ಹಣ ಬಿಡುಗಡೆಯಾಗದ ಹಿನ್ನೆಲೆ: ಜ.16 ರಿಂದ ಮೂರು ಸೇವೆ ಸ್ಥಗಿತ: ಖಾಸಗಿ ಆಸ್ಪತ್ರೆಗಳ ತೀರ್ಮಾನ

Update: 2017-01-09 14:12 GMT

ಬೆಂಗಳೂರು, ಜ.9: ರಾಜ್ಯ ಸರಕಾರದ ಜೊತೆ ಒಪ್ಪಂದ ಮಾಡಿಕೊಂಡು ಖಾಸಗಿ ಆಸ್ಪತ್ರೆಗಳು ಸಾರ್ವಜನಿಕರಿಗೆ ಸಲ್ಲಿಸುತ್ತಿರುವ ಸೇವೆಗಳಿಗೆ ಇದುವರೆಗೂ ಹಣವನ್ನು ಬಿಡುಗಡೆ ಮಾಡದ ಹಿನ್ನೆಲೆಯಲ್ಲಿ ಜ.16 ರಿಂದ ಮೂರು ಸೇವೆಗಳನ್ನು ಸ್ಥಗಿತಗೊಳಿಸಲಾಗುತ್ತಿದೆ ಎಂದು ರಾಜ್ಯ ಆರೋಗ್ಯ ಸೇವಾ ಸಂಘಗಳ ಒಕ್ಕೂಟ ತಿಳಿಸಿದೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಸಹ ಸಲಹೆಗಾರ ಡಾ.ನಾಗೇಂದ್ರಸ್ವಾಮಿ, ರಾಜ್ಯ ಸರಕಾರ ಆರೋಗ್ಯ ಇಲಾಖೆಯಡಿಯಲ್ಲಿ ಖಾಸಗಿ ಆಸ್ಪತ್ರೆಗಳಲ್ಲಿ ಬಿಪಿಎಲ್ ಕಾರ್ಡು ಹೊಂದಿರುವ ಬಡ ಕುಟುಂಬಗಳಿಗೆ ಉಚಿತ ಆರೋಗ್ಯ ಕಲ್ಪಿಸುವ ಉದ್ದೇಶದಿಂದ ಐದು ಯೋಜನೆಗಳನ್ನು ಜಾರಿ ಮಾಡಿ, ಖಾಸಗಿ ಆಸ್ಪತ್ರೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಸರಕಾರ ಕಳೆದ 6 ತಿಂಗಳಿಂದ ಒಪ್ಪಂದದ ಪ್ರಕಾರ ಹಣ ಬಿಡುಗಡೆ ಮಾಡಿಲ್ಲ. ಆದುದರಿಂದ ಸೇವೆಗಳನ್ನು ಸ್ಥಗಿತಗೊಳಿಸುವ ನಿರ್ಧಾರ ಮಾಡಲಾಗಿದೆ ಎಂದರು.

ರಾಜ್ಯದ 200-300 ಖಾಸಗಿ ಆಸ್ಪತ್ರೆಗಳಲ್ಲಿ ಸರಕಾರದ ಸೇವೆಯನ್ನು ನೀಡಲಾಗುತ್ತಿದ್ದು, ಇವುಗಳಿಗೆ 100 ಕೋಟಿಗೂ ಅಧಿಕ ಮೊತ್ತದ ಹಣವನ್ನು ಬಾಕಿ ಉಳಿಸಿಕೊಳ್ಳಲಾಗಿದೆ. ಇದರಿಂದಾಗಿ ಆಸ್ಪತ್ರೆಗಳಲ್ಲಿ ಉದ್ಯೋಗಿಗಳಿಗೆ ವೇತನ, ಔಷಧಿಗಳಿಗೆ ಹಣ ಹೊಂದಿಸಲು ಸಾಧ್ಯವಾಗುತ್ತಿಲ್ಲ. ಆದುದರಿಂದಾಗಿ ಸರಕಾರಿ ಸೇವೆಗಳಾದ ವಾಜಪೇಯಿ ಆರೋಗ್ಯ ಸೇವೆ, ರಾಜೀವ್ ಆರೋಗ್ಯ ಸ್ಕೀಂ, ಜ್ಯೋತಿ ಸಂಜೀವಿನಿ ಸ್ಕೀಂಗಳನ್ನು ನಿಲ್ಲಿಸಲಾಗುತ್ತಿದೆ ಎಂದು ಹೇಳಿದರು.

ಜ.16 ರಿಂದ ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಚಿಕಿತ್ಸೆ ಮುಂದುವರಿಸಲಿದ್ದು, ಹೊಸ ಫಲಾನುಭವಿಗಳಿಗೆ ಅವಕಾಶ ನೀಡುವುದಿಲ್ಲ. ಅಲ್ಲದೆ, ಎಂದಿನಂತೆ ಮಕ್ಕಳಿಗಾಗಿರುವ ಆರ್‌ಬಿಎಸ್‌ಕೆ ಮತ್ತು ಅಪಘಾತಕ್ಕೊಳಗಾದವರಿಗೆ ನೀಡುವ ಎಂಎಸ್‌ಎಚ್‌ಎಸ್ ಯೋಜನೆಯನ್ನು ಮುಂದುವರಿಸಲಾಗುತ್ತದೆ ಎಂದು ತಿಳಿಸಿದರು.

  ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಕಲಿ ಬಿಪಿಎಲ್ ಕಾರ್ಡ್‌ಗಳು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಬಡವರಿಗೆ ಸಿಗಬೇಕಾದ ಯಾವುದೆ ಯೋಜನೆಗಳು ಬಡವರಿಗೆ ಸಿಗುತ್ತಿಲ್ಲ ಎಂದ ಅವರು, ಸರಕಾರ ನೈಜ ಫಲಾನುಭವಿಗಳಿಗೆ ಯೋಜನೆಯ ಸೇವೆ ಸಿಗುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಬೇಕಾದ ಅಗತ್ಯವಿದೆ ಎಂದು ಹೇಳಿದರು.

ಇದೇ ರಾಜ್ಯದಲ್ಲಿ ಇತ್ತೀಚಿಗೆ ವೈದ್ಯರ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿದ ಅವರು, ವೈದ್ಯರ ರಕ್ಷಣೆಗಾಗಿರುವ ಪ್ರಿವಿಯನ್ಸ್ ಹೆಲ್ತ್ ಕೇರ್ ಆ್ಯಕ್ಟ್ ಅನ್ನು ಸಮರ್ಪಕವಾಗಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ನಾರಾಯಣ ಹೃದಯಾಲಯದ ಡಾ.ದೇವಿಶೆಟ್ಟಿ, ಎಫ್‌ಎಚ್‌ಎಯ ಡಾ.ಅಲೆಕ್ಸಾಂಡರ್ ಥಾಮಸ್, ಯುನಿಟಿ ಹೆಲ್ತ್ ಸರ್ವಿಸಸ್ ಪ್ರೈ.ಲಿ.ನ ಡಾ.ಅಜಮಲ್ ಹಬೀಬ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News