ದಲಿತರ ಮೇಲೆ ಹೆಚ್ಚುತ್ತಿರುವ ದೌರ್ಜನ್ಯ: ಉಪರಾಷ್ಟ್ರಪತಿ ಕಳವಳ
ಬೆಂಗಳೂರು, ಡಿ.27: ದೇಶದಲ್ಲಿ ಸಾಮಾಜಿಕ ನ್ಯಾಯದ ಪರಿಕಲ್ಪನೆ ಸಂಪೂರ್ಣವಾಗಿ ಜಾರಿಗೆ ಬರದ ಹಿನ್ನೆಲೆಯಲ್ಲಿ ದಲಿತರಲ್ಲಿನ ಶೇ.39ರಷ್ಟು ಮಕ್ಕಳನ್ನು ಬಿಸಿಯೂಟದ ಸಂದರ್ಭದಲ್ಲಿ ಪ್ರತ್ಯೇಕವಾಗಿ ಕೂರಿಸಲಾಗುತ್ತದೆ ಹಾಗೂ ಪ್ರತಿ 18 ನಿಮಿಷಕ್ಕೊಮ್ಮೆ ದಲಿತರ ಮೇಲೆ ದೌರ್ಜನ್ಯವಾಗುತ್ತದೆ ಎಂದು ಉಪರಾಷ್ಟ್ರಪತಿ ಹಾಮಿದ್ ಅನ್ಸಾರಿ ಹೇಳಿದ್ದಾರೆ.
ಮಂಗಳವಾರ ಶ್ರೀಜಗದ್ಗುರು ರೇಣುಕಾಚಾರ್ಯ ಶಿಕ್ಷಣ ಸಂಸ್ಥೆಯಲ್ಲಿ ಭಾರತೀಯ ವಕೀಲರ ಸಂಘ ಆಯೋಜಿಸಿದ್ದ 9 ನೆ ರಾಷ್ಟ್ರೀಯ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡಿದರು. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ವರದಿಯಂತೆ 2012ರಲ್ಲಿ ಶೇ.37ರಷ್ಟು ದಲಿತರು ಬಡತನದ ರೇಖೆಗಿಂತ ಕೆಳಗಿನ ಮಟ್ಟದಲ್ಲಿ ಜೀವನ ನಡೆಸುತ್ತಿದ್ದಾರೆ. ಶೇ. 54 ರಷ್ಟು ಜನ ಅಪೌಷ್ಠಿಕತೆಯಿಂದ ನರಳುತ್ತಿದ್ದಾರೆ. ಒಂದು ಸಾವಿರದಲ್ಲಿ 83 ರಷ್ಟು ಮಕ್ಕಳು ಜನಿಸುವ ಮುನ್ನವೇ ಸಾವನ್ನಪ್ಪುತ್ತಿದ್ದಾರೆ. ಶೇ 45ರಷ್ಟು ಜನ ಅನಕ್ಷರಸ್ಥರಾಗಿದ್ದಾರೆ. ಗ್ರಾಮೀಣ ಭಾಗದಲ್ಲಿ ಶೇ. 28 ರಷ್ಟು ದಲಿತರನ್ನು ಪೊಲೀಸ್ ಠಾಣೆ ಪ್ರವೇಶಿಸದಂತೆ ತಡೆಯುತ್ತಿರುವುದು ಆಘಾತಕಾರಿ ಬೆಳವಣಿಗೆ ಎಂದು ಹೇಳಿದರು.
ದೇಶದಲ್ಲಿನ ಶೇ. 45ರಷ್ಟು ಸಂಪತ್ತು ಶೇ.1ರಷ್ಟಿರುವ ಶ್ರೀಮಂತರ ಕೈಯಲ್ಲಿದೆ. ಇದರಿಂದಾಗಿ ಸಮಾಜದಲ್ಲಿ ಆರ್ಥಿಕ ಅಸಮಾನತೆ ಮತ್ತು ಅಸ್ಪಶ್ಯತೆ ಮುಂದುವರೆಯುವುದಕ್ಕೆ ಕಾರಣವಾಗಿದೆ. ಸಮಾಜದ ಪ್ರತಿಯೊಬ್ಬರ ಅಭಿವೃದ್ಧಿ ಮತ್ತು ಶೋಷಿತರ ಬೆಳವಣಿಗೆಗೆ ಸಮಾನತೆ ಪ್ರಬಲವಾದ ಅಸ್ತ್ರವಾಗಿರಬೇಕು. ಆದರೆ, ಅದು ಪ್ರಸ್ತುತ ಸಾಧ್ಯವಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಸಾಮಾಜಿಕ ನ್ಯಾಯ ಸರಿಯಾಗಿ ಪಾಲನೆಯಾಗಬೇಕಾದರೆ ಆರ್ಥಿಕ ವಲಯದಲ್ಲೂ ಸಮಾನ ಅವಕಾಶ ಮತ್ತು ಸೌಲಭ್ಯಗಳು ದೊರೆಯಬೇಕು. ದೇಶದಲ್ಲಿ ಅಸಮಾನತೆ ಹಾಗೂ ದೌರ್ಜನ್ಯ ಪ್ರಕರಣಗಳು ಹೆಚ್ಚಾಗುತ್ತಿವೆ. ದೇಶದಲ್ಲಿ 60 ದಶಲಕ್ಷ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಅದರಲ್ಲಿ ಶೇ. 75 ರಷ್ಟು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಹಾಗೂ ಅಲ್ಪಸಂಖ್ಯಾತರಾಗಿದ್ದಾರೆ. ಇವರ ಪ್ರಮಾಣ 4.6 ದಶಲಕ್ಷದಷ್ಟಿದೆ. ಅಲ್ಲದೆ. ಇನ್ನೂ ಜಾತಿ ವ್ಯವಸ್ಥೆ ಮುಂದುವರೆಯುತ್ತಿರುವುದು ಅತ್ಯಂತ ಆಘಾತಕರ ಸಂಘತಿ. ಈ ಎಲ್ಲ ಬೆಳವಣಿಗೆಗಳು ದೇಶದ ಅಭಿವೃದ್ಧಿಗೆ ಮಾರಕವಾಗುತ್ತಿವೆ ಎಂದು ಹೇಳಿದರು.
ರಾಜ್ಯಪಾಲ ವಿ.ಆರ್.ವಾಲಾ ಮಾತನಾಡಿ, ನ್ಯಾಯವಾದಿಗಳು ನ್ಯಾಯವನ್ನು ಎತ್ತಿಹಿಡಿಯುವ ಕೆಲಸ ಮಾಡಬೇಕು. ಧರ್ಮ, ನೀತಿಯನ್ನು ಮೀರಿ ಕೆಲಸ ಮಾಡಬಾರದು, ಶೋಷಿತರು ಹಾಗೂ ನಿಜವಾಗಿ ನ್ಯಾಯದಿಂದ ವಂಚಿತರಾದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಬೇಕಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಜಾತೀಯತೆ ಹಾಗೂ ಅಸ್ಪೃಶ್ಯತೆ ಸಮಾಜದಲ್ಲಿ ಇನ್ನೂ ಜೀವಂತವಾಗಿದೆ. ಹೀಗಾಗಿ ಸಮಾಜ ಅಭಿವೃದ್ಧಿ ಹೊಂದಲು ಸಾಧ್ಯವಾಗುತ್ತಿಲ್ಲ. ಖಾಸಗಿ ವಲಯದಲ್ಲೂ ಮೀಸಲಾತಿಯ ಅಗತ್ಯವಿದೆ ಎಂದು ಹೇಳಿದ ಅವರು, ರಾಜ್ಯ ಸರಕಾರ ಸಾಮಾಜಿಕ ನ್ಯಾಯ ಕಲ್ಪಿಸಲು ಬದ್ಧವಾಗಿದೆ ಹಾಗೂ ಶಿಕ್ಷಣ, ಉದ್ಯೋಗ, ವಸತಿ, ಅಧಿಕಾರ ಹಂಚಿಕೆ ಎಲ್ಲರಿಗೂ ಸಿಕ್ಕಾಗ ಮಾತ್ರ ಸಮಾನ ಅಭಿವೃದ್ಧಿ ಹೊಂದಲು ಸಾಧ್ಯವಾಗಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕಾನೂನು ಸಚಿವ ಟಿ.ಬಿ. ಜಯಚಂದ್ರ, ಭಾರತೀಯ ವಕೀಲರ ಸಂಘದ ಅಧ್ಯಕ್ಷ ಜಿತೇಂದ್ರ ಶರ್ಮಾ, ಹಿರಿಯ ವಕೀಲರಾದ ಆರ್.ಎಸ್. ಚೀಮ, ಟಿ.ಪಿ. ರಾವ್ ಮತ್ತಿತರರು ಉಪಸ್ಥಿತರಿದ್ದರು.
ಸಾಚಾರ್ ವರದಿ ಗಂಭೀರವಾಗಿ ಪರಿಗಣಿಸಿ
‘ಸಾಮಾಜಿಕ ನ್ಯಾಯ ಎಲ್ಲ ಹಂತದ ಜನರಿಗೂ ಸಿಗಬೇಕಿದೆ. ಸಮಾನ ನ್ಯಾಯ ಪ್ರತಿಪಾದನೆ ಆಗಬೇಕು. ಸಾಚಾರ್ ಸಮಿತಿ ವರದಿಯಲ್ಲಿ ನೀಡಿರುವ ಪ್ರಸ್ತಾಪಗಳನ್ನು ಸರಕಾರಗಳು ಗಂಭೀರವಾಗಿ ಪರಿಗಣಿಸಬೇಕು.’
-ಹಾಮಿದ್ ಅನ್ಸಾರಿ, ಉಪ ರಾಷ್ಟ್ರಪತಿ