಟೀಕಿಸಿ ಬರೆಯುತ್ತಲೇ ಅಂತರಂಗದಲ್ಲಿ ಮಂತ್ರಿಮಹೋದಯರಿಗೆ ಆಪ್ತಸಮಾಲೋಚಕರಾಗಿ ಸಲಹೆಗಳನ್ನು ನೀಡುತ್ತಿದ್ದ ಪತ್ರಕರ್ತರ ನಿದರ್ಶನಗಳಿಗೆ ಭಾರತೀಯ ಪತ್ರಿಕೋದ್ಯಮದಲ್ಲಿ ಹಾಗೂ ಕನ್ನಡ ಪತ್ರಿಕೋದ್ಯಮದಲ್ಲಿ ಬರವಿಲ್ಲ. ಇಂಥ ಒಂದು ವಿಶಿಷ್ಟ ತಳಿ ಡಿ.7ರಂದು ತಮ್ಮ ಎಂಬತ್ತೆರಡರ ಇಳಿಪ್ರಾಯದಲ್ಲಿ ಇಹಲೋಕ ಯಾತ್ರೆ ಮುಗಿಸಿದ ತಮಿಳು ಪತ್ರಕರ್ತ ‘ಚೋ’ರಾಮಸ್ವಾಮಿ ಅಯ್ಯರ್.

ವಕೀಲ, ಪತ್ರಕರ್ತ, ನಟ, ನಾಟಕಕಾರ, ವ್ಯಾಖ್ಯಾನಕಾರ, ರಾಜಕೀಯ ಸಂಧಾನಕಾರ- ಸೂತ್ರಧಾರ ಇತ್ಯಾದಿಗಳೆಲ್ಲದರ ಒಟ್ಟು ಮೊತ್ತವಾದ ‘ಚೋ’ ಅವರದು ವೈವಿಧ್ಯಮಯ ವರ್ಣರಂಜಿತ ವ್ಯಕ್ತಿತ್ವ. ‘ಚೋ’ ರಾಮಸ್ವಾಮಿ ಅಯ್ಯರ್ ಹುಟ್ಟಿದ್ದು ಶ್ರೀಮಂತ ವಕೀಲರ ಮನೆತನದಲ್ಲಿ (ಅಕ್ಟೋಬರ್ 5, 1934)-ಬಾಯಲ್ಲಿ ಬೆಳ್ಳಿ ಚಮಚ ಇಟ್ಟುಕೊಂಡೇ. ತಾತ ಅರುಣಾಚಲ ಅಯ್ಯರ್, ತಂದೆ ಶ್ರೀನಿವಾಸ ಅಯ್ಯರ್ ಆಗಿನ ಮದ್ರಾಸಿನಲ್ಲಿ ಪ್ರಖ್ಯಾತ ವಕೀಲರು. ರಾಮಸ್ವಾಮಿ ಅಯ್ಯರ್ ಅವರೂ ವಕೀಲಿಯೊಂದಿಗೆ ತಮ್ಮ ವೃತ್ತಿ ಜೀವನಕ್ಕೆ ಸುಪ್ರಭಾತ ಹಾಡಿದರು. ಕೆಲಕಾಲ ತಮಿಳುನಾಡಿನ ಸುಪ್ರಸಿದ್ಧ ಉದ್ಯಮವಾದ ಟಿಟಿಕೆ ಕಂಪೆನಿಯ ಸಲಹೆಗಾರರಾಗಿಯೂ ಕೆಲಸಮಾಡಿದ್ದರು. ಬಹುಮುಖ ಪ್ರತಿಭೆ ಮತ್ತು ಆಸಕ್ತಿಗಳು ಅವರನ್ನು, ರಂಗಭೂಮಿಗೆ, ಛಮಕ್‌ಛಮಕ್ ಬೆಳ್ಳಿತೆರೆಗೆ ಹಾಗೂ ಉರಿಯ ಉಯ್ಯಿಲೆಯ ಪತ್ರಿಕಾ ವೃತ್ತಿಗೆ ಎಳೆದುತಂದಿರಬಹುದು. ಅಖೈರಾಗಿ, ‘ತುಘಲಕ್’ ಮೂಲಕ ಪತ್ರಿಕೋದ್ಯಮದಲ್ಲಿ ದಡ ಕಂಡುಕೊಂಡರು.

ಎಪ್ಪತ್ತರ ದಶಕ. 1970ರ ಜನವರಿ 14ರಂದು ‘ತುಘಲಕ್’ ಪ್ರಥಮ ಸಂಚಿಕೆ ಬೆಳಕು ಕಂಡಿತು. ಇದರ ಹುಟ್ಟೂ ಒಂದು ಆಕಸ್ಮಿಕವೇ. 1969ರ ಡಿಸೆಂಬರಿನಲ್ಲಿ ತಿರಿಚ್ಚಿನಾಪಳ್ಳಿಯಲ್ಲಿ ‘ತುಘಲಕ್’ ನಾಟಕ ಪ್ರದರ್ಶನ ಮುಗಿಸಿ ಮದ್ರಾಸಿಗೆ ವಾಪಸಾಗುತ್ತಿದ್ದಾಗ ಅದೇ ಹೆಸರಿನ ಪತ್ರಿಕೆಯೊಂದನ್ನು ಹೊರತರುವ ವಿಚಾರ ಅವರ ಮನಸ್ಸಿನಲ್ಲಿ ಹೊರಹೊಮ್ಮಿತಂತೆ. ಆ ಕ್ಷಣದ ಮುಖ್ಯ ಉದ್ದೇಶ ಗೆಳೆಯನೊಬ್ಬನ ಮುದ್ರಣಾಲಯಕ್ಕೆ ಕೆಲಸ ಒದಗಿಸುವುದು. ರಾಮಸ್ವಾಮಿ ಅಯ್ಯರ್ ಹಾಗೆಂದು ಏಕ್‌ದಮ್ ಪತ್ರಿಕೆ ಹೊರಡಿಸುವ ನಿರ್ಧಾರಕ್ಕೆ ಬರಲಿಲ್ಲ. ಓದುಗರ ಮನಸ್ಸನ್ನು ತಿಳಿಯುವ ಸಲುವಾಗಿ, ಇಂಥದೊಂದು ಪತ್ರಿಕೆ ಪ್ರಕಟಿಸುವ ಇರಾದೆ ಇದೆ, ನಿಮಗೆ ಬೇಕೋ ಬೇಡವೋ ತಿಳಿಸಿ ಎಂದು ಜನಾಭಿಪ್ರಾಯ ತಿಳಿಯಲು ಪ್ರಕಟನೆ ಯಿತ್ತರು. ಐದು ಸಾವಿರಕ್ಕೂ ಹೆಚ್ಚು ಜನರು ಬೇಕೆಂದರು. ಇನ್ನು ‘ಚೋ’ ಪತ್ರಿಕಾ ಉತ್ಸಾಹಕ್ಕೆ ಮೇರೆಮಿತಿಗಳು ಯಾವುದೂ ಇರಲಿಲ್ಲ. ಆ ವೇಳೆಗಾಗಲೇ ಅವರು ನಟರಾಗಿ, ನಾಟಕಕಾರರಾಗಿ ತಮಿಳು ರಸಿಕರಿಗೆ ಚಿರಪರಿಚಿತರಾಗಿದ್ದರು. ಅಭಿಮಾನಿಗಳು ಅವರ ಈ ಹೊಸ ವೇಷಕ್ಕೆ ಕುತೂಹಲದಿಂದ ಕಣ್ತೆರೆದಿದ್ದರು. ಪತ್ರಿಕೆಯ ಸಂಪಾದಕ, ಲೇಖಕ, ವ್ಯಂಗ್ಯ ಚಿತ್ರಕಾರ, ಮಾರಾಟಗಾರ ಎಲ್ಲವೂ ‘ಚೋ’ ರಾಮಸ್ವಾಮಿ ಅಯ್ಯರ್ ಎಂಬ ವ್ಯಕ್ತಿಯ ಏಕಪಾತ್ರಾಭಿನಯ.

ಚುನಾವಣಾ ಸಮಯ. ಪೆರಿಯಾರ್ ನಾಯಕರು ಸೇಲಂನ ಬೀದಿಯಲ್ಲಿ ದೇವರುಗಳ ನಗ್ನ ಮೂರ್ತಿಗಳ ಮೆರವಣಿಗೆ ಮಾಡಿದ ಸಂದರ್ಭ. ದೇವರಿಗೆ ಇಂಥ ಅವಹೇಳನ, ಅವಮಾನವೆ? ಸೇಲಂ ಬೀದಿಗಳಲ್ಲಿ ಪ್ರದರ್ಶಿತವಾದದ್ದು ದೇವರ ಹೆಸರಿನಲ್ಲಿ ಮಾನವನ ವಿಲಾಸದ ವಿಕೃತ ನಗ್ನ ಚಿತ್ರಾವಳಿ.ತಮ್ಮ ರಾಗದ್ವೇಷಾದಿಗಳೆಲ್ಲವನ್ನೂ ಜನ ದೇವರಿಗೆ ಆರೋಪಿಸಿದ್ದರು. ವಕೀಲಪತ್ರಕರ್ತ ‘ಚೋ’ ದೇವರ ಪರ ವಕಾಲತ್ತು ವಹಿಸಿದರು. ಅಸಭ್ಯವೂ ಅವಹೇಳನಕರವೂ ಆದ ಮೆರವಣಿಗೆಯ ಚಿತ್ರಗಳು, ಪ್ರತ್ಯಕ್ಷದರ್ಶಿಯ ವರದಿಗಳು ‘ತುಘಲಕ್’ ನಲ್ಲಿ ಪ್ರಕಟವಾದವು. ಈ ನಗ್ನ ಸತ್ಯವನ್ನು ಕ್ಯಾಮರಾದಲ್ಲಿ ಸೆರೆಹಿಡಿದು ಪ್ರಕಟಿಸಿದ್ದಕ್ಕಾಗಿ ‘ಚೋ’ರ ಪತ್ರಿಕೆ ಅಂದಿನ ಸರಕಾರದ ಕೋಪಕ್ಕೆ ತುತ್ತಾಯಿತು.

ಪತ್ರಿಕಾವೃತ್ತಿ ಕೈಗೊಳ್ಳುವುದಕ್ಕೂ ಮೊದಲು ಪ್ರಯೋಗನಿರತರಾಗಿದ್ದ ರಂಗಭಮಿಯಲ್ಲೂ ‘ಚೋ’ ಅವರ ವಿಡಂಬನಾ ಪ್ರತಿಭೆಯೇ ಮೇಲುಗೈ ಪಡೆದಿತ್ತು. ಅವರ ನಾಟಕಗಳಲ್ಲಿ ರಾಜಕೀಯ ಮತ್ತು ಸಾಮಾಜಿಕ ವಿಡಂಬನೆ ಪ್ರಧಾನವಾಗಿರುತ್ತಿದ್ದವು. ‘ಸಂಭವಾಮಿ ಯುಗೇಯುಗೇ’ ಎಂಬುದು ಅಂಥದೊಂದು ರಾಜಕೀಯ ವಿಡಂಬನೆ. ಈ ವಿಡಂಬನೆಯ ಮೊನಚನ್ನು ತಡೆಯಲಾಗದೆ ಅಂದಿನ(1960) ಭಕ್ತವತ್ಸಲಂ ನಾಯಕತ್ವದ ಕಾಂಗ್ರೆಸ್ ಸರಕಾರ ಈ ನಾಟಕದ ಮೇಲೆ ಸೆನ್ಸಾರ್ ಅಸ್ತ್ರ ಪ್ರಯೋಗಿಸುವ ಪ್ರಯತ್ನ ನಡೆಸಿತು. ಇದರಿಂದ ‘ಚೋ’ ಅವರ ನಾಟಕಗಳಲ್ಲಿ ಜನರ ಆಸಕ್ತಿ ಇನ್ನಷ್ಟು ಹೆಚ್ಚಿತು. ತುಘಲಕ್ ನಾಟಕದಲ್ಲಿ ಅವರ ಜನಪ್ರಿಯತೆ ಶೃಂಗ ಮುಟ್ಟಿತು. ಐಲು ದೊರೆಯೊಬ್ಬನ ಕಥೆಯನ್ನು ಕೇಂದ್ರವಾಗುಳ್ಳ ಈ ನಾಟಕದ ಗರುಡದೃಷ್ಟಿಬಿದ್ದದ್ದು ಆಗ ಸಂಸದೀಯ ಪ್ರಜಾಸತ್ತೆಯಲ್ಲಿ ಹಾವಳಿ ನಡೆಸಿದ್ದ ಪಕ್ಷಾಂತರದ ಪಿಡುಗಿನ ಮೇಲೆ. ಆಧುನಿಕ ಭಾರತದಲ್ಲಿ ರಾಜಕಾರಣಿಗಳನೇಕರು ತುಘಲಕ್‌ನ ಅಪರಾವತಾರವಾಗಿರುವಾಗ ಈ ನಾಟಕದಲ್ಲಿನ ಅವರ ಲೇವಡಿ ಪ್ರಚಂಡ ಯಶಸ್ಸು ಗಳಿಸಿದ್ದರಲ್ಲಿ ಆಶ್ಚರ್ಯವೇನಿಲ್ಲ. ಮುಂದೆ ‘ಚೋ’ ಇದೇ ನಾಟಕವನ್ನು ಸಿನೆಮಾ ಮಾಡಿದ ಸಮಯದಲ್ಲಿ ತಮಿಳುನಾಡಿನಲ್ಲಿ ಡಿಎಂಕೆ ಸರಕಾರ ಅಧಿಕಾರದಲ್ಲಿತ್ತು. ‘ತುಘಲಕ್’ ಚಿತ್ರದ ನಿರ್ಮಾಣ ನಿಲ್ಲಿಸಲು ಡಿಎಂಕೆ ಶತಾಯಗತಾಯ ಪ್ರಯತ್ನಿಸಿತು. ಈ ಅಡೆತಡೆಗಳನ್ನೆಲ್ಲ ಮೀರಿ ಚೋ ‘ತುಘಲಕ್’ ಚಿತ್ರ ತಯಾರಿಸಿದರು.ಕೇಂದ್ರ ಮತ್ತು ರಾಜ್ಯದಲ್ಲಿನ ಆಳುವ ಪಕ್ಷಗಳ ವಿರುದ್ಧ ಟೀಕೆ-ವಿಡಂಬನೆಗಳನ್ನೊಳಗೊಂಡ ದೃಶ್ಯಗಳಿಗೆ ಕತ್ತರಿ ಪ್ರಯೋಗ ಮಾಡಿಯೇ ಸೆನ್ಸಾರ್ ಪ್ರದರ್ಶನಕ್ಕೆ ಅನುಮತಿ ನೀಡಿತು. ಕೆಲವು ಕಡೆಗಳಲ್ಲಿ ಡಿಎಂಕೆ ಕಾರ್ಯಕರ್ತರು ಚಿತ್ರ ಪ್ರದರ್ಶನಕ್ಕೆ ಅಡ್ಡಿಪಡಿಸಿದರು. ಪ್ರದರ್ಶನಗೊಂಡ ಚಿತ್ರಮಂದಿರಗಳ ಪರದೆಯನ್ನು ಹರಿದು ಗೂಂಡಾಗಿರಿ ನಡೆಸಿದರು.

‘ತುಘಲಕ್’ ಪತ್ರಿಕೆ ಪ್ರಾರಂಭಿಸುವ ವೇಳೆಗಾಗಲೇ ‘ಚೋ’ ರಂಗಭೂಮಿ ಮತ್ತು ಸಿನೆಮಾ ನಟರಾಗಿ ಜನಮನ ಗೆದ್ದಿದ್ದರು. ಅವರ ಹರಿತವಾದ ಲೇಖನಗಳು ಮತ್ತು ವ್ಯಂಗ್ಯಚಿತ್ರಗಳು ‘ತುಘಲಕ್’ ಪತ್ರಿಕೆಯ ಮುಖ್ಯ ಬಂಡವಾಳವಾಗಿದ್ದವು. ಜನಸಾಮಾನ್ಯರ ದೃಷ್ಟಿಕೋನದಿಂದ ಬರೆಯುತ್ತಿದ್ದುದು ‘ಚೋ’ ಅವರ ಲೇಖನಗಳ ವೈಶಿಷ್ಟ್ಯವಾಗಿತ್ತು. ಹೀಗಾಗಿ ದಮನಿತರು ಹಾಗೂ ಬಡ ಮಧ್ಯಮವರ್ಗದ ಜನರು ‘ತುಘಲಕ್’ನಲ್ಲಿ ತಮ್ಮ ದನಿಗಳನ್ನು ಗುರುತಿಸಿಕೊಂಡರು. ಇದು ‘ಚೋ’ ಅವರ ಪತ್ರಿಕೆ ಬೆಳಗಾಗುವುದರಲ್ಲಿ ಗಳಿಸಿದ ಜನಪ್ರಿಯತೆಯ ಗುಟ್ಟು. ಹೀಗೆ ಶ್ರೀಸಾಮಾನ್ಯರ ದನಿಯಾದ ಪತ್ರಿಕೆ ರಾಜಕಾರಣಿಗಳಿಗೆ ಮತ್ತು ಪಟ್ಟಭದ್ರ ಹಿತಾಸಕ್ತಿಗಳಿಗೆ ಮಗ್ಗುಲುಮುಳ್ಳಾಯಿತು. ದೊಡ್ಡ ಸವಾಲಾಗಿ ಪರಿಣಮಿಸಿತು. ಆದರೆ ಏನೂ ಮಾಡಲಾಗದೆ ಚಡಪಡಿಸಿದರು. ‘ಚೋ’ ಅವರೇ ಹೇಳಿರುವಂತೆ ತಮಿಳುನಾಡು ರಾಜಕೀಯದಲ್ಲಿ ತುಘಲಕ್’ ಪತ್ರಿಕೆಯದು ತೊಣಚಿಹುಳುವಿನ ಪಾತ್ರ. (ತೊಣಚಿ ಹುಳುವನ್ನು ಕನ್ನಡದಲ್ಲಿ ಕಿತಾಪತಿಗಾರ ಎಂದೂ ಅರ್ಥೈಸಲಾಗುತ್ತದೆ). ತಮ್ಮ ಮೇಲೆ ಪ್ರಯೋಗಿಸಿದ ವ್ಯಂಗ್ಯ-ವಿಡಂಬನಾಸ್ತ್ರಗಳನ್ನು ಸಹಿಸಿಕೊಳ್ಳಲಾಗದೆ ಅಸಹಾಯಕತೆಯಿಂದ ತೊಣಚಿಹುಳು ಹೊಕ್ಕವರಂತೆ ಪಟ್ಟಭದ್ರರು ಚಡಪಡಿಸಿದರು.

‘ತುಘಲಕ್’ ಕೂರಂಬು ವಿಡಂಬನೆಗಳ ಮಧ್ಯೆಯೂ ರಾಜಕಾರಣಿಗಳು ಮತ್ತು ‘ಚೋ’ ರಾಮಸ್ವಾಮಿಯವರ ನಡುವೆ ಒಂದು ಬಗೆಯ ವಿಚಿತ್ರ ನಂಟಿತ್ತು. ಕೆಲವೊಮ್ಮೆ ರಾಜಕಾರಣಿಗಳು ಸಲಹೆ ಸೂಚನೆಗಳಿಗಾಗಿ ‘ಚೋ’ ಜೊತೆ ಸಮಾಲೋಚಿಸುತ್ತಿದ್ದುದುಂಟು. ‘ಚೋ’ ಅನೇಕ ಸಂದರ್ಭಗಳಲ್ಲಿ ರಾಜಕೀಯ ಪಕ್ಷಗಳ ಎರಡು ಬಣಗಳ ನಡುವೆ ಸೂತ್ರಧಾರನ ಕಾರ್ಯನಿರ್ವಹಿಸಿರುವುದೂ ಉಂಟು. ‘ಚೋ’ ಕಾಮರಾಜರಿಗೆ ನಿಕಟರಾಗಿದ್ದರು. 1971ರ ಚುನಾವಣೆಯಲ್ಲಿ ಸಂಸ್ಥಾ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಿದರು. ಪ್ರಚಾರ ಸಭೆಗಳಿಗೆ ಅಪಾರ ಸಂಖ್ಯೆಯಲ್ಲಿ ಜನ ಸೇರುತ್ತಿದ್ದರು. ಆದರೂ ಕಾಮರಾಜರು ಸೋತರು. ‘ತುಘಲಕ್’ನಲ್ಲಿ ಸ್ವನಿಂದನೀಯ ಸಂಪಾದಕೀಯ ಬರೆದು ‘ಚೋ’ ಪ್ರಾಯಶ್ಚಿತ್ತ ಮಾಡಿಕೊಂಡರು.

 1983ರಲ್ಲಿ ಜನತಾ ಪಕ್ಷದ ಮೂಲಕ ವಿಧ್ಯುಕ್ತವಾಗಿ ರಾಜಕೀಯ ಪ್ರವೇಶಿಸಿದ ರಾಮಸ್ವಾಮಿ ಮೊರಾರ್ಜಿ ದೇಸಾಯಿ, ವಾಜಪೇಯಿ, ಜಾರ್ಜ್ ಫೆರ್ನಾಂಡಿಸ್, ಎಲ್.ಕೆ. ಅಡ್ವಾಣಿ, ಜಯಪ್ರಕಾಶ್ ನಾರಾಯಣ್ ಇವರೆಲ್ಲರ ಸಖ್ಯವನ್ನೂ ಬೆಳೆಸಿಕೊಂಡಿದ್ದರು. ಹದಿನೆಂಟು ತಿಂಗಳ ನಂತರ ಆ ಪಕ್ಷ ತೊರೆದರು. ಮತ್ತೆ ಅವರು ವಿಧ್ಯುಕ್ತವಾಗಿ ಯಾವುದೇ ರಾಜಕೀಯ ಪಕ್ಷ ಸೇರಲಿಲ್ಲವಾದರೂ ರಾಜಕಾರಣಿಗಳೊಂದಿಗಿನ ಅವರ ಸ್ನೇಹಸೌಹಾರ್ದಗಳು ಮುಂದುವರಿದಿದ್ದವು. 1984ರಲ್ಲಿ ಆಗಿನ ಆಂಧ್ರ ಪ್ರದೇಶದ ಮುಖ್ಯ ಮಂತ್ರಿ ಎನ್.ಟಿ. ರಾಮ ರಾವ್ ಅವರನ್ನು ಕೇಂದ್ರ ಸರಕಾರ ವಜಾಮಾಡಿದಾಗ ‘ಚೋ’ ದಿಲ್ಲಿಗೆ ಧಾವಿಸಿ ಅವರ ಪರ ವಕಾಲತ್ತು ವಹಿಸಿದರು. ರಾಮ ರಾವ್‌ರನ್ನು ಮತ್ತೆ ಮುಖ್ಯ ಮಂತ್ರಿ ಗದ್ದುಗೆಗೆ ತರುವ ಕಾಂಗ್ರೆಸ್ಸೇತರ ನಾಯಕರ ಜೊತೆ ಸೇರಿಕೊಂಡು ಯಶಸ್ವಿಯಾದರು. ತಮಿಳುನಾಡು ರಾಜಕಾರಣದಲ್ಲಿ ಅವರ ನಡೆ ನೀರೊಳಗಣ ಕಮಲಪತ್ರದಂತೆ ತೋರಿಕೆಗೆ ಕಂಡರೂ ಅವರು ಒಂದು ಗುಲಗಂಜಿ ತೂಕ ಹೆಚ್ಚಾಗಿ ಎಐಎಡಿಎಂಕೆ ಪರ ಇದ್ದರು. ಎಂಜಿಆರ್ ನಿಧನಾನಂತರ ಜಯಲಲಿತಾ ಅವರನ್ನು ಬೆಂಬಲಿಸುವ ಬಗ್ಗೆ ‘ಚೋ’ ಅವರ ಸಂಪೂರ್ಣ ಸಮ್ಮತಿ ಇರಲಿಲ್ಲ. ಎಂಜಿಆರ್ ಸ್ಥಾನಕ್ಕೆ ಬಂದ ಅವರ ಪತ್ನಿ ಜಾನಕಿ ರಾಮಚಂದ್ರನ್ ಅಧಿಕಾರದಲ್ಲಿ ಉಳಿಯಬೇಕೆಂಬುದು ಅವರ ಪ್ರಬಲ ಇಚ್ಛೆಯಾಗಿತ್ತು. ಆದರೆ ರಾಜೀವ್ ಗಾಂಧಿಯವರ ಒಲವು ಜಯಲಲಿತಾ ಕಡೆ ವಾಲಿದ್ದರಿಂದಾಗಿ ಜಾನಕಿಯವರ ಸರಕಾರ 1988ರ ಜನವರಿಯಲ್ಲಿ ಪತನ ಹೊಂದಿತು. ಜಯಲಲಿತಾ ಮುಖ್ಯ ಮಂತ್ರಿಯಾದಾಗ ‘ಚೋ’ ಅವರ ಕಡು ವಿರೋಧಿಗಳಾಗಿದ್ದರು. ಜಿ.ಕೆ.ಮೂಪನಾರ್ ತಮಿಳ್ ಮಾನಿಲ ಕಾಂಗ್ರೆಸ್ ನೂತನ ಪಕ್ಷ ಕಟ್ಟಿದಾಗ, ಎಐಎಡಿಎಂಕೆ ಮತ್ತು ಕೇಂದ್ರದ ಪಿ.ವಿ.ನರಸಿಂಹ ರಾವ್ ಸರಕಾರದ ವಿರುದ್ಧ ಡಿಎಂಕೆ ಮತ್ತು ಹೊಸ ಪಕ್ಷದ ನಡುವೆ ಮೈತ್ರಿ ಬೆಸೆಯುವುದರಲ್ಲಿ ‘ಚೋ’ ಮಹತ್ವದ ಪಾತ್ರವಹಿಸಿದರು.

1998ರ ಲೋಕಸಭೆ ಚುನಾವಣೆಯಲ್ಲಿ ಜಯಲಲಿತಾ ಅವರೊಂದಿಗೆ ಮೈತ್ರಿ ಸಲ್ಲದೆಂದು ಬಿಜೆಪಿಯನ್ನು ಎಚ್ಚರಿಸಿದ್ದರು. ಅವರ ಎಚ್ಚರಿಕೆ ನಿಜವಾಯಿತು. ಚುನಾವಣೆ ನಡೆದ ಒಂದೇ ವರ್ಷದಲ್ಲಿ ಜಯಲಲಿತಾ ಬೆಂಬಲ ವಾಪಸು ಪಡೆದುಕೊಂಡರು. ವಾಜಪೇಯಿ ಸರಕಾರ ಪತನ ಹೊಂದಿದ್ದು ಈಗ ಇತಿಹಾಸ. ‘ಚೋ’ ಅವರ ರಾಜಕೀಯ ಒಲವು ವಿರೋಧಗಳು ಅವರ ‘ತುಘಲಕ್’ನಂತೆಯೇ ಚಂಚಲ ಸ್ವಭಾವದ್ದಿರಬೇಕು. ಇಷ್ಟೂ ವರ್ಷ ಜಯಲಲಿತಾ ಎಂದರೆ ಮುಟ್ಟಿದರೆ ಮುನಿಯಾಗುತ್ತಿದ್ದ ‘ಚೋ’ 2001ರಲ್ಲಿ ಅವರ ಆಪ್ತರಾದರು. (ಕಾಲೇಜಿನ ಹವ್ಯಾಸಿ ರಂಗಭೂಮಿಯ ದಿನಗಳಲ್ಲೇ ‘ಚೋ’ಗೆ ತಾಯಿ ಸಂಧ್ಯಾ ಮೂಲಕ ಮಗಳ ಜೊತೆ ಸ್ನೇಹವಾಗಿತ್ತಂತೆ).ಮೂಪನಾರ್ ಅವರ ತಮಿಳು ಮಾನಿಲ ಕಾಂಗ್ರೆಸ್ ಮತ್ತು ಎಐಎಡಿಎಂಕೆಯನ್ನು ಹತ್ತಿರತಂದರು. ಐದುವರ್ಷಗಳ ಕಾಲ ಡಿಎಂಕೆ ಮತ್ತು ಟಿಎಂಸಿ ಅಧಿಕಾರದ ಚುಕ್ಕಾಣಿ ಹಿಡಿಯಲು ಕಾರಣರಾಗಿದ್ದ ಇದೇ ವ್ಯಕ್ತಿ ಡಿಎಂಕೆ ಮತ್ತು ಕರುಣಾನಿಧಿ ವಿರುದ್ಧ ತಿರುಗಿಬಿದ್ದರು, ಚಾಣಕ್ಯ ತಂತ್ರ ನಡೆಸಿದರು. ಬಹಳ ಕಾಲದ ಹಿಂದೆ ‘ಚೋ’ ಮತ್ತು ಜಯಲಲಿತಾ ಅವರು ಅಭಿನಯಿಸಿದ ‘ದಿ ಹೋಲ್ ಟ್ರುತ್’ ನಾಟಕದ ಒಂದು ಪ್ರಸಂಗ ಅವರಿಬ್ಬರ ನಡುವಣ ಮೈತ್ರಿಯ ಸ್ವರೂಪದ ಬಗ್ಗೆ ಉತ್ತಮ ಭಾಷ್ಯವಾದೀತು ಎಂದು ತಮಿಳುನಾಡಿನ ರಾಜಕೀಯ ತಜ್ಞರು ಅಭಿಪ್ರಾಯಪಡುತ್ತಾರೆ. ನಾಟಕದ ರಂಗ ತಾಲೀಮು ನಡೆದಿತ್ತು. ಖಳನಾಯಕ ‘ಚೋ’ ಜಯಲಲಿತಾರ ಕೊರಳು ಹಿಚುಕಿ ಹತ್ಯೆ ಮಾಡಬೇಕು.

ಚೋ ಕೊರಳು ಹಿಚುಕಲು ಸಮೀಪಿಸಿದಾಗ ಜಯಲಲಿತಾ ಗೊಳ್ಳೆಂದು ನಕ್ಕುಬಿಟ್ಟರಂತೆ! ‘‘ಅವರ ಆ ಕ್ಷಣದ ಮುಖಭಾವ ನನ್ನಲ್ಲಿ ನಗೆಯುುಕ್ಕಿಸಿತು ನಾನೇನು ಮಾಡಲಿ?’’ ಎಂಬುದು ಆಗ ಜಯಲಲಿತಾ ನೀಡಿದ ಸಮಜಾಯಿಷಿ. ನಂತರ ರಾಜಕೀಯ ಉತ್ಕರ್ಷದ ದಿನಗಳಲ್ಲಿ ‘ಚೋ’ ಅವರ ಕಟು ಟೀಕೆಗಳೂ ಜಯಲಲಿತಾ ಅವರಿಗೆ ಹಾಗೆಯೇ ತೋರಿರಬಹುದೇನೋ? ಆಕೆ ನನ್ನ ಕೂರಂಬಿನಂಥ ಚುಚ್ಚುಮಾತುಗಳ ಟೀಕೆಯನ್ನೂ ತಮಾಷೆ ಎಂದೇ ಭಾವಿಸಿರಬಹುದೇನೋ ಎಂದು ‘ಚೋ’ ಅವರೇ ಹೇಳಿರುವುದುಂಟು. ಇದೆಲ್ಲ ಏನೇ ಇದ್ದರೂ ಕೊನೆಯ ದಿನಗಳಲ್ಲಿ ‘ಚೋ’ ಮತ್ತು ಜಯಲಲಿತಾ ನಿಕಟ ಮೈತ್ರಿ ಹೊಂದಿದ್ದರು. ಕಳೆದ ವರ್ಷ ಉಸಿರಾಟದ ತೊಂದರೆಯಿಂದ ‘ಚೋ’ ಆಸ್ಪತ್ರೆ ಸೇರಿದಾಗ ಜಯಲಲಿತಾ ಆಸ್ಪತ್ರೆಗೆ ಹೋಗಿ ಅವರ ಯೋಗಕ್ಷೇಮ ವಿಚಾರಿಸಿದ್ದರು. ತಮಿಳು ರಾಜಕೀಯದಲ್ಲಿ ಜಯಲಲಿತಾರಿಗೆ ಆಪ್ತರಾಗಿದ್ದವರಿಗೂ ಅಲಭ್ಯವಾಗಿದ್ದ ಅಪರೂಪದ ಸೌಜನ್ಯವಿದು. ಜಯಲಲಿತಾ ನಿಧನರಾದ ಮೂರೇದಿನಗಳಲ್ಲಿ ‘ಚೋ’ ರಾಮಸ್ವಾಮಿಯವರೂ ಇಹಲೋಕಕ್ಕೆ ವಿದಾಯ ಹೇಳಿದರು. ‘ಚೋ’ ರಾಮಸ್ವಾಮಿಯವರು 1999ರಿಂದ2005ರವರೆಗೆ ರಾಜ್ಯ ಸಭೆ ಸದಸ್ಯರಾಗಿದ್ದರು. ಬಿಜೆಪಿ ಸರಕಾರ ಅವರನ್ನು ನಾಮಕರಣ ಮಾಡಿತ್ತು. ಅವರು ಪತ್ರಿಕೋದ್ಯಮದಲ್ಲಿನ ‘ಘನ’ಸಾಧನೆಗಾಗಿ ನೀಡುವ ಪ್ರತಿಷ್ಠಿತ ಗೋಯಂಕ ಪ್ರಶಸ್ತಿಗೆ ಪಾತ್ರರಾಗಿದ್ದರು. ‘ಚೋ’ ನಾಟಕವೊಂದರ ಪಾತ್ರ. ಆ ಪಾತ್ರದಲ್ಲಿ ರಾಮಸ್ವಾಮಿಯವರ ಅಮೋಘ ಅಭಿನಯ ಕಂಡು ಬೆರಗಾದ ಅಭಿಮಾನಿಗಳು ಅವರ ಹೆಸರಿಗೆ ‘ಚೋ’ ವಿಶೇಷಣ ಅಂಟಿಸಿದರು. ಹೀಗೆ ಅಂಟಿಕೊಂಡದ್ದು ಇತಿಹಾಸದಲ್ಲಿ ‘ಚೋ’ ರಾಮಸ್ವಾಮಿಯಾಗಿ ಚಿರದಾಖಲೆಯಾಗಿ ಉಳಿಯಿತು.

Writer - ಜಿ.ಎನ್. ರಂಗನಾಥ ರಾವ್

contributor

Editor - ಜಿ.ಎನ್. ರಂಗನಾಥ ರಾವ್

contributor

Similar News

ನಾಸ್ತಿಕ ಮದ