ನೋಟು ರದ್ದತಿ ಆರ್ಥಿಕ ವ್ಯಭಿಚಾರ: ವೀರಪ್ಪ ಮೊಯ್ಲಿ

Update: 2016-12-28 12:04 GMT

ಬೆಂಗಳೂರು, ಡಿ.28: ಸರ್ವಾಧಿಕಾರಿಗಳ ಆಡಳಿತದಲ್ಲಿ ಮಾತ್ರ ಈ ರೀತಿ ನೋಟು ನಿಷೇಧ ಆಗುತ್ತದೆ. ಈ ಹಿಂದೆ ಲೆನಿನ್ ಆಡಳಿತದಲ್ಲಿ ಈ ರೀತಿ ನೋಟ್ ಬ್ಯಾನ್ ಆಗಿತ್ತು. ಆಗ ಆರ್ಥಿಕ ತಜ್ಞರು ಇದೊಂದು ಆರ್ಥಿಕ ವ್ಯಭಿಚಾರ ಎಂದು ಹೇಳಿದ್ದರು. ಅದೇ ರೀತಿ ಭಾರತದಲ್ಲಿ ಪ್ರಧಾನಿ ಮೋದಿ ಮಾಡಿರುವುದು ಕೂಡ ಆರ್ಥಿಕ ವ್ಯಭಿಚಾರ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ಹೇಳಿದ್ದಾರೆ.

ತುಮಕೂರು ರಸ್ತೆಯಲ್ಲಿರುವ ಪ್ರಭಾಕರ ಕೊರೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಕಾಂಗ್ರೆಸ್ ಪಕ್ಷದ 132ನೆ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಚಲಾವಣೆಯಲ್ಲಿದ್ದ ಶೇ.86ರಷ್ಟು ನೋಟುಗಳನ್ನು ರದ್ದು ಮಾಡಿ ಜನರ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದಾರೆ. ಆದರೆ ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್‌ಮಾಡಿ ಉಗ್ರರನ್ನು ಕೊಂದಿದ್ದಕ್ಕಿಂತ ಹೆಚ್ಚು ಜನ ನೋಟು ನಿಷೇಧದಿಂದ ಪ್ರಾಣ ಬಿಟ್ಟಿದ್ದಾರೆ. ನೋಟು ನಿಷೇಧದ ವಿರುದ್ದ ನಮ್ಮ ಕಾರ್ಯಕರ್ತರು ಹೋರಾಟ ಮಾಡಬೇಕು ಎಂದರು.

ವಿಧಾನಸಭೆ ಚುನಾವಣೆಗೆ ಕೇವಲ ಒಂದೂವರೆ ವರ್ಷ ಮಾತ್ರ ಬಾಕಿ ಇದೆ. ನಮ್ಮ ಕಾರ್ಯಕರ್ತರು ತಲೆ ಎತ್ತಿ ಜನರ ಬಳಿ ಹೋಗುವಂತಹ ಕೆಲಸಗಳನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಈಗಾಗಲೇ ಬಿಜೆಪಿ, ಜೆಡಿಎಸ್ ತಾವು ಅಧಿಕಾರಕ್ಕೆ ಬಂದಿದ್ದೇವೆ ಎಂಬ ಭ್ರಮೆಯಲ್ಲಿದ್ದಾರೆ. ಬಿಜೆಪಿಯವರು ಮಿಷನ್ 150 ಎನ್ನುತ್ತಿದ್ದಾರೆ, ಜೆಡಿಎಸ್‌ನವರು 125 ಸೀಟು ಗೆಲ್ಲುತ್ತೇವೆ ಎಂದು ಹೇಳುತ್ತಿದ್ದಾರೆ. ಆದರೆ ಇದ್ಯಾವುದು ನಡೆಯುವುದಿಲ್ಲ. ಕಾಂಗ್ರೆಸ್ ಪಕ್ಷವೇ ಮತ್ತೊಮ್ಮ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್ ಅಧಿಕಾರಕ್ಕಾಗಿ ಉದಯವಾದ ಪಕ್ಷವಲ್ಲ. ಬ್ರಿಟಿಷರ ವಿರುದ್ಧ ಹೋರಾಟ ನಡೆಸಲು ಉದಯವಾದ ಪಕ್ಷ. ಮಹಾತ್ಮ ಗಾಂಧಿ, ವಲ್ಲಭ ಬಾಯ್ ಪಟೇಲ್, ಜವಾಹರ ಲಾಲ್ ನೆಹರು ಮುಂತಾದವರು ಕಾಂಗ್ರೆಸ್ ಸೇನಾನಿಗಳಾಗಿದ್ದರು. ದೇಶದ ಅಭಿವೃದ್ಧಿಗೆ ಆರ್ಥಿಕ ಬೆಳವಣಿಗೆಗೆ ಸಾಮಾಜಿಕ ಬದಲಾವಣೆ ಅಗತ್ಯ ಎಂದು ನೆಹರು ನಂಬಿದ್ದರು. ಅಲ್ಲದೆ ಅಭಿವೃದ್ಧಿಗೆ ಬಲವಾದ ಅಡಿಪಾಯ ಹಾಕಿದ್ದರು. ಇದೇ ಉದ್ದೇಶದಿಂದ ಪಂಚವಾರ್ಷಿಕ ಯೋಜನೆ ಜಾರಿಗೆ ತಂದರು. ದೇಶದ ಇತಿಹಾಸ ಎಂದರೆ ಕಾಂಗ್ರೆಸ್ ಪಕ್ಷದ ಇತಿಹಾಸ. ಇದನ್ನು ಬಿಜೆಪಿಯವರು ತಿಳಿದುಕೊಳ್ಳಬೇಕು. ದೇಶಕ್ಕೆ ಸ್ವಾತಂತ್ರ ತಂದುಕೊಟ್ಟವರು, ದೇಶಕ್ಕಾಗಿ ಬಲಿದಾನ ಮಾಡಿದವರು ಕಾಂಗ್ರೆಸ್‌ನವರೇ ಹೊರತು ಬಿಜೆಪಿಯವರಲ್ಲ ಎಂದು ಸಿದ್ದರಾಮಯ್ಯ ತಿಳಿಸಿದರು.

ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಮಾತನಾಡಿ, ಸ್ವಾತಂತ್ರ ಬಂದ 70 ವರ್ಷಗಳಲ್ಲಿ ಭಾರತವನ್ನು ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕ ವ್ಯವಸ್ಥೆಯನ್ನಾಗಿ ಕಾಂಗ್ರೆಸ್ ಮಾಡಿದೆ. ಆದರೆ ಬಿಜೆಪಿ ಸುಳ್ಳುಗಳನ್ನು ಮಾರಾಟ ಮಾಡಿ ಅಧಿಕಾರಕ್ಕೆ ಬಂದಿದೆ ಎಂದರು.

ಕಾರ್ಯಕ್ರಮದಲ್ಲಿ ಸಚಿವರಾದ ರಾಮಲಿಂಗಾ ರೆಡ್ಡಿ, ಕೆ.ಜೆ.ಜಾರ್ಜ್, ಎಚ್.ಆಂಜನೇಯ, ಎಚ್.ಎಸ್.ಮಹದೇವ ಪ್ರಸಾದ್, ಮಾಜಿ ಕೇಂದ್ರ ಸಚಿವರಾದ ರಹ್ಮಾನ್ ಖಾನ್, ಕೆ.ಎಚ್.ಮುನಿಯಪ್ಪ, ಶಾಸಕರಾದ ಮುನಿರತ್ನ, ಎಸ್.ಟಿ.ಸೋಮಶೇಖರ್ ಮುಂತಾದವರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News