ಹೊಸ ವರ್ಷಕ್ಕೆ ಆರೋಗ್ಯ ಸೇವೆಯ ಸಂಕಲ್ಪ
ಬೆಂಗಳೂರು, ಜ.2: ಆರೋಗ್ಯ ಕ್ಷೇತ್ರದಲ್ಲಿ ಬಡವರು ಹಾಗೂ ದೀನ ದಲಿತರಿಗೆ ಸೇವೆ ನೀಡುವ ಉದ್ದೇಶದೊಂದಿಗೆ ಬೆಂಗಳೂರಿನಲ್ಲಿ ಮಾತೃ ಸಿರಿ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿದ್ದು, ತನ್ನ ಕಾರ್ಯಚಟುವಟಿಕೆಯನ್ನು ಮತ್ತಷ್ಟು ವಿಸ್ತರಿಸಲು ನಿರ್ಧರಿಸಿದೆ.
ವೈದ್ಯ ಸುನೀಲ್ ಕುಮಾರ್ ಹೆಬ್ಬಿ ಎಂಬವರು ಈ ಆಂದೋಲನದ ರೂವಾರಿ. ಕಳೆದ ಎಂಟು ವರ್ಷಗಳಿಂದ ಈ ಪ್ರತಿಷ್ಠಾನ ಜನಸಾಮಾನ್ಯರ ಸೇವೆ ಮಾಡುತ್ತಾ ಬಂದಿದ್ದು, ಸಂಕಷ್ಟದಲ್ಲಿರುವ ಹಲವು ಮಂದಿಗೆ ಸಹಾಯಹಸ್ತ ಚಾಚಿದೆ. ಸ್ವಯಂಪ್ರೇರಿತ ವೈದ್ಯಕೀಯ ಸೇವೆಗಳ ಬಗ್ಗೆ ಉತ್ತೇಜಿಸುವುದು ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದು ಹೆಬ್ಬಿ ಹೇಳುತ್ತಾರೆ.
ಪ್ರಸಕ್ತ ವರ್ಷದಲ್ಲಿ ರಾಜ್ಯದ 25 ಸಾವಿರ ಕಿಲೋಮೀಟರ್ ವ್ಯಾಪ್ತಿಯ 250 ಕಡೆಗಳಲ್ಲಿ ಆರೋಗ್ಯ ಶಿಬಿರಗಳನ್ನು ನಡೆಸುವ ಮೂಲಕ 2500 ಮಂದಿಗೆ ಆರೋಗ್ಯ ಸೇವೆ ನೀಡುವ ಗುರಿ ಹಾಕಿಕೊಳ್ಳಲಾಗಿದೆ. 1000 ಸ್ವಯಂಸೇವಕರು ಈ ಸೇವಾಕಾರ್ಯದಲ್ಲಿ ತೊಡಗಿಸಿಕೊಳ್ಳಲಿದ್ದಾರೆ.
ಈ ಪ್ರತಿಷ್ಠಾನ ಸರಕಾರಿ ನೆರವು ಪಡೆಯದೆ ಸುನಿಲ್ ಅವರ ವೈಯಕ್ತಿಕ ದೇಣಿಗೆ ಹಾಗೂ ಕೆಲ ಕುಟುಂಬ ಸ್ನೇಹಿತರ ನೆರವಿನಿಂದಲೇ ಕಾರ್ಯ ನಿರ್ವಹಿಸುತ್ತಿದೆ. ಕೆಲ ಫಾರ್ಮಸ್ಯೂಟಿಕಲ್ ಕಂಪೆನಿಗಳೂ ಇವರ ಮಹತ್ಕಾರ್ಯದಲ್ಲಿ ಸಹಕರಿಸಿವೆ. ಸಾರ್ವಜನಿಕರಿಂದ ಇದಕ್ಕೆ ಯಾವ ದೇಣಿಗೆಯನ್ನೂ ಪಡೆಯದೇ ಸೇವೆ ಸಲ್ಲಿಸಲಾಗುತ್ತಿದೆ.