ಜನರ ಬವಣೆ ನೋಡಿ ‘ಮಜಾ’ ತೆಗೆದುಕೊಳ್ಳುತ್ತಿರುವ ಪ್ರಧಾನಿ ಮೋದಿ: ಖರ್ಗೆ ಲೇವಡಿ
ಬೆಂಗಳೂರು, ಡಿ. 26: ಗರಿಷ್ಠ ಮುಖಬೆಲೆಯ ನೋಟು ಚಲಾವಣೆ ರದ್ದತಿ ಮೂಲಕ ಪ್ರಧಾನಿ ಮೋದಿ ಶೇ.02ರಷ್ಟು ಖೋಟಾನೋಟು ತಡೆ, ಭಯೋತ್ಪಾದನೆ ಚಟುವಟಿಕೆಗಳ ನಿಗ್ರಹ ನೆಪದಲ್ಲಿ ಕೋಟ್ಯಂತರ ಜನರಿಗೆ ತೊಂದರೆ ನೀಡುತ್ತಿದೆ. ಅಲ್ಲದೆ, ಜನರ ಬವಣೆ ನೋಡಿ ಪ್ರಧಾನಿ ಮೋದಿ ‘ಮಜಾ’ ತೆಗೆದುಕೊಳ್ಳುತ್ತಿದ್ದಾರೆಂದು ಲೋಕಸಭೆ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದಾರೆ.
ಸೋಮವಾರ ಚಿತ್ರಕಲಾ ಪರಿಷತ್ತಿನಲ್ಲಿ ನೋಟಿನ ಬವಣೆ ಕುರಿತು ಛಾಯಾಗ್ರಾಹಕ ವೆಂಕಟೇಶ್ ಅವರ ಛಾಯಾಚಿತ್ರ ಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಜನರಿಗೆ ಇನ್ನೂ ನಗದು ರಹಿತ ವಹಿವಾಟಿನ ಬಗ್ಗೆ ಪೂರ್ಣ ಮಾಹಿತಿ ಇಲ್ಲ. ಪ್ರಪಂಚದ ಯಾವ ದೇಶವೂ ಸಂಪೂರ್ಣ ನಗದು ರಹಿತವಾಗಿಲ್ಲ. ಯೂರೋ, ಪೌಂಡ್, ಡಾಲರ್ ಇನ್ನೂ ಅಸ್ತಿತ್ವದಲ್ಲಿದೆ ಎಂದು ಸ್ಪಷ್ಟಪಡಿಸಿದರು.
500ರೂ. ಮತ್ತು 1ಸಾವಿರ ರೂ.ನೋಟು ಅಮಾನ್ಯದ ಬಗ್ಗೆ ಅಗತ್ಯ ಸಿದ್ಧತೆ ಇಲ್ಲದೆ ಏಕಾಏಕಿ ಚಲಾವಣೆ ರದ್ದುಗೊಳಿಸಿದ್ದು, ಗೊಂದಲಕ್ಕೆ ಕಾರಣ. ರಿಸರ್ವ್ ಬ್ಯಾಂಕ್ ಅಧಿಕಾರಿಗಳು, ಆರ್ಥಿಕ ತಜ್ಞರ ಜತೆ ಚರ್ಚೆ ಮಾಡಬೇಕಿತ್ತು. ಆದರೆ, ಆ ಕೆಲಸ ಮಾಡದೆ ಜನತೆ ಸಂಕಷ್ಟಕ್ಕೆ ಸಿಲುಕಿದ್ದರೂ, ಮೋದಿ ತಾವು ಮಾಡಿದ್ದೇ ಸರಿ ಎಂದು ಸಮರ್ಥಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
ನೋಟು ರದ್ದುಗೊಳಿಸುವ ಮೂಲಕ 15ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಮೊತ್ತವನ್ನು ಚಲಾವಣೆಯಿಂದ ಹೊರ ತೆಗೆಯಲಾಗಿದೆ. ಕೇವಲ 5-6 ಲಕ್ಷ ಕೋಟಿ ರೂ.ನೋಟುಗಳಷ್ಟೇ ಚಲಾವಣೆಗೆ ನೀಡಲಾಗಿದೆ. ಹೀಗಾಗಿ ಜನರಿಗೆ ಎಲ್ಲಿಯೂ ಹಣವೇ ಸಿಗುತ್ತಿಲ್ಲ ಎಂದು ಖರ್ಗೆ ದೂರಿದರು.
ನೋಟು ರದ್ದತಿಯ ಬಳಿಕವೂ 2 ಸಾವಿರ ರೂ.ಮುಖಬೆಲೆಯ ನೋಟುಗಳು ಭಯೋತ್ಪಾದಕರ ಬಳಿ ಸಿಕ್ಕಿಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದ ಮಲ್ಲಿಕಾರ್ಜುನ ಖರ್ಗೆ, ಇನ್ನು 4 ದಿನದಲ್ಲಿ ಪ್ರಧಾನಿ ಮೋದಿ ನೋಟಿನ ಸಮಸ್ಯೆಯನ್ನು ಬಗೆಹರಿಸಲು ಸಾಧ್ಯವೇ? ಅದು ಯಾವುದೇ ಕಾರಣಕ್ಕೂ ಆಗುವುದಿಲ್ಲ. ಬ್ಯಾಂಕು ಅಧಿಕಾರಿಗಳ ಪ್ರಕಾರ ಇನ್ನೂ ನಾಲ್ಕೈದು ತಿಂಗಳಾದರೂ ಬೇಕಾಗುತ್ತದೆ ಎಂದು ಟೀಕಿಸಿದರು.
ಬೇಡಿಕೆಗೆ ತಕ್ಕಷ್ಟು ಪ್ರಮಾಣದಲ್ಲಿ ನೋಟಿನ ಪೂರೈಕೆಗೆ ಮುದ್ರಣ ಕಾಗದ ಸೇರಿದಂತೆ ಅಗತ್ಯ ಸೌಲಭ್ಯಗಳಿಲ್ಲ. ಹೀಗಾಗಿ ಜನರು ತಮ್ಮ ಬೆವರಿನ ಫಲವನ್ನು ಬ್ಯಾಂಕಿನಿಂದ ಪಡೆಯಲು ‘ಪ್ರಾಣ ತ್ಯಾಗ’ ಮಾಡಬೇಕೆಂಬುದು ಯಾವ ಸೀಮೆಯ ದೇಶಭಕ್ತಿ ಎಂದು ಖರ್ಗೆ ವಾಗ್ದಾಳಿ ನಡೆಸಿದರು.
ಪ್ರಧಾನಿ ಮೋದಿ ತಪ್ಪು ತೀರ್ಮಾನ, ತಪ್ಪು ನೀತಿಯಿಂದ ಜನರಿಗೆ ಸಂಕಷ್ಟ ಒದಗಿದೆ. ಇದಕ್ಕೆ ನರೇಂದ್ರ ಮೋದಿಯವರೇ ನೇರ ಹೊಣೆ ಎಂದು ಆರೋಪಿಸಿದ ಅವರು, ನೋಟು ರದ್ದತಿ ಬಳಿಕ ಕೇವಲ 46 ದಿನಗಳಲ್ಲಿ ಒಟ್ಟು 130 ಆದೇಶಗಳನ್ನು ಹೊರಡಿಸಲಾಗಿದೆ. ಇದರಿಂದ ದೇಶದ ಆರ್ಥಿಕತೆ ಹದಗೆಟ್ಟಿದೆ. ಉತ್ಪಾದನಾ ಕ್ಷೇತ್ರ, ಹಾಗೂ ಅಸಂಘಟಿತ ಕಾರ್ಮಿಕರಿಗೆ ಬೀದಿಗೆ ಬಂದಿದ್ದಾರೆ ಎಂದು ಟೀಕಿಸಿದರು.
ಆರಂಭದಲ್ಲಿ ಎಲ್ಲರೂ ಏನೋ ಭಾವಿಸಿದ್ದರೂ, ಇದೀಗ ಅದರ ರೂಪವೇ ಬೇರೆಯಾಗಿದೆ. ದಿನಕ್ಕೊಂದು ನಿಯಮ ರೂಪಿಸುತ್ತಿದ್ದು, ನ್ಯಾಯಸಮ್ಮತವಾಗಿ ಸಂಪಾದಿಸಿದ ಹಣವನ್ನು ಬ್ಯಾಂಕಿನಲ್ಲಿ ಹಾಕಿದರೂ ಅವರನ್ನು ಕಪ್ಪು ಕುಳಗಳೆಂದು ಕರೆಯಲಾಗುತ್ತಿದೆ ಎಂದು ಲೇವಡಿ ಮಾಡಿದರು.