ಪರಮೇಶ್ವರ್ ವಿರುದ್ಧ ಬಿಜೆಪಿ ಮಹಿಳಾ ಘಟಕ ಪ್ರತಿಭಟನೆ

Update: 2017-01-05 07:53 GMT

ಬೆಂಗಳೂರು, ಜ.5: ಹೊಸ ವರ್ಷಾಚರಣೆ ಸಂದರ್ಭ ಬೆಂಗಳೂರಿನಲ್ಲಿ ಮಹಿಳೆಯರ ಮೇಲೆ ನಡೆದ ಸಾಮೂಹಿಕ ದೌರ್ಜನ್ಯ ಸಂಬಂಧ ಗೃಹ ಸಚಿವ ಡಾ.ಜಿ.ಪರಮೇಶ್ವರ್ ನೀಡಿದ್ದ ವಿವಾದಾತ್ಮಕ ಹೇಳಿಕೆ ಖಂಡಿಸಿ ರಾಜ್ಯ ಬಿಜೆಪಿ ಮಹಿಳಾ ಘಟಕ ಪ್ರತಿಭಟಿಸಿತು.

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶೋಭಾ ಕರಂದ್ಲಾಜೆ ನೇತೃತ್ವದಲ್ಲಿ ನಗರದ ಆನಂದರಾವ್ ವೃತ್ತ ಸಮೀಪದ ಮೌರ್ಯ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತೆಯರು ಪಾಲ್ಗೊಂಡಿದ್ದರು.

ರಾಜ್ಯ ಗೃಹ ಸಚಿವರಾಗಿ ಡಾ.ಜಿ.ಪರಮೇಶ್ವರ್ ಅವರು ನೀಡಿರುವ ಬೇಜವಾಬ್ದಾರಿ ಹೇಳಿಕೆ  ಖಂಡನೀಯ. ರಾಜಧಾನಿಯಲ್ಲಿ  ಯುವತಿಯರ ಮೇಲೆ ನಡೆದ ದೌರ್ಜನ್ಯ ನಿಯಂತ್ರಿಸುವಲ್ಲಿ ಸರಕಾರ ವಿಫಲವಾಗಿದೆ ಎಂದು ಶೋಭಾ ಕರಂದ್ಲಾಜೆ ಇದೇ ಸಂದರ್ಭ ಖಂಡಿಸಿದರು.

ಪರಮೇಶ್ವರ್ ಕಿವುಡು, ಜಾಣ ಮರೆವು ಬಿಡಬೇಕು. ಮಹಿಳೆಯರ ಪರ ನಿಲ್ಲಬೇಕು. ಪ್ರಕರಣ ಗಂಭೀರವಾಗಿ ಪರಿಗಣಿಸಿ. ಇಲ್ಲಿ ಯಾವುದೇ ಪ್ರಭಾವಕ್ಕೂ ಒಳಗಾಗಬೇಡಿ ಎಂದು ಆಗ್ರಹಿಸಿದರು.

ಸರಕಾರಕ್ಕೆ ಮುಜುಗರ ಆಗದಿರಲಿ ಎಂದು ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಮಹಿಳೆಯರಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇವೆ ಎಂದರು.

ರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷಕ್ಷೆ ಭಾರತಿ ಶೆಟ್ಟಿ ,ಪ್ರಧಾನ ಕಾರ್ಯದರ್ಶಿ ಶ್ರುತಿ  ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಬೆಂಗಳೂರಿನ ಎಂ.ಜಿ. ರಸ್ತೆ, ಬ್ರಿಗೇಡ್ ರಸ್ತೆಯಲ್ಲಿ ಡಿ.31ರ ಮಧ್ಯರಾತ್ರಿ ಹೊಸ ವರ್ಷಾಚರಣೆ ಸಂದರ್ಭ ಯುವತಿಯರ ಮೇಲೆ ಸಾಮೂಹಿಕ ದೌರ್ಜನ್ಯ ನಡೆದ ಬಗ್ಗೆ ವರದಿಯಾಗಿತ್ತು. ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಗೃಹ ಸಚಿವರು, “ಸಾಕಷ್ಟು ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಿದ್ದೆವು. ಆದರೂ ಇಂತಹ ಘಟನೆ ನಡೆದಿದೆ. ಹೊಸ ವರ್ಷ ಸಂಭ್ರಮಾಚರಣೆ ವೇಳೆ ಇಂತಹ ಘಟನೆಗಳು ನಡೆಯುತ್ತವೆ. ಇದಕ್ಕೆ ಪಾಶ್ಚಾತ್ಯ ಸಂಸ್ಕೃತಿ ಹಾಗೂ ಅನುಕರಣೆ ಕಾರಣ’ ಎಂದು ಹೇಳಿದ್ದರು. 

ಈ ಹೇಳಿಕೆಗೆ ದೇಶಾದ್ಯಂತ ವ್ಯಾಪಕ ಖಂಡನೆ ವ್ಯಕ್ತವಾಗಿತ್ತು. ರಾಜ್ಯದ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿವೆ. ಕೇಂದ್ರ ಮಹಿಳಾ ಆಯೋಗ ಕೂಡ ಪರಮೇಶ್ವರ್ಗೆ ಈ ಕುರಿತು ನೋಟಿಸ್ ಜಾರಿ ಮಾಡಿದ್ದು, ಉತ್ತರ ಕೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News