ಕಪ್ಪುಹಣವನ್ನು ಬಿಳಿಯಾಗಿಸಲು ಡಿಡಿಗಳನ್ನು ಬಳಸಿದ್ದು ಹೇಗೆ.....?

Update: 2016-12-18 10:06 GMT

ಬೆಂಗಳೂರು,ಡಿ.18: ಕಪ್ಪುಹಣವನ್ನು ನಿರ್ಮೂಲಿಸುವ ಸರಕಾರದ ಮಹತ್ವಾಕಾಂಕ್ಷೆಯ ಕ್ರಮದಲ್ಲಿ ನೋಟು ರದ್ದತಿಯ ಬಳಿಕ ಆದಾಯ ತೆರಿಗೆ ಇಲಾಖೆ, ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಪೊಲೀಸರು ದೇಶಾದ್ಯಂತ ದಾಳಿಗಳನು ನಡೆಸುತ್ತಿದ್ದಾರೆ. ಬ್ಯಾಂಕುಗಳ ಶಾಮೀಲಾತಿಯೊಂದಿಗೆ ಜನರಿಗೆ ವಿತರಣೆಯಾಗಬೇಕಾಗಿದ್ದ ಕೋಟ್ಯಂತರ ರೂ.ಗಳ ಹೊಸನೋಟುಗಳು ಅಕ್ರಮ ವಿಧಾನಗಳ ಮೂಲಕ ಕೆಲವೇ ವ್ಯಕ್ತಿಗಳ ಬೊಕ್ಕಸ ಸೇರಿರುವುದು ಈ ದಾಳಿಗಳಿಂದ ಬೆಳಕಿಗೆ ಬಂದಿದೆ. ಕಪ್ಪುಹಣ ಕುಳಗಳು ಬ್ಯಾಂಕಿಗೆ ಹಳೆಯ ನೋಟುಗಳನ್ನು ನೀಡಿ ಡಿಮಾಂಡ್ ಡ್ರಾಫ್ಟ್(ಡಿಡಿ)ಗಳನ್ನು ಪಡೆದು ಕೊಂಡು, ಬಳಿಕ ಅವುಗಳನ್ನು ರದ್ದುಗೊಳಿಸಿ ಹೊಸನೋಟುಗಳಲ್ಲಿ ಹಣವನ್ನು ವಾಪಸ್ ಪಡೆದುಕೊಂಡಿದ್ದಾರೆ. ಇದು ಅಂತಹ ಒಂದು ಪ್ರಕರಣ.

 ಬೆಂಗಳೂರಿನ ಬಸವನಗುಡಿಯಲ್ಲಿರುವ ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾದ ಶಾಖೆ ಸಿಬಿಐ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಅಗರಬತ್ತಿಗಳ ತಯಾರಿಕೆ ಕಂಪನಿ ‘ಓಂಕಾರ ಪರಿಮಳ ಮಂದಿರ’ದ ನಿರ್ದೇಶಕ ಎಸ್.ಗೋಪಾಲ್ ತನ್ನದೇ ಕಂಪನಿಯಲ್ಲಿ ಉದ್ಯೋಗಿಯಾಗಿರುವ ಮಗ ಅಶ್ವಿನ್ ಸಂಕು ಜೊತೆ ಸೇರಿಕೊಂಡು ಬ್ಯಾಂಕಿನಿಂದ 70 ಲ.ರೂ.ಮೌಲ್ಯದ ಡಿಡಿಗಳನ್ನು ಖರೀದಿಸಿದ್ದ.

ನ.15-18ರ ನಡುವೆ ಬಜಾಜ್ ಫೈನಾನ್ಸ್ ಲಿ.ಹೆಸರಿನಲ್ಲಿ ಈ ಡಿಡಿಗಳನ್ನು ನೀಡಲಾಗಿತ್ತು. ಡಿಡಿಗಳ ಖರೀದಿಗಾಗಿ ನಗದುಹಣವನ್ನು ಹಳೆಯ ನೋಟುಗಳ ಮೂಲಕ ಬ್ಯಾಂಕಿಗೆ ಪಾವತಿಸಲಾಗಿತ್ತು. ಕೆಲವೇ ದಿನಗಳಲ್ಲಿ ಗೋಪಾಲ್ ಈ ಎಲ್ಲ ಡಿಡಿಗಳನ್ನು ರದ್ದುಗೊಳಿಸಿದ್ದು, ಬ್ಯಾಂಕು ಅಷ್ಟೂ ಹಣವನ್ನು ಹೊಸನೋಟುಗಳಲ್ಲಿ ವಾಪಸ್ ಮಾಡಿತ್ತು.

ಇದು ಆರ್‌ಬಿಐ ನಿಯಮಾವಳಿಗಳಿಗೆ ವಿರುದ್ಧ ಎಂದು ಬ್ಯಾಂಕ್ ಅಧಿಕಾರಿಗಳ ಸಂಘವು ಹೇಳಿದೆ. ಬ್ಯಾಂಕುಗಳು ನಗದುಹಣವನ್ನು ಪಡೆದುಕೊಂಡು ಡಿಡಿಗಳನ್ನು ವಿತರಿಸುವಂತಿಲ್ಲ.

ಗೋಪಾಲ್,ಸಂಕು ಮತ್ತು ಬ್ಯಾಂಕ್ ಶಾಖೆಯ ಸೀನಿಯರ್ ಮ್ಯಾನೇಜರ್ ಲಕ್ಷ್ಮೀನಾರಾಯಣ ಅವರನ್ನು ಸಿಬಿಐ ಬಂಧಿಸಿದೆ. ಲಕ್ಷ್ಮೀನಾರಾಯಣ ಶಾಮೀಲಾಗಿರದೆ ಈ ಅಕ್ರಮ ನಡೆದಿರಲು ಸಾಧ್ಯವಿಲ್ಲ ಎಂದು ಸಿಬಿಐ ಶಂಕಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News