ಬ್ಲಾಕ್ ಮೇಲ್ ಮಾಡಿ ಕೋಟ್ಯಂತರ ರೂ.ಹಣ ಪಡೆದ ಸುವರ್ಣ ನ್ಯೂಸ್ 24x7:ಉದ್ಯಮಿ ಆರೋಪ
ಬೆಂಗಳೂರು.ಜ.13: ಅಗ್ಗದ ದರಗಳಲ್ಲಿ ಫ್ಲಾಟ್‌ಗಳನ್ನು ನೀಡುವುದಾಗಿ ಸಾರ್ವಜನಿಕರನ್ನು ನಂಬಿಸಿ ಕೋಟ್ಯಂತರ ರೂ.ಗಳನ್ನು ಅವರಿಂದ ಪೀಕಿಸಿ, ಈಗ ಫ್ಲಾಟ್‌ಗಳನ್ನೂ ನೀಡದೆ ಹಣವನ್ನೂ ಮರಳಿಸದೆ ವಂಚಿಸಿದ ಆರೋಪ ಹೊತ್ತಿರುವ ಬೆಂಗಳೂರಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ ಬಿಲ್ಡರ್ ಸಚಿನ್ ನಾಯಕ್ ಪ್ರಕರಣಕ್ಕೆ ಈಗ ಹೊಸದೊಂದು ತಿರುವು ದೊರಕಿದೆ. ಸಚಿನ್ ನಾಯಕ್‌ನ ಕರ್ಮಕಾಂಡವನ್ನು ಬಹಿರಂಗಗೊಳಿಸಿದ ಸುವರ್ಣ ನ್ಯೂಸ್ ಇದಕ್ಕೂ ಮುನ್ನ ಆತನಿಂದ ಕೋಟ್ಯಂತರ ರೂ.ಗಳನ್ನು ಸುಲಿಗೆ ಮಾಡಿದೆ ಎಂದು ಅದೇ ಉದ್ಯಮಿ ಆರೋಪಿಸಿದ್ದಾರೆ. 24x7 ವಾಹಿನಿ ತನ್ನನ್ನು ಬ್ಲಾಕ್‌ಮೇಲ್ ಮಾಡಿ ತನ್ನಿಂದ 18.5 ಕೋ.ರೂ.ಗಳನ್ನು ದೋಚಿದೆ. ಇನ್ನೂ ಹಣ ನೀಡಲು ನಿರಾಕರಿಸಿದ್ದಕ್ಕೆ ವಾಹಿನಿಯು ತನ್ನ ವಿರುದ್ಧ ವರದಿಗಳನ್ನು ಪ್ರಸಾರಿಸಿದೆ ಎಂದು ಸಚಿನ್ ನಾಯಕ್ ಹೇಳಿಕೊಂಡಿದ್ದಾರೆ.
ಡ್ರೀಮ್ಸ್ ಜಿಕೆ,ಟಿಜಿಎಸ್ ಕನ್‌ಸ್ಟ್ರಕ್ಷನ್ಸ್ ಇತ್ಯಾದಿಗಳೆಲ್ಲ ಸಚಿನ್ ನಾಯಕ್ ಸ್ಥಾಪಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಗಳು. ಸುವರ್ಣ ನ್ಯೂಸ್‌ನಲ್ಲಿ ಈತನ ಜಾಹೀರಾತುಗಳು ಪದೇಪದೇ ಕಾಣಿಸುತ್ತಿದ್ದು, ಅರ್ಧ ಬೆಲೆಯಲ್ಲಿ ಪ್ಲಾಟ್‌ಗಳನ್ನು ಮತ್ತು ನಿವೇಶನಗಳನ್ನು ನೀಡುವುದಾಗಿ ಜನರನ್ನು ನಂಬಿಸಿದ್ದ ಎಂದು ಆರೋಪಿಸಲಾಗಿದೆ.
ಜಾಹೀರಾತುಗಳನ್ನು ಪ್ರಕಟಿಸುವ ನೆಪದಲ್ಲಿ ಸುವರ್ಣ ನ್ಯೂಸ್ ತನ್ನಿಂದ ಬರೋಬ್ಬರಿ 18.5 ಕೋ.ರೂ.ಗಳನ್ನು ಸುಲಿಗೆ ಮಾಡಿದೆ. ಸುವರ್ಣ ನ್ಯೂಸ್,ಅದರ ಸಿಇಒ ಶ್ಯಾಮಸುಂದರ್ ಮತ್ತು ಕ್ರೈಮ್ ನ್ಯೂಸ್ ವಿಭಾಗದ ಮುಖ್ಯಸ್ಥ ಶಂಕರ್ ತನ್ನನ್ನು ಬ್ಲಾಕ್‌ಮೇಲ್ ಮಾಡಿದ್ದಾರೆ. ಅವರು ಪ್ರಕಟಿಸಿರುವ ತನ್ನ ಜಾಹೀರಾತುಗಳ ಶುಲ್ಕ ತಾನು ನೀಡಿರುವ 18.5 ಕೋ.ರೂ.ಮೊತ್ತದ ಶೇ.5ನ್ನೂ ದಾಟುವುದಿಲ್ಲ. ವಾಹಿನಿಯು ದೋಚಿರುವ ತನ್ನ ಗ್ರಾಹಕರ ಹಣವನ್ನು ಮರಳಿಸಬೇಕು ಎಂದು ಸಚಿನ್ ನಾಯಕ್ ಆಗ್ರಹಿಸಿದ್ದಾನೆ. ಸುವರ್ಣ ನ್ಯೂಸ್‌ಗೆ ನೀಡಿರುವ ಹಣಕ್ಕೆ ತನ್ನ ಬಳಿ ದಾಖಲೆಗಳಿವೆ ಮತ್ತು ಅದು ತನ್ನನ್ನು ಬ್ಲಾಕ್ ಮೇಲ್ ಮಾಡಿತ್ತು ಎನ್ನುವುದಕ್ಕೆ ಆಡಿಯೋ ಮುದ್ರಿಕೆಗಳು ಸೇರಿದಂತೆ ಸಾಕ್ಷಗಳನ್ನು ಒದಗಿಸುವುದಾಗಿ ನಾಯಕ್ ಹೇಳಿಕೊಂಡಿದ್ದಾನೆ. ತಾನು ಕನಿಷ್ಠ ತನ್ನ ಗ್ರಾಹಕರಿಗೆ ಫ್ಲಾಟ್ ಅಥವಾ ನಿವೇಶನಗಳನ್ನು ನೀಡುವುದಾಗಿ ಅಥವಾ ಅವರ ಹಣವನ್ನು ವಾಪಸ್ ಮಾಡುವುದಾಗಿಯಾದರೂ ಭರವಸೆ ನೀಡಿದ್ದೇನೆ. ಸುವರ್ಣ ನ್ಯೂಸ್ ಕೂಡ ತನ್ನಿಂದ ದೋಚಿರುವ ಜನರಿಗೆ ಸೇರಿದ ದುಡ್ಡನ್ನು ವಾಪಸ್ ಮಾಡಲಿ ಎಂದು ಆತ ಸವಾಲು ಹಾಕಿದ್ದಾರೆ.
ಸುವರ್ಣ ನ್ಯೂಸ್ ಪ್ರತಿಕ್ರಿಯೆ
ಸಚಿನ್ ನಾಯಕ್ ಮಾಡಿರುವ ಆರೋಪಗಳನ್ನು ನಿರಾಕರಿಸಿರುವ ಸುವರ್ಣ ನ್ಯೂಸ್ ಅವು ಸಂಪೂರ್ಣ ಸುಳ್ಳು ಮತ್ತು ನಿರಾಧಾರವಾಗಿವೆ ಎಂದಿದೆ. 2017,ಜ.10ರಂದು ವಾಹಿನಿಯು ಪ್ರಸಾರಿಸಿದ್ದ ತನ್ನ ವಿರುದ್ಧದ ವರದಿಗೆ ಪ್ರತೀಕಾರವಾಗಿ ಆತ ಈ ಆರೋಪಗಳನ್ನು ಮಾಡಿದ್ದಾನೆ ಎಂದಿದೆ. ಇದೇ ಸಚಿನ್ ನಾಯಕ್ ತನ್ನ ವಾಹಿನಿಯಲ್ಲಿ ಕಾಣಿಸಿಕೊಂಡು ಗ್ರಾಹಕರಿಗೆ ಪರಿಹಾರವೊದಗಿಸುವುದಾಗಿ ಭರವಸೆ ನೀಡಿದ್ದ ಎಂದು ಅದು ತಿಳಿಸಿದೆ.
ಸಚಿನ್ ನಾಯಕ್ ಜಾಹೀರಾತುಗಳಿಗಾಗಿ ತನಗೆ ಹಣ ಪಾವತಿಸಿದ್ದು, ಅದಕ್ಕೆ ತಕ್ಕಂತೆ ಸೇವೆಯನ್ನು ಒದಗಿಸಲಾಗಿದೆ. ಇವುಗಳಿಗೆಲ್ಲ ದಾಖಲೆಗಳಿವೆ. ಕ್ರಮಬದ್ಧವಾಗಿಯೇ ಹಣವನ್ನು ಪಡೆಯಲಾಗಿದ್ದು, ಈ ಬಗ್ಗೆಯೂ ತನ್ನಲ್ಲಿ ಸಂಪೂರ್ಣ ದಾಖಲೆಗಳಿವೆ ಎಂದು ಸುವರ್ಣ ನ್ಯೂಸ್ ಹೇಳಿದೆ.