ಓ .. ಮೆಣಸೇ
*ನೋಟು ಅಮಾನ್ಯ ವಿಷಯದಲ್ಲಿ ಇಡೀ ದೇಶವೇ ಮೋದಿ ಜೊತೆಗಿದೆ
-ರವಿಶಂಕರ್ ಪ್ರಸಾದ್,ಕೇಂದ್ರ ಸಚಿವ ]
ಹೌದು, ದೇಶದ ಕಾಳದಂಧೆಕೋರರೆಲ್ಲ ಮೋದಿಯ ಜೊತೆಗೆ ಗಟ್ಟಿಯಾಗಿ ನಿಂತಿದ್ದಾರೆ.
---------------------
ಹಾಸ್ಯ ಸಾಹಿತ್ಯದ ಮೂಲಕ ಜನರ ವ್ಯಥೆೆಗಳನ್ನು ದೂರ ಮಾಡಿ ಆರೋಗ್ಯವನ್ನು ಕಾಪಾಡಬಹುದು
-ರಮಾನಾಥ ರೈ,ಸಚಿವ
ರೇಷನ್ ಅಂಗಡಿಯಲ್ಲಿ ಜನರಿಗೆ ಪುಕ್ಕಟೆ ಹಾಸ್ಯ ಸಾಹಿತ್ಯ ಭಾಗ್ಯವನ್ನು ಒದಗಿಸಬಹುದಲ್ಲ?
---------------------
ನಾನು ಪಕ್ಷಾಂತರಿಯೇ ಹೊರತು ತತ್ವಾಂತರಿಯಲ್ಲ
-ಶ್ರೀನಿವಾಸ ಪ್ರಸಾದ್, ಮಾಜಿ ಸಚಿವ
ಅತ್ತ ಪಕ್ಷವೂ ಇಲ್ಲ, ಇತ್ತ ತತ್ವವೂ ಇಲ್ಲ ಎನ್ನುವ ಸ್ಥಿತಿಯಲ್ಲಿ ಹೇಳುವ ಮಾತು.
---------------------
ಕಾಳಧನದ ಜೊತೆ ಕಾಳಮನವನ್ನು ಕಿತ್ತೊಗೆಯಬೇಕು
-ನರೇಂದ್ರ ಮೋದಿ,ಪ್ರಧಾನಿ
ಅದಕ್ಕಾಗಿ ಜನರು ಇನ್ನೆಷ್ಟು ದಿನ ಬ್ಯಾಂಕ್ ಮುಂದೆ ಕ್ಯೂ ನಿಲ್ಲಬೇಕು?
---------------------
ಸಂಸ್ಕೃತ ಭಾಷೆ ಜೀವಂತವಾಗಿರಬೇಕಾದರೆ ಸಂಸ್ಕೃತದಲ್ಲೇ ಹೆಚ್ಚು ಸಂವಾದಗಳು ನಡೆಯಬೇಕು
-ವಿಶ್ವೇಶತೀರ್ಥ ಸ್ವಾಮೀಜಿ, ಪೇಜಾವರ ಮಠ
ಸತ್ತ ಬಳಿಕ ಮಾತನಾಡುವ ಭಾಷೆಯಲ್ಲವೇ ಅದು?
---------------------
ನಂಜನಗೂಡು ವಿಧಾನಸಭೆ ಉಪಚುನಾವಣೆಯಲ್ಲಿ ಕಾಂಗ್ರೆಸ್,ಬಿಜೆಪಿಗಳಿಗೆ ಅಭ್ಯರ್ಥಿಗಳೇ ಇಲ್ಲ
-ಎಚ್.ಡಿ.ಕುಮಾರಸ್ವಾಮಿ, ಜೆಡಿಎಸ್ ರಾಜ್ಯಾಧ್ಯಕ್ಷ
ಅಪ್ಪ ಕಾಂಗ್ರೆಸ್‌ನಿಂದ, ಮಗ ಬಿಜೆಪಿಯಿಂದ ಸ್ಪರ್ಧಿಸಿದರೆ ಆಯಿತು. ಯಾರಾದರೊಬ್ಬರು ಗೆಲ್ಲಬಹುದು.
---------------------
ಮದುವೆಯಾದ ತಕ್ಷಣ ಮಕ್ಕಳು ಹುಟ್ಟುವುದಿಲ್ಲ
-ಕೆ.ಎಸ್.ಈಶ್ವರಪ್ಪ, ಬಿಜೆಪಿ ನಾಯಕ
ಕೆಲವು ಮಕ್ಕಳು ಹುಟ್ಟಿದ ಬಳಿಕ ಮದುವೆಯಾಗುವುದೂ ಇದೆ.
---------------------
ಯೋಜನೆಗಳ ಅನುಷ್ಠಾನಕ್ಕೆ ಅಕ್ರಮ ಸಕ್ರಮದ ಹಣ ಬಳಕೆ
-ಕೆ.ಜೆ.ಜಾರ್ಜ್, ಸಚಿವ
ಸಚಿವರು ಮಾಡಿರುವ ಅಕ್ರಮ ಹಣವನ್ನೆಲ್ಲ ಯೋಜನೆಗಳಿಗೆ ಬಳಸಲಾಗುತ್ತದೆಯೇ?
---------------------
ಮಾಜಿ ಮುಖ್ಯಮಂತ್ರಿ ಧರಂಸಿಂಗ್ ತಾಳ್ಮೆ ಕಳೆದುಕೊಂಡಿದ್ದೇ ನೋಡಿಲ್ಲ
- ಸಿದ್ದರಾಮಯ್ಯ, ಮುಖ್ಯಮಂತ್ರಿ
ಅವರ ತಾಳ್ಮೆಯನ್ನು ಬಹಳಷ್ಟು ಬಾರಿ ನೀವು ಪರೀಕ್ಷಿಸಿದ್ದೀರಿ ಎಂದಾಯಿತು.
---------------------
ಶ್ರೀನಿವಾಸ ಪ್ರಸಾದ್ ಸೇರ್ಪಡೆಯಿಂದ ಬಿಜೆಪಿಗೆ ಆನೆ ಬಲ ಬಂದಿದೆ
-ಪ್ರತಾಪ್ ಸಿಂಹ, ಸಂಸದ
ಅವರು ಬಿಎಸ್ಪಿಯಿಂದ ಪಕ್ಷಾಂತರ ಮಾಡಿದ್ದಾರೆ ಎಂಬ ತಿಳುವಳಿಕೆಯಲ್ಲಿದ್ದೀರಿ ನೀವು.
---------------------
ನೋಟು ರದ್ದತಿಯ ಫಲ ಮುಂದೆ ಗೊತ್ತಾಗಲಿದೆ.
- ಮನೋಹರ್ ಪಾರಿಕ್ಕರ್, ಕೇಂದ್ರ ಸಚಿವ
ಅಲ್ಲಿಯವರೆಗೆ ಬದುಕಿದ್ದಿದ್ದರೆ ತಾನೆ.
---------------------
ಗಾಂಧೀಜಿ, ಬುದ್ಧ, ಬಸವರು ಯಾರ ಸ್ವತ್ತೂ ಅಲ್ಲ
- ಬರಗೂರು ರಾಮಚಂದ್ರಪ್ಪ, ಹಿರಿಯ ಸಾಹಿತಿ
ಅವರನ್ನು ಸೊತ್ತು ಎಂದು ತಿಳಿಕೊಂಡದ್ದೇ ಮೊದಲ ತಪ್ಪು.
---------------------
ರಾಹುಲ್ ಈಗ ಹೀರೋ ಆಗಿದ್ದಾರೆ, ಪ್ರಧಾನಿ ಜೀರೋ ಆಗಿದ್ದಾರೆ
- ಜನಾರ್ದನ ಪೂಜಾರಿ, ಕೇಂದ್ರ ಮಾಜಿ ಸಚಿವ
ಸದ್ಯಕ್ಕೆ ನೀವು ಇವರೆಲ್ಲರ ನಡುವೆ ಜೋಕರ್ ಆಗುತ್ತಿದ್ದೀರಿ.
---------------------
ಸಂಸತ್ತನ್ನು ಎದುರಿಸಲು ಹೆದರಿ ಸರಕಾರ ಹಿಂದಿನ ಬಾಗಿಲಿನಿಂದ ಕಾನೂನು ತರುತ್ತಿದೆ
-ಸೀತಾರಾಂ ಯೆಚೂರಿ, ಸಿಪಿಎಂ ಪ್ರಧಾನ ಕಾರ್ಯದರ್ಶಿ
ಹಿಂದಿನ ಬಾಗಿಲನ್ನು ತೆರೆದಿಟ್ಟದ್ದು ನಿಮ್ಮ ತಪ್ಪಲ್ಲವೇ?
---------------------
ದುಶ್ಯಾಸನ ಇರುವುದೇ ಸೀರೆ ಎಳೆಯಲು
-ಕೆ.ಆರ್.ರಮೇಶ್ ಕುಮಾರ್,ಸಚಿವ
ಕಾಂಗ್ರೆಸ್‌ನ ಸೀರೆ ಎಳೆಯಲು ಪಕ್ಷದೊಳಗಿರುವ ತಮ್ಮಂಥವರೇ ಸಾಕು.
---------------------
ಶಾಶ್ವತ ನೀರಾವರಿ ಯೋಜನೆ ಜಾರಿಗಾಗಿ ಜೈಲಿಗೆ ಹೋಗಲೂ ಸಿದ್ಧ
-ವಾಟಾಳ್ ನಾಗರಾಜ್, ಹೋರಾಟಗಾರ
ಜೊತೆಗೆ ನಿಮ್ಮ ಕತ್ತೆಯನ್ನೂ ಕರೆದುಕೊಂಡು ಹೋಗಿ.
---------------------
ನೋಟು ಅಮಾನ್ಯ ಮಾಡುವ ಮೂಲಕ ಮೋದಿ ಆರ್ಥಿಕ ವ್ಯಭಿಚಾರ ನಡೆಸುತ್ತಿದ್ದಾರೆ.
- ವೀರಪ್ಪ ಮೊಯ್ಲಿ,ಸಂಸದ
ಅದರ ಸಿಡಿ ಬಿಡುಗಡೆ ಮಾಡಿದ್ದಿದ್ದರೆ ಟಿವಿಯವರು ಆಸಕ್ತಿಯಿಂದ ಪ್ರಸಾರ ಮಾಡುತ್ತಿದ್ದರು.
---------------------
ಗೋವು ನಮ್ಮ ತಾಯಿ
-ಕಲ್ಲಡ್ಕ ಪ್ರಭಾಕರ ಭಟ್, ಆರೆಸ್ಸೆಸ್ ಮುಖಂಡ.
ಎಂತಹ ಮಗನನ್ನು ಹೆತ್ತೆ ಎಂದು ಗೋವು ಅವಮಾನದಿಂದ ತಲೆತಗ್ಗಿಸಿದೆ.
---------------------
ಪಾಪ ನಡೆಯುತ್ತಿದೆ ಎಂದು ಗೊತ್ತಿದ್ದೂ ಸುಮ್ಮನಿದ್ದರೆ ನಾವೂ ಪಾಪ ಮಾಡಿದಂತಾಗುತ್ತಿದೆ
- ರಾಘವೇಶ್ವರ ಸ್ವಾಮೀಜಿ, ರಾಮಚಂದ್ರಾಪುರ ಮಠ
ಭಕ್ತರಿಗೆ ಅದು ‘ಪಾಪು’ ಮಾಡಿದಂತೆ ಎಂದು ಕೇಳಿಸಿ, ಬೆಚ್ಚಿ ಬಿದ್ದಿದ್ದಾರೆ.
---------------------
ಪ್ರಪಂಚವನ್ನು ಸುಸ್ಥಿತಿಯಲ್ಲಿಡುವ ಜವಾಬ್ದಾರಿ ಇಂದಿನ ಮಕ್ಕಳ ಮೇಲಿದೆ
-ಡಾ.ಡಿ.ವೀರೇಂದ್ರ ಹೆಗ್ಗಡೆ,ಧರ್ಮಾಧಿಕಾರಿ, ಧರ್ಮಸ್ಥಳ
ಹೌದು. ಹಿರಿಯರು ಮಾಡುತ್ತಿರುವ ಅನಾಹುತಗಳನ್ನು ನೋಡುತ್ತಿದ್ದರೆ ಮಕ್ಕಳ ಜವಾಬ್ದಾರಿ ಹೆಚ್ಚುತ್ತಿದೆ.
---------------------
ಅಖಿಲೇಶ್ ಯಾದವ್ ಪಕ್ಷವನ್ನೇ ನಾಶ ಮಾಡಲು ಹೊರಟಿದ್ದಾರೆ
- ಮುಲಾಯಂ ಸಿಂಗ್ ಯಾದವ್, ಎಸ್ಪಿ ಅಧ್ಯಕ್ಷ
ತಾವೊಬ್ಬರೇ ನಾಶ ಮಾಡಬೇಕು ಎಂಬ ಯೋಜನೆ ಹಾಕಿಕೊಂಡಿದ್ದಿರಾ?
---------------------
ನಾನು ಮತ್ತು ಜನಾರ್ದನ ಪೂಜಾರಿ ಅಶೋಕವನದ ಸೀತೆ ಇದ್ದಂತೆ
-ಎಚ್.ವಿಶ್ವನಾಥ್, ಮಾಜಿ ಸಂಸದ
ಸಿದ್ದರಾಮಯ್ಯ ಅಗ್ನಿಪರೀಕ್ಷೆಗೆ ಕುಂಡ ಸಿದ್ಧ ಮಾಡುತ್ತಿದ್ದಾರೆ.
---------------------
ಸಿದ್ದರಾಮಯ್ಯ ಸರಕಾರ ಬದುಕಿದೆಯೇ ಸತ್ತಿದೆಯೇ ಗೊತ್ತಾಗುತ್ತಿಲ್ಲ
-ಆರ್.ಅಶೋಕ್, ಮಾಜಿ ಡಿಸಿಎಂ
ಯಾಕೆಂದರೆ ವಿರೋಧ ಪಕ್ಷ ಸತ್ತಿದೆ. ಅದಕ್ಕೆ.
---------------------
ನನ್ನ ನಿರ್ಧಾರವು ಬಂದು ಹೋಗುವ ಮಳೆಯಲ್ಲ
- ನರೇಂದ್ರ ಮೋದಿ, ಪ್ರಧಾನಿ
ಅದು ದೇಶವನ್ನು ಸರ್ವನಾಶ ಮಾಡುವ ಸುನಾಮಿ ಎನ್ನುವುದು ಜನರಿಗೆ ಅರ್ಥವಾಗಹತ್ತಿದೆ.
---------------------
ದೇಶವನ್ನು ಪ್ರೀತಿಸಿ, ಆದರೆ ಗದ್ದಲದ ದೇಶ ಪ್ರೇಮ ಬೇಡ
-ಪ್ರಣವ್ ಮುಖರ್ಜಿ, ರಾಷ್ಟ್ರಪತಿ
ಗದ್ದಲ ಮಾಡದೆ ದೇಶವನ್ನು ಪ್ರೀತಿಸುವುದು ಹೇಗೆ ಎಂದು ಕೇಳುತ್ತಿದ್ದಾರೆ ಸಂಘಪರಿವಾರ ಕಾರ್ಯಕರ್ತರು.