‘ಆತ್ಮಗೌರವ ಕಳೆದುಕೊಂಡ ಮೇಲೆ ಪ್ರಪಂಚವೇ ಸಿಕ್ಕರೇನು ಪ್ರಯೋಜನ’

Update: 2017-01-02 10:49 GMT

ಬೆಂಗಳೂರು, ಜ. 2: ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ತತ್ವಗಳ ಬಗ್ಗೆ ಮಾತನಾಡುವ ಹಿರಿಯ ರಾಜಕಾರಣಿ ವಿ.ಶ್ರೀನಿವಾಸ ಪ್ರಸಾದ್, ಶ್ರೇಣಿಕೃತ ಸಮಾಜ ಪ್ರತಿನಿಧಿಸುವ, ಅಸ್ಪಶ್ಯತೆಯನ್ನು ಎತ್ತಿಹಿಡಿಯುವವರ ಜೊತೆಗೆ ಹೋಗುತ್ತಿದ್ದಾರೆ ಎಂದು ಆರೋಗ್ಯ ಸಚಿವ ಕೆ.ಆರ್.ರಮೇಶ್ ಕುಮಾರ್ ಟೀಕಿಸಿದ್ದಾರೆ.ಸೋಮವಾರ ವಿಕಾಸಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ವಿ.ಶ್ರೀನಿವಾಸ ಪ್ರಸಾದ್ ಬಗ್ಗೆ ತನಗೆ ಅಪಾರ ಗೌರವವಿದೆ. ಈ ಇಳಿ ವಯಸ್ಸಿನಲ್ಲಿ ಅವರಿಗೆ ಇದು ಬೇಕಿತ್ತಾ? ಅವರು ಹೋಗಿದ್ದಾದರೂ ಎಲ್ಲಿಗೆ? ಎಂದು ಖಾರವಾಗಿ ಪ್ರಶ್ನಿಸಿದರು.

ನಂಜನಗೂಡು ಉಪ ಚುನಾವಣೆಯಲ್ಲಿ ಗೆಲ್ಲುವುದಷ್ಟೇ ಅವರಿಗೆ ಮುಖ್ಯವೇ ಎಂದು ಪ್ರಶ್ನಿಸಿದ ರಮೇಶ್ ಕುಮಾರ್, ಅಸ್ಪಶ್ಯತೆ, ಜಾತೀಯತೆ ಸರಿ ಎನ್ನುವ ಸನಾತನ ಧರ್ಮ ಪ್ರತಿಪಾದಿಸುವ ಹಾಗೂ ಶ್ರೇಣೀಕೃತ ವ್ಯವಸ್ಥೆ ಇರುವ ಪಕ್ಷಕ್ಕೆ ಹೋಗಿದ್ದಾರೆ. ಆತ್ಮಗೌರವ ಕಳೆದುಕೊಂಡ ಮೇಲೆ ಪ್ರಪಂಚವೇ ಸಿಕ್ಕರೆ ಏನು ಪ್ರಯೋಜನ ಎಂದು ವಾಗ್ದಾಳಿ ನಡೆಸಿದರು.ಕಾಂಗ್ರೆಸ್ ಪಕ್ಷವನ್ನು ಯಾರು ಬಿಟ್ಟು ಹೋದರೂ ಪಕ್ಷಕ್ಕೆ ಮುನ್ನಡೆಯೂ ಆಗಿರುವುದಿಲ್ಲ. ಅದೇ ರೀತಿಯಲ್ಲಿ ಹಿನ್ನಡೆಯೂ ಆಗುವುದಿಲ್ಲ. ನಂಜನಗೂಡು ಕ್ಷೇತ್ರ, ದಲಿತ ರಾಜಕಾರಣ, ಇದರಿಂದ ರಾಜ್ಯಕ್ಕೆ ಏನಾದರೂ ಲಾಭವಿದೆಯೇ ಎಂದು ಅವರು ತಮ್ಮದೇ ಧಾಟಿಯಲ್ಲಿ ವಿಶ್ಲೇಷಿಸಿದರು.

ತೀರ್ಪು ಸ್ವಾಗತಾರ್ಹ: ಜಾತಿ-ಧರ್ಮದ ಆಧಾರದ ಮೇಲೆ ಮತ ಕೇಳಬಾರದೆಂಬ ಸುಪ್ರೀಂ ಕೋರ್ಟ್ ತೀರ್ಪು ಸ್ವಾಗತಾರ್ಹ. ಜನಪ್ರತಿನಿಧಿ ಕಾಯ್ದೆಯನ್ವಯ ಜಾತಿ ಆಧಾರದ ಮೇಲೆ ಓಟು ಕೇಳುವುದು ಕಾನೂನುಬಾಹಿರ ಎಂದು ರಮೇಶ್ ಕುಮಾರ್ ಪ್ರತಿಕ್ರಿಯಿಸಿದರು.ಇತ್ತೀಚಿನ ದಿನಗಳಲ್ಲಿ ಜಾತಿ-ಧರ್ಮದ ಆಧಾರದ ಮೇಲೆ ಮತ ಕೇಳುವುದು ತೀರ ಹೇಸಿಗೆಯಾದ ಕಾರಣಕ್ಕೆ ಕೋರ್ಟ್ ಮಧ್ಯೆ ಪ್ರವೇಶಿಸಿ ತೀರ್ಪು ನೀಡಿದೆ. ಇದಕ್ಕೆ ಜನ ಜಾಗೃತಿಯೇ ಮದ್ದು ಎಂದ ಅವರು, ಜಾತಿ ಮತ್ತು ಧರ್ಮ ಅಫೀಮು. ಇದನ್ನು ಮನುಷ್ಯ ಸೇವನೆ ಮಾಡಿದರೆ ಸಮತೋಲನ ಕಳೆದುಕೊಳ್ಳುತ್ತಾನೆ.ಮನುಷ್ಯ ತನ್ನ ಸಮತೋಲನ ಕಳೆದುಕೊಳ್ಳುವಂತಹ ಸ್ಥಿತಿಗೆ ಜನಸಾಮಾನ್ಯರನ್ನು ತಳ್ಳಬಾರದು. ಆದರೆ, ವಂಚಕರು ಬೇರೆ-ಬೇರೆ ವೇಷ ಧರಿಸಿ ಅಧಿಕಾರಕ್ಕೇರುತ್ತಾರೆ. ಯೋಗ್ಯರು ಅಧಿಕಾರದಿಂದ ದೂರವೇ ಉಳಿಯುತ್ತಾರೆ ಎಂದು ಅವರು ಇದೇ ಸಂದರ್ಭದಲ್ಲಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News