‘ಸಂವಿಧಾನದತ್ತ ಸೌಲಭ್ಯಗಳನ್ನು ಉಪೇಕ್ಷಿಸಬಾರದು’

Update: 2017-01-11 16:20 GMT

ಬೆಂಗಳೂರು, ಜ.11: ಸಂವಿಧಾನದತ್ತ ಸೌಲಭ್ಯಗಳ ಬಗ್ಗೆ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ತಿಳಿದವರೂ ಈ ಬಗ್ಗೆ ಉಪೇಕ್ಷೆಯ ಧೋರಣೆ ಹೊಂದಿರುವುದೂ ಇದೆ. ಆದ್ದರಿಂದ ಸಂವಿಧಾನದತ್ತ ಸೌಲಭ್ಯಗಳನ್ನು ಉಪೇಕ್ಷಿಸದೆ ಅದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬಡವರಿಗೆ ಸೇವೆ ಸಲ್ಲಿಸುವುದಕ್ಕೆ ಪ್ರಥಮ ಆದ್ಯತೆ ನೀಡಬೇಕು ಎಂದು ಆರ್ಚ್‌ಬಿಷಪ್ ಡಾ. ಬರ್ನಾರ್ಡ್ ಮೊರಾಸ್ ಕರೆ ನೀಡಿದ್ದಾರೆ.
 
ಆರ್ಚ್ ಬಿಷಪರ ಅಧಿಕೃತ ನಿವಾಸಕ್ಕೆ ಸೇರಿಕೊಂಡಿರುವ ಪಾಲನಾ ಭವನದಲ್ಲಿ ನಡೆದ ಸಮಾರಂಭದಲ್ಲಿ ಅಲ್ಪಸಂಖ್ಯಾತರ ಹಿತರಕ್ಷಣಾ ಆಯೋಗವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.

ಅಸಹಾಯಕ ಸ್ಥಿತಿಯಲ್ಲಿರುವವರಿಗೆ ನೆರವಿನ ಹಸ್ತ ಚಾಚುವಂತೆ ಕಾರ್ಯಕರ್ತರಿಗೆ ಕರೆ ನೀಡಿದ ಅವರು, ಸಮಾಜದ ದುರ್ಬಲ ವರ್ಗದವರಿಗೆ ಮಾರ್ಗದರ್ಶನ ನೀಡುವಲ್ಲಿ ಎಂದೂ ಒಂದು ಹೆಜ್ಜೆ ಮುಂದಿರಬೇಕು ಎಂದರು. ಅಲ್ಲದೆ ಶೈಕ್ಷಣಿಕ, ಆರೋಗ್ಯ, ಧಾರ್ಮಿಕ ಕಾರ್ಯ ಮುಂತಾದ ವಿಷಯಗಳಲ್ಲಿ ರಾಷ್ಟ್ರಕ್ಕೆ ಶೇ.20ರಷ್ಟು ಕೊಡುಗೆ ನೀಡಿದ ಹೆಮ್ಮೆ ಕ್ಯಾಥೊಲಿಕ್ ಸಂಸ್ಥೆಗಳದ್ದು ಎಂದರು.

ಮಹಿಳೆಯರು ಸಮಾಜಕ್ಕೆ ಬಹಳಷ್ಟು ಕೊಡುಗೆ ನೀಡಿದವರು. ಅವರಿಂದ ಇದೇ ರೀತಿಯ ಸಹಕಾರವನ್ನು ಈ ಸಂಸ್ಥೆ ಬಯಸುತ್ತದೆ ಎಂದು ಹೇಳಿದರು.

ಆಯೋಗದ ಕಾರ್ಯದರ್ಶಿ ಫಾದರ್ ಅರೊಕಿಸ್ವಾಮಿ ಅರುಲ್‌ದಾಸ್ , ಆರ್ಥಿಕ ಸಲಹೆಗಾರ ಫಾ. ಮಾರ್ಟಿನ್ ಕುಮಾರ್, ಚಾನ್ಸೆಲರ್ ಫಾ. ಎ.ಎಸ್.ಅಂಟೋನಿಸ್ವಾಮಿ, ವಕೀಲ ಭಾಸ್ಕರನ್, ಜಾನ್ ರೊಸಾರಿಯೋ, ಆರ್ಚ್‌ಬಿಷಪರ ಕಾರ್ಯದರ್ಶಿ ಫಾ. ಪನೀರ್‌ಸೆಲ್ವ ಕುಮಾರ್ ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News